Railway Recruitment-2025: 2569 ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ
Railway Recruitment-2025:ಭಾರತೀಯ ರೈಲ್ವೆಯಿಂದ ಜೂ.ಎಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳ ಭರ್ತಿ.
ಭಾರತೀಯ ರೈಲ್ವೆಯಲ್ಲಿ ತಾಂತ್ರಿಕೇತರ ವಿಭಾಗದಲ್ಲಿ ಪದವಿ ಮತ್ತು ಪದವಿಪೂರ್ವ ಅರ್ಹತೆಯುಳ್ಳ ಅಭ್ಯರ್ಥಿಗಳಿಗಾಗಿ 8,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆ ಆರಂಭವಾದ ಎರಡೇ ದಿನದಲ್ಲಿ ತಾಂತ್ರಿಕ ವಿಭಾಗದಲ್ಲಿನ ಜೂ. ಎಂಜಿನಿಯರ್, ಕೆಮಿಕಲ್ ಮೆಟಲರ್ಜಿಕಲ್ ಅಸಿಸ್ಟೆಂಟ್ ಸೇರಿದಂತೆ 2,569 ಹುದ್ದೆಗಳ ಭರ್ತಿಗೂ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಒಟ್ಟು ಹುದ್ದೆಗಳ ಪೈಕಿ ರಾಜ್ಯದ ನೈಋತ್ಯ ರೈಲ್ವೆಗೆ 80 ಹುದ್ದೆಗಳನ್ನು ಮೀಸಲಿಡಲಾಗಿದೆ. ನವೆಂಬರ್ 30ರ ತನಕ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ.
ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ,ರಾಜ್ಯಕ್ಕೆ 80 ಹುದ್ದೆಗಳು.
ಅರ್ಹತೆಗಳೇನು?
ಜೂನಿಯರ್ ಎಂಜಿನಿಯರ್: ಎಲೆಕ್ಟ್ರಿಕಲ್ , ಜನರಲ್ ಸರ್ವೀಸ್, ಡಿಸೈನ್, ಟಿಆರ್‌ಡಿ, ವರ್ಕ್ ಶಾಪ್, ಬ್ರಿಜ್, ಡ್ರಾಯಿಂಗ್ ಮತ್ತು ಎಸ್ಟಿಮೇಶನ್ , ಸಿವಿಲ್ ವರ್ಕ್ಸ್, ಟ್ರ್ಯಾಕ್ ವಿಭಾಗದಲ್ಲಿ ಜೂನಿಯರ್ ಎಂಜಿನಿಯರ್‌ಗಳ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಡಿಪ್ಲೊಮಾ ಎಂಜಿನಿಯರಿಂಗ್ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಎಸ್ಸಿ ಪೂರ್ಣಗೊಳಿಸಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ. ಇದಲ್ಲದೆ ಆಯಾ ವಿಭಾಗಕ್ಕೆ ಪೂರಕವಾಗಿ ಮೆಕಾನಿಕಲ್, ಪ್ರೊಡಕ್ಷನ್, ಆಟೊಮೊಬೈಲ್, ಎಲೆಕ್ಟ್ರಿಕಲ್ , ಎಲೆಕ್ಟ್ರಾನಿಕ್ಸ್, ಇನ್ಸ್ಟ್ರುಮೆಂಟೇಶನ್, ಕಂಟ್ರೋಲ್ ಎಂಜಿನಿಯರಿಂಗ್,ಮ್ಯಾನ್ಯುಫ್ಯಾಕ್ಟರಿಂಗ್, ಇಂಡಸ್ಟ್ರಿಯಲ್, ಟೂಲ್ಸ್ ಡೈ ಮೇಕಿಂಗ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಡಿಪ್ಲೊಮಾ ಅರ್ಹತೆ ಇರುವವರು ಆಯಾ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್:
ಈ ಹುದ್ದೆಗೆ ಯಾವುದೇ ಎಂಜಿನಿಯರಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಡಿಪ್ಲೊಮಾ ಪೂರ್ಣಗೊಳಿಸಿದ್ದರೂ ಅರ್ಜಿ ಸಲ್ಲಿಸಬಹುದಾಗಿದೆ.
ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್:
ಈ ಹುದ್ದೆಗೆ ಬಿ.ಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದು. ಆದರೆ, ಅಭ್ಯರ್ಥಿಗಳು ಪದವಿಯಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಕಡ್ಡಾಯವಾಗಿ ಅಧ್ಯಯನ ಮಾಡಿದ್ದು, ಅವುಗಳಲ್ಲಿ ಕನಿಷ್ಠ ಶೇಕಡಾ 45 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.
ಪರೀಕ್ಷಾ ಪಠ್ಯಕ್ರಮ ಹೇಗಿರಲಿದೆ?
ಸಿಬಿಟಿ-1: ಮೊದಲನೇ ಹಂತದ ಸಿಬಿಟಿಯಲ್ಲಿ 100 ಅಂಕಗಳ ಪ್ರಶ್ನೆಗಳಿರಲಿವೆ. ಬರೆಯಲು 90 ನಿಮಿಷಗಳ ಸಮಯ ನೀಡಲಾಗುತ್ತದೆ. ಇದರಲ್ಲಿ ಮ್ಯಾಥಮೆಟಿಕ್ ಮತ್ತು ಜನರಲ್ ಸೈನ್ಸ್‌ಗೆ ಸಂಬಂಧಿಸಿದ ತಲಾ 30 ಪ್ರಶ್ನೆಗಳು, ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್ ಗೆ ಸಂಬಂಧಿ ಸಿದಂತೆ 25 ಪ್ರಶ್ನೆಗಳು ಹಾಗೂ ಜನರಲ್ ಅವೇರ್ನೆಸ್‌ಗೆ ಸಂಬಂಧಿಸಿದಂತೆ 15 ಪ್ರಶ್ನೆಗಳಿರಲಿವೆ. ಒಂದು ಪ್ರಶ್ನೆಗೆ ಒಂದು ಅಂಕದಂತೆ ಒಟ್ಟು 100 ಅಂಕಗಳಿಗೆ ಪ್ರಶ್ನೆಗಳನ್ನು ನಿಗದಿಮಾಡಲಾಗಿದೆ.
ಪಿಬಿಟಿ-2: ಎರಡನೇ ಹಂತದ ಸಿಬಿಟಿಯಲ್ಲಿ 150 ಅಂಕಗಳ ಪ್ರಶ್ನೆಗಳು.
ಬರೆಯಲು 120 ನಿಮಿಷಗಳ ಅವಧಿ ನೀಡಲಾಗುತ್ತದೆ. ಇದರಲ್ಲಿ ಜನರಲ್ ಅವೇರ್ನೆಸ್ ಮತ್ತು ಫಿಸಿಕ್ಸ್ – ಕೆಮಿಸ್ಟ್ರಿ ತಲಾ 15 ಪ್ರಶ್ನೆಗಳು, ಬೇಸಿಕ್ಸ್ ಆಫ್ ಕಂಪ್ಯೂಟರ್ -ಅಪ್ಲಿಕೇಶನ್ಸ್ ಮತ್ತು ಬೇಸಿಕ್ಸ್ ಆಫ್ ಎನ್ವಿರಾನ್ಮೆಂಟ್-ಪೊಲ್ಯುಶನ್ ಕಂಟ್ರೋಲ್ ತಲಾ 10 ಪ್ರಶ್ನೆಗಳು ಹಾಗೂ ಟೆಕ್ನಿಕಲ್ ಎಬಿಲಿಟಿ ಬಗ್ಗೆ 100 ಪ್ರಶ್ನೆಗಳಿರುತ್ತವೆ. ಇಲ್ಲಿಯೂ ತಲಾ ಪ್ರಶ್ನೆಗೆ 1 ಅಂಕದಂತೆ 150 ಅಂಕಗಳ 150 ಪ್ರಶ್ನೆಗಳಿರುತ್ತವೆ. ಈ ಎರಡೂ ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.
ವಯೋಮಿತಿ:
18ರಿಂದ 33 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ವಿಶೇಷಚೇತನ ಅಭ್ಯರ್ಥಿಗಳಿಗೂ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ಎಸ್‌ಸಿ/ ಎಸ್‌ಟಿ/ ಮಾಜಿ ಸೈನಿಕರು/ ಮಹಿಳೆಯರು/ ತೃತೀಯ ಲಿಂಗಿಗಳು/ ಆರ್ಥಿಕ ದುರ್ಬಲ ವರ್ಗದವರು | ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ 250 ರೂ. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಇದರಲ್ಲಿ 250 ರೂ. ಶುಲ್ಕ ರೀಫಂಡ್ ಆಗಲಿದೆ. ಉಳಿದ ವರ್ಗದ 500 ರೂ. ಶುಲ್ಕದಲ್ಲಿ 400 ರೂ. ಆಯಾ ಅಭ್ಯರ್ಥಿಗಳ ಖಾತೆಗೆ ರೀಫಂಡ್ ಮಾಡಲಾಗುವುದು ಎಂದು ರೈಲ್ವೆ ತಿಳಿಸಿದೆ. ಪ್ರತಿ ನೇಮಕಾತಿಯಲ್ಲಿಯೂ ರೈಲ್ವೆ ನೇಮಕ ಪ್ರಕ್ರಿಯೆ ಮುಗಿದ ಬಳಿಕ ಅಭ್ಯರ್ಥಿಗಳಿಗೆ ಶುಲ್ಕವನ್ನು ರೀಫಂಡ್ ಮಾಡುತ್ತದೆ.
ರಾಜ್ಯಕ್ಕೆ ದಕ್ಕಿದ್ದು 80 ಹುದ್ದೆಗಳು:
ಒಟ್ಟು ಹುದ್ದೆಗಳಲ್ಲಿ 80 ಹುದ್ದೆಗಳನ್ನು ಬೆಂಗಳೂರು ವಲಯಕ್ಕೆ ಮೀಸಲಿಡಲಾಗಿದೆ.
ಇವುಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40, ಎಸ್‌ಸಿ ಅಭ್ಯರ್ಥಿಗಳಿಗೆ 14 ಎಸ್‌ಟಿ ವರ್ಗದವರಿಗೆ 7, ಒಬಿಸಿ 10 ಮತ್ತು ಆರ್ಥಿಕ ದುರ್ಬಲ ವರ್ಗದವರಿಗೆ 9 ಹುದ್ದೆಗಳನ್ನು ಹಂಚಲಾಗಿದೆ. ಕಳೆದ ವರ್ಷ ಏಳುಸಾವಿರಕ್ಕೂ ಹೆಚ್ಚು ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಬೆಂಗಳೂರು ವಲಯಕ್ಕೆ 397 ಹುದ್ದೆಗಳನ್ನು ಮೀಸಲಿಡಲಾಗಿತ್ತು.
ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಎರಡು ಹಂತದ ಕಂಪ್ಯೂಟರ್ ಆಧರಿತ ಪರೀಕ್ಷೆ(ಸಿಬಿಟಿ), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ/ಇಮೇಲ್ ಮೂಲಕ ಕಳುಹಿಸಲಾಗುವುದು ಮತ್ತು ఆరో ఆరాద ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗುತ್ತದೆ. ಈ ಹುದ್ದೆಗಳಿಗೂ ಕನ್ನಡ, ಕೊಂಕಣಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಸಿಗಲಿದೆ.
▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30, 2025
▪️ಅರ್ಜಿ ತಿದ್ದುಪಡಿಗೆ ಅವಕಾಶ: ಡಿಸೆಂಬರ್ 3-12, 2025
▪️ತಿಂಗಳ ವೇತನ:₹35,400 ರೂ.
ಹೆಚ್ಚಿನ ವಿವರಗಳಿಗಾಗಿ – CLICK HERE