Monsoon Explained-2026:ಮುಂಗಾರು ಮೊದಲು ಕೇರಳಕ್ಕೆ ಬರುವುದರ ಹಿಂದಿನ ವೈಜ್ಞಾನಿಕ ರಹಸ್ಯ!

Monsoon Explained:ಮುಂಗಾರು ಮೊದಲು ಕೇರಳಕ್ಕೆ ಬರುವುದರ ಹಿಂದಿನ ವೈಜ್ಞಾನಿಕ ರಹಸ್ಯ!

 

Monsoon Explained:ಭಾರತಕ್ಕೆ ಮುಂಗಾರು ಮೊದಲು ಕೇರಳದಲ್ಲೇ ಏಕೆ ಪ್ರವೇಶಿಸುತ್ತದೆ? ಪೆಸಿಫಿಕ್ ಸಾಗರ, ಗಾಳಿಯ ದಿಕ್ಕು, ಭೂಮಿ ತಿರುಗುವಿಕೆ ಹಾಗೂ ಮಾರುತಗಳ ಪರಿಣಾಮದಿಂದ ಮುಂಗಾರು ಹೇಗೆ ರೂಪಗೊಳ್ಳುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಎರಡು ಮಳೆಗಾಲದ ತಾಣ ಭಾರತ:



ಭಾರತದಲ್ಲಿ ಎರಡು ಮುಖ್ಯ ಮುಂಗಾರು ಮಳೆಯ ಋತುಗಳಿವೆ.

ಜೂನ್‌ ನಿಂದ ಸೆಪ್ಟೆಂಬರ್‌ವರೆಗೆ ನೈಋತ್ಯ ಮುಂಗಾರು ಬರುತ್ತದೆ. ದೇಶಕ್ಕೆ ಬೀಳುವ ಒಟ್ಟು ಮಳೆಯಲ್ಲಿ ಸುಮಾರು ಶೇಕಡಾ 75ರಷ್ಟು ಮಳೆ ಇದೇ ಸಮಯದಲ್ಲಿ ಬರುತ್ತದೆ. ಈ ಮಳೆಗಾಲ ಮುಗಿದ ನಂತರ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮುಂಗಾರು ಚಾಲ್ತಿಯಲ್ಲಿರುತ್ತದೆ. ಈ ಸಮಯದಲ್ಲಿ ದೇಶದ ಹಲವೆಡೆ ಮಳೆ ಕಡಿಮೆಯಾಗುತ್ತದೆ.

ನೈಋತ್ಯ ಮಾರುತಕ್ಕೆ ಕೇರಳವೇ ಹೆಬ್ಬಾಗಿಲು:

ಪ್ರತಿ ವರ್ಷ ನೈಋತ್ಯ ಮುಂಗಾರು ಮೊದಲು ಕೇರಳದ ಮೂಲಕವೇ ಭಾರತಕ್ಕೆ ಪ್ರವೇಶಿಸುತ್ತದೆ. ಇದಕ್ಕೆ ಭೂಮಿಯ ತಿರುಗುವಿಕೆ ಮತ್ತು ಗಾಳಿಯ ದಿಕ್ಕು ಪ್ರಮುಖ ಕಾರಣ. ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ. ಗಾಳಿಯು (ಟ್ರೇಡ್ ವಿಂಡ್ಸ್) ಪೂರ್ವದಿಂ * ಪೂರ್ವದಿಂದ ಪಶ್ಚಿಮಕ್ಕೆ ಬೀಸುತ್ತದೆ.

ಬೇಸಿಗೆಯ ಸಮಯದಲ್ಲಿ ಭಾರತದ ಭೂಭಾಗ ತುಂಬಾ ಬಿಸಿಯಾಗುತ್ತದೆ. ನೆಲದ ಮೇಲಿನ ಗಾಳಿಯು ತೇವಾಂಶವನ್ನು ಕಳೆದುಕೊಂಡು ಹಗುರಾಗುತ್ತದೆ. ಆ ಹಗುರವಾದ ಗಾಳಿಯು ನೆಲದಿಂದ ಆಕಾಶದ ಕಡೆಗೆ ಸಾಗುತ್ತದೆ.

ನೆಲದ ಮೇಲಿನ ಗಾಳಿಗೆ ಹೋಲಿಸಿದರೆ ಸಮುದ್ರದ ಮೇಲಿರುವ ಗಾಳಿಯು ಸ್ವಲ್ಪ ತಣ್ಣಗಿರುತ್ತದೆ. ತೇವಾಂಶವಿರುವ ಈ ಗಾಳಿಯು ನೆಲದ ಗಾಳಿ ಆಕಾಶಕ್ಕೆ ಹೋದಾಗ ಅಲ್ಲಿ ನಿರ್ವಾತವಾಗುವ ಜಾಗವನ್ನು ಆಕ್ರಮಿಸಿಕೊಳ್ಳಲು ನೆಲದ ಕಡೆಗೆ ಸಾಗುತ್ತದೆ. ಪುನಃ ಈ ಗಾಳಿಯೂ ತೇವಾಂಶ ಕಳೆದುಕೊಂಡು ಹಗುರಾಗಿ ಮೇಲಕ್ಕೆ ಸಾಗುತ್ತದೆ.

ಮೇಲೆ ಹೋದ ಹಗುರ ಗಾಳಿಯು ಮತ್ತೆ ವೃತ್ತಾಕಾರದಲ್ಲಿ ಚಲಿಸಿ ಸಮುದ್ರದ ಕಡೆಗೆ ಬಂದು ಮತ್ತೇ ತೇವಗೊಳ್ಳುತ್ತದೆ. ಮತ್ತೆ ಅದು ನೆಲದ ಕಡೆಗೆ ಸಾಗುತ್ತದೆ. ಇದು ನಿರಂತರವಾಗಿ ನಡೆಯುತ್ತದೆ.

ಇದೆಲ್ಲವೂ ಅರಬ್ಬಿ ಸಮುದ್ರದ ದಕ್ಷಿಣ ಹಾಗೂ ಹಿಂದೂ ಮಹಾಸಾಗರದ ಉತ್ತರದಲ್ಲಿ ನಡೆಯುವುದರಿಂದ (ನೈಋತ್ಯ ದಿಕ್ಕು), ಮಳೆ ಸುರಿಸುವ ಮುಂಗಾರು ಮಾರುತಗಳು ಭಾರತದ ನೈಋತ್ಯ ದಿಕ್ಕಿನಿಂದ, ಅಂದರೆ, ಕೇರಳದ ಕಡೆಯಿಂದ ಪ್ರವೇಶಿಸುತ್ತವೆ.

ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯ ಪಾತ್ರ:


ಕೇರಳ, ತಮಿಳುನಾಡು ಕಡೆಯಿಂದ ಪ್ರವೇಶಿಸುವ ಮುಂಗಾರು ಮಾರುತಗಳು, ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಸಮುದ್ರಗಳ ತೇವಾಂಶವೂ ಈ ಮಾರುತಗಳಿಗೆ ಸೇರಲ್ಪಟ್ಟು ಮಾರುತಗಳು ಮತ್ತಷ್ಟು ಆದ್ರ್ರಗೊಳ್ಳುತ್ತವೆ. ಜೊತೆಗೆ, ದಕ್ಷಿಣ ಭಾರತದ ಇಕ್ಕೆಲಗಳಲ್ಲಿರುವ ಈ ಎರಡೂ ಸಮುದ್ರಗಳು ಸೃಷ್ಟಿ ಮಾಡುವ ಒತ್ತಡಗಳು ಮುಂಗಾರು ಮಾರುತಗಳು ಮತ್ತಷ್ಟು ಮುಂದಕ್ಕೆ ತಳ್ಳಲು ಸಹಾಯ ಮಾಡುತ್ತದೆ.

ದೇಶಾದ್ಯಂತ ಮುಂಗಾರು ಪ್ರಸರಣ ಹೇಗೆ?:


ನೈಋತ್ಯ ಮುಂಗಾರು ಮಾರುತಗಳು ಕೇರಳದ ಕಡೆ ಬಂದಾಗ ಹಿಂದೂ ಮಹಾಸಾಗರದ ಕಡೆಗೆ ಚಾಚಿರುವ ಭಾರತದ ದಕ್ಷಿಣದ ಚೂಪಾದ ಭೂಶಿರ ಆ ಮಾರುತಗಳನ್ನು ಎರಡು ಭಾಗಗಳಾಗಿ ವಿಭಜಿಸುತ್ತದೆ. ಹೆಚ್ಚಿನ ಮಾರುತಗಳು ಕೇರಳದ ಕಡೆಯಿಂದ ಪ್ರವೇಶ ಪಡೆದರೆ, ಭಾಗಶಃ ಮಾರುತಗಳು ತಮಿಳುನಾಡು ಪ್ರವೇಶಿಸುತ್ತವೆ.

ಕೇರಳದಲ್ಲಿ ಪಶ್ಚಿಮ ಘಟ್ಟಗಳ ತಡೆಯಿಂದಾಗಿ ಕೇರಳ, ಕರ್ನಾಟಕ, ಮಹಾರಾಷ್ಟ್ರ ಗೋವಾಗಳಲ್ಲಿ ಮೊದಲು ಮಳೆಯಾಗುತ್ತದೆ. ಆದರೆ, ತಮಿಳುನಾಡಿನಲ್ಲಿ ಘಟ್ಟಗಳ ಸಾಲು ಇಲ್ಲ. ಹಾಗಾಗಿ, ತಮಿಳುನಾಡು ಪ್ರವೇಶಿಸುವ ಮಾರುತಗಳು ಅಲ್ಲಿ ಮಳೆ ಸುರಿಸುವುದು ಕಡಿಮೆ. ಅವು ಅಲ್ಲಿಂದ ಉತ್ತರ ಮತ್ತು ಈಶಾನ್ಯ ಭಾರತದ ಕಡೆ ಸಾಗಿ, ಭಾರತದ ಈಶಾನ್ಯ ರಾಜ್ಯಗಳ ಮೂಲಕ ಬಾಂಗ್ಲಾದೇಶ ತಲುಪುತ್ತವೆ. ಅಲ್ಲಿನ ಖಾಸಿ ಬೆಟ್ಟಗಳು ಈ ಮಾರುತಗಳನ್ನು ತಡೆಯುವುದರಿಂದ ಈಶಾನ್ಯ ರಾಜ್ಯಗಳು, ಬಾಂಗ್ಲಾದೇಶದಲ್ಲೆಲ್ಲ ಭಾರೀ ಮಳೆಯಾಗುತ್ತದೆ.

ಖಾಸಿ ಬೆಟ್ಟಗಳನ್ನು ಅಪ್ಪಳಿಸಿ ಈಶಾನ್ಯ ಭಾಗಗಳಲ್ಲಿ ಮಳೆ ಸುರಿಸಿ ನಂತರ, ಹಿಮಾಲಯದ ಕಡೆಗೆ ಸಾಗುವ ಇವು ಹಿಮಾಲಯದ ಅಭೇದ್ಯ ಗೋಡೆಯಂಥ ಪರ್ವತಗಳನ್ನು ದಾಟಿ ಮುಂದೆ ಹೋಗದೇ ಪಶ್ಚಿಮ ದಿಕ್ಕಿಗೆ ತಿರುಗುತ್ತವೆ. ಆನಂತರ ಅರಾವಳಿ ಬೆಟ್ಟಗಳು ಅವುಗಳನ್ನು ತಡೆಯುತ್ತವೆ. ಅಲ್ಲಿ ಕೇರಳ ಕಡೆಯಿಂದ ಬರುವ ಮುಂಗಾರು ಮಾರುತಗಳ ಜೊತೆಗೆ ಸೇರಿಕೊಂಡು ಗಂಗಾ ನದಿಯ ಸಮತಟ್ಟು ಪ್ರದೇಶಗಳ ಮೂಲಕ ಉತ್ತರ, ಮಧ್ಯ ಭಾರತದಲ್ಲಿ ಮಳೆ ಸುರಿಸುತ್ತವೆ.

ಮುಂಗಾರು ಪ್ರವೇಶ ಬಗ್ಗೆ ಐಎಂಡಿ ನಿಖರ ಮಾಹಿತಿ‘:


ಮುಂಗಾರು ಯಾವಾಗ ಆರಂಭವಾಗುತ್ತದೆ ಎಂಬುದನ್ನು ಅಂದಾಜಿಸಲು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಲವು ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತದೆ. ಪೆಸಿಫಿಕ್ ಮಹಾಸಾಗರದ ನೀರಿನ ತಾಪಮಾನ ಬದಲಾವಣೆಗಳನ್ನು (ಎಲ್‌ ನಿನೋ ಪರಿಣಾಮ) ಗಮನಿಸಿ, ಹಿಂದೂ ಮಹಾಸಾಗರದ ಪಶ್ಚಿಮ ಮತ್ತು ಪೂರ್ವ ಭಾಗಗಳ ತಾಪಮಾನ ವ್ಯತ್ಯಾಸವನ್ನು (ಇಂಡಿಯನ್ ಓಷಿಯನ್ ಡೈಪೋಲ್) ಅಧ್ಯಯನ ಮಾಡಿ, ಯುರೇಷಿಯಾ (ಯೂರೋಪ್ – ಏಷ್ಯಾ ಸಂಧಿಸುವ ಜಾಗ) ಮತ್ತು ಹಿಮಾಲಯ ಪ್ರದೇಶಗಳಲ್ಲಿ ಹಿಮಪಾತದ ಪ್ರಮಾಣವನ್ನು ತಿಳಿದುಕೊಂಡು, ಅಂಕಿ-ಅಂಶಗಳನ್ನು ಪರಿಶೀಲಿಸಿ ದೇಶಕ್ಕೆ ಮುಂಗಾರು ಯಾವಾಗ ಬರಲಿದೆ ಎಂಬುದರ ಮುನ್ಸೂಚನೆಯನ್ನು ಐಎಂಡಿ ನೀಡುತ್ತದೆ.

ಭಾರತದ ಅತಿ ಹೆಚ್ಚು, ಅತಿ ಕಡಿಮೆ ಮಳೆ ಪ್ರದೇಶ:


ಮೇಘಾಲಯದ ಖಾಸಿ ಬೆಟ್ಟಗಳ ಸಾಲಿನಲ್ಲಿರುವ ಮೌಸಿನಾಮ್ ಮತ್ತು ಚಿರಾಪುಂಜಿ ಪ್ರದೇಶಗಳು ಜಗತ್ತಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳು. ಇಲ್ಲಿ ವರ್ಷಕ್ಕೆ 11,000 ಮಿ.ಮೀಟರ್‌ಗಿಂತ ಹೆಚ್ಚು ಮಳೆಯಾಗುತ್ತದೆ. ತಮಿಳುನಾಡು ಕಡೆಯಿಂದ ಪ್ರವೇಶಿಸುವ ಮುಂಗಾರು ಮಾರುತಗಳು, ಈಶಾನ್ಯ ಭಾರತ, ಬಾಂಗ್ಲಾದೇಶದ ಖಾಸಿ ಬೆಟ್ಟಗಳವರೆಗೆ ಸಾಗಿ ಅಲ್ಲಿ ಮಳೆ ಸುರಿಸಿ, ಅಲ್ಲಿಂದ ಉತ್ತರಕ್ಕೆ ಸಾಗುವಾಗ ಹಿಮಾಲಯ ಪರ್ವತಗಳು ಅವುಗಳನ್ನು ತಡೆಯುತ್ತವೆ.

ಅದರಿಂದ ಆ ಮಾರುತಗಳು ಪಶ್ಚಿಮಕ್ಕೆ ತಿರುಗುತ್ತವೆ. ಆ ಪಯಣದಲ್ಲಿ ಅವು ರಾಜಸ್ಥಾನಕ್ಕೆ ಹೋಗುವುದಿಲ್ಲ. ಅಲ್ಲಿ ಘಟ್ಟಗಳ ಸಾಲು ಇಲ್ಲ, ಹಾಗಾಗಿ, ಅಲ್ಲಿ ಮಳೆ ಬೀಳುವುದು ತೀರಾ ಕಡಿಮೆ. ಅದರಲ್ಲೂ ರಾಜಸ್ಥಾನದ ಜೈಸಲ್ಮೆರ್ ಪ್ರದೇಶ ಸಂಪೂರ್ಣ ಮರುಭೂಮಿಯಾಗಿದೆ.

ಮುಂಗಾರು ಮೇಲೆ ‘ಎಲ್ ನಿನೋ’ ಪರಿಣಾಮ:


ದಕ್ಷಿಣ ಏಷ್ಯಾದ ರಾಷ್ಟ್ರಗಳು, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕದ ನಡುವಿನ ವಿಶಾಲವಾದ ಶಾಂತ ಸಮುದ್ರದಲ್ಲಿ (ಪೆಸಿಫಿಕ್ ಮಹಾಸಾಗರ) ಏಪ್ರಿಲ್-ಮೇ ತಿಂಗಳಲ್ಲಿ ಬೀಸುವ ಗಾಳಿಯು ಇಡೀ ಜಗತ್ತಿನ ಹವಾಮಾನ ನಿರ್ಧರಿಸುತ್ತದೆ.

ಸಾಮಾನ್ಯ ಪರಿಸ್ಥಿತಿಯಲ್ಲಿ ಪೆಸಿಫಿಕ್ ಸಮುದ್ರದ ಮೇಲೆ ಬೀಸುವ ತಂಗಾಳಿಯು ಬೇಸಿಗೆಯ ಸೂರ್ಯನ ಶಾಖದಿಂದ ಸಮುದ್ರದ ಮೇಲ್ಬಾಗದಲ್ಲಿ ಬಿಸಿಯಾಗುವ ನೀರನ್ನು ತಳ್ಳುತ್ತಾ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮುಂತಾದ ದಕ್ಷಿಣ ಏಷ್ಯಾದ ರಾಷ್ಟ್ರಗಳ, ಆಸ್ಟ್ರೇಲಿಯಾದ ಪೂರ್ವ ಕರಾವಳಿ ಕಡೆಗೆ ತರುತ್ತದೆ. ಅತ್ತ ಸಮುದ್ರದ ಮಧ್ಯಭಾಗದಲ್ಲಿ ಬಿಸಿ ನೀರು ತಳ್ಳಲ್ಪಟ್ಟಂತೆ, ಸಮುದ್ರದಾಳದಲ್ಲಿರುವ ತಣ್ಣನೆಯ ಮತ್ತು ಖನಿಜಯುಕ್ತ ನೀರು ಪೆಸಿಫಿಕ್ ಸಾಗರದ ಮೇಲಕ್ಕೆ ಬರುತ್ತದೆ.

ಸಮುದ್ರದ ಮೇಲೆ ಮೇಲೆ ನಿರಂತರವಾಗಿ ಬೀಸುವ ಗಾಳಿಯು ಆ ತಣ್ಣನೆಯ, ಖನಿಜಯುಕ್ತ ನೀರಿನಿಂದ ತೇವ ಗೊಂಡು ಅಗಾಧವಾಗಿ ತಂಪನ್ನು ಪಡೆದು ಮುಂಗಾರು ಮಾರುತಗಳಿಗೆ ಶಕ್ತಿ ತುಂಬುತ್ತದೆ. ಆದರೆ, ಕೆಲವೊಮ್ಮೆ ಈ ಪ್ರಕ್ರಿಯೆ ತಿರುವು ಮುರುವಾಗುತ್ತದೆ.

ಪೆಸಿಫಿಕ್ ಸಮುದ್ರದ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಬೀಸುವ ಬಲವಾದ ಗಾಳಿಯು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆಗ, ಅದು ಸಮುದ್ರದ ಮೇಲ್ಪದರದಲ್ಲಿರುವ ಬಿಸಿ ನೀರನ್ನು ಸರಿಯಾಗಿ ಪಶ್ಚಿಮದ ಕಡೆಗೆ ತಳ್ಳುವುದಿಲ್ಲ. ಆಗ ಸಮುದ್ರದ ಮಧ್ಯಭಾಗದಲ್ಲಿ ಬಿಸಿ ನೀರು ಹಾಗೇ ಉಳಿಯುತ್ತದೆ.

ಅದರಿಂದ ಪೆಸಿಫಿಕ್ ಸಮುದ್ರದ ಮೇಲೆ ಹಬೆಯಂಥ ವಾತಾವರಣ ಸೃಷ್ಟಿಯಾ ಗುತ್ತದೆ. ಇದೇ ‘ಎಲ್ ನಿನೋ ಪ್ರಕ್ರಿಯೆ. ಈ ಹಬೆಯ ಪರಿಣಾಮ, ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ರಾಷ್ಟ್ರಗಳು, ಆಸ್ಟ್ರೇಲಿಯಾದಲ್ಲಿ ಮಳೆ ಮಾರುತಗಳು ದುರ್ಬಲವಾಗುತ್ತವೆ. ಕೆಲವೊಮ್ಮೆ ಬರವೂ ಬರಬಹುದು.

ಭಾರತದ ಆರ್ಥಿಕತೆಗೆ ಮುಂಗಾರು ಜೀವಾಳ:


ಭಾರತದ ಆರ್ಥಿಕತೆಯಲ್ಲಿ ಮುಂಗಾರು ಮಳೆಯ ಪಾತ್ರ ತುಂಬಾ ಮಹತ್ವದ್ದು, ದೇಶದ ಅರ್ಧಕ್ಕಿಂತ ಹೆಚ್ಚು ಕೃಷಿಭೂಮಿಗೆ ನೀರಾವರಿ ಸೌಲಭ್ಯ ಇಲ್ಲ ಆದ್ದರಿಂದ ರೈತರು ಮುಂಗಾರು ಮಳೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಭಾರತದ ಒಟ್ಟಾರು ಮಳೆಯ ಶೇ.70ರಷ್ಟು ಮಳೆ ಮುಂಗಾರಿನಲ್ಲೇ ಬರುತ್ತದೆ. ಉತ್ತಮ ಮಳೆಯಾದರೆ ಬೆಳೆಗಳು ಚೆನ್ನಾಗಿ ಬರುತ್ತವೆ. ಇದರಿಂದ ರೈತರ ಆದಾಯವೂ ಹೆಚ್ಚಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಜನರ ಆದಾಯ ಹೆಚ್ಚಾದಾಗ ವಾಹನಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಇತರ ವಸ್ತುಗಳ ಖರೀದಿ ಹೆಚ್ಚಾಗುತ್ತದೆ. ಇದರಿಂದ ದೇಶದ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗುತ್ತದೆ. ಉತ್ತಮ ಬೆಳೆ ಉತ್ಪಾದನೆಯಿಂದ ಆಹಾರ ಧಾನ್ಯಗಳ ಕೊರತೆ ಕಡಿಮೆಯಾಗುತ್ತದೆ.

ಇದರಿಂದ ಆಹಾರದ ಬೆಲೆಗಳು ನಿಯಂತ್ರಣದಲ್ಲಿ ಇರುತ್ತವೆ. ಬೆಲೆ ಏರಿಕೆ ಕಡಿಮೆಯಾದರೆ ದೇಶದ ಆರ್ಥಿಕ ಸ್ಥಿರತೆಗೂ ಸಹಾಯವಾಗುತ್ತದೆ. ಒಟ್ಟಾರೆ ಜಿಡಿಪಿಗೆ ಮುಂಗಾರು ಪರೋಕ್ಷವಾಗಿ ಶೇ.17.7ರಷ್ಟು ಕೊಡುಗೆ ನೀಡುತ್ತದೆ.

Monsoon Explained

 

✍️ ಚೇತನ್. ಓ. ಆರ್….

 

ಮತ್ತಷ್ಟು ಮಾಹಿತಿಗಾಗಿ – mastermitra.in ವೆಬ್ಸೈಟ್ ಗೆ ಭೇಟಿ ನೀಡಿ 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top