Village Assistant Recruitment:ಗ್ರಾಮ ಸಹಾಯಕರ ನೇಮಕಾತಿಗೆ ಸರ್ಕಾರದ ಹೊಸ ನಿಯಮ-ಪೂರ್ವಾನುಮತಿ ಕಡ್ಡಾಯ
Village Assistant Recruitment:ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರ ನೇಮಕಾತಿ ಕುರಿತು ರಾಜ್ಯ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ಸರ್ಕಾರದ ಪೂರ್ವಾನುಮತಿ ಇಲ್ಲದೇ ಯಾವುದೇ ನೇಮಕಾತಿ ಮಾಡುವಂತಿಲ್ಲ.
ಗ್ರಾಮ ಸಹಾಯಕರ ನೇಮಕಾತಿ ಕುರಿತು ಸರ್ಕಾರದ ಮಹತ್ವದ ಸುತ್ತೋಲೆ
ರಾಜ್ಯದ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ (VAO) ಕರ್ತವ್ಯ ನಿರ್ವಹಣೆಗೆ ನೆರವಾಗುವ ಉದ್ದೇಶದಿಂದ ಹಾಗೂ ಸ್ಥಳೀಯ ಮಟ್ಟದಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ಸುಗಮಗೊಳಿಸಲು ರಾಜ್ಯ ಸರ್ಕಾರವು 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ಖಾಯಂ ಆಗಿ ಸೃಜಿಸಿದೆ.
ಕಾಲಕಾಲಕ್ಕೆ ಆಡಳಿತಾತ್ಮಕ ಅಗತ್ಯತೆಗಳನ್ನು ಪರಿಗಣಿಸಿ ಸರ್ಕಾರವು ಹೊಸ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳನ್ನು ಹೆಚ್ಚುವರಿಯಾಗಿ ರಚಿಸಿದೆ. ಆದರೆ, ಈ ಹೊಸ ವೃತ್ತಗಳಿಗೆ ಅಗತ್ಯವಾದ ಗ್ರಾಮ ಸಹಾಯಕರ ಹುದ್ದೆಗಳನ್ನು ಸರ್ಕಾರದಿಂದ ಪ್ರತ್ಯೇಕವಾಗಿ ಮಂಜೂರು ಮಾಡಲಾಗಿಲ್ಲ.
ಆದರೂ ಕೆಲವು ಕಡೆಗಳಲ್ಲಿ ಸಂಬಂಧಪಟ್ಟ ತಹಶೀಲ್ದಾರರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ಮಂಜೂರಾಗದ ಹುದ್ದೆಗಳ ವಿರುದ್ಧ ಗ್ರಾಮ ಸಹಾಯಕರನ್ನು ನೇಮಕ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ರೀತಿಯ ನೇಮಕಾತಿಗಳಿಂದಾಗಿ ವೇತನ ಪಾವತಿಸಲು ಅನುದಾನದ ಕೊರತೆ ಉಂಟಾಗುತ್ತಿದ್ದು, ಸರ್ಕಾರದ ಪೂರ್ವಾನುಮತಿ ಇಲ್ಲದೇ ನೇಮಕಗೊಂಡ ಗ್ರಾಮ ಸಹಾಯಕರ ವೇತನ ಬಿಡುಗಡೆಗಾಗಿ ಹಲವು ಪ್ರಸ್ತಾವನೆಗಳು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಸರ್ಕಾರದ ಪೂರ್ವಾನುಮತಿ ಪಡೆಯದೇ ಯಾವುದೇ ಗ್ರಾಮ ಸಹಾಯಕರ ನೇಮಕಾತಿ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆದೇಶದ ಪ್ರಮುಖ ಅಂಶಗಳು
- ರಾಜ್ಯದಲ್ಲಿ ಈಗಾಗಲೇ 10,450 ಗ್ರಾಮ ಸಹಾಯಕರ ಹುದ್ದೆಗಳು ಖಾಯಂ ಆಗಿ ಸೃಜಿಸಲಾಗಿದೆ.
- ಹೊಸದಾಗಿ ರಚನೆಯಾದ VAO ವೃತ್ತಗಳಿಗೆ ಹೆಚ್ಚುವರಿ ಗ್ರಾಮ ಸಹಾಯಕರ ಹುದ್ದೆಗಳು ಮಂಜೂರಾಗಿಲ್ಲ.
- ಕೆಲವು ಕಡೆಗಳಲ್ಲಿ ನಿಯಮಬಾಹಿರವಾಗಿ ಗ್ರಾಮ ಸಹಾಯಕರ ನೇಮಕಾತಿ ಮಾಡಲಾಗುತ್ತಿದೆ.
- ಅನುದಾನದ ಕೊರತೆಯಿಂದ ವೇತನ ಪಾವತಿಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ.
- ಸರ್ಕಾರದ ಪೂರ್ವಾನುಮತಿ ಇಲ್ಲದೇ ಯಾವುದೇ ಹೊಸ ನೇಮಕಾತಿ ಮಾಡದಂತೆ ಸೂಚಿಸಲಾಗಿದೆ.
ಈ ಆದೇಶದಿಂದ ಗ್ರಾಮ ಸಹಾಯಕರ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ಹಣಕಾಸಿನ ಶಿಸ್ತು ಕಾಪಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

CLICK HERE TO DOWNLOAD CIRCULAR