ಹಂಟರ್ ಸಮಿತಿ

ಹಂಟರ್ ಸಮಿತಿ

ಪಂಜಾಬಿನ ದುಷ್ಕೃತ್ಯಗಳನ್ನು ವಿಚಾರಿಸಲು ಹಂಟರ್ ಎಂಬಾತನ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಲಾಯ್ತು. ಎಂಟು ಜನರ ಆಯೋಗದಲ್ಲಿ ಮೂವರು ಭಾರತೀಯರಿದ್ದರು. ಅವರುಗಳೆಂದರೆ ಸರ್‌ಸುಲ್ತಾನ್ ಅಹ್ಮದ್, ಸರ್ ಚಿಮನ್‌ಲಾಲ್ ಸೆಟಲ್‌ವಾಡ್ ಮತ್ತು ಪಂಡಿತ್ ಜಗತ್ ನಾರಾಯಣ್. ಜಲಿಯನ್ ವಾಲಾಬಾಗ್‌ನ ಕೃತ್ಯವನ್ನು ಬ್ರಿಟಿಷ್ ಮತ್ತು ಭಾರತದ ಸಾರ್ವಜನಿಕರು ಬಲವಾಗಿ ಖಂಡಿಸಿದರು. ಬ್ರಿಟನ್ನಿನ ಕಾಮನ್ಸ್ ಸಭೆಯಲ್ಲಿ ಜಲಿಯನ್ ವಾಲಾಬಾಗ್‌ನಲ್ಲಿ ವೈಯ‌ರ್ ನಡೆಸಿದಂತಹ ಪಾಶವೀ ಕೃತ್ಯವನ್ನು ಮಾಂಟೆಗೋ ಖಂಡಿಸಿದನು. ರಾಷ್ಟ್ರೀಯ ನಾಯಕರ ಒತ್ತಾಯದ ಮೇರೆಗೆ ಈ ಹಂಟರ್ ಸಮಿತಿಯನ್ನು ನೇಮಿಸಲಾಯ್ತು. ಆದರೆ ಅದು ಬ್ರಿಟಿಷ್ ಅಧಿಕಾರಿಗಳ ಅತ್ಯಾಚಾರವನ್ನು ಸಮರ್ಥಿಸಿತು. ಸರ್ಕಾರ ಅಧಿಕಾರಿಗಳಿಗೆ ರಕ್ಷಣೆ ನೀಡುವುದಕ್ಕಾಗಿ ಒಂದು ಇಂಡೆಮ್ಮಿಟ್ಟಿ ಕಾಯಿದೆಯನ್ನು ಜಾರಿಗೆ ತಂದಿತು. ಡಯರ್‌ನ ಮೇಲೆ ಹೇರಿದ್ದ ವಾಗ್ದಂಡನೆಯನ್ನು ಹೌಸ್ ಆಫ್ ಲಾರ್ಡ್ಸ್ ರದ್ದು ಮಾಡಿತು. ಅವನಿಗೆ ಮಾರ್ನಿಂಗ್ ಪೋಸ್ಟ್ ಎಂಬ ಲಂಡನ್ನಿನ ಪತ್ರಿಕೆ 26,000 ಪೌಂಡ್‌ಗಳ ನಿಧಿಯನ್ನು ಸಂಗ್ರಹಿಸಿ ನೀಡಿ ಅವನನ್ನು ಗೌರವಿಸಿತು. ಜಲಿಯನ್ ವಾಲಾಬಾಗಿನ ದೌರ್ಜನ್ಯಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯವಾಗಿ ಓಡ್ಡೆಯರ್ ಮತ್ತು ಡಯರ್‌ಗೆ ದೊರೆತ ಪುರಸ್ಕಾರ ಎಂಬಂತೆ ಹಂಟರ್ ಸಮಿತಿಯು ನೀಡಿದ ಪಕ್ಷಪಾತ ವರದಿಯು ಭಾರತದ ರಾಜಕೀಯಕ್ಕೆ ಮಹತ್ವದ ತಿರುವನ್ನು ನೀಡಿದವು. ದೇಶ ತನ್ನ ಗೌರವ ಉಳಿಸಿಕೊಳ್ಳುವುದಕ್ಕಾದರೂ ಏನಾದರೂ ಕೆಲಸಕಾರ್ಯ ಏರ್ಪಡಿಸಿಕೊಳ್ಳುವಂತಹ ಪರಿಸ್ಥಿತಿಗೆ ಸಿಲುಕಿಕೊಂಡಿತು. ಹಂಟರ್ ಸಮಿತಿಯ ವರದಿಯನ್ನು ಸಿ. ಆರ್. ದಾಸ್, ಅಬ್ಬಾಸ್‌ತಾಬ್ಬಿ, ಎಂ. ಆರ್. ಜಯಕರ್, ಮೋತಿಲಾಲ್ ನೆಹರುರವರು ಕಟುವಾಗಿ ಟೀಕಿಸಿದರು ಮತ್ತು ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದರು. ಅದೇ ಕಾಲಕ್ಕೆ ಭಾರತ ಸರ್ಕಾರವು ಶಾಂತಿ ಸುವ್ಯವಸ್ಥೆಯನ್ನು ಸ್ಥಾಪಿಸಲು ಅಧಿಕಾರಿಗಳು ಏನೇ ಕ್ರಮ ಕೈಗೊಂಡರು ಅವರಿಗೆ ರಕ್ಷಣೆ ನೀಡುತ್ತೇವೆ. ಶಿಕ್ಷೆ, ಜುಲ್ಮಾನೆ ವಿನಾಯಿತಿ ನೀಡುತ್ತೇವೆ ಎಂದು ಭರವಸೆ ಕೊಡುವ ಇಂಡೆಮ್ಮಿಟಿ ಮಸೂದೆಯನ್ನು ಅಂಗೀಕರಿಸಿತು. ಅಧಿಕಾರಿಗಳ ರಕ್ಷಣೆಗಾಗಿ ಜಾರಿಗೊಳಿಸಲಾದ Indemnity Actನ್ನು “Whitewashing bill” ಎಂದು ಟೀಕಿಸಲಾಯಿತು.

ಹಂಟರ್ ಸಮಿತಿಯು ತನ್ನ ವಿಚಾರಣೆಯ ಸಂದರ್ಭದಲ್ಲಿ ಜಲಿಯನ್ ವಾಲಾಬಾಗ್‌ನಲ್ಲಿ ಗಾಯಗೊಂಡ 1200 ಜನರನ್ನು ವೈದ್ಯಕೀಯ ಶುಶೂಷೆಗೆ ಸೇರಿಸಬಹುದಾಗಿತ್ತು ಎಂದು ಕೇಳಿದಾಗ ಡೈಯರ್‌ನು “ಅದು ನನ್ನ ಕರ್ತವ್ಯವೆಂದು ನಾನು ಯೋಚಿಸಲೇ ಇಲ್ಲ” ಎಂದು ನೀಡಿದ ಉತ್ತರ ನಿಜಕ್ಕೂ ಅವನ ಮತ್ತು ಸರ್ಕಾರದ ಉದ್ದಟತನವನ್ನು ಎತ್ತಿ ತೋರಿಸುತ್ತದೆ. ಜನರಲ್ ಡೈಯರ್‌ನು ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾ ‘ಮದ್ದು ಗುಂಡುಗಳು ಮುಗಿದಿದ್ದರಿಂದ ನನ್ನ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗಲಿಲ್ಲವೆಂದೂ, ಆ ಪ್ರದೇಶಕ್ಕೆ ಮೆಷಿನ್‌ ಗನ್ ಹೊಂದಿದ ಶಸ್ತ್ರಾಸ್ತ್ರ ತುಂಬಿದ ಮಿಲಿಟರಿ ವಾಹನಗಳು ಹೋಗಲು ಪ್ರವೇಶದ್ವಾರ ಆಗಲವಾಗಿದ್ದು ಅವಕಾಶವಾಗಿದ್ದರೆ ಅವುಗಳನ್ನು ಉಪಯೋಗಿಸುತ್ತಿದ್ದೆ” ಎಂದು ಹಂಟರ್ ಸಮಿತಿಯ ಮುಂದೆ ಹೇಳಿದಾಗ ಸದಸ್ಯರು ಭಯಭೀತರಾಗಿರಬಹುದು.

ಹಂಟರ್ ಮತ್ತು ಅವನ ಸಹೋದ್ಯೋಗಿಗಳಾದ ನಾಲ್ಕು ಮಂದಿ ಬ್ರಿಟಿಷರು ವರದಿಯನ್ನು ಸಲ್ಲಿಸಿದರು. ಹಂಟರ್ ಸಮಿತಿಯು ಡಯರ್‌ನ ಕಾರ್ಯಾಚರಣೆಯನ್ನು ಖಂಡಿಸಿತು. “ಡೈಯರ್ ನು ಮುನ್ನೆಚ್ಚರಿಕೆ ಕೊಡದೆ ಗುಂಡು ಹಾರಿಸಿ ತಪ್ಪು ಮಾಡಿದ್ದಾನೆ. ಅವನು ನೋವಾದ ಜನಗಳ ಕಡೆಗೆ ಲಕ್ಷ್ಯವನ್ನು ಕೊಡಲಿಲ್ಲ, ಏಕೆಂದರೆ ಅವನು ಮಾನವೀಯ ಮೌಲ್ಯಗಳನ್ನು ತ್ಯಜಿಸಿಬಿಟ್ಟಿದ್ದನು. ಅವನ ತೆವಳಿಕೊಂಡು ಹೋಗುವ ಆಜ್ಞೆ ಗರ್ವದ ಪ್ರತೀಕ ಎಂದು ವರದಿ ತಿಳಿಸುತ್ತದೆ. ಈ ವರದಿಯ ಶಿಫಾರಸ್ಸಿನ ಮೇಲೆ ಸರ್ಕಾರವು ಡಯರ್ನನನ್ನು ಕೆಲಸದಿಂದ ವಜಾಮಾಡಿತು. ಆದರೆ ಈ ಎಲ್ಲ ಕಾರ್ಯಗಳಿಗೂ ಹಿನ್ನೆಲೆಯಾಗಿದ್ದು ಸಹಾಯ ಮಾಡಿದ ಗವರ್ನರ್ ಸರ್ ಮೈಕೆಲ್ ಓ ಡೈಯರ್‌ ಮೇಲೆ ಯಾವುದೇ ಕ್ರಮ ಕೈಗೊಳ್ಳದಿದ್ದುದು ಭಾರತೀಯರಿಗೆ ನಿರಾಸೆ ಮತ್ತು ಕೋಪ ತಂದಿತು.

ಕಾಂಗ್ರೆಸ್ ಸಮಿತಿಯು ಗಾಂಧಿ, ಮೋತಿಲಾಲ್ ನೆಹರೂ, ಸಿ. ಆರ್. ದಾಸ್, ಫಜಲ್-ಉಲ್-ಹಕ್, ಅಬ್ಬಾಬ್ಬಿ, ಎಂ. ಆರ್. ಜಯಶಂಕರ್ ಮುಂತಾದವರನ್ನೊಳಗೊಂಡ ವಿಚಾರಣಾ ಸಮಿತಿಯನ್ನು ನೇಮಿಸಿತು. ಈ ವಿಚಾರಣಾ ಸಮಿತಿಯು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ 1700 ಜನರನ್ನು ಕಂಡು ಅವರಲ್ಲಿ 700 ಜನರಿಂದ ಲಿಖಿತ ರೂಪದ ಮಾಹಿತಿ ಪಡೆದು ವರದಿಯನ್ನು ತಯಾರಿಸಿತು. ವರದಿಯ ‘ಸರ್ ಮೈಕೆಲ್ ಓ ಡೈಯರ್‌ನ* ಉದ್ರೇಕಿಸುವ ಕಾರ್ಯ ವೈಖರಿಯೇ ಪಂಜಾಬ್ ದುರಂತಗಳಿಗೆ ಕಾರಣವೆಂದೂ ಆದ್ದರಿಂದ ಗವರ್ನರಾಗಿ ಮುಂದುವರಿಯಲು ಡ್ರೈಯರ್ ಅನರ್ಹನೆಂದು ತಿಳಿಸಿತು.

ಹಂಟರ್ ಸಮಿತಿಯ ಚರ್ಚೆಯ ವೇಳೆಯಲ್ಲಿ ಸಮಿತಿಯ ಅಧ್ಯಕ್ಷ ಲಾರ್ಡ್ ಹಂಟರ್‌ನು ಸದಸ್ಯರಾದ ಚಿಮನ್‌ಲಾಲ್ ಸೆಟಲ್‌ವಾಡ್ ಮತ್ತಿತರ ಭಾರತೀಯ ಸದಸ್ಯರನ್ನು ಕುರಿತು ‘ನೀವು ಬ್ರಿಟಿಷರನ್ನು ಭಾರತದಿಂದ ಹೊರದೂಡಲು ಬಯಸಿದ್ದೀರಿ” ಎಂದು ದೂರುವಷ್ಟು, ಮತ್ತು ಪಂಜಾಬ್‌ನ ಗಲಭೆಗಳನ್ನು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ ಕ್ರಾಂತಿಯೆಂಬ ಚಿತ್ರಣವನ್ನು ನೀಡಲು ಲಾರ್ಡ್ ಹಂಟರ್ ಪ್ರಯತ್ನಿಸುವುದರ ಮೂಲಕ ಪಂಜಾಬ್ ಮಷ್ಕೃತ್ಯಗಳನ್ನು ಬೆಂಬಲಿಸಲು ಪ್ರಯತ್ನಿಸಿದನು. ಹೀಗೆ ಬ್ರಿಟಿಷ್ ಪಕ್ಷಪಾತಿಯಾದ ಹಂಟರ್‌ನನ್ನು ಸಮಿತಿಯ ಅಧ್ಯಕ್ಷನನ್ನಾಗಿಸಿದ್ದು ಹತ್ಯಾಕಾಂಡವನ್ನು ಮುಚ್ಚಿಹಾಕಲೆಂದೇ ಆಗಿತ್ತು.

ಇಂಗ್ಲಿಷ್ ಜನರು ಡೈಯರ್‌ನನ್ನು ಬ್ರಿಟಿಷ್ ಸಾಮ್ರಾಜ್ಯದ ರಕ್ಷಕನೆಂದು ಗೌರವಿಸಿದರು. ಯೂರೋಪಿಯನ್ ಅಸೋಸಿಯೇಷನ್ ತನ್ನ ಎಲ್ಲ ಶಾಖೆಗಳ ಭಾರತದಲ್ಲಿದ್ದ ಯೂರೋಪಿಯನ್ ಸ್ತ್ರೀ ಪುರುಷರಿಂದ ಡೈಯರ್‌ನನ್ನು ಕೆಲಸದಲ್ಲಿ ಉಳಿಸಿಕೊಳ್ಳಲು ನಿರಾಕರಿಸಿದ ಹೌಸ್ ಆಫ್ ಕಾಮನ್ಸ್‌ನ ತೀರ್ಮಾನವನ್ನು ಟೀಕಿಸಿದ ಸಾವಿರಾರು ಕಾಗದಗಳನ್ನು ಸ್ವೀಕರಿಸಿತು. ಜನರಲ್ ಡೈಯರ್‌ನ ಸಹಾಯಾರ್ಥ ನಿಧಿ ಸ್ಥಾಪನೆಗೆ ‘ಮಾರ್ನಿಂಗ್ ಪೋಸ್ಟ್” ಬೆಂಬಲಿಸಿತು. ಭಾರತದಲ್ಲಿದ್ದ ಇಂಗ್ಲೀಷ್ ಸ್ತ್ರೀಯರು ಮನ್ಸೂರಿಯಲ್ಲಿ ಡೈಯರ್ ಬೆಂಬಲಿತ ನಿಧಿಗೆ 20,000 ಪೌಂಡ್ ಹಣವನ್ನು ಕೂಡಿಸಿದರು. ಲಾಹೋನರ್‌ನ ಯೂರೋಪಿಯನ್ನರು ಡೈಯರ್‌ಗೆ ಭೋಜನ ಕೂಟವನ್ನೇರ್ಪಡಿಸಿ ‘ಬಡವರ ರಕ್ಷಕ’ನೆಂದು ಹೊಗಳಿದರು. ಭಾರತದ ಬೊಕ್ಕಸದಿಂದಲೇ ಡಯರ್‌ಗೆ ನಿವೃತ್ತಿ ವೇತನ ಮತ್ತಿತರ ಸವಲತ್ತುಗಳನ್ನು ನೀಡಲಾಯಿತು.

ಪಂಜಾಬ್ ದೌರ್ಜನ್ಯಗಳನ್ನು ಬೆಂಬಲಿಸಿದ ಭಾರತದ ಮತ್ತು ಬ್ರಿಟನ್‌ನ ಇಂಗ್ಲಿಷರ ನಿಲುವು ಭಾರತೀಯರ ಮತ್ತು ಬ್ರಿಟನ್‌ ನಡುವೆ ಬಹುದೊಡ್ಡ ಕಂದಕವನ್ನೇ ನಿರ್ಮಿಸಿತು. 1857-58ರ ಕ್ರಾಂತಿಯನ್ನು ಬಿಟ್ಟರೆ ಮತ್ತಾವ ಘಟನೆಗಳು ಪಂಜಾಬ್ ದೌರ್ಜನ್ಯಕ್ಕೆ ಸಮವಾಗಲಾರವು. ಜಲಿಯನ್ ವಾಲಾಬಾಗ್ ಪ್ರಕರಣದಿಂದಾಗಿ ಬ್ರಿಟಿಷ್ ಸರ್ಕಾರದ ಸದಿಚ್ಛೆಯ ಬಗ್ಗೆ ವಿಶ್ವಾಸವಿಟ್ಟು ಕೊಂಡಿಗೆ ವಗಲ್ಲಗ ನಿರಾಶರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ವಿಧಾನಗಳನ್ನು ಅನುಸರಿಸಲು ಆರಂಭಿಸಿದರು.

ಅಮೃತಸರ ಕಾಂಗ್ರೆಸ್

1919ರ ಅಮೃತಸರ ಕಾಂಗ್ರೆಸ್ ಮೋತಿಲಾಲ್ ನೆಹರೂರವರ ಅಧ್ಯಕ್ಷತೆಯಲ್ಲಿ ಸೇರಿ ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತು. ಹಾಗೆಯೇ ಗಾಂಧೀಜಿಯವರು ಕಾಂಗ್ರೆಸ್ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಗಾಂಧೀಜಿಯವರು ಜನತೆಗೆ ಈ ರೀತಿಯಾಗಿ ಎಚ್ಚರಿಕೆಯನ್ನು ನೀಡಿದರು. “ಭಾರತೀಯರು ಕೈಕಟ್ಟಿ ಕುಳಿತು ಏನನ್ನು ಬಯಸಬಾರದು; ಬ್ರಿಟಿಷ್ ಸಂವಿಧಾನದಲ್ಲಿ ಹೋರಾಡದೆ ಯಾರು ಏನನ್ನು ಗಳಿಸಲಾಗುವುದಿಲ್ಲ” ಎಂದರು. ಗಾಂಧೀಜಿಯವರು ಸಂವಿಧಾನಿಕ ಸುಧಾರಣೆಗಳ ಮೂಲಕವೇ ನಾವು ಎಲ್ಲವನ್ನು ಗಳಿಸುತ್ತೇವೆಂಬ ಉದಾರವಾದಿಗಳ ವಾದಕ್ಕೆ ಭಿನ್ನವಾಗಿದ್ದರು. ಗಾಂಧೀಜಿಯವರು ಬ್ರಿಟಿಷ್ ಸರ್ಕಾರದ ಬಗ್ಗೆ ನಂಬಿಕೆಯನ್ನು ಬಿಟ್ಟು ಜನತೆಗೆ ಈ ರೀತಿಯಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು “ಸೈತಾನ ಸರ್ಕಾರಕ್ಕೆ ಯಾವುದೇ ರೀತಿಯ ಸಹಕಾರವನ್ನು ತೋರುವುದು ಪಾಪಕರ”ವೆಂದರು.

ಅಮೃತಸರ ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಮಾಂಟೆಗೋ ಚೆಲ್ಸ್ ಫರ್ಡ್ ಸುಧಾರಣೆಗಳನ್ನು ಬ್ರಿಟಿಷ್ ಸರ್ಕಾರ ಘೋಷಿಸಿತು, ಇದರ ಪ್ರಕಾರ ಬ್ರಿಟಿಷ್ ಇಂಡಿಯಾದ ಪ್ರಾಂತ ಸರ್ಕಾರಗಳಲ್ಲಿ ಕೆಲವು ಮಂತ್ರಿ ಪದವಿಗಳನ್ನು ಭಾರತೀಯ ಪ್ರತಿನಿಧಿಗಳಿಗೆ ಕೊಡುವ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ದೇಶೀಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಕ್ರಮಗಳಿದ್ದವು. ಈ ಅತ್ಯಲ್ಪ ಸುಧಾರಣೆಗಳಿಂದ ಯಾವ ಭಾರತೀಯ ಪಕ್ಷವೂ ಸಮಾದಾನವಾಗಲಿಲ್ಲ. ಪಂಜಾಬಿನ ಹತ್ಯಾಕಾಂಡಗಳಿಗೆ ಕಾರಣನಾದ ಡೈಯರ್‌ನನ್ನು ನಿರಪರಾಧಿಯೆಂದು ತೀರ್ಪಿತ್ತ ವೈಸರಾಯ್‌ ಜೇಮ್ಸ್ ಫರ್ಡ್‌ನನ್ನು ವಾಪಾಸು ಕರೆಸಿಕೊಳ್ಳಬೇಕೆಂದು ಕಾಂಗ್ರೆಸ್ ಅಧಿವೇಶನದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top