1909ರ ಮಿಂಟೋ ಮಾರ್ಲೆ ಸುಧಾರಣೆಗಳು:

1909ರ ಮಿಂಟೋ ಮಾರ್ಲೆ ಸುಧಾರಣೆಗಳು

1909ರ ಮಿಂಟೋ ಮಾರ್ಲೆ ಸುಧಾರಣೆಗಳು: 1892ರ ಇಂಡಿಯನ್ ಕೌನ್ಸಿಲ್ ಕಾಯಿದೆ ಭಾರತೀಯ ಆಶೋತ್ತರಗಳನ್ನು ಈಡೇರಿಸದ ಕಾರಣ 1909ರಲ್ಲಿ ಇಂಡಿಯನ್ ಕೌನ್ಸಿಲ್ ಕಾಯಿದೆ ಜಾರಿಗೆ ಬರಲು ಕಾರಣವಾಯಿತು. ಇದಲ್ಲದೇ ಇನ್ನೂ ಹಲವಾರು ಕಾರಣಗಳಿದ್ದವು. ಅವುಗಳೆಂದರೆ,

1. ಲಾರ್ಡ್ ಕರ್ಜನ್ 1899ರಲ್ಲಿ ಭಾರತದ ವೈಸ್‌ರಾಯ್ ಆಗಿ ಅಧಿಕಾರ ವಹಿಸಿಕೊಂಡ. ಇವನ ಎಲ್ಲಾ ನೀತಿಗಳು ಭಾರತೀಯರನ್ನು ಕೆರಳಿಸಿದವು. 1899ರಲ್ಲಿ ಕಲ್ಕತ್ತಾ ನಗರಪಾಲಿಕೆ ಕಾಯಿದೆ, 1904ರ ಭಾರತೀಯ ವಿಶ್ವವಿದ್ಯಾನಿಲಯಗಳ ಕಾಯಿದೆ, ಬಂಗಾಳದ ವಿಭಜನೆ ಈ ಎಲ್ಲಾ ಅಂಶಗಳು ಇಡೀ ಭಾರತೀಯ ಸಮುದಾಯವನ್ನು ನೋಯಿಸಿ ಬ್ರಿಟಿಷ್ ವಿರೋಧಿ ಭಾವನೆಗಳು ಬೆಳೆಯಲು ಕಾರಣವಾಯಿತು.

2. 1905ರಲ್ಲಿ ಬಲಾಢ ರಷ್ಯಾವನ್ನು ಏಷ್ಯಾ ಖಂಡದ ಪುಟ್ಟ ರಾಷ್ಟ್ರವಾದ ಜಪಾನ್ ಸೋಲಿಸಿತು. ಈ ಘಟನೆ ಇಡೀ ಏಷ್ಯಾ ಖಂಡದ ಮೇಲೆ ಪ್ರಭಾವ ಬೀರಿ, ಪಾಶ್ಚಿಮಾತ್ಯ ಶಕ್ತಿಯ ವಿರುದ್ಧ ಹೋರಾಡಲು ಸ್ಫೂರ್ತಿ ನೀಡಿತು. ಇದರಿಂದ ಸ್ಫೂರ್ತಿ ಪಡೆದ ಭಾರತೀಯರಲ್ಲಿ ದೇಶಪ್ರೇಮ, ತ್ಯಾಗ, ರಾಷ್ಟ್ರೀಯತೆ ಬೆಳೆಯಲಾರಂಭಿಸಿತು. ಇದು ಬ್ರಿಟಿಷ್ ಸರ್ಕಾರವನ್ನು ಚಿಂತೆಗೀಡುಮಾಡಿ ಸಂವಿಧಾನ ಸುಧಾರಣೆ ಮಾಡಲು ಯೋಚಿಸುವಂತಾಯಿತು.

3. ಬೆಲೆಗಳಲ್ಲಿ ಏರಿಕೆಯುಂಟಾದ್ದರಿಂದ ಮಧ್ಯಮ ವರ್ಗದ ಮೇಲೆ ಹಲವಾರು ದುಷ್ಪರಿಣಾಮಗಳುಂಟಾದವು.

4. ಉತ್ತಮ ಆಡಳಿತ ಸ್ಥಾಪಿಸಿದರೆ ಭಾರತದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂಬ ಕರ್ಜನನ ಭಾವನೆ ತಪ್ಪಾಗಿತ್ತು. ಈ ಪ್ರಯತ್ನದಲ್ಲಿ ಕರ್ಜನ್ ಸಫಲನಾಗಲಿಲ್ಲ. ಇದು ಭಾರತೀಯರ ಭಾವನೆಯನ್ನು ಕೆರಳಿಸಿತು. ಬ್ರಿಟಿಷ್ ಸರ್ಕಾರ ಈ ಭಾವನೆಯನ್ನು ತೊಡೆದುಹಾಕಿ ಬ್ರಿಟಿಷ್ ಆಳ್ವಿಕೆಯ ಬಗೆಗೆ ಭಾರತೀಯುಲ್ಲಿ ಒಳ್ಳೆಯ ಭಾವನೆಯನ್ನು ಮೂಡಿಸುವುದು ಅವಶ್ಯವೆಂದು ಬ್ರಿಟಿಷರು ಮನಗಂಡು ಸುಧಾರಣೆ ತರಲು ಇಚ್ಛಿಸಿದರು.

5. ಬ್ರಿಟಿಷರು ಭಾರತೀಯರನ್ನು ಕೀನ್ಯಾ, ದಕ್ಷಿಣ ಆಫ್ರಿಕಾ, ಬ್ರಿಟಿಷ್ ಗಯಾನಗಳಲ್ಲಿ ನಡೆಸಿಕೊಳ್ಳುತ್ತಿದೆ ರೀತಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ಚಳುವಳಿಗಳನ್ನು ನಡೆಸಲು ಕಾರಣವಾಯಿತು.

6. 1906ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿಗೆ ನಡೆದ ಚುನಾವಣೆಯಲ್ಲಿ ಉದಾರವಾದಿಗಳು ಜಯಗಳಿಸಿದರು. ಇವರು ಭಾರತದ ಬಗ್ಗೆ ಸಹಾನುಭೂತಿ ಹೊಂದಿ ಸಂವಿಧಾನಾತ್ಮಕ ಸುಧಾರಣೆಗಳು ಆವಶ್ಯಕವೆಂದು ಮನಗಂಡರು.

7. ಈ ವೇಳೆಗೆ ತೀವ್ರಗಾಮಿಗಳ ಗುಂಪು ಹುಟ್ಟಿಕೊಂಡು ಮಂದಗಾಮಿಗಳ ಮಾರ್ಗದಲ್ಲಿ ಸಾಗದೇ ಶಸ್ತ್ರಗಳನ್ನು ಹಿಡಿದು ಬ್ರಿಟಿಷರ ವಿರುದ್ಧ ಹೋರಾಡಲು ಸಜ್ಜಾಗಲಾರಂಭಿಸಿ ಉಗ್ರ ರಾಷ್ಟ್ರೀಯತೆಯನ್ನು ಭಾರತೀಯರಲ್ಲಿ ಪ್ರಚೋದಿಸಲಾರಂಭಿಸಿದರು. ರಾಷ್ಟ್ರೀಯ ಚಳುವಳಿಯ ನಾಯಕರುಗಳು ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಉಂಟಾಗಿರುವ ದುಷ್ಪರಿಣಾಮ ಹಾಗೂ ಭಾರತೀಯರ ಸ್ವಯಂ ಆಡಳಿತದ ಹಕ್ಕಿನ ಅವಶ್ಯಕತೆಯನ್ನು ಭಾರತೀಯರಿಗೆ ಮನಮುಟ್ಟುವಂತೆ ಪ್ರಚಾರ ಮಾಡಿದರು. ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಗೋಖಲೆ 1906ರಲ್ಲಿ ಇಂಗ್ಲೆಂಡಿನಲ್ಲಿ ವಿದೇಶಿ ಕಾರ್ಯದರ್ಶಿಯಾಗಿದ್ದ ಮಾರ್ಲೆಯನ್ನು ಭೇಟಿಯಾಗಿ ಭಾರತೀಯರಿಗೆ ಉತ್ತಮ ಆಡಳಿತ ಮತ್ತು ರಾಜಕೀಯ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಮೇಲಿನ ಈ ಎಲ್ಲ ಅಂಶಗಳು 1909ರ ಕಾಯಿದೆ ಜಾರಿಗೆ ಬರಲು ಕಾರಣವಾದವು. ಈ ಹಿನ್ನೆಲೆಯಲ್ಲಿ ಮಿಂಟೋನನ್ನು ಗವರ್ನರ್ ಜನರಲ್ ಆಗಿ ಮಾರ್ಲೆ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಆಗಿ ನೇಮಿಸಲಾಯಿತು. ಇವರಿಬ್ಬರ ಶ್ರಮದ ಫಲವೇ 1909ರ ಕೌನ್ಸಿಲ್ ಕಾಯಿದೆ.

1909ರ ಇಂಡಿಯನ್ ಕೌನ್ಸಿಲ್ ಕಾಯಿದೆಯ ಉದ್ದೇಶಗಳು:

1. ಶಾಸಕಾಂಗ ಸಭೆಯ ಗಾತ್ರವನ್ನು ಹೆಚ್ಚಿಸುವುದು.

2. ಶಾಸಕಾಂಗ ಸಭೆಯ ಕಾರ್ಯಗಳನ್ನು ಹೆಚ್ಚಿಸುವುದು.

3. ಚುನಾಯಿತ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು.

4. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಂದಗಾಮಿ ನಾಯಕರ ಸಹಾನುಭೂತಿಯನ್ನು ಗಳಿಸುವುದು.

ಕಾಯಿದೆಯ ಮುಖ್ಯಾಂಶಗಳು:

1. ಲೆಜಿಸ್ಟ್ರೇಟಿವ್ ಕೌನ್ಸಿಲಿನ ವಿಸ್ತರಣೆ : ಲೆಜಿಸ್ಟ್ರೇಟಿವ್ ಕೌನ್ಸಿಲಿನಲ್ಲಿದ್ದ ಸದಸ್ಯರ ಸಂಖ್ಯೆಯನ್ನು 16 ರಿಂದ 60ಕ್ಕೆ ಏರಿಸಲಾಯಿತು. ಇವರಲ್ಲಿ 33 ಜನರನ್ನು ನೇರವಾಗಿ ನೇಮಕ ಮಾಡಿ ಉಳಿದ 27 ಜನರನ್ನು ಮುಸ್ಲಿಂ ಜಮೀನ್ದಾರರು ಬಾಂಬೆ ಮತ್ತು ಬಂಗಾಳಗಳ ಛೇಂಬರ್ ಆಫ್ ಕಾಮರ್ಸ್‌ನಿಂದ ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಪ್ರಾಂತೀಯ ಶಾಸಕಾಂಗ ಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಬಂಗಾಳದಲ್ಲಿ 50 ಸದಸ್ಯರಿದ್ದರೆ ಮದ್ರಾಸ್ ಮತ್ತು ಬಾಂಬೆಗಳಲ್ಲಿ 30 ಸದಸ್ಯರಿದ್ದರು.

2. ಕೇಂದ್ರ ಮತ್ತು ಪ್ರಾಂತೀಯ ಶಾಸಕಾಂಗ ಸಭೆಯಲ್ಲಿ ನಾಲ್ಕು ವರ್ಗದ ಸದಸ್ಯರಿದ್ದರು. ಅವರುಗಳೆಂದರೆ,

(೩) ನಾಮಕರಣಗೊಂಡ ಅಧಿಕಾರಿಗಳು

(b) ನಾಮಕರಣಗೊಂಡ ಅಧಿಕಾರೇತರರು

(c) ಗವರ್ನರ್ ಜನರಲ್ಲನ ಸದಸ್ಯರು

(d) ಚುನಾಯಿತ ಪ್ರತಿನಿಧಿಗಳು.

3. ಕೇಂದ್ರ ಮತ್ತು ಪ್ರಾಂತೀಯ ಶಾಸನ ಸಭೆಗಳ ಅಧಿಕಾರ ಹೆಚ್ಚಾಯಿತು. ಸದಸ್ಯರಿಗೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ನೀಡಲಾಯಿತು.

4. ಈ ಕಾಯಿದೆ ಮದ್ರಾಸ್, ಬಾಂಬೆ, ಓಂಗಾಳಗಳ ಕಾರ್ಯಕಾರಿ ಸಮಿತಿಗೆ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ನಾಲ್ಕು ಜನರನ್ನು ನೇಮಕ ಮಾಡಲಾಯಿತು. ಸರ್ಕಾರ ಲೆಫ್ಟಿನೆಂಟ್ ಗವರ್ನ‌್ರಗಳಿಗೂ ಕಾರ್ಯಕಾರಿ. ಸಮಿತಿಯನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ನೀಡಿತು.

5. ಈ ಕಾಯಿದೆಯ ಇನ್ನೊಂದು ಮಹತ್ವವೆಂದರೆ ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರಿಗೆ ಪ್ರಾತಿನಿಧ್ಯವನ್ನು ಕೊಡಲಾಯಿತು. ಗವರ್ನರ್ ಜನರಲ್‌ನ ಕಾರ್ಯಕಾರಿ ಮಂಡಳಿಗೆ ಎಸ್.ಪಿ. ಸಿಸ್ಟ ಎನ್ನುವವರನ್ನು ಕಾನೂನು ಸದಸ್ಯನನ್ನಾಗಿ ಆಯ್ಕೆ ಮಾಡಲಾಯಿತು.

6. ಈ ಕಾಯಿದೆಯ ಮರಾದೃಷ್ಟ ಅಂಶವೆಂದರೆ ಮತೀಯ ಚುನಾವಣೆ ಕ್ಷೇತ್ರವನ್ನು ಪರಿಚಯಿಸಿದ್ದು, ಅಂದರೆ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ನೀಡಲಾಯಿತು.

7. 1909ರ ಕಾಯಿದೆ ಮೊದಲ ಬಾರಿಗೆ ಚುನಾವಣಾ ವಿಧಿ ವಿಧಾನಗಳನ್ನು ಒಪ್ಪಿಕೊಂಡು ಗವರ್ನರ್ ಜನರಲ್‌ಗೆ ಚುನಾವಣೆಯ ನೀತಿ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ನೀಡಲಾಯಿತು.

8. ರಾಜಕೀಯ ಅಪರಾಧಿಗಳು ಚುನಾವಣೆಗೆ ಅನರ್ಹರಾಗಿದ್ದರು; ಆದರೆ ಸ್ಥಳೀಯ ಆಡಳಿತದ ಮುಖ್ಯಸ್ಥ ಇಂತಹವರ ಅನರ್ಹತೆಯನ್ನು ತೆಗೆದುಹಾಕಬಹುದಾಗಿತ್ತು.

1909ರ ಮಿಂಟೋ ಮಾರ್ಲೆ ಕಾಯಿದೆಯಲ್ಲಿದ್ದ ದೋಷಗಳು:

ಮಿಂಟೋ ಮಾರ್ಲೆ ಕಾಯಿದೆಯು ಸಂವಿಧಾನ ಸುಧಾರಣೆಯ ಹಲವಾರು ವಿಚಾರಗಳನ್ನು ಹೊಂದಿದ್ದರೂ ಅದು ಜನರು ನಿರೀಕ್ಷಿಸಿದ್ದ ಮಟ್ಟದಲ್ಲಿ ಇರಲಿಲ್ಲ. ಜನರ ಅತೃಪ್ತಿ, ಅಸಮಧಾನಗಳು ಹೆಚ್ಚಿ ಬ್ರಿಟಿಷ್ ವಿರೋಧಿಭಾವನೆ ಬೆಳೆಯಲು ಕಾರಣವಾಯಿತು. ಈ ಕಾಯಿದೆಯ ದೋಷಗಳೆಂದರೆ,

1. ಈ ಕಾಯಿದೆ ಪ್ರಕಾರ ಭಾರತೀಯ ಆಡಳಿತವನ್ನು ಸಂಪೂರ್ಣ ಪ್ರಜಾಸತ್ತಾತ್ಮಕ ಸ್ವರೂಪವನ್ನಾಗಿ ಬೆಳೆಸುವುದಕ್ಕೆ ಶಾಸನಸಭೆಗೆ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಕೆಲವರನ್ನು ಸಂತೋಷಪಡಿಸಿ ಭಾರತೀಯರ ಸ್ವಯಂ ಆಡಳಿತ ಬೇಡಿಕೆಯನ್ನು ಪರೋಕ್ಷವಾಗಿ ಹತ್ತಿಕ್ಕುವ ಕ್ರಮವನ್ನು ಅನುಸರಿಸಲಾಯಿತು. ವೈಯಕ್ತಿಕ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಪತ್ರಿಕಾ ಸ್ವಾತಂತ್ರ್ಯ ಅಪಹರಣದ ಶಾಸನಗಳನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಬಗ್ಗೆ ಆಶಾಭಾವನೆ ಹೊಂದಿದ್ದ ಮಂದಗಾಮಿಗಳಿಗೆ ತೀವ್ರವಾದ ನಿರಾಶೆಯನ್ನು ಉಂಟುಮಾಡಿತು. ಭಾರತೀಯ ಕಾಂಗ್ರೆಸ್ಸಿನ ನಾಯಕರು ಈ ಕಾಯಿದೆಯನ್ನು ಕಟುವಾಗಿ ಟೀಕಿಸಿದರು.

2. ಈ ಕಾಯಿದೆಯ ಮುಖ್ಯ ದೋಷವೆಂದರೆ ಲೆಜಿಸ್ಟ್ರೇಟಿವ್ ಕೌನ್ಸಿಲ್‌ನಲ್ಲಿನ ಸದಸ್ಯರನ್ನು ಆಯ್ಕೆ ಮಾಡಲು ಕೋಮುವಾರು ಪ್ರಾತಿನಿಧ್ಯವನ್ನು ನೀಡಿದ್ದು ಮುಸ್ಲಿಮರಿಗೆ ಪ್ರತ್ಯೇಕವಾದ ಚುನಾವಣಾ ಕ್ಷೇತ್ರಗಳನ್ನು ನೀಡಿದ್ದು ಹಿಂದೂ ಮುಸ್ಲಿಮರಲ್ಲಿ ವೈರತ್ವ ಭಾವನೆ ಬೆಳೆಯಲು ಕಾರಣವಾಯಿತು. ಮುಂದೆ ಭಾರತದ ರಾಜಕೀಯದಲ್ಲಿ ಕೋಮುಭಾವನೆ ಬೆಳೆಯಲು ಸುಗಮವಾದ ದಾರಿ ಮಾಡಿಕೊಟ್ಟಿತು. ಮುಂದೆ ಅಲ್ಪ ಸಂಖ್ಯಾತರಾಗಿದ್ದ ಸಿಬ್ಬರು, ಆಂಗ್ಲೋ ಇಂಡಿಯನ್ನರು, ಭಾರತೀಯ ಕ್ರೈಸ್ತರು ಮತ್ತು ದಲಿತರು ಮುಸ್ಲಿಮರಿಗೆ ನೀಡಿದ ರಾಜಕೀಯ ಸವಲತ್ತುಗಳನ್ನು ಕೊಡುವಂತೆ ಸರ್ಕಾರದ ಮೇಲೆ ಒತ್ತಾಯ ಹೇರಲಾರಂಭಿಸಿದರು.

3. ಲೆಜಿಸ್ಟ್ರೇಟಿವ್ ಕೌನ್ಸಿಲಿಗೆ ನಾಮಕರಣಗೊಂಡ ಹೆಚ್ಚು ಸದಸ್ಯರುಗಳು ಸರ್ಕಾರದ ಪರವಾಗಿದ್ದರು. ಸರ್ಕಾರದ ಪರ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಕೇಂದ್ರ ಲೆಜಿಸ್ಟ್ರೇಟಿವ್ ಮತ್ತು ಪ್ರಾಂತೀಯ ಲೆಜಿಸ್ಟ್ರೇಟಿವ್‌ ಕೌನ್ಸಲಿನಲ್ಲಿದ್ದ ಚುನಾಯಿತ ಪ್ರತಿನಿಧಿಗಳ ಪ್ರಭಾವವನ್ನು ಕಡಿಮೆ ಮಾಡಿತು. ಅಧಿಕಾರಿಗಳು ಮತ್ತು ಅಧಿಕಾರೇತರರ ಮುಂದೆ ಚುನಾಯಿತ ಪ್ರತಿನಿಧಿಗಳು ಅಲ್ಪಸಂಖ್ಯಾತರಾಗಿದ್ದರು.

4. ಈ ಕಾಯ್ದೆಯ ಇನ್ನೊಂದು ದೋಷವೆಂದರೆ ಚುನಾವಣೆಯ ವಿಧಿ ವಿಧಾನದಂತೆ ಎಲ್ಲರಿಗೂ ಮತದಾನದ ಹಕ್ಕನ್ನು ನೀಡದೇ ಕೆಲವೇ ಜನರಿಗೆ ಮಾತ್ರ ಮತದಾನದ ಹಕ್ಕನ್ನು ನೀಡಲಾಗಿತ್ತು. ಕೇಂದ್ರ ಶಾಸಕಾಂಗಕ್ಕೆ ಮತ ಚಲಾಯಿಸುವ ಅಧಿಕಾರ ಕೇಲವ 650 ಜನರಿಗೆ ಮಾತ್ರವಿತ್ತು. ಹಾಗೆಯೇ ಪ್ರಾಂತೀಯ ಸಭೆಗೆ ಕೇವಲ 200 ಜನರಿಗೆ ಮತ ಚಲಾಯಿಸುವ ಅಧಿಕಾರವಿತ್ತು. ಮುಸ್ಲಿಮರು ವಾರ್ಷಿಕವಾಗಿ 3000 ರೂಪಾಯಿಗಳನ್ನು ತೆರಿಗೆ ಕಟ್ಟಿದರೆ ಅವರಿಗೆ ಮತದಾನದ ಹಕ್ಕನ್ನು ಕೊಡಲಾಗಿತ್ತು. ಆದರೆ ಹಿಂದುಗಳು, ಪಾರ್ಸಿಗಳು, ವಾರ್ಷಿಕವಾಗಿ ಮೂರು ಲಕ್ಷ ರೂಪಾಯಿಗಳನ್ನು ತೆರಿಗೆಯಾಗಿ ಕಟ್ಟಿದರೂ ಅವರಿಗೆ ಮತದಾನದ ಹಕ್ಕನ್ನು ಕೊಟ್ಟಿರಲಿಲ್ಲ.

5. 1909ರ ಕಾಯಿದೆ ಶಾಸಕಾಂಗ ಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಶಾಸನ ಸಭೆಯನ್ನು ವಿಸ್ತರಿಸಿತೇ ವಿನಃ ಅಷ್ಟೇ ಪ್ರಮಾಣದಲ್ಲಿ ಕೌನ್ಸಿಲ್‌ಗಳ ಅಧಿಕಾರವನ್ನು ಹೆಚ್ಚಿಸಲಿಲ್ಲ. ಶಾಸಕಾಂಗದ ಶಿಫಾರಸ್ಸುಗಳನ್ನು ಗವರ್ನ‌ರ್ ಜನರಲ್ ತಿರಸ್ಕರಿಸಬಹುದಾಗಿತ್ತು. ಜೊತೆಗೆ ಶಾಸಕಾಂಗ ಸಭೆಯ ಸದಸ್ಯರಿಗೆ ಕಾನೂನು ರಚಿಸುವ ಅಧಿಕಾರವನ್ನು ಕಾಯಿದೆ ನೀಡಲಿಲ್ಲ. ಒಟ್ಟಿನಲ್ಲಿ ಈ ಕಾಯಿದೆಯ ದೋಷಗಳು ಏನೇ ಇರಲಿ ಇದು 1892ರ ಕಾಯಿದೆಗಿಂತ ಉತ್ತಮವಾಗಿತ್ತು. ಇದು ಮುಂದೆ ಜವಾಬ್ದಾರಿ ಸರ್ಕಾರದ ಬೆಳವಣಿಗೆಗೆ ನಾಂದಿಯಾಯಿತು. ಭಾರತೀಯರನ್ನು ಗವರ್ನರ್ ಜನರಲ್ ಮಂಡಳಿಗೆ ಸೇರ್ಪಡೆ ಮಾಡಲು ಅವಕಾಶ ಮಾಡಿಕೊಟ್ಟಿತು. ಅಲ್ಲವೇ? ಭಾರತದಲ್ಲಿ ಚುನಾವಣೆಯ ಪ್ರಕ್ರಿಯೆಯನ್ನು ಆರಂಭಿಸಿತು.

1919ರ ಮಾಂಟೆಗೋ ಚೆಲ್ಸ್ ಫರ್ಡ್ ಸುಧಾರಣೆಗಳು:

1909ರ ಕಾಯಿದೆಯಡಿಯಲ್ಲಿ ಜಾರಿಗೆ ಬಂದ ಸಂವಿಧಾನಾತ್ಮಕ ಸುಧಾರಣೆಗಳು ಭಾರತೀಯ ರಾಜಕೀಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಹಿಡಿಯುವಲ್ಲಿ ವಿಫಲವಾದವು. ಶ್ರೀಮತಿ ಆನಿಬೆಸೆಂಟ್ ಮತ್ತು ಬಾಲಗಂಗಾಧರ ತಿಲಕರು ಹೋಂರೂಲ್ ಚಳುವಳಿಯನ್ನು ಆರಂಭಿಸಿದರು.

ಪ್ರಥಮ ಮಹಾಯುದ್ಧವು 1914ರಲ್ಲಿ ಆರಂಭವಾಯಿತು. ಬ್ರಿಟಿಷ್ ಪಡೆಗಳು ಟರ್ಕಿಯ ವಿರುದ್ಧ ಮೆಸಪಟೋಮಿಯಾದಲ್ಲಿ ಸೋಲನ್ನು ಅನುಭವಿಸಿದ ಮೇಲೆ ಯುದ್ಧಕ್ಕೆ ಭಾರತೀಯರ ಸಹಕಾರವನ್ನು ಪಡೆಯಲು ಬ್ರಿಟಿಷ್ ಪಾರ್ಲಿಮೆಂಟ್ ಸೆಕ್ರೆಟರಿ ಆಫ್ ಸ್ಟೇಟ್‌ಗೆ ಸಂವಿಧಾನ ಸುಧಾರಣೆಯ ಭರವಸೆಯನ್ನು ಕೊಟ್ಟು ಭಾರತೀಯರಿಂದ ಯುದ್ಧಕ್ಕೆ ಸಹಾಯ ಪಡೆಯಲು ಆಜ್ಞೆ ಹೊರಡಿಸಿತು. ಸೆಕ್ರೆಟರಿಯಾಗಿದ್ದ ಮಾಂಟೆಗೋ 20ನೇ ಆಗಸ್ಟ್ 1917ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಮಾತನಾಡುತ್ತಾ ಆಡಳಿತದ ಎಲ್ಲಾ ರಂಗಗಳಲ್ಲಿ ಭಾರತೀಯರು ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು ಮತ್ತು ಸ್ವಯಂ ಆಡಳಿತದ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟು, ಜವಾಬ್ದಾರಿಯುತ ಸರ್ಕಾರವನ್ನು ರಚಿಸುವುದಾಗಿ ಭರವಸೆ ನೀಡಿದನು.

ಲಾರ್ಡ್ ಮಾಂಟೆಗೋ ಮತ್ತು ವೈಸ್‌ರಾಯ್ ಚೆಲ್ಸ್ ಫರ್ಡ್ ಭಾರತದಾದ್ಯಂತ ಪ್ರವಾಸ ಕೈಗೊಂಡು ಭಾರತೀಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ತಯಾರಿಸಿದರು. ಇದು ಮಾಂಟೆಗೋ ಚೆಲ್ಫ್ ಫರ್ಡ್ ವರದಿ ಎಂದು ಹೆಸರಾಯಿತು. 1919ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಈ ವರದಿಯನ್ನು ಜಾರಿಗೆ ತರಲಾಯಿತು.

ಕಾಯಿದೆಯ ಉದ್ದೇಶಗಳು :

1. ಭಾರತವು ಬ್ರಿಟಿಷ್ ಸಾಮ್ರಾಜ್ಯದ ಅವಿಭಾಜ್ಯ ಅಂಗವಾಗಿ ಉಳಿಯಬೇಕೆಂಬ ಉದ್ದೇಶವನ್ನು ಹೊಂದಿತ್ತು.

2. ಜವಾಬ್ದಾರಿ ಸರ್ಕಾರವನ್ನು ರಚಿಸುವುದು.

3. ಭಾರತೀಯರನ್ನು ಆಡಳಿತದ ಎಲ್ಲಾ ವಿಭಾಗಗಳಿಗೂ ಸೇರಿಸಿಕೊಳ್ಳುವುದು.

4. ಸ್ವಯಂ ಆಡಳಿತವನ್ನು ಬೆಳೆಸುವ ಉದ್ದೇಶವನ್ನು ಹೊಂದಿತ್ತು.

ಕಾಯಿದೆಯ ಮುಖ್ಯಾಂಶಗಳು :

1919ರ ಕಾಯಿದೆ ಕೇಂದ್ರ ಹಾಗೂ ಪ್ರಾಂತೀಯ ಸರ್ಕಾರಗಳ ನಡುವಿನ ಕಾರ್ಯಗಳನ್ನು ಸ್ಪಷ್ಟವಾಗಿ ವಿಭಾಗಿಸಿತು. ಈ ಕಾಯಿದೆ ಭಾರತಕ್ಕೆ ಹೈಕಮಿಷನ‌ರ್ ಒಬ್ಬನನ್ನು ನೇಮಿಸಲು ವ್ಯವಸ್ಥೆ ಮಾಡಿತು. ಅಲ್ಲದೆ ಇಂಡಿಯನ್ ಕೌನ್ಸಿಲ್‌ನಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿತು. ಕೌನ್ಸಿಲ್ ಗರಿಷ್ಠ 12 ಜನ ಸದಸ್ಯರನ್ನು ಹೊಂದಿರಬೇಕಾಗಿತ್ತು.

ಇಬ್ಬರು ಭಾರತೀಯ ಸದಸ್ಯರನ್ನು ನೇಮಿಸುತ್ತಿದ್ದುದರ ಬದಲಿಗೆ 3 ಜನರನ್ನು ನೇಮಕ ಮಾಡಲು ಅಧಿಕಾರ ಕೊಡಲಾಯಿತು. ಕೌನ್ಸಿಲ್ಲಿನ ಅಧಿಕಾರವಧಿಯನ್ನು 7 ವರ್ಷದಿಂದ 5 ವರ್ಷಗಳಿಗೆ ಇಳಿಸಲಾಯಿತು. ಕೌನ್ಸಿಲ್ಲಿನ ಸದಸ್ಯರ ಸಂಬಳವನ್ನು ವಾರ್ಷಿಕವಾಗಿ 1000 ಪೌಂಡ್‌ಗಳಿಂದ 1200 ಪೌಂಡ್‌ಗಳಿಗೆ ಏರಿಸಲಾಯಿತು.

ಕೇಂದ್ರ ಕಾರ್ಯಕಾರಿ ಸಮಿತಿ ಅಥವಾ ಗವರ್ನರ್ ಜನರಲ್ ಮಂಡಳಿ :

ಚಕ್ರವರ್ತಿ ಭಾರತದ ಗವರ್ನರ್ ಜನರಲ್‌ನನ್ನು ಮತ್ತು ಮಂಡಳಿಯ (ಕೌನ್ಸಿಲಿನ) ಸದಸ್ಯರನ್ನು ನೇಮಿಸಿದ. ಗವರ್ನರ್ ಜನರಲ್ ಮಂಡಳಿಯಲ್ಲಿ ಭಾರತೀಯರ ಸಂಖ್ಯೆಯನ್ನು 2 ರಿಂದ 3ಕ್ಕೆ ಏರಿಸಲಾಯಿತು. ಕಾರ್ಯಕಾರಿ ಸಮಿತಿಯಲ್ಲಿ ಗವರ್ನರ್ ಜನರಲ್ ಅತ್ಯಂತ ಮುಖ್ಯ ಮತ್ತು ಹೆಚ್ಚು ಅಧಿಕಾರವನ್ನು ಹೊಂದಿದ್ದ ಸದಸ್ಯನಾಗಿದ್ದ, ಭಾರತದ ನಾಗರಿಕ ಮತ್ತು ಮಿಲಿಟರಿ ಅಧಿಕಾರವು ಸಂಪೂರ್ಣವಾಗಿ ಗವರ್ನರ್ ಜನರಲ್ ಮಂಡಳಿಯ ಕೈಯಲ್ಲಿತು. ಗವರ್ನರ್ ಜನರಲ್‌ಗೆ ಮಂಡಳಿಯ ತೀರ್ಮಾನವನ್ನು ತಿರಸ್ಕರಿಸುವ ಅಧಿಕಾರವಿತ್ತು. ಗವರ್ನರ್ ಜನರಲ್‌ನನ್ನು ಭಾರತದಲ್ಲಿ ರಾಜನ ಪ್ರತಿನಿಧಿ ಎಂದು ಭಾವಿಸಿ ಉನ್ನತ ಗೌರವದ ಸ್ಥಾನವನ್ನು ಕೊಡಲಾಯಿತು. ಸೆಕ್ರೆಟರಿ ಆಫ್ ಸ್ಟೇಟಿನ ಜೊತೆಯಲ್ಲಿ ಗವರ್ನರ್ ಜನರಿದು ನೇರವಾಗಿ ಸಂಬಂಧವನ್ನು ಹೊಂದಿದ್ದನು. ಗವರ್ನರ್ ಜನರಲ್‌ಗೆ ಕೇಂದ್ರ ಶಾಸಕಾಂಗದ ನಿರ್ಣಯಗಳನ್ನು ತಿರಸ್ಕರಿಸುವ ಅಧಿಕಾರವಿತ್ತು. ಜೊತೆಗೆ ಸಭೆಯನ್ನು ವಿಸರ್ಜಿಸುವ ಮತ್ತು ಸಭೆಯ ಅವಧಿಯನ್ನು ಮುಂದುವರೆಸುವ ಅಧಿಕಾರವಿತ್ತು.

ಕೆಲವೊಮ್ಮೆ ಶಾಸಕಾಂಗ ಕೆಲವು ಮಸೂದೆಯನ್ನು ತಿರಸ್ಕರಿಸಿದರೆ ಆ ಮಸೂದೆ ದೇಶದ ಆಡಳಿತದ ದೃಷ್ಟಿಯಿಂದ ಅವಶ್ಯಕವಾಗಿದ್ದರೆ ಅದನ್ನು ಗವರ್ನರ್ ಜನರಲ್ ಜಾರಿಗೆ ತರಬಹುದಾಗಿತ್ತು. ಇದು ಸಮರ್ಥನಾಧಿಕಾರ ಪ್ರಯೋಗ’ ಎಂದು ಜನಪ್ರಿಯವಾಗಿದೆ. ಗವರ್ನರ್ ಜನರಲ್‌ಗೆ ದೇಶಕ್ಕೆ ಬೇಕಾಗುವ ಕಾನೂನನ್ನು ರಚಿಸುವ ಅಧಿಕಾರವನ್ನು ಕಾಯಿದೆ ನೀಡಿತ್ತು. ಸಾರ್ವಜನಿಕ ಸಾಲ, ಕಂದಾಯ, ಧಾರ್ಮಿಕ ವಿಚಾರ, ಸೈನ್ಯ, ವಿದೇಶಾಂಗ ಸಂಬಂಧ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಶಾಸಕಾಂಗ ಯಾವುದೇ ಮಸೂದೆಯನ್ನು ಮಂಡಿಸಬೇಕಾದರೆ ಗವರ್ನರ್ ಜನರಲ್‌ನ ಒಪ್ಪಿಗೆ ಪಡೆಯಬೇಕಾಗಿತ್ತು.

ಕೇಂದ್ರ ಶಾಸಕಾಂಗ :

1919ರ ಕಾಯಿದೆ ಕೇಂದ್ರ ಮತ್ತು ಪ್ರಾಂತೀಯ ಶಾಸನ ಸಭೆಗಳನ್ನು ವಿಭಾಗಿಸಿ ಅವುಗಳ ಕಾರ್ಯವ್ಯಾಪ್ತಿಯನ್ನು ನಿಗಧಿಪಡಿಸಿತು. ಕೇಂದ್ರ ಶಾಸಕಾಂಗದಲ್ಲಿ ಹಲವಾರು ಮಾರ್ಪಾಡುಗಳನ್ನು ಜಾರಿಗೆ ತಂದಿತು. ಕೇಂದ್ರ ಶಾಸಕಾಂಗದಲ್ಲಿ ದ್ವಿಸದನ (ಬೈ ಕ್ಯಾಮರಲ್) ಪದ್ದತಿಯನ್ನು ಜಾರಿಗೆ ತಂದು ಕೇಂದ್ರ ಶಾಸಕಾಂಗದಲ್ಲಿ ಸ್ಟೇಟ್‌ಕೌನ್ಸಿಲ್ ಮತ್ತು ಶಾಸಕಾಂಗ ಸಭೆ ಎಂಬ ಎರಡು ಸದನಗಳು ಬೆಳಕಿಗೆ ಬಂದವು. ಕೌನ್ಸಿಲ್ ಆಫ್ ಸ್ಟೇಟ್ 60 ಜನ ಸದಸ್ಯರನ್ನು ಹೊಂದಿತ್ತು. ಇದು ಪುನರ್ ಪರಿಶೀಲನಾ ಸದನವಾಗಿತ್ತು. 34 ಜನ ಸದಸ್ಯರನ್ನು ಚುನಾಯಿಸಲಾಗುತ್ತಿತ್ತು. 26 ಜನ ಸದಸ್ಯರನ್ನು ನಾಮಕರಣ ಮಾಡಲಾಗುತ್ತಿತ್ತು. ಈ ಸಭೆಯ ಕಾರ್ಯಾವಧಿ 5 ವರ್ಷಗಳು. ಕೆಳಸದನ ಅಥವಾ ಶಾಸನ ಸಭೆ 145 ಸದಸ್ಯರನ್ನು ಹೊಂದಿರಬೇಕಾಗಿತ್ತು. 105 ಜನರು ಚುನಾಯಿತ ಪ್ರತಿನಿಧಿಗಳು, 26 ಜನ ನಾಮಕರಣಗೊಂಡ ಅಧಿಕಾರಿಗಳು ಮತ್ತು 14 ಜನ ನಾಮಕರಣಗೊಂಡ ಅಧಿಕಾರೇತರ ಸದಸ್ಯರಾಗಿರುತ್ತಿದ್ದರು. ಈ ಸದನದ ಕಾರ್ಯಾವಧಿ 3 ವರ್ಷಗಳಾಗಿದ್ದು ಆಸ್ತಿಯ ಆಧಾರದ ಮೇಲೆ ಈ ಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಮತದಾನದ ಹಕ್ಕನ್ನು ನೀಡಲಾಗುತ್ತಿತ್ತು.

ಪ್ರಾಂತೀಯ ಸರ್ಕಾರ:

ಪ್ರಾಂತೀಯ ಕಾರ್ಯಾಂಗ : 1919ರ ಕಾಯಿದೆಯ ಪ್ರಕಾರ ಪ್ರತಿಯೊಂದು ಪ್ರಾಂತ್ಯಕ್ಕೂ ಚಕ್ರವರ್ತಿಯಿಂದ ನೇಮಕಗೊಂಡ ಗವರ್ನರ್ ಇರುತ್ತಿದ್ದ. ಇವನು ಪ್ರಾಂತ್ಯದ ಮುಖ್ಯಸ್ಥನಾಗಿರುತ್ತಿದ್ದ. ಈ ಕಾಯಿದೆ ದ್ವಿ ಪ್ರಭುತ್ವವನ್ನು ಜಾರಿಗೆ ತಂದಿತು. ಸರ್ಕಾರದ ಆಡಳಿತವನ್ನು ಕಾಯ್ದಿಟ್ಟ ಮತ್ತು ವರ್ಗಾಯಿಸಲ್ಪಟ್ಟ ವಿಷಯಗಳೆಂದು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಕಾಯ್ದಿಟ್ಟ ಅಥವಾ ಮೀಸಲು ವಿಷಯಗಳ ಆಡಳಿತವನ್ನು ಗವರ್ನರ್ ತನ್ನ ಮಂಡಳಿಯ ಸದಸ್ಯರ ಸಹಾಯದಿಂದ ನಡೆಸಬೇಕಾಗಿತ್ತು. ವರ್ಗಾಯಿಸಲ್ಪಟ್ಟ ವಿಷಯಗಳನ್ನು ಗವರ್ನರ್ ಮಂತ್ರಿಮಂಡಲದ ಸಹಾಯದಿಂದ ನಡೆಸಬೇಕಾಗಿತ್ತು. ಇವನು ಗವರ್ನರ್ ಜನರಲ್‌ನಿಗೆ ಜವಾಬ್ದಾರನಾಗುತ್ತಿದ್ದ. ಮಂತ್ರಿಗಳು ಗೌರರ್‌ಗೆ ಜವಾಬ್ದಾರರಾಗಿರುತ್ತಿದ್ದರು. ಗವರ್ನರ್ ಪ್ರಾಂತ್ಯದಲ್ಲಿ ಹೆಚ್ಚು ಅಧಿಕಾರವನ್ನು ಹೊಂದಿದ್ದು ಕಾಯ್ದಿಟ್ಟ ಮತ್ತು ವರ್ಗಾಯಿಸಲ್ಪಟ್ಟ ವಿಚಾರಗಳ ಅಂತಿಮ ಅಧಿಕಾರ ಗವರ್ನ‌್ರಗೆ ಇತ್ತು. ಗವರ್ನರ್ ಪ್ರಾಂತೀಯ ಶಾಸನ ಸಭೆಯಲ್ಲಿಯೂ ಹೆಚ್ಚು ಅಧಿಕಾರಿಗಳನ್ನು ಹೊಂದಿದ್ದು ಪ್ರಾಂತೀಯ ಶಾಸಕಾಂಗ ಸಭೆ ಅವಧಿ ಮುಗಿಯುವುದಕ್ಕೆ ಮೊದಲೇ ಅದನ್ನು ವಿಸರ್ಜಿಸುವ ಅಧಿಕಾರ ಗವರ್ನಗೆ್ರಗೆ ಇತ್ತು. ಅಲ್ಲದೆ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಕಾಯಿದೆಗಳನ್ನು ಜಾರಿಗೆ ತರುವ ಅಧಿಕಾರವಿತ್ತು. ಇವನು ಗವರ್ನರ್ ಜನರಲ್ಲಿನ ಆಜ್ಞೆಯನ್ನು ಪಾಲಿಸಬೇಕಾಗಿತ್ತು.

ಪ್ರಾಂತೀಯ ಶಾಸಕಾಂಗ :

ಪ್ರಾಂತೀಯ ಶಾಸಕಾಂಗ ಸಭೆಗಳು ಏಕಸದನವನ್ನು ಹೊಂದಿದ್ದವು. ಇದನ್ನು ಪ್ರಾಂತೀಯ ಶಾಸಕಾಂಗ ಸಭೆ ಎಂದು ಕರೆಯಲಾಗಿತ್ತು. ಈ ಸಭೆಯ ಸದಸ್ಯರ ಸಂಖ್ಯೆಯು ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಭಿನ್ನವಾಗಿತ್ತು. ಅಸ್ಸಾಂ ಅತ್ಯಂತ ಕಡಿಮೆ ಸದಸ್ಯರನ್ನು ಹೊಂದಿದ್ದರೆ, ಬಂಗಾಳದಲ್ಲಿ 139 ಸದಸ್ಯರನ್ನು ಹೊಂದಿದ್ದು ಶಾಸಕಾಂಗ ಸಭೆ ದೊಡ್ಡದಾಗಿತ್ತು.

ಶೇಕಡ 70 ಭಾಗದಷ್ಟು ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗುತ್ತಿದ್ದರು. ಶಾಸನ ಸಭೆ ಪ್ರಾಂತೀಯ ಶಾಸನ ಸಭೆಗಳ ಚುನಾವಣೆಯಲ್ಲಿ ಭಾಗವಹಿಸಲು ಕೋಮುವಾರು ಮತ ಕ್ಷೇತ್ರಗಳನ್ನು ಮುಸ್ಲಿಮರಿಗೆ, ಸಿಬ್ಬರಿಗೆ, ಆಂಗ್ಲೋ ಇಂಡಿಯನ್ನರು ಮತ್ತು ಯೂರೋಪಿಯನ್ನರಿಗೆ ನೀಡಲಾಯಿತು. ಶಾಸನ ಸಭೆಯ ಅಧಿಕಾರಗಳು ಈ ಕಾಯಿದೆಯಿಂದ ಹೆಚ್ಚಿದವು. 

ಪ್ರಾಂತಿಯ ಶಾಸನ ಸಭೆಗಳಿಗೆ ಕಾನೂನುಗಳನ್ನು ಮಾಡುವ ಅಧಿಕಾರ ಕೊಡಲಾಯಿತು. ಪ್ರಾಂತೀಯ ಸಭೆಗಳು ಯಾವುದೇ ಕಾಯಿದೆಗಳನ್ನು ಜಾರಿಗೆ ತರುವುದಕ್ಕೆ ಮೊದಲು ಗವರ್ನರ್ ಜನರಲ್ಲಿನ ಗಮನಕ್ಕೆ ತರಬೇಕಾಗಿತ್ತು. ಗವರ್ನರ್ ಪ್ರಾಂತೀಯ ಶಾಸಕಾಂಗ ಸಭೆಯ ಅಧ್ಯಕ್ಷನನ್ನು ನೇಮಿಸುತ್ತಿದ್ದನು. ಪ್ರಾಂತ್ಯಕ್ಕೆ ಸಂಬಂಧಿಸಿದ ಯಾವುದೇ ಮಸೂದೆಯನ್ನು ಅಂಗೀಕರಿಸುವ ಅಧಿಕಾರವನ್ನು ಶಾಸಕಾಂಗ ಸಭೆಗೆ ನೀಡಲಾಗಿತ್ತು. ಕೆಲವೊಂದು ಮಸೂದೆಗಳನ್ನು ಮಂಡಿಸುವ ಮೊದಲು ಗವರ್ನ್ರ ಒಪ್ಪಿಗೆಯನ್ನು ಪಡೆಯಬೇಕಾಗಿತ್ತು.

1919ರ ಕಾಯಿದೆ ಕೇಂದ್ರದ ಆಯವ್ಯಯದಿಂದ ಪ್ರಾಂತ್ಯಗಳ ಆಯವ್ಯಯವನ್ನು ಬೇರ್ಪಡಿಸಿತು. ಈ ಕಾಯಿದೆ ಲೋಕಸೇವಾ ಆಯೋಗವನ್ನು ಸ್ಥಾಪಿಸಲು ಅನುಮತಿ ನೀಡಿತು. ಈ ಕಾಯಿದೆಯಡಿಯಲ್ಲಿ ಜಾರಿಗೆ ಬಂದ ಸುಧಾರಣೆಗಳನ್ನು ಪರಾಮರ್ಶಿಸಲು 10 ವರ್ಷಗಳ ನಂತರ ಒಂದು ಆಯೋಗವನ್ನು ರಚಿಸಲು ಅನುಮತಿ ನೀಡಿತು. ಒಟ್ಟಿನಲ್ಲಿ 1919ರ ಕಾಯಿದೆ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಮಹತ್ವವಾದದ್ದು, ಬ್ರಿಟಿಷ್ ಸರ್ಕಾರ ಮೊದಲ ಬಾರಿಗೆ ಸಂವಿಧಾನಾತ್ಮಕ ಬೆಳವಣಿಗೆಯ ಧೈಯವನ್ನಿಟ್ಟುಕೊಂಡು ಜವಾಬ್ದಾರಿ ಸರ್ಕಾರವನ್ನು ರಚಿಸಿತು. ಈ ಕಾಯಿದೆಯ ಇನ್ನೊಂದು ಮಹತ್ವ ಅಂಶವೆಂದರೆ ದ್ವಿಪ್ರಭುತ್ವವನ್ನು ಸ್ಥಾಪಿಸಿದ್ದು.

1919 ರ ಕಾಯಿದೆಯ ದೋಷಗಳು:

1. ಶಾಸನ ಸಭೆಗಳಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದಿದ್ದು ದೋಷಯುಕ್ತವಾಗಿತ್ತು.

2. ಪ್ರಾಂತೀಯ ಸಭೆಗಳಲ್ಲಿ ಬಳಕೆಗೆ ಬಂದ ಕಾಯ್ದಿಟ್ಟ ಮತ್ತು ವರ್ಗಾಯಿತ ವಿಷಯಗಳ ಇಲಾಖೆಗಳನ್ನು ಸರಿಯಾಗಿ ವಿಂಗಡಿಸಲಿಲ್ಲ.

3. ಪ್ರಾಂತೀಯ ಮಂತ್ರಿಮಂಡಲದ ಮಂತ್ರಿಗಳ ಸ್ಥಿತಿ ಶೋಚನೀಯವಾಗಿತ್ತು.

4. ಕೇಂದ್ರ ಶಾಸಕಾಂಗ ಮತ್ತು ಪ್ರಾಂತೀಯ ಶಾಸಕಾಂಗಗಳ ಅಧಿಕಾರ ಹೆಚ್ಚಾಯಿತು. ಆದರೆ ಶಾಸಕಾಂಗ ಮಂಡಿಸಿವ ಮಸೂದೆಗಳನ್ನು ವೈಸ್‌ರಾಯ್ ಮತ್ತು ಗವರ್ನರ್ ತಿರಸ್ಕರಿಸಬಹುದಾಗಿತ್ತು.

1935ರ ಭಾರತ ಸರ್ಕಾರದ ಕಾಯಿದೆ

1935ರ ಕಾಯಿದೆಯು ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಭಾರತದ ಹೊಸ ಸಂವಿಧಾನಕ್ಕೆ ಒಂದು ನಿರ್ಧಿಷ್ಟ ಸ್ವರೂಪವನ್ನು ನೀಡಿತು. ಭಾರತದ ಕೋಮುವಾದ, ರಾಷ್ಟ್ರೀಯತೆ, ಬ್ರಿಟಿಷ್ ಸಾಮ್ರಾಜ್ಯಶಾಹಿ, ಭಾರತೀಯ ರಾಜರು ಈ ನಾಲ್ಕು ಭಿನ್ನ ಅಂಶಗಳ ಪ್ರೇರಣೆಯಿಂದ 1935ರ ಕಾಯಿದ ರೂಪುಗೊಂಡಿತು. ಈ ಕಾಯಿದೆ ಅತ್ಯಂತ ದೀರ್ಘವಾದುದು.

1935ರ ಕಾಯಿದೆ ಜಾರಿಗೆ ಬರಲು ಕಾರಣಗಳು

1. 1919ರ ಕಾಯಿದೆ ಭಾರತೀಯ ಆಶೋತ್ತರಗಳನ್ನು ಪೂರೈಸಲಿಲ್ಲ ಮತ್ತು ದ್ವಿ ಪ್ರಭುತ್ವವನ್ನು ಪ್ರಾಂತ್ಯಗಳಲ್ಲಿ ಜಾರಿಗೆ ತಂದದ್ದು ಹಲವಾರು ದುಷ್ಪರಿಣಾಮಗಳನ್ನುಂಟುಮಾಡಿತು.

2. ರೌಲತ್ ಕಾಯಿದೆಯನ್ನು ಜಾರಿಗೆ ತಂದುದರಿಂದ ಜಲಿಯನ್ ವಾಲಾಬಾಗ್‌ನಂತಹ ದುರಂತಕ್ಕೆ ಕಾರಣವಾಯಿತು. ಇದರಿಂದ ಭಾರತೀಯರು ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಲಾರಂಭಿಸಿದರು.

3. 1927 ರಲ್ಲಿ ಸರ್ಕಾರ ನೇಮಿಸಿದ ಸೈಮನ್ ಆಯೋಗ ಪ್ರಾಂತ್ಯಗಳಲ್ಲಿ ದ್ವಿಪ್ರಭುತ್ವವನ್ನು ರದ್ದು ಮಾಡಿ ಪ್ರಾಂತೀಯ ಸ್ವಾಯತ್ತತೆಯನ್ನು ನೀಡಬೇಕೆಂದು ಶಿಫಾರಸು ಮಾಡಿತು.

4. ಸಂವಿಧಾನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಬ್ರಿಟಿಷ್ ಪ್ರಧಾನಿ ರ್ಯಾಮ್‌ ಮ್ಯಾಕ್ ಡೊನಾಲ್ಡ್ ದುಂಬು ಮೇಜಿನ ಸಮ್ಮೇಳನವನ್ನು ಆಯೋಜಿಸಿದ. ಮೂರನೇ ದುಂಡುಮೇಜಿನ ಪರಿಷತ್ತಿನಲ್ಲಿ ಭಾರತದಲ್ಲಿ ಸಂಯುಕ್ತ ಮಾದರಿಯ ಸರ್ಕಾರವನ್ನು ಹೊಂದಬೇಕೆಂದು ಯೋಜಿಸಲಾಯಿತು. ಮೇಲಿನ ಈ ಎಲ್ಲಾ ಅಂಶಗಳು 1935ರ ಕಾಯಿದೆ ಜಾರಿಗೆ ಬರಲು ಕಾರಣವಾದವು.

1935ರ ಕಾಯಿದೆಯ ಲಕ್ಷಣಗಳು :

1. ಪ್ರಾಂತೀಯ ಸ್ವಾಯತ್ತತೆ

2. ಅಖಿಲ ಭಾರತ ಒಕ್ಕೂಟದ ಸ್ಥಾಪನೆ

3.ಕೇಂದ್ರದಲ್ಲಿ ದ್ವಿ ಸರ್ಕಾರ ಸ್ಥಾಪನೆ

4. ಫೆಡರಲ್ ನ್ಯಾಯಾಲಯದ ಸ್ಥಾಪನೆ

5. ಇಂಡಿಯನ್ ಕೌನ್ಸಲಿನ ನಿಷೇಧ

6. ಬರ್ಮಾವನ್ನು ಭಾರತದಿಂದ ಪ್ರತ್ಯೇಕಿಸುವುದು.

ಕಾಯಿದೆಯ ಮುಖ್ಯಾಂಶಗಳು:

1. 1935ರ ಕಾಯಿದೆ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶಮಾಡಿಟ್ಟಿತು. ಈ ಒಕ್ಕೂಟ ಭಾರತದಲ್ಲಿನ ಬ್ರಿಟಿಷ್ ಪ್ರಾಂತ್ಯಗಳು, ದೇಶಿಯ ಸಂಸ್ಥಾನಗಳು, ಆಶ್ರಿತ ರಾಜ್ಯಗಳನ್ನೊಳಗೊಂಡ ಒಂದು ಒಕ್ಕೂಟವನ್ನು ಸ್ಥಾಪಿಸಲಾಯಿತು. ಈ ಒಕ್ಕೂಟವನ್ನು ಸ್ವ ಇಚ್ಛೆಯಿಂದ ಸೇರಬಹುದಾಗಿತ್ತು.

2. 1935ರ ಕಾಯಿದೆ ಕೇಂದ್ರದಲ್ಲಿ ದ್ವಿಪ್ರಭುತ್ವವನ್ನು ಸ್ಥಾಪಿಸಿತು. ದ್ವಿಪ್ರಭುತ್ವವನ್ನು 1919ರ ಶಾಸನದಂತೆ ಪ್ರಾಂತೀಯ ಶಾಸನ ಸಭೆಗಳಲ್ಲಿ ದ್ವಿಮುಖ ಪದ್ದತಿಯನ್ನು ರದ್ದುಪಡಿಸಿ ಕೇಂದ್ರ ಕಾರ್ಯಾಂಗವನ್ನು ಜಾರಿಗೆ ತರಲಾಯಿತು. ಕೇಂದ್ರ ಕಾರ್ಯಾಂಗದಲ್ಲಿ ಮೀಸಲಿಟ್ಟ ಮತ್ತು ವರ್ಗಾಯಿಸಲ್ಪಟ್ಟ ವಿಷಯಗಳೆಂದು ವಿಭಾಗ ಮಾಡಲಾಯಿತು. ಕಾಯ್ದಿಟ್ಟ ಆಡಳಿತವನ್ನು ಗವರ್ನರ್ ಜನರಲ್ ಅಥವಾ ವೈಸ್‌ರಾಯ್ ಮಂಡಳಿಯ ಸದಸ್ಯರು ನಡೆಸುತ್ತಿದ್ದರು. ವರ್ಗಾಯಿಸಲ್ಪಟ್ಟ ವಿಷಯಗಳ ಆಡಳಿತವನ್ನು ಗವರ್ನರ್ ಜನರಲ್ ಪ್ರಾಂತ್ಯಗಳ ಸಹಾಯದಿಂದ ನಡೆಸುತ್ತಿದ್ದನು. ಮಂತ್ರಿಗಳು ಫೆಡರಲ್ ಶಾಸಕಾಂಗಕ್ಕೆ ಜವಾಬ್ದಾರರಾಗಿದ್ದರು. ಗವರ್ನರ್ ಜನರಲ್‌ ಹೆಚ್ಚು ಅಧಿಕಾರವನ್ನು ಪಡೆದಿದ್ದ.

3. ಸಂಯುಕ್ತ ಶಾಸಕಾಂಗ ದ್ವಿಸದನಗಳನ್ನು ಹೊಂದಿರಬೇಕಿತ್ತು. ಕೌನ್ಸಿಲ್ ಆಫ್‌ ಸ್ಟೇಟ್ ಮತ್ತು ಫೆಡರಲ್ ಅಸೆಂಬ್ಲಿ ಎಂಬ ಎರಡು ಸದನಗಳಿದ್ದವು. ಫೆಡರಲ್ ಅಸೆಂಬ್ಲಿಯಲ್ಲಿ ಬ್ರಿಟಿಷ್ ಇಂಡಿಯಾದ 250 ಸದಸ್ಯರು ಮತ್ತು ಭಾರತದ ರಾಜ್ಯಗಳಿಂದ 125 ಸದಸ್ಯರನ್ನು ಹೊಂದಿರಬೇಕಾಗಿತ್ತು. ಫೆಡರಲ್ ಅಸೆಂಬ್ಲಿಯ ಕಾರ್ಯಾವಧಿ 5 ವರ್ಷಗಳು. ಕೌನ್ಸಿಲ್ ಆಫ್ ಸ್ಟೇಟ್ ಮೇಲ್ಮನೆಯಾಗಿದ್ದು ಖಾಯಂ ಸದನವಾಗಿತ್ತು. /ಈ ಭಾಗದಷ್ಟು ಸದಸ್ಯರು ಪ್ರತಿ ಮೂರು ವರ್ಷಕ್ಕೊಮ್ಮೆ ನಿವೃತ್ತರಾಗಬೇಕಿತ್ತು. ಗವರ್ನರ್ ಜನರಲ್ ಅಲ್ಪಸಂಖ್ಯಾತ ಜನಾಂಗಗಳು, ನಿಮ್ನ ವರ್ಗಗಳು ಮತ್ತು ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯವನ್ನು ಕೊಡುವ ಸಲುವಾಗಿ 6 ಜನರನ್ನು ಗವರ್ನರ್ ನಾಮಕರಣ ಮಾಡುವ ಅಧಿಕಾರ ಹೊಂದಿದ್ದನು. ಯಾವುದೇ ಮಸೂದೆ ಕಾಯಿದೆಯಾಗುವುದಕ್ಕೆ ಮೊದಲು ಗವರ್ನರ್ ಜನರಲ್ಲಿನ ಒಪ್ಪಿಗೆ ಪಡೆಯಬೇಕಾಗಿತ್ತು.

4. ಈ ಕಾಯಿದೆಯ ಇನ್ನೊಂದು ಮಹತ್ವದ ಅಂಶವೆಂದರೆ ಪ್ರಾಂತೀಯ ಸ್ವಾಯತ್ತತೆಯನ್ನು ಕೊಟ್ಟಿದ್ದು. ಈ ಅವಧಿಯಲ್ಲಿ ಬೊಂಬಾಯಿ ಪ್ರಾಂತ್ಯದಿಂದ ಪ್ರತ್ಯೇಕಿಸಲಾದ ಒರಿಸ್ಸಾ ಮತ್ತು ಸಿಂಧೂಗಳು ಹೊಸ ಪ್ರಾಂತ್ಯಗಳಾಗಿ ರಚನೆಗೊಂಡವು. ಬರ್ಮಾವನ್ನು ಭಾರತದಿಂದ ಪ್ರತ್ಯೇಕಿಸಿತು. ಒಟ್ಟು ಹನ್ನೊಂದು ಪ್ರಾಂತ್ಯಗಳಲ್ಲಿ ಗವರ್ನ‌್ರಗಳು ಆಳ್ವಿಕೆ ನಡೆಸುತ್ತಿದ್ದರು ಮತ್ತು 6 ಜನ ಚೀಫ್ ಕಮಿಷನರುಗಳಿಂದ ಆಡಳಿತ ನಡೆಸುತ್ತಿದ್ದ ಪ್ರದೇಶಗಳಿದ್ದವು.

5. ಪ್ರಾಂತ್ಯಗಳಲ್ಲಿ ದ್ವಿಸಭೆ ಅಥವಾ ದ್ವಿಸರ್ಕಾರ ಪದ್ಧತಿಯನ್ನು ರದ್ದುಗೊಳಿಸಿ ಪ್ರಾಂತ್ಯಗಳ ಸ್ವಾಯತ್ರತೆಯನ್ನು ಜಾರಿಗೆ ತರಲಾಯಿತು. ಕಾಯ್ದಿಟ್ಟ ಅಥವಾ ಮೀಸಲು ವಿಷಯ ಮತ್ತು ವರ್ಗಾಯಿಸಲ್ಪಟ್ಟ ವಿಷಯಗಳನ್ನು ರದ್ದು ಮಾಡಲಾಯಿತು. ಇಡೀ ಪ್ರಾಂತ್ಯಗಳ ಆಡಳಿತವನ್ನು ಗವರ್ನ‌್ರ ನಿಂದ ನೇಮಕಗೊಂಡ ಮಂತ್ರಿಮಂಡಲ ನೋಡಿಕೊಳ್ಳುತ್ತಿತ್ತು. ಗವರ್ನರನು ಶಾಸಕಾಂಗ ಸಭೆಯಲ್ಲಿ ಬಹುಮತ ಪಡೆದ ಪಕ್ಷದ ಸದಸ್ಯರನ್ನು ಮಂತ್ರಿಯನ್ನಾಗಿ ನೇಮಿಸುತ್ತಿದ್ದ. ಕೆಲವು ರಾಜ್ಯಗಳಲ್ಲಿ ವಿಧಾನ ಪರಿಷತ್ತು (ಮೇಲ್ಮನೆ)ಗಳು ಇದ್ದವು. ಹೆಚ್ಚಿನ ಪ್ರಾಂತ್ಯಗಳಲ್ಲಿ ಏಕಸದನವಿತ್ತು. ಈ ಶಾಸನ ಸಭೆಯ ಕಾರ್ಯಾವಧಿ 5 ವರ್ಷಗಳು ಮತ್ತು ಚುನಾವಣೆಯ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿತ್ತು. ಪ್ರಾಂತ್ಯಗಳ ಮೇಲ್ವಿಚಾರಣೆಯನ್ನು ಗವರ್ನರ್ ನೋಡಿಕೊಳ್ಳುತ್ತಿದ್ದನು. ಗವರ್ನರ್ ಚಕ್ರವರ್ತಿಯ ಪ್ರತಿನಿಧಿಯಾಗಿದ್ದು ಕಾರ್ಯನಿರ್ವಹಿಸುತ್ತಿದ್ದನು.

6. ಈ ಕಾಯಿದೆಯ ಇನ್ನೊಂದು ಮಹತ್ವವೆಂದರೆ ದೆಹಲಿಯಲ್ಲಿ ಫೆಡರಲ್ ನ್ಯಾಯಾಲಯವನ್ನು ಸ್ಥಾಪನೆ ತೀರ್ಮಾನ ಮಾಡುವುದು, ಹೈಕೋರ್ಟ್‌ಗಳಿಂದ ಬರುವ ಮನವಿಗಳನ್ನು ಇದು ವಿಚಾರಣೆ ಮಾಡಬೇಕಾಗಿತ್ತು. ಮಾಡಿದ್ದು, ಫೆಡರಲ್ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರಗಳ ನಡುವೆ ಉದ್ಭವವಾಗುತ್ತಿದ್ದ ಸಮಸ್ಯೆಗಳನ್ನು

7. 1935ರ ಕಾಯಿದೆಯ ಪ್ರಕಾರ  ಗವರ್ನರ್ ಜನರಲ್ ಸಾಕಷ್ಟು ಆಡಳಿತ, ಶಾಸಕಾಂಗ ಹಣಕಾಸಿನ ಅಧಿಕಾರಗಳನ್ನು ಪಡೆದಿದ್ದ. ಗವರ್ನರ್ ಜನರಲ್ ಶಾಸಕಾಂಗ ಮತ್ತು ಚುನಾಯಿತ ಪ್ರತಿನಿಧಿಗಳ ವಿಚಾರದಲ್ಲಿ ಸ್ವಂತ ವಿವೇಚನೆಯಿಂದ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಕೊಡಲಾಗಿತ್ತು.

8. 1935ರ ಕಾಯಿದೆ ಸೆಕ್ರೆಟರಿ ಆಫ್‌ಸ್ಟೇಟ್ ಫಾರ್ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿತು. ಇಂಡಿಯನ್ ಕೌನ್ಸಿಲ್ ಅನ್ನು ರದ್ದು ಪಡಿಸಿ ಅದರ ಬದಲು ಸಲಹೆಗಾರರನ್ನು ನೇಮಿಸಲಾಯಿತು. ಸಲಹೆಗಾರರು ಕನಿಷ್ಟ ಮೂರು ಜನ ಮತ್ತು ಗರಿಷ್ಠ 6 ಜನರನ್ನು ಹೊಂದಿರಬೇಕಾಗಿತ್ತು. ಇದರಲ್ಲಿ ಅರ್ಧದಷ್ಟು ಜನ ಕನಿಷ್ಠ 14 ವರ್ಷಗಳಾದರೂ ಭಾರತದಲ್ಲಿ ಸೇವೆ ಸಲ್ಲಿಸಿದವರಾಗಿರಬೇಕಿತ್ತು. ಇವರ ಕಾರ್ಯಾವಧಿ 5 ವರ್ಷಗಳು, ಇವರು ಕಾರ್ಯದರ್ಶಿಗೆ ಸಲಹೆಯನ್ನು ಕೊಡಬೇಕಾಗಿತ್ತು. ಭಾರತಕ್ಕೆ ಹೈಕಮೀಷನರನ್ನು 5 ವರ್ಷಗಳ ಅವಧಿಗೆ ಗವರ್ನರ್ ಜನರಲ್ ನೇಮಿಸಬಹುದಾಗಿತ್ತು. ಪ್ರಾಂತ್ಯಗಳ ಸ್ವಾಯತ್ತತೆಯನ್ನು ಪ್ರಾಂತ್ಯಗಳಿಗೆ ನೀಡಿದ್ದರಿಂದ ಭಾರತೀಯ ಮಂತ್ರಿಗಳು ಹೆಚ್ಚಿನ ಅಧಿಕಾರವನ್ನು ಪಡೆದರು. ಇದರಿಂದ ಸೆಕ್ರೆಟು ಆಫ್ ಸ್ಟೇಟ್‌ನ ನಿಯಂತ್ರಣ ಕಡಿಮೆಯಾಯಿತು.

1935ರ ಕಾಯಿದೆಯ ದೋಷಗಳು : 1935ರ ಕಾಯಿದೆ ಹಿಂದಿನ ಎಲ್ಲ ಕಾಯಿದೆಗಳಿಗಿಂತ ಹೆಚ್ಚಿನ ಸಂವಿಧಾನಿಕ ಸುಧಾರಣೆಗಳನ್ನು ಒಳಗೊಂಡಿದ್ದರೂ ಕೆಲವಾರು ದೋಷಗಳನ್ನು ಹೊಂದಿತ್ತು. ಅವುಗಳೆಂದರೆ,

1. ಸರ್ಕಾರದ ಮೇಲೆ ಭಾರತೀಯರಿಗೆ ನಿಯಂತ್ರಣ ಹೊಂದುವ ಅವಕಾಶ ಮತ್ತು ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರವನ್ನು ನೀಡಲಿಲ್ಲ. 1919ರ ದ್ವಿಪ್ರಭುತ್ವವನ್ನು ಕೇಂದ್ರದಲ್ಲಿ ಜಾರಿಗೆ ತಂದುದರಿಂದ ಭಾರತದ ಆಡಳಿತದ ಮೇಲೆ ದುಷ್ಪರಿಣಾಮವನ್ನು ಹುಟ್ಟುಹಾಕಿತು.

2. ಈ ಕಾಯಿದೆ ಕೋಮುವಾರು ಪ್ರಾತಿನಿಧ್ಯವನ್ನು ಚುನಾವಣೆಗಳಲ್ಲಿ ಮುಂದುವರಿಸಿಕೊಂಡು ಹೋದದ್ದು ಭಾರತದ ರಾಷ್ಟ್ರೀಯತೆಗೆ ಬಲವಾದ ಪೆಟ್ಟು ಬಿದ್ದಿತು.

3. ಗವರ್ನರ್ ಜನರಲ್‌ನ ಅಧಿಕಾರದ ಮುಂದೆ ಫೆಡರಲ್ ಶಾಸನಸಭೆಯ ಅಧಿಕಾರ ಏನೇನು ಅಲ್ಲವಾಗಿತ್ತು. ಅಧಿಕಾರವೆಲ್ಲವೂ ಸಂಪೂರ್ಣವಾಗಿ ಗವರ್ನರ್ ಜನರಲ್ಲನ ಕೈಯಲ್ಲಿತ್ತು. ಕಾನೂನು ಮಾಡುವ ಅಧಿಕಾರ ಅವನಿಗೆ ಇತ್ತು. ಶಾಸನಸಭೆಗೆ ಶಾಸನ ಮಾಡುವ ಅಧಿಕಾರವಿದ್ದರೂ ಗವರ್ನರ್ ಜನರಲ್‌ನ ಒಪ್ಪಿಗೆ ಇಲ್ಲದೇ ಯಾವ ಶಾಸನವನ್ನು ಮಂಡಿಸುವ ಹಾಗಿರಲಿಲ್ಲ. ಬ್ರಿಟಿಷ್ ಭಾರತಕ್ಕೆ ಸಂಬಂಧಿಸಿದ ಯಾವುದೇ ಶಾಸನವನ್ನು ಅಂಗೀಕರಿಸುವ, ತಿದ್ದು ಪಡಿಮಾಡುವ ಸ್ವಾತಂತ್ರ್ಯವಿತ್ತು. ಗವರ್ನರ್ ಜನರಲ್ ಇಂತಹ ಅಧಿಕಾರವನ್ನು ಹೊಂದಿದ್ದನ್ನು ನೋಡಿದರೆ ಭಾರತೀಯರಿಗೆ ಯಾವುದೇ ಸ್ವತಂತ್ರ ಕಾಯಿದೆ ಮಂಡಿಸಲು ಅವಕಾಶ ಇರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ.

4. ಕೇಂದ್ರ ಶಾಸಕಾಂಗದ ಮೇಲೆ ಗವರ್ನರ್ ಜನರಲ್‌ನ ಹಿಡಿತವಿದ್ದಂತೆ ಪ್ರಾಂತ್ಯಗಳಲ್ಲಿ ಗವರ್ನರ್ ಶಾಸನ ಸಭೆಯ ಮೇಲೆ ಹಿಡಿತವನ್ನು ಹೊಂದಿದ್ದ. ಶಾಸನ ಮಂಡಿಸುವುದು ಮುಂತಾದ ವಿಷಯಗಳಿಗೆ ಗವರ್ನ‌್ರನ ಒಪ್ಪಿಗೆ ಬೇಕಾಗಿತ್ತು.

5. ಅಖಿಲ ಭಾರತ ಸಂಯುಕ್ತ ಒಕ್ಕೂಟವನ್ನು ಸ್ಥಾಪಿಸುವ ಗುರಿಯನ್ನು ಈ ಕಾಯಿದೆ ಹೊಂದಿತ್ತು. ಆದರ ಇದರ ಮೇಲೆ ಬ್ರಿಟಿಷ್ ಪಾರ್ಲಿಮೆಂಟ್ ಹಿಡಿತವನ್ನು ಹೊಂದಿತ್ತು.

1935ರ ಈ ಕಾಯಿದೆಯನ್ನು ಕುರಿತು ಜವಹರ್‌ಲಾಲ್ ನೆಹರೂರವರು ಈ ರೀತಿ ಹೇಳಿದ್ದಾರೆ. “1935ರ ಈ ಕಾಯಿದೆಯು ಗುಲಾಮಗಿರಿತನದ ಹೊಸ ಸನ್ನದು” ಈ ಕಾಯಿದೆ ಸಾಕಷ್ಟು ಟೀಕೆಗೆ ಒಳಗಾಯಿತು. “ಈ ಸಂವಿಧಾನ ದ್ವಿಪ್ರಭುತ್ವಕ್ಕಿಂತಲು ಕೆಟ್ಟದಾಗತ್ತು” ಎಂಬುದಾಗಿ ಡಾ. ರಾಜಗೋಪಾಲಚಾರಿಯವರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top