ಸ್ವರಾಜ್ ಸಾಧನೆಗಾಗಿ ಹೋರಾಟ (ಗಾಂಧೀ ಯುಗ)

ಸ್ವರಾಜ್ ಸಾಧನೆಗಾಗಿ ಹೋರಾಟ (ಗಾಂಧೀ ಯುಗ)

ಸ್ವರಾಜ್ ಸಾಧನೆಗಾಗಿ ಹೋರಾಟ (ಗಾಂಧೀ ಯುಗ)

ಮಹಾತ್ಮ ಗಾಂಧೀಜಿಯವರ ಉದಯ

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರು ಭಾಗವಹಿಸಿದಂದಿನಿಂದ ಗಾಂಧೀಯುಗ ಆರಂಭವಾಗುತ್ತದೆ. ಹಲವಾರು ಏಳುಬೀಳುಗಳನ್ನು ಕಂಡು ಮುಂದುವರಿದು ಬಂದಂತಹ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗಾಂಧೀಜಿಯವರ ನೇತೃತ್ವದಲ್ಲಿ ತೀವ್ರವಾಗಿ ಹೋರಾಟವನ್ನು ಮುಂದುವರಿಸಲು ಅನುವಾಯಿತು. ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅಹಿಂಸಾ ನೀತಿ, ಸತ್ಯಾಗ್ರಹ, ಅಸಹಕಾರ ಮುಂತಾದ ಅಸ್ತ್ರಗಳನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸಿ ಭಾರತವು ಸ್ವಾತಂತ್ರ್ಯಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರಿಂದಾಗಿ ಭಾರತದ ಇತಿಹಾಸದಲ್ಲಿ 1919ರಿಂದ 1947ರ ಕಾಲವನ್ನು ‘ಗಾಂಧಿಯುಗ’ ಎಂದು ಕರೆಯಲಾಗಿದೆ. ಮಹಾತ್ಮ ಗಾಂಧೀಜಿಯವರು ಆಫ್ರಿಕಾದಲ್ಲಿ ಅಲ್ಲಿಯ ಸರ್ಕಾರದ ವರ್ಣಭೇದ ನೀತಿಯ ವಿರುದ್ಧ ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗದ ಮೂಲಕ ಯಶಸ್ಸನ್ನು ಗಳಿಸಿ 1915ರಲ್ಲಿ ಭಾರತಕ್ಕೆ ಬಂದರು.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರಿಗಾಗಿ ವೀರಾವೇಶದಿಂದ ಹೋರಾಡಿದ್ದು ಭಾರತೀಯರೆಲ್ಲರಿಗೂ ತಿಳಿದಿತ್ತು. ಅವರು ಅಲ್ಲಿ ಪ್ರಯೋಗಿಸಿದ ಸತ್ಯಾಗ್ರಹದ ನೂತನ ವಿಧಾನವು ಒಳ್ಳೆಯ ಫಲಗಳನ್ನು ಕೊಟ್ಟಿತ್ತು. ಅವರ ವ್ಯಕ್ತಿತ್ವ ಮತ್ತು ಸಂಘಟನಾ ಸಾಮರ್ಥ್ಯಗಳ ಬಗೆಗೆ ಕಾಂಗ್ರೆಸ್ ನಾಯಕರಿಗೆ ಅಗಾಧ ಭರವಸೆಯಿತ್ತು. 1915ರಲ್ಲಿ ಭಾರತಕ್ಕೆ ಬರುವವರೆಗೂ ಕಾಂಗ್ರೆಸ್ ವಲಯಗಳಲ್ಲಿ ಅವರು ಯಾವುದೇ ಪ್ರಮುಖ ಪಾತ್ರವನ್ನು ವಹಿಸಿರಲಿಲ್ಲ. ಜನಸಾಮಾನ್ಯರಿಗೆ ಅವರ ಪರಿಚಯ ಅಷ್ಟಿರಲಿಲ್ಲ. ಗಾಂಧೀಜಿಯವರ ಈ ಕೊರತೆಯ ಅಂಶವೇ ಒಂದು ವರದಾನವಾಯಿತು. ಜನರು ಮಿತಗಾಮಿಗಳು ಅಥವಾ ತೀವ್ರಗಾಮಿಗಳೆಂಬ ವಿಷಯಕ್ಕೆ ಆದಂತೆ ಗಾಂಧೀಜಿಯವರ ಬಗೆಗೆ ಭ್ರಮಿತರಾಗಬೇಕಾಗಲಿಲ್ಲ. ಕಾಂಗ್ರೆಸ್ಸಿಗರಲ್ಲೂ ಅವರನ್ನು ಮಿತಗಾಮಿಗಳು ಅಥವಾ ತೀವ್ರಗಾಮಿಗಳೆಂಬ ಗುಂಪಿಗೆ ನಿರ್ಧಿಷ್ಟವಾಗಿ ವಿಂಗಡಿಸಿ ದೂರವಾಗಲಿಲ್ಲ. ಗಾಂಧೀಜಿಯವರ ವಿರಕ್ತ ರೀತಿಯ ಅಭ್ಯಾಸಗಳು, ಸಂತ ಗಾಂಭೀರ್ಯ, ಇಂಗ್ಲಿಷಿಗೆ ಬದಲಾಗಿ ಅವರು ಭಾರತೀಯ ಭಾಷೆಗಳನ್ನು ಉಪಯೋಗಿಸಿದ್ದು, ಧಾರ್ಮಿಕ ವಿಚಾರಗಳು ಜನತೆಯ ಮೇಲೆ ಒಳ್ಳೆಯ ಪರಿಣಾಮ ಬೀರಿದವು. ಗಾಂಧೀಜಿಯವರು ಧಾರ್ಮಿಕ ನೆಲೆಗಟ್ಟಿನ ಮೇಲೆ ರಾಷ್ಟ್ರೀಯತೆಯನ್ನು ಬೆಳೆಸಿದರೆಂದು ಹೇಳಬಹುದು. ಭಾರತೀಯ ಜನತೆ ಅವರನ್ನು ಹೃದಯದಲ್ಲಿ, ನೆಲೆಗೊಳಿಸಿಕೊಂಡಿತು.

ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಏಕಮೇವ ನಾಯಕತ್ವವನ್ನು ಪಡೆದು ರಾಷ್ಟ್ರೀಯ ಚಳುವಳಿಯಲ್ಲಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ತಮ್ಮ ಧೈಯವನ್ನು ಸಾಧಿಸಿದರು ಮತ್ತು ಕಾಂಗ್ರೆಸ್‌ನಲ್ಲಿ ಹಲವಾರು ಬದಲಾವಣೆಯನ್ನು ಮಾಡಿದರು. ಇದೇ ಸಮಯಕ್ಕೆ 1916ರಲ್ಲಿ ಉಗ್ರಗಾಮಿಗಳು ಮತ್ತು ಮುಸ್ಲಿಂ ಲೀಗ್ ಸಹ ಬಂದು ಕಾಂಗ್ರೆಸನ್ನು ಮತ್ತೆ ಒಗ್ಗೂಡಿದವು. ಉಗ್ರಗಾಮಿಗಳು 1907ರ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್‌ನಿಂದ ಭಿನ್ನ ಪಿಣವಾಗಿ ಸಿಡಿದು ಹೋಗಿದ್ದರು; ಆದರೆ 1916ರಲ್ಲಿ ಮತ್ತೆ ಕಾಂಗ್ರೆಸನ್ನು ಸೇರಿದರು. ಈ ವೇಳೆಗಾಗಲೆ ಗೋಪಾಲಕೃಷ್ಣ ಗೋಖಲೆಯವರು ಮರಣವನ್ನಪ್ಪಿದರು ಮತ್ತು ಬಾಲಗಂಗಾಧರ ತಿಲಕ್‌ರವರು ಸೆರೆವಾಸದಿಂದ ಬಿಡುಗಡೆಹೊಂದಿದ್ದರು. ತಿಲಕ್ ಮತ್ತು ಅನಿಬೆಸೆಂಟರು ಸಹ ಲಕ್ಷ್ಮಿ ಒಪ್ಪಂದದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನೊಡನೆ ವಿಲೀನವಾದರು. 1916ರಲ್ಲಿ ಮುಸ್ಲಿಂಲೀಗ್ ಮತ್ತು ಕಾಂಗ್ರೆಸ್ ಎರಡೂ ಲಕ್ಕೋದಲ್ಲಿ ಅಧಿವೇಶನ ಸೇರಿದವು ಈ ಸಂದರ್ಭದಲ್ಲಿ ಲೀಗ್ ಹಾಗೂ ಕಾಂಗ್ರೆಸ್ ನಡುವೇ ಏರ್ಪಟ್ಟ ಒಪ್ಪಂದವೇ ಲಕ್ಷ್ಮಿ ಒಪ್ಪಂದ, ಇದರ ಪ್ರಕಾರ ಜಂಟಿಯಾಗಿ ಸಂವಿಧಾನಾತ್ಮಕ ಸುಧಾರಣೆಗಳಿಗೆ ಬ್ರಿಟಿಷರನ್ನು ಒತ್ತಾಯಪಡಿಸಲು ತೀರ್ಮಾನಿಸಲಾಯಿತು. ಲೀಗ್ ಈಗಾಗಲೆ ಕಾಂಗ್ರೆಸ್ಸನ್ನು ವಿರೋಧಿಸುವ ನೀತಿಯನ್ನು ಕೈ ಬಿಟ್ಟು, ಅದರೊಂದಿಗೆ ಸಹಕರಿಸಿ ಪ್ರಥಮ ಮಹಾಯುದ್ಧದಲ್ಲಿ ಬ್ರಿಟನ್ ಟರ್ಕಿಯ ವಿರುದ್ಧ ಹೋರಾಡುವುದನ್ನು ಒಟ್ಟಾಗಿ ಖಂಡಿಸಿದವು. 1911ರಲ್ಲಿ ಬಂಗಾಳದ ವಿಭಜನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು. ಮತ್ತು 1916ರಲ್ಲಿಯೇ ಸ್ವರಾಜ್ಯಕ್ಕಾಗಿ ಒತ್ತಾಯಿಸಲು ಒಂದು ಠರಾವನ್ನು ಜಾರಿಗೊಳಿಸಿಕೊಂಡವು.

ಗಾಂಧೀಜಿಯವರ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ

ದಕ್ಷಿಣ ಆಫ್ರಿಕಾದಲ್ಲಿ ಜನಾಂಗ ಪಕ್ಷಪಾತ ಹಾಗೂ ವರ್ಣಭೇದ ನೀತಿಯ ವಿರುದ್ಧ ನಡೆಸಿದ ಹೋರಾಟದಲ್ಲಿ ಸತ್ಯಾಗ್ರಹವೆಂಬ ಕಾರ್ಯತತ್ವವನ್ನು ಗಾಂಧೀಜಿ ರೂಪಿಸಿಕೊಂಡಿದ್ದರು. ಸತ್ಯಾಗ್ರಹದ ಪ್ರಧಾನ ಎರಡು ಅಂಶಗಳೆಂದರೆ ಸತ್ಯ ಮತ್ತು ಅಹಿಂಸೆ, ಸತ್ಯಾಗ್ರಹವನ್ನು ಅವರು ಆತ್ಮಶಕ್ತಿ ಅಥವಾ ಪ್ರೇಮಶಕ್ತಿಯೆಂದು ಸೂಚಿಸಿದರು ಹಾಗೂ ಆ ಶಕ್ತಿ ಸತ್ಯ ಮತ್ತು ಅಹಿಂಸೆಯಿಂದ ಹುಟ್ಟಿದುದು ಎಂದು ಅಭಿಪ್ರಾಯಪಟ್ಟರು. ಸತ್ಯಾಗ್ರಹಿಯು ತಾನು ಯಾವುದು ತಪ್ಪು ಎಂದು ಪರಿಗಣಿಸುತ್ತಾನೋ ಅದಕ್ಕೆ ಶರಣಾಗಲು ನಿರಾಕರಿಸುತ್ತಾನೆ. ಎಲ್ಲ ಬಗೆಯ ಪ್ರಚೋದನೆಗಳೆದುರಾದಾಗಲೂ ಅವನು ಶಾಂತಚಿತ್ತದಿಂದಿರುತ್ತಾನೆ. ಅವನು ದೋಷವನ್ನು ಪ್ರತಿಭಟಿಸುತ್ತಾನೆ, ಆದರೆ ದೋಷಿಯನ್ನು ದ್ವೇಷಿಸುವುದಿಲ್ಲ. ಅವನು ಸತ್ಯವನ್ನು ಎತ್ತಿ ಹಿಡಿಯುತ್ತಾನೆ, ವಿರೋಧಿಗೆ ಹಿಂಸೆ ಮಾಡುವುದರಿಂದ ಅಲ್ಲ, ತಾನೇ ಯಾತನೆಯನ್ನು ಅನುಭವಿಸುವುದರ ಮೂಲಕ. ಆ ಮೂಲಕ ತಪ್ಪಿತಸ್ತನ ಆತ್ಮಶಕ್ತಿಯನ್ನು ಪ್ರಚೋದಿಸಿ ಅರಿವನ್ನುಂಟುಮಾಡಬಹುದು. ಯಶಸ್ಸು ಸಾಧಿಸಬೇಕಾದರೆ ಸತ್ಯಾಗ್ರಹಿಯು ಸಂಪೂರ್ಣವಾಗಿ ಭೀತಿ, ದ್ವೇಷ ಮತ್ತು ಸುಳ್ಳುಗಳನ್ನು ತ್ಯಜಿಸಬೇಕು. ಗಾಂಧೀಜಿಯವರು ಅನುಕೂಲಸಾಧನೆಗಾಗಿ ಅಥವಾ ಅಧೈರ್ಯ, ಹೇಡಿತನದಿಂದ ಹಿಂಸೆಯನ್ನು ತ್ಯಜಿಸಿರಲಿಲ್ಲ. ಅವರ ಅಭಿಪ್ರಾಯದಲ್ಲಿ ನಿಷ್ಕ್ರಿಯ ಪ್ರತಿಭಟನೆ ದುರ್ಬಲರ ಸಾಧನ, ಸತ್ಯಾಗ್ರಹವಾದರೆ ಬಲಿಷ್ಟರಾದವರ ಆಯುಧ ಎನ್ನುವುದಾಗಿತ್ತು. ಗಾಂಧೀಜಿಯವರು ಆಗಿನ ಪ್ರಸಕ್ತ ಭಾರತದ ಪರಿಸ್ಥಿತಿಯನ್ನು ಹೇಗೆ ಅರಿತಿದ್ದರೆಂದರೆ ಹಿಂಸೆಯನ್ನಾಚರಿಸಲು ಚಿಕ್ಕ ಗುಂಪು ಸಿದ್ದವಾದರೆ ಚಳುವಳಿಯಲ್ಲಿ ಭಾಗವಹಿಸಲು ಭಾರತೀಯ ಜನಸಮೂಹವೇ ಸಿದ್ಧವಾಗುವುದು ಎಂಬುದು ಇವರ ತತ್ವದ ಸಾರವಾಗಿತ್ತು.

ಸ್ವದೇಶಿಯು ಗಾಂಧೀಜಿಯವರ ಒಂದು ರಾಜಕೀಯ ಅಸ್ತ್ರವಾಗಿ ಪರಿಣಮಿಸಿತು. ಸ್ವದೇಶಿ ಸೂತ್ರವನ್ನು ಅವರು ಹೀಗೆ ವಿವರಿಸಿದರು. “ಅದು ನಮ್ಮ ಅಂತರಂಗದಲ್ಲಿರುವ ಒಂದು ಭಾವನೆ, ದೂರದ್ದನ್ನು ಬಿಟ್ಟು, ನಮ್ಮ ಹತ್ತಿರದ ಸುತ್ತಮುತ್ತಲಿನ ಉಪಯೋಗ ಮತ್ತು ಅದರ ಸೇವೆಗೆ ನಮ್ಮನ್ನು ಮಿತಗೊಳಿಸುವ ಭಾವನೆ” ಎಂದೇ ಅವರು ದೈಹಿಕ ಶ್ರಮಕ್ಕೆ ಹೆಚ್ಚು ಮಹತ್ವ ಕೊಟ್ಟರು. ಸತ್ಯಾಗ್ರಹವು ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗುವುದಾದರೆ ಭಾರತದಲ್ಲಿ ಏಕೆ ಅದರ ಪ್ರಯತ್ನ ಮಾಡಬಾರದು? ಬ್ರಿಟಿಷ್ ಸರ್ಕಾರವು ಒಂದು ಬಲಿಷ್ಟ ಸರ್ಕಾರವಾದರೆ ಸತ್ಯಾಗ್ರಹವು ಅದಕ್ಕೆ ಪರಮೋತ್ಕೃಷ್ಟ ಪರಿಹಾರವೆಂದು ಜನರಿಗೆ ತಿಳಿಸಿದರು. ಇವರ ಈ ತತ್ವಗಳನ್ನು ಚಂಪಾರಣ, ಖೇಡಾ ಮತ್ತು ಅಹ್ಮದಾಬಾದ್‌ನ ಚಳುವಳಿಗಳಲ್ಲಿ ಪ್ರಯೋಗ ಮಾಡಿದರು.

ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಮುನ್ನ ಹಲವಾರು ಚಳುವಳಿಗಳಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೋರಾಡಿದರು. ದಕ್ಷಿಣ ಆಫ್ರಿಕಾದಿಂದ ಬಂದ ಗಾಂಧೀಜಿಯವರಿಗೆ ಭವ್ಯ ಸ್ವಾಗತ ದೊರೆಯಿತು. ಹರಿದ್ವಾರದ ಕುಂಭಮೇಳಕ್ಕೆ ಭಾಗವಹಿಸಿದಾಗ ಗೌರವದಿಂದ ಸ್ವಾಗತಿಸಿದರು. ಗೋಖಲೆಯವರ ಸಲಹೆ ಪಡೆದು ಬಾರತದಾದ್ಯಂತ ಪ್ರವಾಸವನ್ನು ಗಾಂಧೀಜಿ ಕೈಗೊಂಡರು. ಪ್ರಥಮ ವರ್ಷದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ಇವರು ತೊಡಗಲಿಲ್ಲ. ಮೊದಲು ಅಹ ದಾಬಾದ್‌ನಲ್ಲಿ ಸತ್ಯಾಗ್ರಹ ಆಶ್ರಮವನ್ನು ತೆರೆದು ಅಲ್ಲಿ ಎಲ್ಲರನ್ನು ಸಂಘಟಿಸುವ ಮೂಲಕ ತಮ್ಮ ಯೋಜನೆಗಳನ್ನು ರೂಪಿಸುತ್ತಿದ್ದರು. ಇಲ್ಲಿನ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ತಿಳಿದುಕೊಂಡನಂತರ ಗಾಂಧೀಜಿಯವರು ‘ಚಂಪಾರಣ’ ಸತ್ಯಾಗ್ರಹವನ್ನು ಕೈಗೊಂಡರು. ಇಲ್ಲಿಂದ ಇವರ ರಾಜಕೀಯ ಹೋರಾಟ ಪ್ರಾರಂಭವಾಯಿತು. ಅದು ಸತ್ಯಾಗ್ರಹ ಎಂಬ ತಾರಕ ಮಂತ್ರದ ಮೂಲಕವೇ, ಇವರು ಪ್ರಥಮಬಾರಿಗೆ ಬಿಹಾರದ ಚಂಪಾರಣದ ಘಟನೆಗೆ ಸಂಬಂಧಿಸಿದಂತೆ ಇದರಲ್ಲಿ ಬೆರೆತರು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top