1773 ರಿಂದ 1935ರ ವರೆಗಿನ ಸಂವಿಧಾನಿಕ ಬೆಳವಣಿಗೆ- ಇತಿಹಾಸ ನೋಟ್ಸ್

1773 ರಿಂದ 1935ರ ವರೆಗಿನ ಸಂವಿಧಾನಿಕ ಬೆಳವಣಿಗೆ- ಇತಿಹಾಸ ನೋಟ್ಸ್

1773 ರಿಂದ 1935ರ ವರೆಗಿನ ಸಂವಿಧಾನಿಕ ಬೆಳವಣಿಗೆ- ಇತಿಹಾಸ ನೋಟ್ಸ್

ಭಾರತದಲ್ಲಿ ಬ್ರಿಟಿಷರು ರಾಜಕೀಯವಾಗಿ ಪ್ರಬಲವಾಗಿ ಆಡಳಿತವನ್ನು ಆರಂಭಿಸಿದ ಮೇಲೆ ಹೊಸ ಸಂವಿಧಾನದ ರಚನೆಗೆ ಒಂದು ಸ್ವರೂಪವನ್ನು ಬ್ರಿಟಿಷರು ಇಂಗ್ಲೆಂಡಿನಲ್ಲಿ ಪಡೆದ ಅನುಭವದ ಆಧಾರದ ಮೇಲೆ ಭಾರತೀಯ ಮಣ್ಣಿಗೆ ಹೊಂದುವಂತಹ ಸಂವಿಧಾನವನ್ನು ರಚಿಸಲು ಮುಂದೆ ಬಂದಿದ್ದು ಮೆಚ್ಚಲೇಬೇಕಾದ ವಿಷಯ. ವಾಸ್ತವವಾಗಿ ಭಾರತೀಯರಿಗೆ ವ್ಯವಸ್ಥಿತವಾದ ಸಂವಿಧಾನವನ್ನು ರಚಿಸಿಕೊಡುವುದು ಬ್ರಿಟಿಷರ ಉದ್ದೇಶವಾಗಿರಲಿಲ್ಲ. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಸುಧಾರಣೆ ಮಾಡುವ ಸಲುವಾಗಿ ಕಾಲಕಾಲಕ್ಕೆ ಕಂಪನಿ ಮತ್ತು ಬ್ರಿಟಿಷ್ ಪಾರ್ಲಿಮೆಂಟ್ ಹಲವಾರು ಕಾಯಿದೆಗಳನ್ನು ಜಾರಿಗೆ ತಂದಿತು. ಈ ರೀತಿ ಜಾರಿಗೆ ತಂದ ಕಾಯಿದೆಗಳು ಮುಂದೆ ಸ್ವತಂತ್ರ ಭಾರತದ ಸಂವಿಧಾನದ ರಚನೆಗೆ ತಳಪಾಯವನ್ನು ಹಾಕಿದವು. ಹೀಗೆ ಬೆಳವಣಿಗೆಯನ್ನು ಹೊಂದಲು ಆರಂಭಿಸಿದ ಸಂವಿಧಾನದ ಬೆಳವಣಿಗೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ,

1. ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯ ಅವಧಿಯಲ್ಲಿ ಸಂವಿಧಾನದ ಬೆಳವಣಿಗೆ (1765-1858)

2.ಬ್ರಿಟಿಷ್ ಚಕ್ರವರ್ತಿಯ ಆಳ್ವಿಕೆಯ ಕಾಲದಲ್ಲಿ ಉಂಟಾದ ಸಂವಿಧಾನದ ಬೆಳವಣಿಗೆ (1858-1947)

ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳಲ್ಲಿ 1765ರಲ್ಲಿ ಕಂಪನಿ ದಿವಾನೀ ಹಕ್ಕನ್ನು ಮೊಗಲರಿಂದ ಪಡೆದ ಮೇಲೆ ಆರಂಭವಾಯಿತು. ಹೀಗೆ ಆರಂಭವಾದ ಆಡಳಿತವು 1858ರ ವರೆವಿಗೂ ಮುಂದುವರೆಯಿತು. ಈ ಅವಧಿಯಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ನಿರ್ದೇಶಿಸಿ ಆಡಳಿತ ಸುಧಾರಣೆಗಳನ್ನು ಕಾಲಕಾಲಕ್ಕೆ ಕಾಯಿದೆಗಳ ಮೂಲಕ ಕೈಗೊಂಡಿತು. ಇದನ್ನು ಸಂವಿಧಾನದ ಬೆಳವಣಿಗೆಯ ಮೊದಲ ಹಂತವೆಂದು ಗುರುತಿಸಿದ್ದಾರೆ. 1857ರ ದಂಗೆಯಿಂದಾಗಿ ಬ್ರಿಟಿಷ್ ಸರ್ಕಾರವೇ ನೇರವಾಗಿ ಆಡಳಿತ ನಡೆಸುವಂತಾಗಿ ಕಂಪನಿಯ ಆಡಳಿತ ವ್ಯವಹಾರವೆಲ್ಲವೂ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ವರ್ಗಾವಣೆಯಾಯಿತು. ಬ್ರಿಟಿಷ್ ಚಕ್ರಾದಿಪತ್ಯ 1947ರ ವರೆವಿಗೂ ಆಡಳಿತ ನಡೆಸಿತು.

ರೆಗ್ಯುಲೇಟಿಂಗ್ ಕಾಯಿದೆ-1773

ರೆಗ್ಯುಲೇಟಿಂಗ್ ಕಾಯಿದೆ ಮೊದಲ ಬಾರಿಗೆ ಕಂಪನಿಯ ಆಡಳಿತದಲ್ಲಿ ಪ್ರವೇಶ ಮಾಡಿತು. 1773ರ ರೆಗ್ಯುಲೇಟಿಂಗ್ ಕಾಯಿದೆಯು ಭಾರತದ ಆಡಳಿತದ ಬ್ರಿಟಿಷ್ ಪಾರ್ಲಿಮೆಂಟ್‌ನ ನಿಯಂತ್ರಣ ಹೊಂದಲು ಬುನಾದಿ ಹಾಕಿತು. ಇದು ಕಂಪನಿಯ ಆಡಳಿತಕ್ಕೆ ನಿರ್ಧಿಷ್ಟವಾದ ಸ್ವರೂಪವನ್ನು ನೀಡಿದ್ದು ಐತಿಹಾಸಿಕ ಮಹತ್ವವನ್ನು ಪಡೆದಿದೆ.

ರೆಗ್ಯುಲೇಟಿಂಗ್ ಕಾಯಿದೆ ಜಾರಿಗೆ ಬರಲು ಕಾರಣಗಳು:

1. ಕಂಪನಿಯ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಸ್ವಂತ ವ್ಯಾಪಾರ : ಬ್ರಿಟಿಷ್ ವಸ್ತುಗಳಿಗೆ ಸ್ಥಳೀಯ ಸುಹ ಮತ್ತು ತೆರಿಗೆ ಹಾಕುವುದರಿಂದ ವಿನಾಯಿತಿ ಕೊಡಲಾಗಿತ್ತು. ವ್ಯಾಪಾರದ ವಿಚಾರದಲ್ಲಿ ಕಂಪನಿಯ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತೆರಿಗೆ ಇಲ್ಲದೇ ಭಾರತೀಯ ವರ್ತಕರ ಜೊತೆಗೆ ಸ್ವತ ವ್ಯಾಪಾರ ಆರಂಭಿಸಿದರು. ಜೊತೆಗೆ ಭಾರತೀಯರಿಂದ ಕಾಣಿಕೆ, ಕೊಡುಗೆ ರೂಪದಲ್ಲಿ ಹಣವನ್ನು ಪಡೆಯಲಾರಂಭಿಸಿದರು. ಇದಲ್ಲದೇ ಎಲ್ಲಾ ರೀತಿಯ ಅವ್ಯವಹಾರಗಳಿಗೆ ಕಂಪನಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರು. ಇದರಿಂದ ಹೆಚ್ಚು ಹಣವನ್ನು ಗಳಿಸಿಕೊಂಡು ಇಂಗ್ಲೆಂಡಿಗೆ ಹೋಗಿ ವೈಭವನ ಜೀವನ ನಡೆಸಲಾರಂಭಿಸಿದರು. ಇಷ್ಟಲ್ಲದೇ ಇಂಗ್ಲೆಂಡಿನ ರಾಜಕೀಯದಲ್ಲಿ ಈ ವ್ಯವಹಾರದ ಹಣದ ಸಹಾಯದಿಂದ ಪ್ರಭಾವಶಾಲಿಗಳಾದರು. ಅಧಿಕಾರಿಗಳು ಈ ರೀತಿ ಹಣವನ್ನು ಗಳಿಸಲು ಆರಂಭಿಸಿದ್ದು ಕಂಪನಿಗೆ ಸಾಕಷ್ಟು ನಷ್ಟವುಂಟಾಯಿತು. ಇದಾವುದರ ಅರಿವು ಅವರಿಗಿರಲಿಲ್ಲ. ಇವರ ರೀತಿ ನೀತಿಗಳನ್ನು ಕಂಡು ಇಂಗ್ಲೆಂಡಿನ ಕೆಲವರು ಹೊಟ್ಟೆಕಿಚ್ಚು ಪಟ್ಟು ಸರ್ಕಾರ ಕಂಪನಿಯ ಮೇಲೆ ನಿಯಂತ್ರಣ ಹೊಂದಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

2. ಬಂಗಾಳದ ಜನರ ಶೋಚನೀಯ ಸ್ಥಿತಿ : ಬಂಗಾಳದಲ್ಲಿ ಕಂಪನಿಯ ಆಡಳಿತ ಉತನ ಹೇಳಿಕೊಳ್ಳುವಂತಹದಾಗಿರದೇ ಭ್ರಷ್ಟಾಚಾರ ಸಾಮಾನ್ಯವಾಗಿದ್ದು ಅಧಿಕಾರಿಗಳು ಭ್ರಷ್ಟಾಚಾರ, ಲಂಚಗುಳಿತನದಲ್ಲಿ ತೊಡಗಿ ಜನರು ಅಪಾರ ಕಷ್ಟಕ್ಕೆ ಗುರಿಯಾಗಲು ಕಾರಣರಾದರು. 1770ರಲ್ಲಿ ಬಂಗಾಳದಲ್ಲಿ ಇಮ ಪರಿಷ್ಕ ಸಂಭವಿಸಿತು. ” ಭಾಗದಷ್ಟು ಜನಸಂಖ್ಯೆಯಿಂದ ” ಭಾಗಕ್ಕಿಳಿಸಿತು. ತೆರಿಗೆ ಬರುವುದು ಸಹ ನಿಂತುಹೋಯಿತ್ತದೆ ಸರ್ಕಾರ ಅವಶ್ಯಕ ವಸ್ತುಗಳ ಬೆಲೆ ಮತ್ತು ತೆರಿಗೆಯನ್ನು ಹೆಚ್ಚಿಸಿತು. ಇದರಿಂದ ಬಂಗಾಳದ ಜನರ ಜೀವನ ಶೋಚನೀಯವಾಯಿತು. ಬಂಗಾಳದ ಅಸಹನೀಯ ಕೂಗು ಇಂಗ್ಲೆಂಡ್ ತಲುಪಿ ಅಲ್ಲಿನ ಜನ ಮರುಕಪಟ್ಟರು. ಜೊತೆಗೆ ಕ್ರಾಮಕ್ಕೆ ಕಾರಣವನ್ನು ಪತ್ತೆ ಹಚ್ಚುವಂತೆ ಸಾರ್ವಜನಿಕರು ಕೇಳಲಾರಂಭಿಸಿದರು.

3. ಕ್ಲೈವ್ ನ ದ್ವಿಸರ್ಕಾರ ಪದ್ಧತಿಯ ದೋಷಗಳು :

ಬಂಗಾಳ, ಬಿಹಾರ ಮತ್ತು ಒರಿಸ್ಸಾದ ಜನತೆ ದ್ವಿಸರ್ಕಾರ ಪದ್ಧತಿಯಿಂದಾಗಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಯಿತು. ಆರ್ಥಿಕ ವ್ಯವಸ್ಥೆಯ ಅವನತಿ ಉಚಯಿತರ ಕಂಪನಿಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದರು. ಆಡಳಿತವನ್ನು ಎರಡು ವಿಭಾಗ ಮಾಡಿದ್ದರಿಂದ ಗೊಂದಲ, ಅವ್ಯವಸ್ಥೆ ಮತ್ತು ಭ್ರಷ್ಟಾಚಾರ ಹೆಚ್ಚಿದವು. ಈ ಜನರ ಕರುಣಾಜನಕ ಸ್ಥಿತಿಗೆ ಕಂಪನಿಯ ದೋಷಯುಕ್ತ ಆಡಳಿತ ಸಾಕಷ್ಟು ಕಾರಣವಾಗಿದ್ದುದರಿಂದ ಬ್ರಿಟನ್ನಿನಲ್ಲಿ ಕಂಪನಿಯ ಮೇಲೆ ಶಾಸಕಾಂಗದ ಮೂಲಕ ಹಿಡಿತವನ್ನು ಸ್ಥಾಪಿಸಬೇಕೆಂದು ಒತ್ತಾಯ ತರಲಾರಂಭಿಸಿದರು.

4. ಕಂಪನಿಯ ಸೋಲು: ಈಸ್ಟ್ ಇಂಡಿಯಾ ಕಂಪನಿ 1769ರಲ್ಲಿ ಮೊದಲನೆ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋಲನ್ನು ಅನುಭವಿಸಿತು. ಈ ವಿಷಯ ಬ್ರಿಟಿಷ್ ಪಾರ್ಲಿಮೆಂಟಿಗೆ ತಿಳಿದಾಗ ಆಘಾತವಾಯಿತು. ಜೊತೆಗೆ ಇಂಗ್ಲೆಂಡಿನ ಪ್ರತಿಷ್ಠೆಗೆ ಪೆಟ್ಟುಬಿದ್ದಿತು.

5. ಕಂಪನಿ ದಿವಾನಿ ಹಕ್ಕನ್ನು ಪಡೆದ ಮೇಲೆ ಸಾಕಷ್ಟು ಲಾಭವನ್ನು ಗಳಿಸುತ್ತಿತ್ತು, ಇದರ ವ್ಯಾಪಾರಿ ಏಕಸ್ವಾಮ್ಯಕ್ಕಾಗಿ ವಾರ್ಷಿಕವಾಗಿ 400,000 ಪೌಂಡ್ ಹಣವನ್ನು ನೀಡಬೇಕಾಯಿತು. 1772ರ ನಂತರ ಕಂಪನಿಯ ಆರ್ಥಿಕ ಪರಿಸ್ಥಿತಿ ದುರ್ಬಲವಾದುದರಿಂದ ಈ ಹಣವನ್ನು ಕೊಡಲು ವಿಫಲವಾಯಿತು. ಈ ಘಟನೆ ಬ್ರಿಟಿಷ್ ಪಾರ್ಲಿಮೆಂಟ್ ಕಂಪನಿಯ ಆಡಳಿತದಲ್ಲಿ ತಲೆಹಾಕುವಂತೆ ಪ್ರೇರೇಪಿಸಿತು.

6. ಕಂಪನಿ ಆರ್ಥಿಕವಾಗಿ ದಿವಾಳಿಯಾದುದರಿಂದ ತೊಂದರೆಗೆ ಸಿಲುಕಿತು. ಈ ತೊಂದರೆಯಿಂದ ಹೊರಬರಲು ಕಂಪನಿ ಬ್ರಿಟಿಷ್ ಸರ್ಕಾರವನ್ನು ಸಾಲ ಕೇಳಿತು. ಸಾಲದ ಮೊತ್ತ ಅಧಿಕವಾಗಿದ್ದುದರಿಂದ ಸರ್ಕಾರ ಕಂಪನಿಯ ಮೇಲೆ ಹಿಡಿತ ಸಾಧಿಸುವುದು ಸುಲಭವಾಯಿತು. ಇಂಗ್ಲೆಂಡಿನ ಕಂಪನಿ ಭಾರತದೊಂದಿಗೆ ವ್ಯಾಪಾರ ಮಾಡಲು ಬ್ರಿಟನ್ನಿನ ಸಾಮಾನ್ಯ ವರ್ತಕರಿಗೆ ಅವಕಾಶ ಕೊಡದೇ ಕಂಪನಿಯೇ ಏಕಸ್ವಾಮ್ಯ ಹೊಂದಿತು. ಉತ್ಸಾಹಿ ವ್ಯಾಪಾರಿಗಳು ಈ ನಿರ್ಬಂಧವನ್ನು ತೆಗೆಯಲು ಪಾರ್ಲಿಮೆಂಟಿನ ಮೇಲೆ ಒತ್ತಡವನ್ನು ತರುತ್ತಿದ್ದರು.

ರೆಗ್ಯುಲೇಟಿಂಗ್ ಕಾಯಿದೆಯ ಮುಖ್ಯಾಂಶಗಳು:

1. ಈ ಕಾಯಿದೆ ಇಂಗ್ಲೆಂಡ್ ಮತ್ತು ಭಾರತದ ಈಸ್ಟ್ ಇಂಡಿಯಾ ಕಂಪನಿಗಳ ಸಂವಿಧಾನದಲ್ಲಿ ಬದಲಾವಣೆಯನ್ನು ತಂದಿತು. ಈ ಕಾಯಿದೆಯ ಪ್ರಕಾರ ಗವರ್ನರ್ ಜನರಲ್ ಮಂಡಳಿ ಗವರ್ನರ್ ಮಂಡಳಿಗೆ ಬದಲಾಗಿ ಜಾರಿಗೆ ಬಂದಿತು. ಲಾರ್ಡ್ ವಾರನ್ ಹೇಸ್ಟಿಂಗ್ಸ್ ಬಂಗಾಳದ ಮೊದಲ ಗವರ್ನರ್ ಜನರಲ್‌ನಾಗಿಯೂ ಮಂಡಳಿಗೆ ನಾಲ್ಕು ಜನ ಸದಸ್ಯರನ್ನು ನೇಮಿಸಲಾಯಿತು. ಗವರ್ನರ್ ಜನರಲ್ ಬಹುಮತದ ಆಧಾರದ ಮೇಲೆ ಆಡಳಿತ ನಿರ್ಣಯಗಳನ್ನು ಮಂಡಿಸಬೇಕಾಗಿತ್ತು. ಮಂಡಳಿಯ ಸದಸ್ಯರ ಕಾರ್ಯಾವಧಿ ಐದು ವರ್ಷಗಳು.

2. ಗವರ್ನರ್ ಜನರಲ್ ಮಂಡಳಿ ಉತ್ತಮ ಸರ್ಕಾರವನ್ನು ರಚಿಸಲು ಕಾಯಿದೆಯನ್ನು ಮಾಡುವ ಆಜ್ಞೆಗಳನ್ನು ಹೊರಡಿಸುವ ಅಧಿಕಾರವನ್ನು ಪಡೆದುಕೊಂಡಿತು.

3. ರೆಗ್ಯುಲೇಟಿಂಗ್ ಕಾಯಿದೆ ಇಂಗ್ಲೆಂಡಿನಲ್ಲಿ ಕಂಪನಿಯ ಸಂವಿಧಾನವನ್ನು ಬದಲಾಯಿಸಿತು. ಕೋರ್ಟ್ ಆಫ್ ಡೈರೆಕ್ಟರ್ಸ್ ಸದಸ್ಯರು ನಾಲ್ಕು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲು ಆಯ್ಕೆಯಾಗಿ ವರ್ಷಕ್ಕೆ ಭಾಗದ ಸದಸ್ಯರು ನಿವೃತ್ತರಾಗಬೇಕಿತ್ತು. ಕೋರ್ಟ್ ಆಫ್ ಪ್ರೊಪರೇಟರ್ಸ್ ನಲ್ಲಿ ಮತದಾನದ ಹಕ್ಕನ್ನು ಸದಸ್ಯರು ಹೊಂದಿರುವ ಷೇರುಗಳ ಮೌಲ್ಯದ ಮೇಲೆ ಕೊಡಲಾಯಿತು. 1000 ಪೌಂಡಿನ ಷೇರುಗಳಿಗೆ ಒಂದು ಮತ ಹಾಕುವ ಹಕ್ಕಿತ್ತು,ಹೀಗೆ ಷೇರಿನ ಆಧಾರದ ಮೇಲೆ ಮತದಾನದ ಅವಕಾಶ ಕೊಡಲಾಯಿತು. ಕೋರ್ಟ್ ಆಫ್ ಡೈರೆಕ್ಷನ್ ಕಂಪನಿಯ ಆಡಳಿತದ ಮಿಲಿಟರಿಯ ವಿಚಾರಗಳ ಬಗ್ಗೆ ಸೆಕ್ರೆಟರಿ ಆಫ್ ಸ್ಟೇಟ್‌ಗೆ ವರದಿಯನ್ನು ಕಳುಹಿಸಬೇಕಾಗಿತ್ತು.

4. ಬೊಂಬಾಯಿ ಮತ್ತು ಮದ್ರಾಸ್ ಪ್ರಾಂತ್ಯಗಳನ್ನು ಗವರ್ನರ್ ಜನರಲ್ ಮತ್ತು ಮಂಡಳಿಯ ಮೇಲ್ವಿಚಾರಣೆಗೆ ಒಪ್ಪಿಸಲಾಯಿತು. ಯುದ್ಧ ಮತ್ತು ಶಾಂತಿ ಒಪ್ಪಂದಗಳನ್ನು ಈ ಪ್ರಾಂತ್ಯಗಳು ಕೈಗೊಳ್ಳಬೇಕಾದರೆ ಗವರ್ನರ್ ಜನರಲ್‌ನ ಮತ್ತು ಮಂಡಳಿಯ ಒಪ್ಪಿಗೆ ಪಡೆಯಬೇಕಾಗಿತ್ತು. ಗವರ್ನರ್ ಜನರಲ್ ಮತ್ತು ಮಂಡಳಿ ಕೋಟ್ ಆಫ್ ಡೈರೆಕ್ಟರ್ ಸಲಹೆ ಸೂಚನೆಯಂತೆ ಆಡಳಿತ ನಡೆಸಬೇಕಾಗಿತ್ತು.

5. ರೆಗ್ಯುಲೇಟಿಂಗ್ ಕಾಯಿದೆ ಸುಪ್ರೀಂ ಕೋರ್ಟ್‌ನ್ನು ಕಲ್ಕತ್ತಾದಲ್ಲಿ ಸ್ಥಾಪಿಸುವಂತೆ ಅವಕಾಶ ಮಾಡಿಕೊಟ್ಟಿತು.

6. ರೆಗ್ಯುಲೇಟಿಂಗ್ ಕಾಯಿದೆ ಕಂಪನಿಯ ಅಧಿಕಾರಿಗಳು ಲಂಚ ಮತ್ತು ಕೊಡುಗೆಗಳನ್ನು ಪಡೆಯುವುದನ್ನು ನಿಷೇಧಿಸಿ ಅಧಿಕಾರಿಗಳ ಸಂಬಳವನ್ನು ನಿಗಧಿಪಡಿಸಲು ಗವರ್ನರ್ ಜನರಲ್‌ಗೆ ವಾರ್ಷಿಕವಾಗಿ 25,000 ಪೌಂಡ್, ಮಂಡಳಿಯ ಸದಸ್ಯರಿಗೆ 10,000 ಪೌಂಡ್, ಮುಖ್ಯ ನ್ಯಾಯಾಧೀಶರಿಗೆ 8,000 ಪೌಂಡ್‌ಗಳೆಂದು ನಿಗಧಿಮಾಡಿತು.

7. ಯಾವುದೇ ಅಧಿಕಾರಿ ಅಥವಾ ಗವರ್ನರ್ ಜನರಲ್ ಮತ್ತು ಮಂಡಳಿಯ ಸದಸ್ಯರು ಅಪರಾಧಗಳನ್ನು ಮಾಡಿದಾಗ ಅವರ ಮೇಲಿನ ಮೊಕದ್ದಮೆಗಳನ್ನು ಇಂಗ್ಲೆಂಡಿನಲ್ಲಿ ವಿಚಾರಣೆ ಮಾಡಲು ಈ ಕಾಯಿದೆ ಅವಕಾಶ ಕೊಟ್ಟಿತು.

ರೆಗ್ಯುಲೇಟಿಂಗ್ ಕಾಯಿದೆಯ ದೋಷಗಳು : ರೆಗ್ಯುಲೇಟಿಂಗ್ ಕಾಯಿದೆಯು ಭಾರತ ಸರ್ಕಾರಕ್ಕೆ ಕೊಟ್ಟ ಮೊದಲ ಸಂವಿಧಾನ, ಆದರೆ ಈ ಕಾಯಿದೆಯಲ್ಲಿ ಹಲವಾರು ದೋಷಗಳಿದ್ದವು.

1. ಗವರ್ನರ್ ಜನರಲ್ ಮತ್ತು ಮಂಡಳಿಯ ಸದಸ್ಯರ ನಡುವೆ ಘರ್ಷಣೆ ಆರಂಭವಾಯಿತು.

2. ಗವರ್ನರ್ ಜನರಲ್ ಕೌನ್ಸಿಲ್ ಮತ್ತು ಸುಪ್ರೀಂ ಕೋರ್ಟಿನ ನಡುವೆ ಘರ್ಷಣೆಯು ಆರಂಭವಾಯಿತು. ಇದಕ್ಕೆ ಕಾರಣ ಈ ಕಾಯಿದೆ ಸುಪ್ರೀಂ ಕೋರ್ಟಿನ ವ್ಯಾಪ್ತಿಯನ್ನು ಸರಿಯಾಗಿ ವಿವರಿಸಿರಲಿಲ್ಲ. ಕಾಸಿಜುರಾ ಪ್ರಕರಣ ಇದಕ್ಕೆ ಉತ್ತಮವಾದ ಉದಾಹರಣೆ.

3. ಮದ್ರಾಸ್ ಮತ್ತು ಬಾಂಬೆಯ ಗವರ್ನ‌್ರಗಳ ಮೇಲೆ ಗವರ್ನರ್ ಜನರಲ್ ಮತ್ತು ಮಂಡಳಿಯ ಸದಸ್ಯರ ಸಂಪೂರ್ಣ ನಿಯಂತ್ರಣವನ್ನು ಹೊಂದುವುದು ಸಾಧ್ಯವಾಗಲಿಲ್ಲ.

4. ಷೇರುಗಳ ಆಧಾರದ ಮೇಲೆ ಓಟಿನ (Vote) ಅಧಿಕಾರವನ್ನು ಕೊಟ್ಟಿದ್ದು ಕಂಪನಿಯ ಡೈರೆಕ್ಟರುಗಳು ಪ್ರಭಾವಶಾಲಿಗಳಾಗಲು ಕಾರಣವಾಯಿತು.

ರೆಗ್ಯುಲೇಟಿಂಗ್ ಕಾಯಿದೆಯಲ್ಲಿ ಏನೇ ದೋಷಗಳಿದ್ದರೂ ಅದು ಸಂವಿಧಾನಾತ್ಮಕ ಮಹತ್ವವನ್ನು ಪಡೆದಿದೆ. ಇದು ಭಾರತೀಯ ಸಂವಿಧಾನದ ಬೆಳವಣಿಗೆಯಲ್ಲಿ ಮೈಲುಗಲ್ಲು, ಈ ಕಾಯಿದೆ ಕಂಪನಿಯ ಆಡಳಿತದ ಮೇಲೆ ಪಾರ್ಲಿಮೆಂಟಿನ ನಿಯಂತ್ರಣವನ್ನು ತರುವ ಪ್ರಕ್ರಿಯೆ ಆರಂಭಿಸಿತು. ಈ ಕಾಯಿದೆಯ ಜಾರಿಯಿಂದಾಗಿ ಇಂಗ್ಲೆಂಡಿನ ಮಂತ್ರಿಮಂಡಲ ಕಂಪನಿಯ ಆಡಳಿತದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಾಯಿತು. ಒಟ್ಟಿನಲ್ಲಿ ಈ ಕಾಯಿದೆ ಫೆಡರಲ್ ಸರ್ಕಾರದ ಮಾದರಿಯ ತತ್ವಗಳನ್ನು ಭಾರತಕ್ಕೆ ಪರಿಚಯಿಸಿತು.

ಪಿಟ್ ಇಂಡಿಯಾ ಕಾಯಿದೆ 1784

1784ರಲ್ಲಿ ಬ್ರಿಟನ್ನಿನ ಪ್ರಧಾನ ಮಂತ್ರಿ ಈ ಕಾಯಿದೆಯನ್ನು ಜಾರಿಗೆ ತಂದ. ಇಂಗ್ಲೆಂಡಿನ ಪಾರ್ಲಿಮೆಂಟ್ ಕಂಪನಿಯ ಆಡಳಿತದ ಮೇಲೆ ನಿಯಂತ್ರಣವನ್ನು ಹೊಂದುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತಂದಿತು. ಪಿಟ್ ಇಂಡಿಯಾ ಕಾಯಿದೆ ಜಾರಿಗೆ ಬರಲು ಕಾರಣಗಳೆಂದರೆ :

1. ರೆಗ್ಯುಲೇಟಿಂಗ್ ಕಾಯಿದೆಯಲ್ಲಿದ್ದ ದೋಷಗಳು

2. ಕಂಪನಿಯ ಆಡಳಿತದ ಮೇಲೆ ಬ್ರಿಟಿಷ್ ಪಾರ್ಲಿಮೆಂಟಿನ ನಿಯಂತ್ರಣ ಪರಿಣಾಮಕಾರಿಯಾಗಿರದೇ ಇದ್ದುದು

3. ಕಂಪನಿಯ ದೋಷಯುಕ್ತವಾದ ವಿದೇಶಾಂಗ ನೀತಿಯಿಂದಾಗಿ ಕಂಪನಿಯು ರೋಹಿಲರು, ಮರಾಠರು ಹಾಗೂ ಹೈದರಾಲಿ ಮತ್ತು ಟಿಪ್ಪುವಿನ ಜೊತೆ ಯುದ್ಧವನ್ನು ಆರಂಭಿಸಲು ಬ್ರಿಟಿಷ್ ಸರ್ಕಾರದ ಅನುಮತಿ ಪಡೆಯದೇ ಇದ್ದುದು.

ಪಿಟ್ ಇಂಡಿಯಾ ಕಾಯಿದೆಯ ಮುಖ್ಯಾಂಶಗಳು:

1. ಪಿಟ್ ಇಂಡಿಯಾ ಕಾಯಿದೆ ಕಂಪನಿಯ ರಾಜಕೀಯ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಬೇರ್ಪಡಿಸಿ ಬ್ರಿಟಿಷ್ ಚಕ್ರವರ್ತಿಗೆ ಬೋರ್ಡ್ ಆಫ್ ಕಂಟ್ರೋಲನ್ನು ಸ್ಥಾಪಿಸಲು ಅಧಿಕಾರ ಕೊಟ್ಟಿತು. ಬೋರ್ಡ್ ಆಫ್ ಕಂಟ್ರೋಲ್ ಆರು ಜನ ಸದಸ್ಯರನ್ನು ಒಳಗೊಂಡಿತ್ತು. ಬೋರ್ಡ್ ಆಫ್ ಕಂಟ್ರೋಲ್ ಮತ್ತು ಪ್ರೊಪರೇಟರ್‌ಗಳು ಕಂಟ್ರೋಲಿನ ನಿಯಂತ್ರಣಕ್ಕೆ ಒಳಪಟ್ಟಿತು. ಬೋರ್ಡ್ ಆಫ್ ಡೈರೆಕ್ಟ‌ರ್ ಕಂಪನಿಯ ವಾಣಿಜ್ಯ ವ್ಯವಹಾರ ಮತ್ತು ನೌಕರರ ನೇಮಕಾತಿ ಅಧಿಕಾರವನ್ನಷ್ಟೇ ಪಡೆಯಿತು. ಬೋರ್ಡ್ ಆಫ್ ಕಂಟ್ರೋಲಿಗೆ ಸೈನ್ಯ ಮತ್ತು ಆಡಳಿತಗಳ ಮೇಲೆ ನಿಯಂತ್ರಣ ಅಧಿಕಾರವನ್ನು ಈ ಕಾಯ್ದೆ ನೀಡಿತು.

2. ಪಿಟ್ ಇಂಡಿಯಾ ಕಾಯಿದೆ ಗವರ್ನರ್ ಜನರಲ್ ಮಂಡಳಿಯ ಸದಸ್ಯರ ಸಂಖ್ಯೆಯನ್ನು 4 ರಿಂದ 3ಕ್ಕೆ ಇಳಿಸಿತು.

3. ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯದ ಸರ್ಕಾರಗಳನ್ನು ಗವರ್ನರ್ ಜನರಲ್‌ನ ನಿಯಂತ್ರಣಕ್ಕೆ ಒಪ್ಪಿಸಲಾಯಿತು.

4. ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ಹೊಂದಿದ್ದ ಪ್ರದೇಶಗಳನ್ನು ಮೊದಲ ಬಾರಿಗೆ ಬ್ರಿಟಿಷ್ ಪ್ರದೇಶಗಳೆಂದು ಪರಿಗಣಿಸಿತು.

5. ಗವರ್ನರ್ ಜನರಲ್ ಈ ಕಾಯಿದೆಯ ಪ್ರಕಾರ ಯುದ್ಧ ಘೋಷಣೆ ಮತ್ತು ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕೆ ಮುಂಚೆ ಬೋರ್ಡ್ ಆಫ್ ಕಂಟ್ರೋಲಿನ ಅನುಮತಿ ಪಡೆಯಬೇಕಾಗಿತ್ತು.

ಒಟ್ಟಾರೆ ಪಿಟ್ ಇಂಡಿಯಾ ಕಾಯಿದೆಯ ಜಾರಿಯಿಂದಾಗಿ ಕಂಪನಿಯ ಆಡಳಿತದ ಮೇಲೆ ಕೋರ್ಟ್ ಆಫ್ ಡೈರೆಕ್ಟರುಗಳು ಹೊಂದಿದ್ದ ನಿಯಂತ್ರಣ ಬ್ರಿಟಿಷ್ ಪಾರ್ಲಿಮೆಂಟಿಗೆ ವರ್ಗಾವಣೆಯಾಯಿತು. ಈ ಕಾಯಿದೆ ಆಡಳಿತದಲ್ಲಿ ಏಕತೆ, ಭದ್ರತೆ ಮತ್ತು ಸ್ಥಿರತೆಯನ್ನು ತಂದಿತು. ಬೋರ್ಡ್ ಆಫ್ ಕಂಟ್ರೋಲಿನ ಸ್ಥಾಪನೆಯಿಂದಾಗಿ ಬೋರ್ಡ್ ಆಫ್‌ ಡೈರೆಕ್ಟ‌ರ್ ಮತ್ತು ಕೋರ್ಟ್ ಆಫ್ ಪ್ರೊಪರಟ್‌‌ಟ್‌ಗಳ ಪ್ರಭಾವವನ್ನು ತಗ್ಗಿಸಿತು.

1813ರ ಸನ್ನದು ಶಾಸನ : 1813ರ ಶಾಸನದ ಮುಖ್ಯಾಂಶಗಳು:

1. 20 ವರ್ಷಗಳ ಕಾಲ ಭಾರತ ಸರ್ಕಾರ ಕಂಪನಿಯ ಹತೋಟಿಯಲ್ಲಿರಬೇಕು ಎಂಬ ಅಂಶವನ್ನು ಮತ್ತೆ ನವೀಕರಿಸಿತು.

2. ಕಂಪನಿಯ ವ್ಯಾಪಾರದ ಮೇಲಿನ ಏಕಸ್ವಾಮ್ಯವನ್ನು ತೆಗೆದುಹಾಕಿ ಭಾರತದೊಂದಿಗೆ ವ್ಯಾಪಾರ ಮಾಡಲು ಎಲ್ಲಾ ಬ್ರಿಟಿಷರಿಗೂ ಅವಕಾಶ ಮಾಡಿಕೊಟ್ಟಿತು.

3. ಗವರ್ನರ್ ಜನರಲ್ ಮತ್ತು ದಂಡನಾಯಕರನ್ನು ನೇಮಿಸಲು ಚಕ್ರವರ್ತಿಯ ಒಪ್ಪಿಗೆ ಪಡೆಯಬೇಕಾಗಿತ್ತು. ಕೌನ್ಸಿಲ್ ಅಥವಾ ಮಂಡಳಿಯ ಸದಸ್ಯರನ್ನು ನೇಮಿಸಲು ಬೋರ್ಡ್ ಆಫ್ ಕಂಟ್ರೋಲಿನ ಒಪ್ಪಿಗೆ ಪಡೆಯಬೇಕಾಗಿತ್ತು.

4. ಈ ಶಾಸನ ಕ್ರೈಸ್ತ ಮಿಷನರಿಗಳು ಭಾರತದಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟಿತು.

5. ಈ ಶಾಸನ ಪಾಶ್ಚಿಮಾತ್ಯ ವಿದ್ಯಾಭ್ಯಾಸ ಮತ್ತು ಸಾಹಿತ್ಯ, ವಿಜ್ಞಾನಗಳ ಬೆಳವಣಿಗೆಗೆ ಒಂದು ಲಕ್ಷ ರೂಪಾಯಿಗಳನ್ನು ಖರ್ಚುಮಾಡಿ ಭಾರತೀಯರಿಗೆ ಶಿಕ್ಷಣ ಕೊಡುವುದಕ್ಕೆ ಕಂಪನಿ ಸರ್ಕಾರಕ್ಕೆ ಅಧಿಕಾರ ಕೊಟ್ಟಿತು.

6.ಬ್ರಿಟಿಷ್ ಪಡೆಗಳ ಸಂಖ್ಯೆಯನ್ನು ಕಡಿಮೆ ಮಾಡಿತು.

ಈ ಶಾಸನ ಭಾರತದ ಮೇಲೆ ಬ್ರಿಟಿಷ್ ಸಾರ್ವಭೌಮತ್ವದ ಹಕ್ಕನ್ನು ಪ್ರತಿಪಾದಿಸಿತು. ಈ ಶಾಸನದಿಂದಾಗಿ ಕೈಗಾರಿಕಾ ನೀತಿಯಲ್ಲಿ ಬದಲಾವಣೆ ಉಂಟಾಗಿ ಭಾರತೀಯ ಕೈಗಾರಿಕೆಗಳ ದುಸ್ಥಿತಿಗೆ ಕಾರಣವಾಯಿತು.

1833ರ ಕಂಪನಿಯ ಸನ್ನದು ಶಾಸನ :

1833ರ ಶಾಸನ ಭಾರತೀಯ ಸಂವಿಧಾನಾತ್ಮಕ ಇತಿಹಾಸದಲ್ಲಿ ಮಹತ್ವವಾದ ಶಾಸನ. ಈ ಸಂದರ್ಭದಲ್ಲಿ ಮೆಕಾಲೆ ಬೋರ್ಡ್ ಆಫ್ ಕಂಟ್ರೋಲಿನ ಕಾರ್ಯದರ್ಶಿಯಾಗಿದ್ದನು. ಈ ಶಾಸನದ ಮುಖ್ಯಾಂಶಗಳು :

1. ಈ ಶಾಸನ ಕಂಪನಿಗೆ ಮತ್ತೆ 20 ವರ್ಷಗಳ (ಏಪ್ರಿಲ್ 30, 1854ರ ವರೆವಿಗೆ) ಕಾಲ ಭಾರತದ ಆಡಳಿತ ನಡೆಸುವ ಅಧಿಕಾರ ಕೊಟ್ಟಿತ್ತು.

2. ಆಡಂಸ್ಮಿತ್‌ನ ಮುಕ್ತ ವ್ಯಾಪಾರ ಸಿದ್ಧಾಂತ ಇಂಗ್ಲೆಂಡಿನಲ್ಲಿ ಈ ಸಂದರ್ಭದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದರಿಂದ ಈಸ್ಟ್ ಇಂಡಿಯಾ ಕಂಪನಿ ಹೊಂದಿದ್ದ ವ್ಯಾಪಾರ ಏಕಸ್ವಾಮ್ಯವನ್ನು ತೆಗೆದುಹಾಕಿತು.

3. ಬಂಗಾಳದ ಗವರ್ನರ್ ಜನರಲ್‌ನನ್ನು ಭಾರತದ ಗವರ್ನರ್ ಜನರಲ್ ಆಗಿ ನೇಮಕ ಮಾಡಿ ಹೆಚ್ಚಿನ ಅಧಿಕಾರವನ್ನು ಈ ಶಾಸನದ ಮೂಲಕ ಕೊಡಲಾಯಿತು.

4. ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯಗಳ ಮೇಲೆ ಗವರ್ನರ್ ಜನರಲ್ ನಿಯಂತ್ರಣ ಹೊಂದಲು ಅಧಿಕಾರವನ್ನು ಕೊಡಲಾಯಿತು. ಇಡೀ ದೇಶಕ್ಕೆ ಅನ್ವಯವಾಗುವಂತಹ ಆಯವ್ಯಯವನ್ನು ಗವರ್ನರ್ ಜನರಲ್ ಮಂಡಳ ತಯಾರಿಸಿತು.

5. ಗವರ್ನರ್ ಜನರಲ್ ಮಂಡಳಿಗೆ ಕಾನೂನುಗಳನ್ನು ರಚಿಸುವ ಅಧಿಕಾರವನ್ನು ನೀಡಲಾಯಿತು.

6. ಗವರ್ನರ್ ಜನರಲ್ ಮಂಡಳಿಗೆ ಕಾನೂನು ಸದಸ್ಯನನ್ನು ನೇಮಿಸಲಾಯಿತು. ಇವನಿಗೆ ವಿಟೋ ಅಧಿಕಾರವಿರಲಿಲ್ಲ.

7. ಮೆಕಾಲೆಯ ಅಧ್ಯಕ್ಷತೆಯಲ್ಲಿ ಕಾನೂನು ಆಯೋಗವನ್ನು ರಚಿಸಲಾಯಿತು.

8. ಆಗ್ರಾ ಮತ್ತು ಪಶ್ಚಿಮ ಔದ್ ಪ್ರಾಂತ್ಯವನ್ನು ಒಳಗೊಂಡಂತೆ, ವಾಯುವ್ಯ ಪ್ರಾಂತ್ಯವನ್ನು ರಚಿಸಲಾಯಿತು. ಇದರ ಆಡಳಿತ ನಡೆಸಲು ಲೆಫ್ಟಿನೆಂಟ್ ಗವರ್ನ‌್ರನನ್ನು ನೇಮಿಸಲಾಯಿತು.

9. ಭಾರತೀಯರ ಬಗ್ಗೆ ಭೇದಭಾವ ತೋರುವುದನ್ನು ಈ ಶಾಸನ ರದ್ದು ಮಾಡಿ ಕಾಲಂ 87ರ ಪ್ರಕಾರ ಭಾರತೀಯ ಪ್ರಜೆಯನ್ನು ಅವನ ಜಾತಿ, ಹುಟ್ಟಿದ ಸ್ಥಳ, ವರ್ಣಗಳ ಆಧಾರದ ಮೇಲೆ ಅವನಿಗೆ ಹುದ್ದೆಯನ್ನಾಗಲಿ, ಅಧಿಕಾರವನ್ನಾಗಲೀ ತಪ್ಪಿಸಬಾರದು.

10. ಈ ಶಾಸನ ಬೋರ್ಡ್ ಆಫ್ ಕಂಟ್ರೋಲಿನ ಅಧ್ಯಕ್ಷನನ್ನು ಭಾರತೀಯ ವ್ಯವಹಾರಗಳನ್ನು ನೋಡಿಕೊಳ್ಳುವ ಮಂತ್ರಿಯಾಗಿ ನೇಮಿಸಿತು.

ಈ ಶಾಸನ ಷೇರು ಬಂಡವಾಳ ಸಂಸ್ಥೆಯಾಗಿದ್ದ ಕಂಪನಿಯನ್ನು ಆಡಳಿತ ನಡೆಸುವ ಅಂಗವನ್ನಾಗಿ ಮಾಡಿತು. ಒಂದೇ ರೀತಿಯ ಕಾನೂನುಗಳನ್ನು ಪ್ರಾಂತ್ಯಗಳಲ್ಲಿ ತರಲು ಸಹಾಯ ಮಾಡಿತು. ಭಾರತೀಯ ದಂಡ ಸಂಹಿತ ಮತ್ತು ಕ್ರಿಮಿನಲ್‌ ಕೋಡ್‌ಗಳ ರಚನೆಗೆ ಅವಕಾಶ ಮಾಡಿಕೊಟ್ಟಿತು. ಇದಲ್ಲದೇ ಈ ಶಾಸನ ದೇಶಕ್ಕೆ ರಾಜಕೀಯ ಮತ್ತು ಭಾವನಾತ್ಮಕ ಐಕ್ಯತೆಯನ್ನು ತರುವಲ್ಲಿ ನೆರವಾಯಿತು.

1853ರ ಸನ್ನದು ಶಾಸನ :

1853ರ ಶಾಸನವು ಸನ್ನದು ಶಾಸನಗಳ ಸರಣಿ (Charter Acts)ಗಳಲ್ಲಿ ಕೊನೆಯದು.

ಇದು ಲಾರ್ಡ್ ಡಾಲ್‌ಹೌಸಿ ಭಾರತದ ಗವರ್ನರ್ ಜನರಲ್ ಆಗಿದ್ದ ಕಾಲದಲ್ಲಿ ಜಾರಿಗೆ ಬಂದಿತು. 183ರ ಶಾಸನದ ಅವಧಿ ಮುಗಿಯುತ್ತಾ ಬಂದಾಗ ಭಾರತೀಯರು ಮತ್ತು ಇಂಗ್ಲಿಷರು ಕಂಪನಿ ಆಡಳಿತವನ್ನು ಮುಂದುವರಿಸುವುದು ಬೇಡವೆಂಬ ಅಭಿಪ್ರಾಯ ತಳೆದು ಚಕ್ರವರ್ತಿಯ ನಿಯಂತ್ರಣ ಸ್ಥಾಪಿಸುವತ್ತ ಒಲವು ಮೂಡಲಾರಂಭಿಸಿತು.

ಬ್ರಿಟಿಷ್ ಚಕ್ರವರ್ತಿಗೆ ವರ್ಗಾಯಿಸುವ ಸಲುವಾಗಿ ಜಾರಿಗೆ ತಂದ. ಈ ಕಾಯಿದೆಯ ಜಾರಿಯಿಂದಾಗಿ ಸಂವಿಧಾನದಲ್ಲಿ ಹಲವಾರು ಮಾರ್ಪಾಡುಗಳು ಉಂಟಾದವು. ಇದೊಂದು ಮಹತ್ವದ ಕಾಯಿದೆಯಾಗಿತ್ತು.

ಕಾಯಿದೆಯ ಮುಖ್ಯಾಂಶಗಳು :

1. ಈ ಕಾಯಿದೆ ಕಂಪನಿಯ ಆಡಳಿತವನ್ನು ಕೊನೆಗೊಳಿಸಿ ಅದರ ಅಧೀನದಲ್ಲಿದ್ದ ಪ್ರದೇಶಗಳನ್ನು ಚಕ್ರವರ್ತಿಗೆ ವರ್ಗಾಯಿಸಲಾಯಿತು. ಇನ್ನು ಮುಂದೆ ಭಾರತದ ಪ್ರತಿಯೊಂದು ಆಡಳಿತವು ರಾಣಿಯ ಹೆಸರಿನಲ್ಲಿಯೇ ನಡೆಯಬೇಕೆಂದು ತಿಳಿಸಿತು.

2. ಕೋರ್ಟ್ ಆಫ್ ಡೈರೆಕ್ಟರ್ ಹಾಗೂ ಬೋರ್ಡ್ ಆಫ್ ಕಂಟ್ರೋಲರ್‌ನ ಅಧಿಕಾರ ಮಿನಿಸ್ಟರ್ ಆಫ್ ಸ್ಟೇಟ್‌ನಲ್ಲಿ ಕೇಂದ್ರೀಕೃತವಾಯಿತು.

3. ಬೋರ್ಡ್ ಆಫ್ ಕಂಟ್ರೋಲ್‌ನ ಅಧ್ಯಕ್ಷ ಸ್ಥಾನವನ್ನು ಸೆಕ್ರೆಟರಿ ಆಫ್ ಸ್ಟೇಟ್ ಅಲಂಕರಿಸಿದನು. ಇವನಿಗೆ ಆಡಳಿತದಲ್ಲಿ ಸಹಾಯ ಮಾಡಲು 15 ಜನರಿರುವ ಕೌನ್ಸಿಲ್ ಅನ್ನು ರಚಿಸಲಾಯಿತು.

4. ಸೆಕ್ರೆಟರಿ ಆಫ್ ಸ್ಟೇಟ್ ಕೌನ್ಸಿಲಿನ ಗಮನಕ್ಕೆ ತರದೇ ಸರ್ಕಾರಕ್ಕೆ ವರದಿಯನ್ನು ಕಳುಹಿಸಬಹುದಾಗಿತ್ತು. ಯುದ್ಧ ನಡೆಸುವುದು ಮತ್ತು ಶಾಂತಿ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಗುಪ್ತವಾಗಿ ಆಜ್ಞೆಗಳನ್ನು ಕಳುಹಿಸಬಹುದಾಗಿತ್ತು.

5. ಕೌನ್ಸಲಿಗೆ ಪ್ರಾಂತ್ಯಗಳ ಗವರ್ನ‌್ರಗಳನ್ನು, ಲೆಫ್ಟಿನೆಂಟ್ ಗವರ್ನ‌್ರಗಳನ್ನು ನೇಮಿಸುವ ಅಧಿಕಾರವನ್ನು ಕೊಡಲಾಯಿತು.

6. ಭಾರತದ ಆಡಳಿತ ವ್ಯವಹಾರ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ ಆದಾಯ ಮತ್ತು ಖರ್ಚು ವೆಚ್ಚಗಳ ಪಟ್ಟಿಯನ್ನು ಇಂಗ್ಲೆಂಡಿನ ಸಂಸತ್ತಿಗೆ ಕಳುಹಿಸಬೇಕಾಗಿತ್ತು.

7. ಸೆಕ್ರೆಟರಿ ಆಫ್ ಸ್ಟೇಟ್ ಮತ್ತು ಕೌನ್ಸಿಲಿನ ಸದಸ್ಯರಿಗೆ ಭಾರತದ ಆಡಳಿತದ ಮೇಲೆ ನಿಯಂತ್ರಣ ಹೊಂದುವ ಅಧಿಕಾರವನ್ನು ಮತ್ತು ಕಾನೂನುಗಳನ್ನು ರಚಿಸುವ ಅಧಿಕಾರವನ್ನು ಕೊಡಲಾಗಿತ್ತು.

1858ರ ಕಾಯಿದೆ ಭಾರತದಲ್ಲಿ ಕಂಪನಿಯ ಅಧಿಕಾರವನ್ನು ಕೊನೆಗೊಳಿಸಿ ಚಕ್ರವರ್ತಿಯ ಆಳ್ವಿಕೆಯನ್ನು ಆರಂಭಿಸಿತು. ಇದು ಸಂವಿಧಾನದ ಬೆಳವಣಿಗೆಯಲ್ಲಿ ಹೊಸ ಯುಗವನ್ನು ಆರಂಭಿಸಿತು. 1858 ರಿಂದ 1947ರ ವರವಿಗೆ ಆಡಳಿತವು ಚಕ್ರವರ್ತಿಯ ನಿಯಂತ್ರಣದಲ್ಲಿದ್ದು ಸಂವಿಧಾನಾತ್ಮಕ ಸುಧಾರಣಾ ಪ್ರಕ್ರಿಯೆಗಳು ಆರಂಭವಾಗಿ ಭಾರತೀಯ ಸಂವಿಧಾನಕ್ಕೆ ಒಂದು ನಿರ್ಧಿಷ್ಟ ಸ್ವರೂಪವನ್ನು ನೀಡಿತು. 1858 ರಿಂದ 1947ರ ವರೆವಿಗೆ ಸಂವಿಧಾನ ಮೂರು ಹಂತಗಳಲ್ಲಿ ಬೆಳವಣಿಗೆ ಹೊಂದಿತು. ಅವುಗಳೆಂದರೆ

1) ಪ್ರತಿನಿಧಿ ಸಂಸ್ಥೆಗಳ ಬೆಳವಣಿಗೆ

2) ಸ್ವಯಂ ಆಡಳಿತ ಸಂಸ್ಥೆಗಳ ಬೆಳವಣಿಗೆ

3) ಚಕ್ರಾಧಿಪತ್ಯದ ಆಡಳಿತದ ಬೆಳವಣಿಗೆ.

1861ರ ಕಾಯಿದೆ :

1861ರ ಇಂಡಿಯನ್ ಕೌನ್ಸಿಲ್ ಕಾಯಿದೆ ಭಾರತದಲ್ಲಿ ಲೆಜಿಸ್ಟ್ರೇಟಿವ್ ಕೌನ್ಸಿಲ್‌ಗಳ ವಿಕಾಸದಲ್ಲಿ ಮಹತ್ವದ ಪಾತ್ರವಹಿಸಿತು. 1858ರ ಮಹಾರಾಣಿಯ ಘೋಷಣೆಯಲ್ಲಿ ಭಾರತೀಯರಿಗೆ ಆಡಳಿತದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಲಾಗಿತ್ತು. 1861ರ ಶಾಸನದಲ್ಲಿ ಭಾರತೀಯರಿಗೆ ಆಡಳಿತದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಸಲುವಾಗಿ ಕಾರ್ಯಾಂಗವನ್ನು ವಿಸ್ತರಿಸಲಾಯಿತು.

ಕಾಯಿದೆಯ ಮುಖ್ಯಾಂಶಗಳು :

ಕಾರ್ಯಾಂಗ ಮಂಡಳಿ ಅಥವಾ ಕಾರ್ಯಕಾರಿ ಸಮಿತಿಗೆ ಐದನೇ ಸಾಮಾನ್ಯ ಅಧಿಕಾರೇತರ ಸದಸ್ಯನನ್ನು ನೇಮಿಸಿತು. ಮತ್ತು ವಿಶೇಷ ಸದಸ್ಯನಾಗಿ ದಂಡನಾಯಕನನ್ನು ನೇಮಕ ಮಾಡುವ ಸೆಕ್ರೆಟರಿ ಆಫ್ ಸ್ಟೇಟ್‌ನ ಅಧಿಕಾರ ಮುಂದುವರಿಯಿತು.

ಗವರ್ನರ್ ಜನರಲ್‌ನ ಅಧಿಕಾರವನ್ನು ಈ ಕಾಯುವ ಹೆಚ್ಚಿಸಿತು. ಅಲ್ಲದೇ ಕೌನ್ಸಿಲಿನ ವ್ಯವಹಾರಗಳನ್ನು ನಡೆಸಲು ಕಾಯಿದೆಗಳನ್ನು ಮಾಡಲು ಮತ್ತು ಆದೇಶಗಳನ್ನು ನೀಡಲು ಈ ಕಾಯಿದೆ ಅಧಿಕಾರವನ್ನು ನೀಡಿತು. ಕೇಂದ್ರ ಶಾಸಕಾಂಗ ಸಭೆಗೆ ಇದ ಸದಸ್ಯರ ಸಂಖ್ಯೆಯನ್ನು ಅರಕ್ಕಿಂತ ಕಡಿಮೆ ಇಲ್ಲದೇ ಹನ್ನೆರಡಕ್ಕಿಂತ ಹೆಚ್ಚಿಲ್ಲದಂತೆ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕಾಗಿತ್ತು. ಇವರ ಪೈಕಿ ಅರ್ಧಕ್ಕಿಂತ ಕಡಿಮೆಯಿಲ್ಲದನ್ನು ಸದಸ್ಯರು ಅಧಿಕಾರೇತರರಾಗಿರಬೇಕಿತ್ತು ಶಾಸಕಾಂಗ ಪಾಸುಮಾಡಿದ ಪ್ರತಿಯೊಂದು ಕಾಯಿದೆಗೂ ವೈಸ್‌ರಾಯಿಯ ಅನುಮತಿ ಅಗತ್ಯವಿತ್ತು.

ಅಲ್ಲದೇ ವೈಸ್ ರಾಯ್‌ಗೆ ಹೊಸ ಪ್ರಾಂತ್ಯಗಳನ್ನು ರಚಿಸುವ ಅಥವಾ ಗಡಿಗಳನ್ನು ಪುನರ್ ರಚಿಸುವ ಅಧಿಕಾರವನ್ನು ನೀಡಲಾಯಿತು. ಪ್ರಾಂತೀಯ ಶಾಸಕಾಂಗ ಸಭೆಯನ್ನು ವಿಸ್ತರಿಸಿ ನಾಲ್ಕರಿಂದ ಎಂಟು ಸದಸ್ಯರುಗಳನ್ನು ನೇಮಿಸಿ ಅದರಲ್ಲಿ ಅರ್ಧದಷ್ಟು ಭಾರತೀಯರು ಇರುವಂತೆ ನೋಡಿಕೊಳ್ಳಲಾಯಿತು. ಪ್ರಾಂತೀಯ ಸಭೆಗಳಿಗೆ ಕಾನೂನು ರಚಿಸುವ ಸ್ವಾತಂತ್ರ್ಯವನ್ನು ನೀಡಲಾಯಿತು.

1892ರ ಇಂಡಿಯನ್ ಕೌನ್ಸಿಲ್ ಕಾಯಿದೆ:

1892ರ ಕಾಯಿದೆಯು ಭಾರತೀಯ ಸಂವಿಧಾನಾತ್ಮಕ  ಇತಿಹಾಸದಲ್ಲಿ ಪ್ರತಿನಿಧಿ ಸಭೆಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತು. 1885ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ 1861ರ ಕಾಯಿದೆಯಂತೆ ಶಾಸಕಾಂಗ ಸಭೆಯನ್ನು ವಿಸ್ತರಿಸಿ ಹೆಚ್ಚಿನ ಸದಸ್ಯರನ್ನು ಸೇರಿಸಿಕೊಳ್ಳಬೇಕೆಂಬ ನಿರ್ಣಯವನ್ನು ಮಂಡಿಸಿತು.

ಲಾರ್ಡ್ ಡಫರಿನ್ ಬಲಿಷ್ಟ ಶಾಸಕಾಂಗದ ಅವಶ್ಯಕತೆಯನ್ನು ಮನಗಂಡು 1892ರ ಕಾಯಿದೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಈ ಕಾಯಿದೆ ಪ್ರಕಾರ ಕೇಂದ್ರ ಮತ್ತು ಪ್ರಾಂತೀಯ ಶಾಸಕಾಂಗೆ ಸಭೆಗಳನ್ನು ವಿಸ್ತರಿಸಿ ಹತ್ತಕ್ಕಿಂತ ಕಡಿಮೆ ಇಲ್ಲದ ಹದಿನಾರಕ್ಕಿಂತ ಜಾಸ್ತಿಯಾಗದಂತೆ ಸದಸ್ಯರುಗಳನ್ನು ನೇಮಿಸಲಾಯಿತು.

ಪ್ರಾಂತೀಯ ಸಭೆಗಳಿಗೆ ಎಂಟರಿಂದ 20 ಸದಸ್ಯರುಗಳನ್ನು ನೇಮಿಸುವ ಅಧಿಕಾರ ಕೊಡಲಾಯಿತು. ಅಧಿಕಾರೇತರ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಶಾಸಕಾಂಗ ಸಭೆಯ ಸದಸ್ಯರುಗಳಿಗೆ ಹೆಚ್ಚು ಅಧಿಕಾರ ಕೊಡಲಾಯಿತು. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಸಾರ್ವಜನಿಕ ವಿಷಯಗಳ ಮೇಲೆ ಚರ್ಚಿಸಿ ಪ್ರಶ್ನೆಯನ್ನು ಕೇಳಬಹುದಾಗಿತ್ತು. ಆದರೆ ಹಣಕಾಸಿನ ವಿಷಯದ ಮೇಲೆ ಶಾಸನ ಸಭೆಗೆ ಯಾವುದೇ ಅಧಿಕಾರವಿರಲಿಲ್ಲ.

1892ರ ಕಾಯಿದೆಯು ಕೇಂದ್ರ ಮತ್ತು ಪ್ರಾಂತೀಯ ಸಭೆಗಳಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಪರೋಕ್ತ ವಿಧಾನದಲ್ಲಿ ಸದಸ್ಯರನ್ನು ನೇಮಿಸಿ ಚುನಾವಣಾ ಪದ್ಧತಿಗೆ ಅಡಿಗಲ್ಲನ್ನು ಹಾಕಿತು. ಶಾಸನ ಸಭೆಯ ಕಾರ್ಯಗಳು ಹೆಚ್ಚಿದವು. ಹೆಚ್ಚಿನ ಸಂಖ್ಯೆಯ ಭಾರತೀಯರು ಆಡಳಿತದಲ್ಲಿ ಭಾಗವಹಿಸುವಂತಾಯಿತು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top