ಚಂಪಾರಣ್ಯ ಸತ್ಯಾಗ್ರಹ

ಚಂಪಾರಣ್ಯ ಸತ್ಯಾಗ್ರಹ

ಚಂಪಾರಣ್ಯ ಸತ್ಯಾಗ್ರಹ: 19ನೇ ಶತಮಾನದ ಪ್ರಥಮಾರ್ಧದಲ್ಲಿ ಯೂರೋಪಿನ ಪ್ಲಾಂಟರುಗಳು” ರಷ್ಟು ಅಲ್ಲಿಯ ಹಿಡುವಳಿಗಳಲ್ಲಿ ಇಂಡಿಗೋ (ನೀಲಿ) ವನ್ನು ಬೆಳೆಯಲು ಕೃಷಿಕರಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದರು. 19ನೇ ಶತಮಾನದ ಅಂತಿಮ ವೇಳೆಗೆ ಜರ್ಮನ್ನರು ಕೃತಕ ನೀಲಿ ಕಂಡುಹಿಡಿದಿದ್ದರಿಂದ ಭಾರತದ ಇಂಡಿಗೋಗೆ ಬೇಡಿಕೆಯಿಲ್ಲದಂತಾಯಿತು. ಆದರೂ ಬ್ರಿಟಿಷ್ ಪ್ಲಾಂಟರುಗಳು ಅದೇ ಬೆಳೆಯನ್ನು ಮುಂದುವರಿಸಲು ಮತ್ತು ಕಡಿಮೆ ಬೆಲೆಗೆ ಮಾರಾಟ ಮಾಡಲು ಒತ್ತಾಯಿಸಿದರು. ಇದಕ್ಕೆ ಒಪ್ಪದ ರೈತರ ಮೇಲೆ ದಬ್ಬಾಳಿಕೆ ಮಾಡಲು ಪ್ರಯತ್ನಿಸಿದರು. ಇದರಿಂದ ಸ್ಥಳೀಯ ವ್ಯಕ್ತಿಯಾದಂತಹ ರಾಜ್‌ ಕುಮಾರ್ ಶುಕ್ಲಾರವರು ಇದನ್ನು ಗಾಂಧೀಜಿಯವರಿಗೆ ತಿಳಿಸಿ ಪರಿಸ್ಥಿತಿಯನ್ನು ಅವರಿಗೆ ಅರುಹಿ ಸಮಸ್ಯೆಯನ್ನು ಬಗೆಹರಿಸಲು ಕೋರಿದರು ಮತ್ತು ಬಡ ರೈತರ ಹಕ್ಕುಗಳು ಬಲಿಯಾಗುತ್ತಿರುವ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಬೇಕೆಂದು ಕೇಳಿದರು. 1917ರಲ್ಲಿ ಬಾಬು ರಾಜೇಂದ್ರಪ್ರಸಾದ್, ಮಜ್ಹಾರ್, ಉಲ್-ಹಕ್, ಜೆ.ಪಿ. ಕೃಪಲಾನಿ, ಮಹದೇವ ದೇಸಾಯಿ ಮತ್ತು ಗಾಂಧೀಜಿಯವರು ಚಂಪಾರಣಕ್ಕೆ ಭೇಟಿಕೊಟ್ಟರು ಮತ್ತು ರೈತರ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದರು.

ಗಾಂಧೀಜಿಯವರ ನೇತೃತ್ವದ ನಿಯೋಗವು ಅಧ್ಯಯನ ಮಾಡಿದಾಗ ತಿಳಿದುಬಂದ ಅಂಶಗಳನ್ನು 2250 ಪದಗಳಲ್ಲಿ ವರದಿ ಸಿದ್ಧ ಮಾಡಿದರು. ಆ ವರದಿಯಲ್ಲಿ ಒಂದು ಶತಮಾನಕ್ಕೂ ಹೆಚ್ಚುಕಾಲ ಯೂರೋಪಿಯನ್ ಪ್ಲಾಂಟರುಗಳು ಚಂಪಾರಣದಲ್ಲಿ ತಮ್ಮ ಗೇಣಿದಾರರನ್ನೂ ಇತರ ರೈತರನ್ನು ತುಂಬಾ ಶೋಷಿಸುತ್ತಿದ್ದರು. ರೈತರು ಬೆಳೆಯುವ ಪ್ರತಿ 20ಗುಂಟೆ ಭೂಮಿಯಲ್ಲಿ ಮೂರು ಗುಂಟೆಯಲ್ಲಾದರೂ ನೀಲಿಯನ್ನು ಕಡ್ಡಾಯವಾಗಿ ಬೆಳೆದು ಪ್ಲಾಂಟರುಗಳಿಗೆ ಒಪ್ಪಿಸಿ ಅವರು ಕೊಟ್ಟ ಬೆಲೆಯನ್ನು ತೆಗೆದುಕೊಳ್ಳಬೇಕಾಗಿದ್ದಿತು. ಜೊತೆಗೆ ರೈತರು ಹಣದ ರೂಪದಲ್ಲಿ ಮತ್ತು ದವಸ ಧಾನ್ಯಗಳ ರೂಪದಲ್ಲಿ ಅನೇಕ ರೀತಿಯ ವಂತಿಗೆಗಳನ್ನು ಕೊಡಬೇಕಾಗಿತ್ತು. ನೀಲಿಯನ್ನು ಬೆಳೆಯಬೇಕೆಂಬ ಕರಾರಿನಿಂದ ಮುಕ್ತಗೊಳಿಸಲು ಪ್ಲಾಂಟರುಗಳು ರೈತರಿಂದ ಭಾರಿ ಪ್ರಮಾಣದಲ್ಲಿ ಪರಿಹಾರ ಧನವನ್ನು ಒತ್ತಾಯಪೂರ್ವಕವಾಗಿ ತೆಗೆದುಕೊಳ್ಳುತ್ತಿದ್ದರು. ಕೃತಕ ನೀಲಿಯ ಪ್ರವೇಶದಿಂದಾಗಿ ಸ್ಥಳೀಯ ನೀಲಿಯ ಬೆಲೆ ಕಡಿಮೆಯಾದಾಗ ಪ್ಲಾಂಟರುಗಳು ನಷ್ಟವನ್ನು ರೈತರ ಮೇಲೆ ಹೇರುವ ಉಪಾಯಗಳನ್ನು ಕಂಡುಹಿಡಿದರು. ರೈತರಿಗೆ ಹಣ ತೆರಲು ಸಾಧ್ಯವಾಗದಾಗ ಕಂತು ಪ್ರಕಾರ ಹಣಕೊಡಲು ರೈತರಿಂದ ಪ್ರಾಮಿಸರಿ ನೋಟ್ ಮತ್ತು ಆಧಾರ ಪತ್ರಗಳನ್ನು ಶೇ. 12 ರೂ. ಬಡ್ಡಿಯಂತೆ ಬರೆಸಿಕೊಂಡಿದ್ದರು. ಕಾರ್ಖಾನೆಗಳಿಗೆ ಸಾಮಾನು ಹೇರಲು ಗಾಡಿಗಳನ್ನು ಬಲಾತ್ಕಾರವಾಗಿ ಪಡೆಯುತ್ತಿದ್ದರು. ರೈತರ ನೇಗಿಲುಗಳನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಕಾರ್ಖಾನೆಯಲ್ಲಿಡುತ್ತಿದ್ದರು ಇದಕ್ಕೆ “ಸತ್ತಾ” ಎಂದು ಹೆಸರು, ಕಾರ್ಖಾನೆಯ ಅಮಾಲಿಗಳು, ರೈತರ ಕೂಲಿಯಿಂದ, ಗಾಡಿ ಬಾಡಿಗೆಯಿಂದಲೂ ಭಾಗವನ್ನು “ದಸ್ತೂರಿ” ಯೆಂಬುದಾಗಿ ವಸೂಲಿ ಮಾಡುತ್ತಿದ್ದರು.”

ಈ ಅನ್ಯಾಯಗಳ ವಿರುದ್ಧ ಹೋರಾಡಲು ತೀರ್ಮಾನಿಸಿ ಚಂಪಾರಣದ ಮುಖ್ಯ ಕೇಂದ್ರವಾದ ಮೋತಿಹಾರಿನಿಂದ ಕಾರ್ಯ ಆರಂಭಿಸಿದರು. ದಿನನಿತ್ಯ ನೂರಾರು ರೈತರು ಗಾಂಧೀಜಿಯವರನ್ನು ಭೇಟಿಮಾಡಿ ಸಾಕ್ಷ್ಯಾಧಾರಗಳ ಸಹಿತ ಮಾಹಿತಿ ನೀಡಿದರು. ಅದುವರೆಗೆ ಸರ್ಕಾರವನ್ನು ಕಂಡರೆ ಹೆದರಿ ನಡುಗುತ್ತಿದ್ದ ರೈತರಲ್ಲಿ ಭಯ ನಿವಾರಿಸಿ ಹೊಸ ಭರವಸೆ ಹುಟ್ಟಿಸಿದರು. ಕಡೆಗೆ ಗವರ್ನರ್ ಮಧ್ಯೆ ಪ್ರವೇಶಿಸಿ ಗಾಂಧೀಜಿಯವರನ್ನೊಳಗೊಂಡ ಮೂರು ಜನರ ಸಮಿತಿಯನ್ನು ರಚಿಸಿದರು. ಈ ಸಮಿತಿಯು ಮಾಡುವ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಳ್ಳುವುದಾಗಿ ಪ್ರಕಟಿಸಿತು. ಸಮಿತಿಯು ದೀರ್ಘವಾಗಿ ಅಧ್ಯಯನ ಮಾಡಿ ರೈತರು ಕಡ್ಡಾಯವಾಗಿ ನೀಲಿ ಬೆಳೆಯಬೇಕೆಂಬ ಪದ್ಧತಿಯನ್ನು ರದ್ದು ಮಾಡಲು ಸಮಿತಿಯು ಶಿಫಾರಸ್ಸು ಮಾಡಿತು. ರೈತರುಗಳಿಂದ ಅಕ್ರಮವಾಗಿ ಹಣ ವಸೂಲು ಮಾಡಿದ್ದ ಪ್ಲಾಂಟರುಗಳು ನಿರ್ಧಿಷ್ಟ ಪ್ರಮಾಣದಲ್ಲಿ ವಾಪಸ್ಸು ಮಾಡಬೇಕೆಂದು ಶಿಫಾರಸ್ಸು ಮಾಡಿತು. ಈ ಎರಡು ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಂಡು ಶತಮಾನದಿಂದ ಆಗಿದ್ದ ರೈತರ ವಿರುದ್ಧದ ಅನ್ಯಾಯ ಕೊನೆಗೊಂಡಿತು.

ಚಂಪಾರಣ ಚಳುವಳಿಯು ರಾಷ್ಟ್ರೀಯತಾ ಬೆಳವಣಿಗೆಗೆ ಹೇಗೆ ಸಹಾಯಕವಾಯಿತೆಂಬುದನ್ನು ಇ.ಎಂ.ಎಸ್. ನಂಬೂದ್ರಿಪಾದ್‌ರವರು ಈ ಕೆಳಕಂಡಂತೆ ವಿವರಿಸಿದ್ದಾರೆ. “ಯೂರೋಪಿಯನ್ ಪ್ಲಾಂಟರುಗಳ ವಿರೋಧ ಮತ್ತು ಅವರನ್ನು ರಕ್ಷಿಸುವ ಆಡಳಿತಶಾಹಿ ವರ್ಗದ ನಡುವೆಯೂ ಗಾಂಧೀಜಿ ಮತ್ತು ಅವರ ಅನುಯಾಯಿಗಳ ಹೋರಾಟವು ಸಫಲತೆಯಲ್ಲಿ ಕೊನೆಗೊಂಡಿತು. ಈ ಮಾದರಿಯ ರಾಷ್ಟ್ರೀಯ ಹೋರಾಟವು ಭಾರತದಲ್ಲಿ ಮೊದಲನೆಯದು: ನಿಸ್ವಾರ್ಥ ಮನೋಭಾವದ ಮಾಧ್ಯಮ ಮತ್ತು ಉನ್ನತ ವರ್ಗದ ವ್ಯಕ್ತಿಗಳು ಹಾಗೂ ಸಾಮಾನ್ಯ ಜನರು ಅವಶ್ಯಕ ಮತ್ತು ನೈಜಾರ್ಥವುಳ್ಳ ಬೇಡಿಕೆಗಳನ್ನು ಹೊಂದಲು ಸಾಮ್ರಾಜ್ಯ ಶಕ್ತಿಯ ವಿರುದ್ಧ ಹೂಡಿದ ಹೋರಾಟವೆಂದಿದ್ದಾರೆ.”

ಅಂತಿಮವಾಗಿ ಅಸಮರ್ಥರಾದ ರೈತರಿಗೆ ನ್ಯಾಯದೊರಕಿತು. ಈ ನಿಟ್ಟಿನಲ್ಲಿ ಪ್ರಥಮ ಹೋರಾಟವಾದ ಇದರಲ್ಲಿ ಗಾಂಧೀಜಿಯವರು ಯಶಸ್ವಿಯಾದರು. ನಂತರ ಗಾಂಧೀಜಿಯವರು ಅಹ್ಮದಾಬಾದ್‌ಗೆ ತೆರಳಿ ಬಟ್ಟೆಗಿರಣಿಯ ಕಾರ್ಮಿಕರ ಮತ್ತು ಮಾಲೀಕರ ನಡುವೆ ಉಂಟಾಗಿದ್ದ ಬಿಕ್ಕಟ್ಟನ್ನು ಪರಿಹರಿಸಿದರು. ಕಾರ್ಮಿಕರು ಹೆಚ್ಚಿನ ವೇತನಕ್ಕಾಗಿ ಒತ್ತಾಯಿಸಿ ಮುಷ್ಕರಕ್ಕಿಳಿದರು. ಗಾಂಧೀಜಿಯವರು ಗಿರಣಿಯ ಮಾಲೀಕರ ಜೊತೆ ಮಾತುಕತೆ ನಡೆಸಿದರು; ಆದರೆ ಅದು ವಿಫಲವಾಯ್ತು. ಇದರಿಂದ ಗಾಂಧೀಜಿಯವರು ‘ಅಮರಣಾಂತ ಉಪವಾಸವನ್ನು ಕೈಗೊಳ್ಳುವ ಮೂಲಕ 21 ದಿನದ ಮುಷ್ಕರವನ್ನು ಹೂಡಿ ಬಿಕ್ಕಟ್ಟನ್ನು ಖಗೆಹರಿಸುವಲ್ಲಿ ಯಶಸ್ವಿಯಾದರು. ಅನಂತರ ಗಾಂಧೀಜಿಯವರು ಖೇಡಾದ ರೈತರ ಸಮಸ್ಯೆಯನ್ನು ಸತ್ಯಾಗ್ರಹ ಚಳುವಳಿಯ ಮೂಲಕ ಬಗೆಹರಿಸಿದರು.

ಖೇಡಾ ಚಳವಳಿ

ಚಂಪಾರಣ, ಅಹ್ಮದಾಬಾದ್ ಹಾಗೂ ಖೇಡಾದ ಸಮಸ್ಯೆಗಳನ್ನು ಬಗೆಹರಿಸಿದ ನಂತರ ಗಾಂಧೀಜಿಯ ಬಗ್ಗೆ ಭಾರತದ ಜನತೆಯಲ್ಲಿ ಹೆಚ್ಚಿನ ಗೌರವ ಭಾವನೆ ಮೂಡಿತು ಮತ್ತು ಅವರು ಅನುಸರಿಸುತ್ತಿದ್ದ ನೀತಿ, ರಾಜಕೀಯ ವಿಧಾನ ಮುಂತಾದುವು ಅವರಲ್ಲಿನ ನಾಯಕತ್ವದ ಲಕ್ಷಣವನ್ನು ಎತ್ತಿ ತೋರಿಸಿದವು. ಗಾಂಧೀಜಿಯವರು ರಾಷ್ಟ್ರೀಯ ಚಳುವಳಿಗೆ ಧುಮುಕಲು ಸಿದ್ಧರಾದರು. ಅವರು ಈ ಹೋರಾಟದಲ್ಲಿ ಒಂದು ಪರಿಣಾಮಕಾರಿ ಫಲಿತಾಂಶವನ್ನು ಕಾಣಲೇ ಬೇಕಾಗಿತ್ತು. ಸಾಮಾನ್ಯ ಭಾರತೀಯರ ತೊಂದರೆಗಳನ್ನು ಗುರುತು ಹಚ್ಚುವಂತೆ ಅವರನ್ನು ಈ ಹೋರಾಟ ಒತ್ತಾಯಿಸಿತು. ಆದರೆ 1918ರ ತನಕ ಗಾಂಧೀಜಿಯವರು ಬ್ರಿಟಿಷ್ ಸರ್ಕಾರದ ಪರವಾಗಿಯೇ ವರ್ತಿಸಿದರು. ಅವರಿಗೆ ಬ್ರಿಟಿಷ್ ಸರ್ಕಾರಕ್ಕೆ ಕಿರಿಕಿರಿ ಉಂಟುಮಾಡಿ ತೊಂದರೆಗೆ ಸಿಲುಕಿಸುವುದು ಸರಿ ಎನಿಸಲಿಲ್ಲ, ಅವರು ಬ್ರಿಟಿಪರ ಬಗ್ಗೆ ಗೌರವ ಭಾವನೆ ತಾಳಿದ್ದರು ಮತ್ತು ಈ ನೀತಿಯಿಂದ ತಮಗೆ ಗೆಲುವು ಖಚಿತ ಎಂದು ನಂಬಿದ್ದರು. ಭಾರತವು ಬ್ರಿಟಿಷ್ ಸಾಮ್ರಾಜ್ಯ ಪಾಲುದಾರನಾಗಿದ್ದರೆ ಯಶಸ್ಸು ಸಾಧಿಸಬಹುದು ಎಂದು ಅರಿತಿದ್ದರು. ನಂತರ ಮಾಂಟೆಗೋ-ಚೇಲ್ಡ್ ಫರ್ಡ್ ವರದಿಯು ಹೊರಬಿದ್ದಿತು. ಅದರ ಪೂರ್ಣ ವಿವರವನ್ನು ಗಾಂಧೀಜಿ ಓದಿರಲಿಲ್ಲ. ಅದೊಂದು ಕರಾಳ ಶಾಸನ ಎಂಬುದಾಗಿ ತಿಳಿದು ಅದನ್ನು ಹಿಂತೆಗೆದುಕೊಳ್ಳುವಂತೆ ಗಾಂಧೀಜಿ ಮಾಡಿದ ಪ್ರಯತ್ನವೆಲ್ಲ ವಿಫಲವಾಯಿತು. “ನಿಜವಾಗಿಯೂ ಅದರ ಸಾರಾಂಶವನ್ನು ಸಹಾನುಭೂತಿಯಿಂದ ತಿಳಿಯಲು ಸಹ ಆಗದೆ ತಿರಸ್ಕರಿಸುವಂತಹುದಾಗಿತ್ತು” ಎಂದು ಅಭಿಪ್ರಾಯಪಟ್ಟರು. ಚೇಲ್ಸ್ ಫರ್ಡ್ ಹಟದಿಂದಾಗಿ ಈ ಕಾಯ್ದೆ ಹೊರಬಿದ್ದಿತು. ಅದು ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ ಒಂದು ಧಮನಕಾರಿಯಾದ ನೀತಿ, ಮತ್ತು ರಾಜಕೀಯ ವಿಕತೆಯನ್ನು ಮುರಿಯುವ ಉದ್ದೇಶ ಹೊಂದಿತ್ತು.

ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಮಳೆಯಾಗದೆ ವ್ಯಾಪಕವಾದ ಬೆಳೆ ಹಾನಿಯಿಂದಾಗಿ ಕ್ರಾಮದ ಪರಿಸ್ಥಿತಿ ತಲೆದೋರಿತ್ತು. ಸರ್ಕಾರದ ಕಂದಾಯದ ಕಾನೂನಿನ ಪ್ರಕಾರ ಮಳೆಯ ಪ್ರಮಾಣ ಕಡಿಮೆಯಾಗಿ ಬೆಳೆ ಮಾಮೂಲಿಗಿಂಥ ಶೇ. 75ರಷ್ಟು ಕಡಿಮೆಯಾಗಿದ್ದರೆ ಮಾತ್ರ ಕಂದಾಯವನ್ನು ಮಾಫಿ ಮಾಡಬಹುದಿತ್ತು. ಖೇಡಾದಲ್ಲಿ ಬೆಳೆ ತೀರ ಕಡಿಮೆಯಾಗಿರುವುದರಿಂದ ರೈತರು ಕಂದಾಯವನ್ನು ಮನ್ನಾ ಮಾಡಬೇಕೆಂದು ಕೇಳಿಕೊಂಡರು. ಆದರೆ ಸರ್ಕಾರಿ ಅಧಿಕಾರಿಗಳು ಅಂಕಿ ಅಂಶಗಳ ಪ್ರಕಾರ ಶೇ. 25ಕ್ಕಿಂತ ಜಾಸ್ತಿ ಬೆಳೆಯಾಗಿದೆಯೆಂದು ವಾದಿಸಿ ಕಂದಾಯ ವಸೂಲಿ ಮಾಡುವುದಾಗಿ ಹಠಹಿಡಿದರು. ಗಾಂಧೀಜಿಯವರು ಖೇಡಾದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು 50ಕ್ಕೂ ಹೆಚ್ಚಿನ ಹಳ್ಳಿಗಳಿಗೆ ಭೇಟಿಕೊಟ್ಟು ರೈತರನ್ನು ಮಾತಾಡಿಸಿ ಮತ್ತು ಅವರ ಜಮೀನನ್ನು ನೋಡಿ ಹಳ್ಳಿಗರನ್ನು ತೀವ್ರವಾದ ನಾಟೀಸವಾಲಿಗೆ ಗುರಿಮಾಡಿ ಕೊನೆಗೆ ಅವರಿಗೆ ಬಂದಿದ್ದ ಬೆಳೆ ಶೇ. 25ಕ್ಕಿಂತ ಕಡಿಮೆ ಯಾಗಿತ್ತೆಂಬುದನ್ನು ಖಚಿತಪಡಿಸಿಕೊಂಡು ನಿಷ್ಪಕ್ಷಪಾತವಾದ ವಿಚಾರಣಾ ಸಮಿತಿಯೊಂದನ್ನು ನೇಮಿಸಬೇಕೆಂದು ಸಲಹೆಯಿತ್ತರು. ಆದರೆ ಸರ್ಕಾರವು ಅವರ ಸಲಹೆಯನ್ನು ತಳ್ಳಿಹಾಕಿ ಬಲಪ್ರಯೋಗದ ಮೂಲಕ ಕಂದಾಯ ವಸೂಲಿ ಮಾಡಲು ಪ್ರಯತ್ನಿಸಿತು.

ಆದ್ದರಿಂದ ಗಾಂಧೀಜಿಯವರು 1918ರ ಮಾರ್ಚ್ 22ರಂದು ಪಟ್ಟೇದಾರರು ಸತ್ಯಾಗ್ರಹ ಹೂಡುವಂತೆ ಸಲಹೆ ಮಾಡಿದರು. ಬೇಡಾ ಜಿಲ್ಲೆಯ ಸ್ವಯಂ ಸೇವಕರ ಜೊತೆಗೆ ಈ ಹೋರಾಟದಲ್ಲಿ ಗಾಂಧೀಜಿಗೆ ಬೆಂಬಲವಾಗಿ ವಲ್ಲಭಬಾಯಿ ಪಟೇಲ್, ಶಂಕರ್‌ಲಾಲ್ ಬ್ಯಾಂಕರ್, ಅನುಸೂಯಾ ಬಹೆನ್, ಇಂದುಲಾಲ್ ಯಾಜಿಕ್ ಮತ್ತು ಮಹಾದೇವ ದೇಸಾಯಿ ಮುಂತಾದವರು ಭಾಗವಹಿಸಿದರು. ಏನೇ ಆದರೂ ಸರ್ಕಾರಕ್ಕೆ ಕಂದಾಯ ಕೊಡಬಾರದೆಂದು ಗಾಂಧೀಜಿ ರೈತರಿಗೆ ತಿಳಿಸಿದರು. ಅದರಂತೆ ಅನೇಕ ರೈತರು ಕಂದಾಯ ಕೊಡಲು ನಿರಾಕರಿಸಿದರು. 3000 ಸತ್ಯಾಗ್ರಹಿಗಳ ರೈತರ ಗುಂವು “ಸರ್ಕಾರಕ್ಕೆ ನಾವಾಗಿಯೇ ಕಂದಾಯವನ್ನು ಪಾವತಿ ಮಾಡುವುದಿಲ್ಲ ಸರ್ಕಾರ ಕೈಗೊಳ್ಳುವ ಧಮನಕಾರಿ ನೀತಿಯ ಫಲಗಳನ್ನು ಅನುಭವಿಸುತ್ತೇವೆಯೇ ಹೊರತು ಕಂದಾಯ ಸಲ್ಲಿಸುವುದಿಲ್ಲ. ಆತ್ಮಗೌರವ ಕಳೆದುಕೊಳ್ಳುವುದಕ್ಕಿಂತ ನಮ್ಮ ಜಮೀನನ್ನು ಕಳೆದುಕೊಳ್ಳಲು ಸಿದ್ಧ’ ಎಂಬುದಾಗಿ ಘೋಷಿಸಿದರು.

ಕಮಿಷನರ್‌ರವರು “ಅವಿಧೇಯರಾಗಿರುವವರಿಗೆ ಇನ್ನು ಮುಂದೆ ಜಮೀನು ದೊರಕುವುದಿಲ್ಲ, ಮತ್ತು ಜಮಿಳುನ ಹಕ್ಕಿನ ದಾಖಲೆಗಳನ್ನು ವಜಾ ಮಾಡುವುದಾಗಿ ಬೆದರಿಕೆ ಹಾಕಿದನು. ರೈತರು ಇದಕ್ಕೂ ಬಗ್ಗದಿದ್ದಾಗ ಅಧಿಕಾರಿಗಳು ರೈತರ ದನಕರುಗಳನ್ನು ಮಾರಿದರು, ಕೈಗೆ ಸಿಕ್ಕಿದ ಚರಸ್ಥಿರಾಸ್ತಿಯನ್ನೆಲ್ಲಾ ವಶಪಡಿಸಿಕೊಂಡರು. ಜುಲ್ಮಾನೆಯ ನೋಟೀಸುಗಳನ್ನು ಜಾರಿ ಮಾಡಿದನು. ಕೊಯ್ಲಿಗೆ ಬಂದಿದ್ದ ಬೆಳೆಗಳನ್ನು ಜಪ್ತಿ ಮಾಡಿದರು. ಇದೆಲ್ಲದರಿಂದ ರೈತರು ಹೆದರಿ ಕೆಲವರು ಕಂದಾಯದ ಬಾಕಿಯನ್ನು ಪಾವತಿ ಮಾಡಿದರು. ಮತ್ತು ಕೆಲವರು ಸುಲಭವಾದ ಚರಾಸ್ತಿಯನ್ನು ಅಧಿಕಾರಿಗಳಿಗೆ ಒಪ್ಪಿಸಿದರು.

ಹೆದರಿದ್ದ ರೈತರ ಹೃದಯದಲ್ಲಿ ಧೈರ್ಯ ತುಂಬಲು ಬೆಳೆದುನಿಂತ ಫಸಲನ್ನು ಜಪ್ತಿ ಮಾಡುವುದು ನೀತಿಬಾಹಿರವೆಂದು ಘೋಷಿಸಿ ತಾವು ಬೆಳೆದ ಫಸಲನ್ನು ಪಡೆಯುವ ಹಕ್ಕು ರೈತರಿಗೆ ಇದೆ ಎಂದು ಹೇಳಿ ಅದನ್ನು ಕಟಾವು ಮಾಡಲು ಸತ್ಯಾಗ್ರಹಿಗಳನ್ನು ಕಳುಹಿಸಿದರು. ಇದು ಜಿಲ್ಲೆಯಾದ್ಯಂತ ರೈತರಲ್ಲಿ ಜಾಗೃತಿ ಮತ್ತು ಧೈರ್ಯ ಮೂಡಿಸಿತು. ನಾದಿಯದ್ ತಾಲ್ಲೂಕಿನ ಮಾಮ್ಮತ್‌ದಾರರು ಗಾಂಧೀಜಿಯವರಿಗೆ ಪತ್ರ ಬರೆದು ‘ಹಣವಿರುವ ಪಟ್ಟೇದಾರರು ಕಂದಾಯ ಪಾವತಿ ಮಾಡಿದರೆ ಬಡವರಿಗೆ ಕಂದಾಯ ಪಾವತಿ ತಡೆಹಿಡಿಯುವುದಾಗಿ ತಿಳಿಸಿದ. ಗಾಂಧೀಜಿಯವರು ಸರ್ಕಾರದ ಈ ರಾಜಿ ಸೂತ್ರವನ್ನು ಒಪ್ಪಿಕೊಂಡರು. ಹೀಗೆ ನಾಲ್ಕು ತಿಂಗಳ ಹೋರಾಟವು ಅನಿರೀಕ್ಷಿತವಾಗಿ ಪರಿಸಮಾಪ್ತಿಯಾಯಿತು. ಈ ಸತ್ಯಾಗ್ರಹದ ಫಲಿತಾಂಶವೆಂದರೆ ಯಾವ ಬಲಿಷ್ಠ ಸರ್ಕಾರವೂ ಜನರ ಸಂಕಲ್ಪಕ್ಕೆ ವಿರುದ್ಧವಾಗಿ ನಿಲ್ಲಲಾರದು ಮತ್ತು ಜನರ ಒಪ್ಪಿಗೆಯಿಲ್ಲದೆ ಆಳುವುದು ಅಸಾಧ್ಯ ಎಂಬ ಅಂಶವು ಬ್ರಿಟಿಷರಿಗೆ ಮನವರಿಕೆಯಾಯಿತು. ಈ ಸತ್ಯಾಗ್ರಹದ ದೆಸೆಯಿಂದಾಗಿ ವಲ್ಲಭಬಾಯಿ ಪಟೇಲರು ಹೇರಳ ಶ್ರೀಮಂತಿಕೆ ತರುತ್ತಿದ್ದ ಬ್ಯಾರಿಸ್ಟರ ವೃತ್ತಿಯನ್ನು ತೊರೆದು ಗಾಂಧೀಜಿಯವರ ಅನುಯಾಯಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಕಾರಣವಾಯಿತು.

ರೌಲತ್ ಮಸೂದೆ (1919)

ಮೊದಲನೆ ಮಹಾಯುದ್ಧದ ಕಾಲದಲ್ಲಿ ಜಾರಿಯಲ್ಲಿದ್ದ ‘ಡಿಫೆನ್ಸ್ ಆಫ್ ಇಂಡಿಯನ್ ಆಕ್ಟ್ ‘ನ (ಭಾರತದ ಭದ್ರತಾ ಕಾಯಿದೆ) ಅವಧಿ ಮುಗಿಯುತ್ತಾ ಬಂದಿತು. ರೌಲತ್ ಮಸೂದೆಯು 1919ರ ಫೆಬ್ರವರಿ 6ನೇ ತಾರೀಖಿನಂದು ಜಾರಿಗೆ ಬಂದಿತು. ಇದರ ವಿರುದ್ಧ ಇಡೀ ಭಾರತದಾದ್ಯಂತ ಪ್ರತಿಭಟನೆ ವ್ಯಕ್ತವಾಯಿತು ಮತ್ತು ಚಳುವಳಿಯ ಮಹಾಪೂರವೇ ಪ್ರಾರಂಭವಾಯಿತು. ಕಾರ್ಯಾಂಗದ ಕೈಗೆ ಮಿತಿಮೀರಿದ ಅಧಿಕಾರವನ್ನು ಈ ಕಾಯ್ದೆ ದೊರಕಿಸಿಕೊಟ್ಟಿತ್ತು. ರಾಜಕೀಯ ಹಿಂಸೆಯನ್ನು ತಡೆಗಟ್ಟಲು ಅಂದರೆ ಕ್ರಾಂತಿಕಾರಿಗಳ ಚಟುವಟಿಕೆಯನ್ನು ಧಮನಮಾಡಲು ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಕ್ರಾಂತಿಕಾರಿಗಳನ್ನು ಯಾವುದೇ ವಿಚಾರಣೆಯಿಲ್ಲದೆ ಶಿಕ್ಷೆಗೆ ಒಳಪಡಿಸಲು ಈ ಕಾಯಿದೆಯಲ್ಲಿ ಅವಕಾಶವಿತ್ತು. ಅಂದಿನ ಕಾನೂನು ಮಂತ್ರಿ ರೌಲತ್‌ ಹೆಸರನ್ನು ಈ ಕಾಯ್ದೆಗೆ ಇಡಲಾಗಿತ್ತು. ಈ ಕಾಯಿದೆಯ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ಸೇರುವಂತಿರಲಿಲ್ಲ. ಸಭೆ ಸಮಾರಂಭಗಳನ್ನು ಕೈಗೊಳ್ಳುವಂತಿರಲಿಲ್ಲ, ಮಾರಕ ಅಸ್ತ್ರ ಮುಂತಾದವನ್ನು ಬಳಸುವಂತಿರಲಿಲ್ಲ ಈ ಕಾಯ್ದೆಯು ಇಡೀ ಭಾರತದಲ್ಲಿ ನಡೆಯುವ ಕ್ರಾಂತಿಕಾರ್ಯಗಳನ್ನು ವಿರೋಧಿಸುತ್ತಿತ್ತು ಮತ್ತು ಭಾರತೀಯರ ಎಲ್ಲ ಪೌರ ಸ್ವಾತಂತ್ರ್ಯಗಳನ್ನೂ, ಹಕ್ಕುಗಳನ್ನೂ ಧಮನಮಾಡುವ ಅಂಶಗಳನ್ನು ಒಳಗೊಂಡಿತ್ತು. ಈ ಕಾನೂನಿನಲ್ಲಿ ಮೊಕದ್ದಮೆಗಳನ್ನು ಬಹುಬೇಗ ತೀರ್ಮಾನಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಅವಕಾಶವಿದ್ದು ಅವುಗಳ ತೀರ್ಮಾನವನ್ನು ಪ್ರಶ್ನಿಸಲು ಮೇಲ್ಮನೆಯಲ್ಲಿ ಅವಕಾಶಕೊಡಲಿಲ್ಲ, ಪ್ರಾಂತೀಯ ಸರ್ಕಾರಗಳು ಈ ಕಾನೂನಿನ ಪ್ರಕಾರ ಅನುಮಾನಬಂದ ವ್ಯಕ್ತಿಯನ್ನು ಪ್ರತಿಬಂಧಿಸುವ, ಮುಚ್ಚಳಿಕೆಯಾಗಿ ಹಣವನ್ನು ಪಡೆಯುವ ಅಧಿಕಾರಗಳನ್ನು ಪಡೆದವು. ಒಂದು ಸ್ಥಳದ ಪರೀಕ್ಷೆ ಮಾಡುವ ಮತ್ತು ಅನುಮಾನ ಬಂದ ವ್ಯಕ್ತಿಯನ್ನು ಯಾವುದೇ ನ್ಯಾಯಾಲಯದ ಖಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವನ್ನು ಪಡೆದವು. ಬಂಧಿತ ವ್ಯಕ್ತಿಯು ತನ್ನ ಪರ ತಾನೇ ವಾದಿಸಬೇಕಿತ್ತೇ ಹೊರತು ನ್ಯಾಯಾವಾದಿಯ ಸಹಾಯ ಪಡೆಯುವಂತಿರಲಿಲ್ಲ. ಸರ್ಕಾರಕ್ಕೆ ವಿರುದ್ಧವಾದ ಯಾವುದೇ ರೀತಿಯ ಸಾಹಿತ್ಯವನ್ನು ಹೊಂದುವುದು ಅಪರಾಧವಾಗಿದ್ದು ಅದಕ್ಕೆ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸುವ ವಿಧಿಯು ಇದ್ದಿತು. ರಾಜಕೀಯ ವಿರೋಧಿಗಳನ್ನು ರಹಸ್ಯವಾದ ವಿಚಾರಣೆಗೆ ಗುರಿಪಡಿಸಿ ಯಾವ ರೀತಿಯ ಮೇಲ್ಮನವಿಗೂ ಅವಕಾಶ ನೀಡದೆ ಮರಣದಂಡನೆ ವಿಧಿಸುವ ಅಧಿಕಾರವನ್ನು ಸರ್ಕಾರವು ಪಡೆಯಿತು. ಯುದ್ಧ ಕಾಲದ ಎಲ್ಲ ನಿರ್ಬಂಧಗಳನ್ನು ಮುಂದುವರಿಸಿಕೊಂಡು ಹೋಗುವ ಹಾಗೂ ಪತ್ರಿಕಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ವಿಧಿಗಳು ರೌಲತ್ ಕಾಯ್ದೆಯಲ್ಲಿದ್ದವು

ಈ ಕರಾಳ ಮಸೂದೆಯನ್ನು ಶಾಸಕಾಂಗದ ಎಲ್ಲಾ ಆಯ್ಕೆ ಪ್ರತಿನಿಧಿಗಳು ಅಥವಾ ಸದಸ್ಯರು ಕಟುವಾಗಿ ವಿರೋಧಿಸಿದರು. ಸುರೇಂದ್ರನಾಥ್ ಬ್ಯಾನರ್ಜಿ, ಶ್ರೀನಿವಾಸ ಶಾಸ್ತ್ರಿ, ತೇಜ್‌ ಬಹದ್ದೂರ್ ಸಪ್ಪು, ಜಿನ್ನಾ ಇದರಲ್ಲಿ ಸೇರಿದ್ದರು. ಗಾಂಧೀಜಿಯವರು ಈ ಕಾಯಿದೆಯ ವಿರುದ್ಧ ನೇರವಾದ ಹೋರಾಟಕ್ಕೆ ಇಳಿದರು. ರಾಜಕೀಯ ಚಟುವಟಿಕೆಗಳ ಮೇಲೆ ಹಾಗೂ ರಾಷ್ಟ್ರೀಯ ಚಳುವಳಿಯ ಮೇಲೆ ಈ ಕಾಯ್ದೆ ಅಷ್ಟೊಂದು ಧಮನಕಾರಿ ನೀತಿಯನ್ನು ಹೊಂದಿತ್ತು. ಸಾಮಾನ್ಯ ಹಕ್ಕು ಮತ್ತು ಸೌಲಭ್ಯವನ್ನು ಇದರಿಂದ ಕಸಿದುಕೊಂಡಂತಾಗಿತ್ತು. ಇದರಿಂದ ಗಾಂಧೀಜಿಯವರು ರಾಷ್ಟ್ರದಾದ್ಯಂತ ಈ ಕಾನೂನಿನ ವಿರುದ್ಧ ಜನರನ್ನು ಸಂಘಟಿಸಲು ಸಿದ್ಧರಾದರು. 1919ರಲ್ಲಿ ಗಾಂಧೀಜಿಯವರು ಒಂದು ಸತ್ಯಾಗ್ರಹ ಸಮಿತಿಯನ್ನು ಸಂಘಟಿಸಿ ಈ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು. ಮಾರ್ಚ್ 12, 1919ರಂದು ಗಾಂಧೀಜಿಯವರು ವೈಸ್ ರಾಯ್‌ ರವರಿಗೆ ಮನವಿ ಮಾಡುತ್ತಾ ಈ ಕಾಯ್ದೆಯನ್ನು ಪುನರ್ ಪರಿಶೀಲಿಸಲು ಕೇಳಿಕೊಂಡರು. ಆದರೆ ವೈಸ್‌ರಾಯ್ ಮತ್ತು ಅವನ ಸಲಹೆಗಾರರು ‘ಸಾರ್ವಜನಿಕ ಹಿತಾಸಕ್ತಿಯಿಂದ ಅದು ಅಗತ್ಯವಾಗಿದೆ ಎಂದು ಹೇಳಿ ಮಾರ್ಚ್ 18, 1919ರಂದು ಅಧಿಕಾರಿಗಳ ಬಹುಮತದಿಂದ ಅಂಗೀಕರಿಸಲಾಯ್ತು.

ಹೀಗೆ ಗಾಂಧೀಜಿಯವರು ನಾಗರಿಕ ಸವಿನಯ ಕಾನೂನುಭಂಗಕ್ಕೆ ಸಿದ್ದರಾದರು. ಆದರೆ ಅನಿಬೆಸೆಂಟರು ಈ ನೀತಿಯಿಂದ ಹಿಂಸೆ ಆರಂಭವಾಗಬಹುದು ಎಂಬ ಭಯವನ್ನು ವ್ಯಕ್ತಪಡಿಸಿದರು. ಕೊನೆಯಲ್ಲಿ ನಾಯಕತ್ವಕ್ಕೆ ಉಂಟಾದ ಕಲಹದಲ್ಲಿ ಗಾಂಧೀಜಿಯವರು ಜಯಗಳಿಸಿದರು. ಡಿ. ಇ. ವಾಚಾ, ಸುರೇಂದ್ರನಾಥ್ ಬ್ಯಾನರ್ಜಿ, ತೇಜ್ ಬಹದ್ದೂರ್ ಸಪ್ಪು, ಶ್ರೀನಿವಾಸ ಶಾಸ್ತ್ರಿಯವರನ್ನೊಳಗೊಂಡಂತೆ ಒಟ್ಟು 15 ಅಧಿಕಾರೇತರ ಕೌನ್ಸಿಲ್‌ನ ಸದಸ್ಯರು ರೌಲತ್ ಕಾಯಿದೆಯನ್ನು ವಿರೋಧಿಸಲು ಸತ್ಯಾಗ್ರಹ ಮಾಡಲು ತೀರ್ಮಾನಿಸಿದರು. ಒಂದು ದಿನ ಹರತಾಳ ಆಚರಿಸಲು ಕರೆ ನೀಡಲಾಯ್ತು. ವ್ಯಾಪಾರ ವಹಿವಾಟನ್ನು ವಿಸರ್ಜಿಸಿ ಜನರು ಒಂದು ದಿನ ಪ್ರಾರ್ಥನೆ ಮಾಡುವಂತೆ ಕರೆ ಕೊಡಲಾಯ್ತು. ಇದಕ್ಕೆ ದಿನಾಂಕವನ್ನು ಮಾರ್ಚ್ 30: 1919 ಎಂದು ನಿಗಧಿ ಪಡಿಸಿದ್ದು ನಂತರ ಏಪ್ರಿಲ್ 8ನೇ ತಾರೀಖೆಗೆ ಮುಂದೂಡಲಾಯಿತು. ಮಾರ್ಚ್ 20ನೇ ತಾರೀಖಿನಿಂದ ದೆಹಲಿಯಲ್ಲಿ ಹೊರಟ ಹಿಂದೂ ಮುಸ್ಲಿಂ ಮೆರವಣಿಗೆಯ ಮೇಲೆ ಪೋಲೀಸರು ಗುಂಡು ಹಾರಿಸಿದರು. ಮಾರನೇ ದಿನ ಆರ್ಯಸಮಾಜದ ನಾಯಕರಾದ ಸ್ವಾಮಿ ಶ್ರದ್ಧಾನಂದರ ಮೆರವಣಿಗೆಯನ್ನು ಹಿಂದೂ ಮುಸ್ಲಿಮರು ಒಬ್ಬರಿಗೊಬ್ಬರು ಕೈ ಜೋಡಿಸಿ ಪೋಲಿಸರಿಂದ ರಕ್ಷಿಸಿದರು. ಸನ್ಮಾಸಿ ಉಡುಪಿನಲ್ಲಿದ್ದ ಗಂಭೀರ ಆಕಾರದ ಸ್ವಾಮಿ ಶ್ರದ್ಧಾನಂದರು ಚಾಂದನಿ ಚೌಕದಲ್ಲಿ ಗೂರ್ಖಾದಳಗಳ ಬಯೊನೆಟ್‌ಗಳನ್ನು ತೆರೆದೆದೆಯಿಂದ ಎದುರಿಸಿದರು. ಈ ಘಟನೆಯು ಭಾರತದ ಚಳವಳಿಗಾರರಲ್ಲಿ ರೋಮಾಂಚನವನ್ನುಂಟುಮಾಡಿತು. ಅಂದಿನ ಗಲಭೆಯಲ್ಲಿ 9 ಜನ ಗುಂಡಿನೇಟಿನಿಂದ ಸತ್ತರು, 20 ಜನ ಕಾಣೆಯಾಗಿ, 13 ಜನಕ್ಕೆ ತೀವ್ರತರವಾದ ಗಾಯಗಳಾದವು. ಗಾಂಧೀಜಿಯವರು ಎಪ್ರಿಲ್ 6 ರಂದು ಮುಂಬಯಿಯಲ್ಲಿ ಮೆರವಣಿಗೆ ಸೇರಿಸಿ, “ಜನರು ಸಂಯಮ ಮತ್ತು ಶಾಂತಿ ಚಿತ್ತರಾಗಿ ಚಳವಳಿ ನಡೆಸಬೇಕೆಂದೂ, ಸತ್ಯಾಗ್ರಹಿಗಳಿಗೆ ಅಹಿಂಸೆ ಯಾವಾಗಿಲೂ ಸ್ವಾಗತಾರ್ಹವೆಂದೂ, ಆತ್ಮ ಬಲದಾನವಿಲ್ಲದೆ ಯಾವ ರಾಷ್ಟ್ರವು ನಿರ್ಮಾಣವಾಗುವುದಿಲ್ಲ’ವೆಂದು ಅಭಿಪ್ರಾಯಪಟ್ಟರು. ಬಹಿಷ್ಕೃತವಾಗಿದ್ದ ಗಾಂಧೀಜಿಯವರ ಹಿಂದ್ ಸ್ವರಾಜ್” ಮತ್ತು “ಸರ್ವೋದಯ” ಕೃತಿಗಳನ್ನು ಸರೋಜಿನಿ ನಾಯ್ಡು ರವರು ಮಾರಾಟಮಾಡಲು ತೊಡಗಿದಾಗ ಪ್ರಕಟಿತ ಬೆಲೆ ನಾಲ್ಕಾಣೆಯೇ ಆಗಿದ್ದರೂ ಜನರು ತಾವೇ ಮನಃಪೂರ್ವಕವಾಗಿ ಹೆಚ್ಚು ಹಣ ಕೊಟ್ಟು ಕೊಂಡುಕೊಂಡರು. ಕೊಳ್ಳಲು ಬಂದವರಿಗೆ ನಿಷೇಧಿತ ಸಾಹಿತ್ಯವನ್ನು ಪಡೆದ ತಪ್ಪಿಗೆ ದಸ್ತಗಿರಿಯಾಗಿ ಸೆರೆಮನೆಗೆ ಹೋಗಬಹುದೆಂದು ತಿಳಿಸಿದರೂ ಸಹ ಜನರಲ್ಲಿ ಜೈಲಿಗೆ ಹೋಗುವ ಭೀತಿ ಕಳೆದುಹೋಗಿತ್ತು. ಏಪ್ರಿಲ್ 6ರಂದು ಇಡೀ ಭಾರತದಾದ್ಯಂತ ಒಂದು ದಿನದ ಮಟ್ಟಿಗೆ ಹರತಾಳ ಆಚರಿಸಲಾಯಿತು. ಗಾಂಧೀಜಿಯನ್ನು ಏಪ್ರಿಲ್ 9ನೇ ತಾರೀಖಿನಿಂದು ಬಂಧಿಸಲಾಯಿತು. ಈ ವಾರ್ತೆ ಕೇಳಿದಾಗ ಬಾಂಬೆ, ಅಹ್ಮದಾಬಾದ್, ಮುಂತಾದ ಕಡೆ ಗಂಭೀರ ಸ್ಥಿತಿಯುಂಟಾಯ್ತು. ಗಾಂಧೀಜಿಯವರು ಅಸಹಕಾರ ಮತ್ತು ಕಾನೂನು ಭಂಗವನ್ನು ಮುಂದುವರೆಸುವಂತೆ ಜನತೆಗೆ ಕರೆಕೊಟ್ಟರು. ಆದರೆ ರೌಲತ್ ಕಾಯ್ದೆಯ ವಿರುದ್ಧದ ಸತ್ಯಾಗ್ರಹ ಚಳುವಳಿ ತನ್ನ ಉದ್ದೇಶ ಸಾಧಿಸುವಲ್ಲಿ ವಿಫಲವಾಯ್ತು ಎನ್ನಬಹುದು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top