ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ಚಳುವಳಿಗಳು

ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ಚಳುವಳಿಗಳು

ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ಚಳುವಳಿಗಳು

ಆಧುನಿಕ ಕಾರ್ಖಾನೆಗಳ ಸ್ಥಾಪನೆಯಿಂದ ಕಾರ್ಮಿಕವರ್ಗ ರೂಪುಗೊಂಡಿತು. ಕಾರ್ಮಿಕರು ಕಡಿಮೆ ಕೂಲಿ, ಮಿತಿಯಿಲ್ಲದ ದುಡಿಮೆ, ಹೀನವಾದ ವಸತಿ ಸೌಕರ್ಯ ಮತ್ತು ದಬ್ಬಾಳಿಕೆಗೆ ಒಳಗಾಗಿದ್ದರು. ಇಂತಹ ಅಸಹನೀಯ ಪರಿಸ್ಥಿತಿಯನ್ನೆದುರಿಸಲು ಮತ್ತು ಜೀವನಸ್ಥಿತಿಯನ್ನು ಉತ್ತಮವಾಗಿಸಿಕೊಳ್ಳಲು ಸಂಘಟಿತರಾಗಿ ಹೋರಾಡಲು ಕಾರ್ಮಿಕ ಸಂಘ ಅಥವಾ ಟ್ರೇಡ್ ಯೂನಿಯನ್‌ಗಳನ್ನು ಸ್ಥಾಪಿಸಿಕೊಂಡರು. ಮೊದಮೊದಲು ಹೋ ಗಳೆಂದರೆ 1827ರಲ್ಲಿ ಕಲ್ಕತ್ತೆಯ ಪಲ್ಲಕ್ಕಿ ಹೊರುವವರು, 1862ರಲ್ಲಿ ಹೌರಾ ರೈಲ್ವೆ ನಿಲ್ದಾಣದ ಕೂಲಿಗಾರರು ಹೂಡಿದ ಮುಷ್ಕರಗಳು, 1877ರಲ್ಲಿ ನಾಗಪುರದ ಎಂಪ್ರೆಸ್ ಮಿಲ್ಲಿನ ಕಾರ್ಮಿಕರ ಮುಷ್ಕರವೇ ಮಿಲ್ ಕಾರ್ಮಿಕರ ಮೊದಲ ಮುಷ್ಕರವೆನ್ನಬಹುದು. ಇಂತಹ ಮುಷ್ಕರಗಳಿಗೆ ಕಾರ್ಮಿಕರಲ್ಲದವರು ಬೆಂಬಲನೀಡಿದರು. ಶಶಿವಾದ ಬ್ಯಾನರ್ಜಿಯವರು ಕಲ್ಕತ್ತೆಯಲ್ಲಿ 1870ರಲ್ಲಿ “ವರ್ಕಿಂಗ್ ಮೆನ್ಸ್ ಕ್ಲಬ್” ಎಂಬ ಸಂಸ್ಥೆ ಸ್ಥಾಪಿಸಿ “ಶ್ರಮಜೀವಿ” ಎಂಬ ಪತ್ರಿಕೆಯ ಮೂಲಕ ಕಾರ್ಮಿಕರಿಗೆ ಶಿಕ್ಷಣ ನೀಡಲು ಮುಂದಾದರು. ಜ್ಯೋತಿಭಾ ಫುಲೆಯವರ ಅನುಯಾಯಿ ಎನ್. ಎಂ. ಲೋಖಂಡೆಯವರು ಪ್ರಥಮ ಭಾರತೀಯ ಕಾರ್ಮಿಕ ನಾಯಕರೆಂಬುದಾಗಿ ಕರೆಯಲ್ಪಟ್ಟಿದ್ದಾರೆ. ಇವರು 1890ರಲ್ಲಿ “ಬಾಂಬೆಮಿಲ್ ಹ್ಯಾಂಡ್ಸ್ ಅಸೋಸಿಯೇಷನ್” ಎಂಬ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಕಾರ್ಮಿಕರ ಕುಂದುಕೊರತೆಗಳ ವಿರುದ್ಧ ಚಳವಳಿ ನಡೆಸಲು ಪ್ರಯತ್ನಿಸಿದರು. ಇದು ಮೊದಲ ಕಾರ್ಮಿಕರ ಸಂಘವೆನ್ನಬಹುದು. ಇದೇ ರೀತಿಯ ಅನೇಕ ಸಂಘಗಳು ನಂತರದ ಕಾಲದಲ್ಲಿ ಪ್ರಾರಂಭವಾದವು. ಅವುಗಳೆಂದರೆ ಕಾಮ್ಹಾರ್ ಹಿತವರ್ದಕ ಸಭಾ (1909), ಸೋಷಿಯಲ್ ಸರ್ವಿಸ್ ಲೀಗ್ (1911), ಅಮಲ್ಲ ಮೇಟೆಡ್ ಸೊಸೈಟಿ ಆಫ್ ರೈಲ್ವೆ ಸರ್ವೆಂಟ್ಸ್ ಆಫ್ ಇಂಡಿಯಾ (1897), ಪ್ರಿಂಟರ್ಸ್ ಯೂನಿಯನ್ ಆಫ್ ಕಲ್ಕತ್ತಾ (1905), ಪೋಸ್ಟಲ್ ಯೂನಿಯನ್ ಆಫ್ ಬಾಂಬೆ ಮುಂತಾದವು. 1905ರಲ್ಲಿ ಕಲ್ಕತ್ತಾದ ಸರ್ಕಾರಿ ಮುದ್ರಣಾಲಯದಲ್ಲಿ ಒಂದು ತಿಂಗಳು ಚಳುವಳಿ ನಡೆಯಿತು. 1908ರಲ್ಲಿ ತಿಲಕ್‌ರವರನ್ನು ಎಂಟು ವರ್ಷ ಸೆರೆಮನೆಗೆ ಹಾಕಿದಾಗ ಬಾಂಬೆಯ ಬಟ್ಟೆ ಉದ್ಯಮದ ಕಾರ್ಮಿಕರು ಒಂದು ವಾರ ಚಳುವಳಿ ನಡೆಸಿದರು. ಭಾರತದಿಂದ ಬ್ರಿಟಿಷ್ ವಸಾಹತುಗಳಿಗೆ ಕರೆದೊಯ್ದ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಚಳುವಳಿಯು 1830ರಿಂದ ಆರಂಭವಾಗಿ ಕೂಲಿ ಕಾರ್ಮಿಕರನ್ನು ಕಳುಹಿಸುವುದನ್ನು ನಿಷೇಧಿಸುವವರೆಗೆ ಅಂದರೆ 1922ರ ವರೆಗೆ ಮುಂದುವರೆಯಿತು.

ರಾಷ್ಟ್ರೀಯ ಚಳುವಳಿಯ ನಾಯಕರು ಕಾಂಗ್ರೆಸ್ ಅಧಿವೇಶಗಳಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಕುರಿತು ಠರಾವುಗಳನ್ನು ಮಾಡುತ್ತಿದ್ದರು. ಆದರೆ ರಾಷ್ಟ್ರೀಯ ಚಳುವಳಿಗಾರರು ವಿದೇಶಿ ಒಡೆತನದ ಉದ್ಯಮಗಳ ಕಾರ್ಮಿಕರ ವಿಚಾರದಲ್ಲಿ ಮಾತ್ರ ಧ್ವನಿಯೆತ್ತುತ್ತಿದ್ದು ದೇಶೀಯ ಕೈಗಾರಿಕೆಗಳ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ.

1881ರ ಫ್ಯಾಕ್ಟರಿ ಕಾಯ್ದೆಯಲ್ಲಿ ಕಾರ್ಮಿಕರ ಹಿತದ ಅಂಶಗಳಿದ್ದರೂ ನಿಜವಾಗಿ ದೇಶೀಯ ಉದ್ಯಮಗಳ ನಾಶದ ಉದ್ದೇಶವಿದ್ದುದರಿಂದ ರಾಷ್ಟ್ರೀಯ ಚಳುವಳಿಗಾರರು ಮತ್ತು ಕಾರ್ಮಿಕರು ವಿರೋಧಿಸಿದರು. ಮೊದಲ ಮಹಾಯುದ್ಧದ ನಂತರ ಬೆಲೆಗಳು ಏರಿ ಆಹಾರ ಧಾನ್ಯಗಳು ಮತ್ತಿತರ ಅವಶ್ಯಕ ವಸ್ತುಗಳ ಕೊರತೆಯುಂಟಾದವು. ಈ ಆರ್ಥಿಕ ಬಿಕ್ಕಟ್ಟು ಬಡ ಕಾರ್ಮಿಕರಿಗೆ ಅತಿಯಾದ ಹೊರೆಯಾದವು. ಇಂತಹ ಸಂದಿಗ್ಧ ಸ್ಥಿತಿಗಳು ಕಾರ್ಮಿಕರನ್ನು ಟ್ರೇಡ್‌ ಯೂನಿಯನ್‌ಗಳ ಸ್ಥಾಪನೆಗೆ ಮನಸ್ಸು ಮೂಡಿಸಿತು. ಬಿ.ಪಿ. ವಾಡಿಯಾರವರಿಂದ ಮದ್ರಾಸ್‌ನಲ್ಲಿ 1918ರಲ್ಲಿ “ಮದ್ರಾಸ್ ಲೇಬರ್ ಯೂನಿಯನ್” ಸ್ಥಾಪನೆಯಾಯಿತು. ಇದು ಭಾರತದ ಮೊದಲ ಆಧುನಿಕ ಟ್ರೇಡ್ ಯೂನಿಯನ್. ಹಾಗೆಯೇ 1918ರಲ್ಲಿ ಬೊಂಬಾಯಿಯಲ್ಲಿ ಎರಡು, ಕಲ್ಕತ್ತಾದಲ್ಲಿ ಒಂದು, ಮದರಾಸಿನಲ್ಲಿ ನಾಲ್ಕು ಯೂನಿಯನ್ ಸ್ಥಾಪನೆಯಾದವು. 1920ರಲ್ಲಿ ಭಾರತದ ಅನೇಕ ಕಡೆ ಅನೇಕ ಯೂನಿಯನ್‌ಗಳು ಸ್ಥಾಪನೆಯಾದವು. ಪ್ರಮುಖವಾದುವೆಂದರೆ ಮಜೂರ್ ಮಹಾಜನ್, ದಿ ಟೆಕ್ಸ್ ಟೈಲ್ ಲೇಬ‌ರ್ ಅಸೋಸಿಯೇಷನ್ ಆಫ್ ಅಹ್ಮದಾಬಾದ್ ಮತ್ತು ಬಿ.ಬಿ ಮತ್ತು ಸಿ.ಐ. ರೈಲ್ವೆ ಎಂಪ್ಲಾಯಿಸ್ ಯೂನಿಯನ್. 1920ರಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸ್ಥಾಪನೆಯಾಯಿತು. ಈ ಕಾಂಗ್ರೆಸ್‌ ಮೊದಲ ಅಧಿವೇಶನವು ಅಕ್ಟೋಬರ್ 1920ರಲ್ಲಿ ಬೊಂಬಾಯಿಯಲ್ಲಿ ನಡೆಯಿತು. ರಾಷ್ಟ್ರೀಯ ನಾಯಕ ಲಾಲಾ ಲಜಪತ್‌ರಾಯ್ ಅಧ್ಯಕ್ಷರಾಗಿದ್ದರು. 1920-25ರ ಅವಧಿಯಲ್ಲಿ 167 ಟ್ರೇಡ್ ಯೂನಿಯನ್‌ಗಳು ಕೆಲಸ ನಿರ್ವಹಿಸುತ್ತಿದ್ದವು.

ಎಂಟು ಟ್ರೇಡ್ ಯೂನಿಯನ್ ಒಕ್ಕೂಟಗಳಿದ್ದವು. ಅನೇಕ ಟ್ರೇಡ್ ಯೂನಿಯನ್‌ಗಳು ಹರತಾಳ ಆಚರಿಸಲೆಂದು ಸ್ಥಾಪನೆಯಾಗಿದ್ದು ನಂತರ ಮರೆಯಾಗುತ್ತಿದ್ದವು. ಈ ಅವಧಿಯಲ್ಲಿ ಅನೇಕ ಹರತಾಳಗಳು ಸಂಘಟಿತವಾಗಿ ನಡೆದವು. ಅನೇಕ ಕಡೆ ಚಳುವಳಿಯು ಹಿಂಸಾರೂಪಕ್ಕೂ ತಿರುಗಿತು. 1921ರಲ್ಲಿ 400ಕ್ಕೂ ಹೆಚ್ಚು ಚಳುವಳಿಗಳು ಅಸಹಕಾರ ಚಳುವಳಿಯ ಪ್ರಭಾವದಿಂದ ನಡೆದವು. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ನಾಗಪುರ ಅಧಿವೇಶನದಲ್ಲಿ ಈ ಶರಾವನ್ನು ಹೊರಡಿಸಿತ್ತು. “ಭಾರತದ ಕಾರ್ಮಿಕರ ಕಾನೂನುಬದ್ದ ಹಕ್ಕುಗಳನ್ನು ಪಡೆಯಲು ಟ್ರೇಡ್ ಯೂನಿಯನ್ ಮೂಲಕ ಹೋರಾಡುವ ಹೋರಾಟಕ್ಕೆ ಕಾಂಗ್ರೆಸ್‌ನ ಬೆಂಬಲವಿದೆ” ಎಂದು ಘೋಷಿಸಿತು. ಹಾಗೆಯೇ 1922ರ ಗಯಾದ ಅಧಿವೇಶನದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಒಟ್ಟು ಗೂಡಿಸುವ ವಿಷಯದಲ್ಲೂ ಸಹಕರಿಸುವುದಾಗಿ ತಿಳಿಸಿತು.

1926ರಲ್ಲಿ ಇಂಡಿಯನ್ ಟ್ರೇಡ್ ಯೂನಿಯನ್ಸ್ ಆಕ್ಟ್ ಭಾರತದಲ್ಲಿ ಜಾರಿಗೆ ಬಂದು ಟ್ರೇಡ್ ಯೂನಿಯನ್‌ಗಳಿಗೆ ಕಾನೂನಾತ್ಮಕ ಸ್ಥಾನವನ್ನು ನೀಡಿತು. ಮತ್ತು ಟ್ರೇಡ್ ಯೂನಿಯನ್‌ನ ಸದಸ್ಯರು ನಡೆಸುವ ಚಳುವಳಿಗಳಿಗೆ ನಾಗರಿಕ ಮತ್ತು ಕ್ರಿಮಿನಲ್ ಕಾನೂನಿನಿಂದ ರಕ್ಷಣೆ ದೊರೆಯಿತು. ಈ ಕಾಯಿದೆ ಜಾರಿಗೆ ಬರಲು 1920ರಿಂದಲೇ ಎನ್.ಎಂ. ಜೋಷಿಯವರು ಪ್ರಯತ್ನಿಸಿದರು. ಕಾರ್ಮಿಕ ಸಂಘಗಳಲ್ಲಿ 1923ರ ನಂತರದ ಅವಧಿಯಲ್ಲಿ ಕಮ್ಯುನಿಸ್ಟ್ ತತ್ವ ತನ್ನ ಪ್ರಭಾವಹೊಂದಿತು. ಕಮ್ಯುನಿಸ್ಟ್ ಕಾರ್ಮಿಕ ಸಂಘವು ಬೊಂಬಾಯಿಯಲ್ಲಿ ಆರು ತಿಂಗಳ ಬೃಹತ್ ಚಳುವಳಿ ಆಚರಿಸಿತು. ಮುಂದಿನ ವರ್ಷ ಕಲ್ಕತ್ತದಲ್ಲಿ ಜಯವನ್ನು ಕಂಡಿತು. ಅದರಲ್ಲೂ ಸೆಣಬಿನ ಮತ್ತು ರೈಲ್ವೆ ಹರತಾಳಗಳು ಯಶಸ್ವಿಯಾದವು.

1928ನೇ ವರ್ಷ ಕಾರ್ಮಿಕ ರಂಗದಲ್ಲಿ ಚಳುವಳಿಯ ವರ್ಷವೇ ಆಗಿತ್ತು. 1929ರ ನಂತರ ಕಾರ್ಮಿಕ ಸಂಘಗಳಲ್ಲಿ ಕಮ್ಯುನಿಸ್ಟ್‌, ಪ್ರಭಾವ ಕಡಿಮೆಯಾಗುತ್ತಾ ಹೋಯಿತು. ಕಾರಣವೆಂದರೆ ಸರ್ಕಾರವು ಕಮ್ಮುನಿಸ್ಟ್ ನಾಯಕರನ್ನು ಸೆರೆಹಿಡಿಯಲಾರಂಬಿಸಿತು. ಹೀಗಾಗಿ ಅನೇಕ ನುರಿತ ಕಾರ್ಮಿಕ ನಾಯಕರು ಸಂಘಗಳಿಂದ ಹೊರಹೋದರು. 1928ರ ಏಪ್ರಿಲ್ 23 ರಂದು ಮುಂಬಯಿಯ ಮುಷ್ಕರದಲ್ಲಿ 1 ಲಕ್ಷ ಕಾರ್ಮಿಕರು ಭಾಗವಹಿಸಿದ್ದರು. ಕಾರ್ಮಿಕರು ಹಳ್ಳಿ ಹಳ್ಳಿಗಳಲ್ಲಿ ಮುಷ್ಕರಕ್ಕೆ ಸಹಾನುಭೂತಿಗಳಿಸಲು ಪ್ರಚಾರ ಮಾಡಿ ಹಳ್ಳಿ ಮತ್ತು ನಗರಗಳ ಸಾರ್ವಜನಿಕರಿಂದ ಮುಷ್ಕರಕಾರರ ನೆರವಿಗೆ ಧನಧಾನ್ಯ ಸಂಗ್ರಹಿಸಿ 80 ಸಾವಿರ ಕಾರ್ಮಿಕರಿಗೆ ಪರಿಹಾರ ದೊರಕಿಸಿದರು. 1929ರಲ್ಲಿ ಕಮ್ಯುನಿಸ್ಟ್‌ರು AITUC ಯಿಂದ ಹೊರ ನಡೆದರು, ಅದೇ ರೀತಿ 1931ರಲ್ಲೂ ಎರಡನೇ ಬಾರಿಯು ವಿಭಜನೆಗೊಂಡಿತು. ಈ ವಿಭಜಿತ ಗುಂಪುಗಳನ್ನು ಒಗ್ಗೂಡಿಸಲು 1931-32ರಲ್ಲಿ ಪ್ರಯತ್ನಗಳು ನಡೆದು ಹೊಸ ರಾಷ್ಟ್ರೀಯ ಟ್ರೇಡ್ ಯೂನಿಯನ್ ಫೆಡರೇಷನ್ ಅಸ್ಥಿತ್ವಕ್ಕೆ ಬಂದಿತು. ಅದರ ನೇತೃತ್ವದಲ್ಲಿ ಎಲ್ಲಾ ಗುಂಪುಗಳು ಸೇರಿ 1938ರಲ್ಲಿ ನಾಗಪುರದಲ್ಲಿ ಅಧಿವೇಶನ ನಡೆಸಿದವು ಮತ್ತು 1940ರಲ್ಲಿ ಹೊಸ ಸಂಸ್ಥೆ ರಾಷ್ಟ್ರೀಯ ಟ್ರೇಡ್ ಯೂನಿಯನ್ ಫೆಡರೇಶನ್‌ನನ್ನು ಕೈಬಿಟ್ಟು ಅದರ ಕಾರ್ಮಿಕ ಒಕ್ಕೂಟಗಳನ್ನು ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲಾಯಿತು.

1934ರ ನಂತರ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾದುದು ಮತ್ತು ಕಾರ್ಮಿಕ ಒಕ್ಕೂಟಗಳು ಒಂದಾದುದು ಚಳುವಳಿಯ ಚೇತರಿಕೆಗೆ ಕಾರಣವಾಯಿತು. ಹಾಗೆಯೇ ಕಾರ್ಮಿಕ ಸಂಘಗಳ ಮತ್ತು ಸದಸ್ಯರ ಸಂಖ್ಯೆಯೂ ಹೆಚ್ಚಿತು ಉದಾ: 1937ರಲ್ಲಿ 271 ಕಾರ್ಮಿಕ ಸಂಘಗಳಿದ್ದು 2,61,047 ಮಂದಿ ಸದಸ್ಯರಿದ್ದುದು 1939ರಲ್ಲಿ 562 ಸಂಘಗಳಿಗೂ, 3,99,159 ಸದಸ್ಯತ್ವಕ್ಕೂ ಏರಿತು. ಇದಕ್ಕೆ ಕಾರಣ ಕಾಂಗ್ರೆಸ್ ಅನೇಕ ಪ್ರಾಂತ್ಯಗಳಲ್ಲಿ ಅಧಿಕಾರಕ್ಕೆ ಬಂದುದು ಮತ್ತು ಆ ಮಂತ್ರಿ ಮಂಡಲಗಳು ಕಾರ್ಮಿಕರ ಪರವಾದ ನಿಲುವು ತಳೆದುದು ಒಂದು ಕಾರಣವೆನ್ನಬಹುದು.

ಆದರೆ ಎಲ್ಲಾ ಪ್ರಾಂತೀಯ ಕಾಂಗ್ರೆಸ್ ಮಂತ್ರಿಮಂಡಲಗಳು ಕಾರ್ಮಿಕರ ಪರವಾಗಿರಲಿಲ್ಲ. 1938ರಲ್ಲಿ ಮುಂಬಯಿ ಪ್ರಾಂತ್ಯ ಸರ್ಕಾರವು ಕಾರ್ಮಿಕ ವಿವಾದ ಕಾಯಿದೆ ಜಾರಿಮಾಡಿ ಅದರ ಪ್ರಕಾರ ಕಾರ್ಮಿಕ ವಿವಾದಗಳ ಮೇಲೆ ಕಡ್ಡಾಯ ಪಂಚಾಯ್ತಿ ಪದ್ಧತಿ ಹೇರಿ, ವಿವಾದ ಪಂಚಾಯ್ತಿಯ ಮುಂದಿರುವಾಗ ಮುಷ್ಕರವನ್ನು ನಿಷೇಧಿಸಿತು. ಅಕ್ರಮ ಮುಷ್ಕರಕ್ಕೆ ಆರು ತಿಂಗಳ ಶಿಕ್ಷೆ ವಿಧಿಸಿತು, ಕಾರ್ಮಿಕ ಸಂಘಗಳ ನೋಂದಣಿಯ ಬಗ್ಗೆ ಬಿಗಿನಿಲುವು ತಾಳಿತು. 1939ರ ವಿಶ್ವಯುದ್ಧವನ್ನು ಕಮ್ಯುನಿಸ್ಟ್‌ರು ವಿರೋಧಿಸಿದರು, ಯುದ್ಧದ ಅವಧಿಯಲ್ಲಿ ಆಹಾರ ಧಾನ್ಯ ಕೊರತೆ, ಬೆಲೆಏರಿಕೆಯಿಂದ ಕಷ್ಟಕ್ಕೆ ಸಿಲುಕಿ ವೇತನ ಏರಿಕೆ, ನ್ಯಾಯ ಬೆಲೆಯಲ್ಲಿ ಧಾನ್ಯ ಸರಬರಾಜು ಮುಂತಾದ ವಿಷಯಗಳ ಮೇಲೆ ಮುಷ್ಕರಗಳು ನಡೆದವು. 1941ರಲ್ಲಿ ಲಾಹೋರ್‌ನಲ್ಲಿ ಕಾರ್ಮಿಕ ಸಂಘಗಳು ಅಧಿವೇಶನ ನಡೆಸಿ ಹೊಸ “ಇಂಡಿಯನ್ ಫೆಡರೇಶನ್ ಆಫ್ ಲೇಬರ್” ಎಂಬ ಸಂಸ್ಥೆ ಕಟ್ಟಿದರು. ಇದರ ಉದ್ದೇಶ ಸ್ವತಂತ್ರ ಕಾರ್ಮಿಕ ಚಳುವಳಿಯನ್ನು ಉತ್ತಮಕಾರ್ಯವೆಸಗುವ ನೆಲೆಗಟ್ಟಿನ ಮತ್ತು ಜನಾಂದೋಲನ ಚಟುವಟಿಕೆ ಕೈಗೊಳ್ಳುವುದೇ ಆಗಿತ್ತು, 1940ರ ನಂತರ ಕಮ್ಯುನಿಸ್ಟ್‌ರು ರಷ್ಯಾದ ವಿದೇಶಾಂಗ ನೀತಿ ಬದಲಾದುದಕ್ಕೆ ಯುದ್ಧಕ್ಕೆ ಬೆಂಬಲ ತೋರಿಸಿ ಕಾರ್ಮಿಕ ಚಳುವಳಿಯಿಂದ ಹಿಂದೆ ಸರಿದರು. ಮುಂದಿನ 1942 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಅನೇಕ ಕಾರ್ಮಿಕ ನಾಯಕರು ಸೆರೆಯಾಳಾದರು. ಕಾರ್ಮಿಕ ಸಂಘಗಳ ಚಳುವಳಿ ಇತಿಹಾಸದಲ್ಲಿ ಪ್ರಮುಖ ಘಟ್ಟವೆಂದರೆ 1944ರ ಮೇನಲ್ಲಿ ಸ್ಥಾಪಿತವಾದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್”. ಈ ಸಂಸ್ಥೆಯು ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸುತ್ತಾ ಗಾಂಧೀ ತತ್ವದ ಆಧಾರದ ಮೇಲೆ ಕಾರ್ಮಿಕ ಚಳುವಳಿಯನ್ನು ಮುಂದುವರಿಸಿಕೊಂಡು ಹೋಯಿತು. 1946-47ರ ವೇಳೆಗೆ ನಮೂದಿತ ಕಾರ್ಮಿಕ ಸಂಘಗಳು 1925 ಇದ್ದು 13,31,962 ಸದಸ್ಯರಿದ್ದರು. ಹೀಗೆ ಈ ಅವಧಿಯಲ್ಲಿ ಕಾರ್ಮಿಕ ಸಂಘಗಳ ಚಳುವಳಿಯು ಪ್ರಗತಿಪರವಾಗಿ ಮುಂದುವರಿಯಿತು. ಈ ಚಳುವಳಿಯ ಬಹುಮುಖ್ಯ ದುರ್ಬಲತೆಯೆಂದರೆ ಹೆಚ್ಚಿನ ಕಾರ್ಮಿಕರು ಅವಿದ್ಯಾವಂತರಾಗಿದ್ದುದು, ಈ ಕಾರ್ಮಿಕರು ಹೊರಗಿನ ನಾಯಕತ್ವವನ್ನು ಬಯಸಿದುದು, ಮತ್ತು ರಾಜಕೀಯ ಚಟುವಟಿಕೆಯು ಚಳುವಳಿಯಲ್ಲಿ ಪ್ರವೇಶಿಸಿದ್ದುದು ಈ ಚಳುವಳಿಯ ಕುಂಟಿತಕ್ಕೆ ಕಾರಣವಾಯಿತು.

ಭಾರತದಲ್ಲಿ ಮತೀಯವಾದದ ಬೆಳವಣಿಗೆ

ಮುಸ್ಲಿಂ ಲೀಗ್ ಸ್ಥಾಪನೆ ಮತ್ತು ಪಾಕಿಸ್ತಾನದ ಸಾಧನೆಗಾಗಿ ಹೋರಾಟ

ಭಾರತದಲ್ಲಿ ಕೋಮು ರಾಜಕೀಯವು ಪ್ರಾರಂಭವಾದುದು ಬ್ರಿಟಿಷ್ ಅಧಿಕಾರಿಗಳು ಮತ್ತು ಬ್ರಿಟಿಷ್ ಸರ್ಕಾರವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ಒಡೆದು ಆಳುವ ನೀತಿಯ ಮೂಲಕ ಬೆಂಬಲಿಸಿಕೊಂಡು ಬಂದ ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಬ್ರಿಟಿಷ್ ಅಧಿಕಾರಿಗಳಾದ ಥಿಯೋಡರ್ ಬೆಕ್, ಮಾರಿಸನ್ ಮತ್ತು ಆರ್ಕಿಬಲ್ಡ್ ಮುಸ್ಲಿಂ ಕೋಮುವಾದಕ್ಕೆ ಹೊಸ ತಿರುವು ನೀಡಿದ ಪ್ರಮುಖರು. ಹಾಗೆಯೇ ವೈಸ್‌ರಾಯಿಯಾಗಿದ್ದ ಲಾರ್ಡ್ ಮಿಂಟೋ ಸಹ ಪ್ರಮುಖರು. ಅದರಲ್ಲೂ ಆರ್ಕಿಬಲ್ಡ್ ಮುಸ್ಲಿಂ ನಿಯೋಗವೊಂದು ವೈಸರಾಯ್ ಮಿಂಟೋನನ್ನು ಭೇಟಿಮಾಡಲು ಮತ್ತು ನಿಯೋಗದ ನಿವೇದನಾ ಅಂಶಗಳನ್ನು ಸಿದ್ಧಪಡಿಸಲು ಸಹಕರಿಸಿದ ಹಾಗೂ ವೈಸರಾಯ್ ಹಾಗೂ ಮುಸ್ಲಿಂ ನಿಯೋಗದ ಮಾತುಕತೆಗೆ ಕೊಂಡಿಯಾಗಿ ಕೆಲಸ ನಿರ್ವಹಿಸಿದ. ಕಾಂಗ್ರೆಸ್ ರಾಷ್ಟ್ರೀಯ ಚಳುವಳಿಯ ಐಕ್ಯತೆಯನ್ನು ಮುರಿಯಲು ಲಾರ್ಡ್‌ ಮಿಂಟೊ ಇಂತಹ ಮುಸ್ಲಿಂ ನಿಯೋಗದ ಭೇಟಿಗೆ ತನ್ನ ಕಾರ್ಯದರ್ಶಿ ಕರ್ನಲ್ ಡನ್‌ಲಪ್‌ಸ್ಮಿತ್ ಮೂಲಕ ಪ್ರಯತ್ನಿಸಿದ್ದನೆಂದೂ ಸಹ ತಿಳಿದುಬರುತ್ತದೆ. ಅಲಿಘರ್ ಕಾಲೇಜಿನ ಕಾರ್ಯದರ್ಶಿ ನವಾಬ ಮೋಹಿಸಿಲ್ ಉಲ್-ಮುಲ್ಕ್ ಈ ನಿಯೋಗದ ಭೇಟಿಯ ವ್ಯವಸ್ಥೆಯ ಕಾರ್ಯವನ್ನು ಕೈಗೊಂಡರು. ಸೈಯದ್ ಬಿಲ್ವಾಮಿ ಎಂಬ ಮುಸ್ಲಿಂ ನಾಯಕನು ಭಾರತೀಯ ಮುಸ್ಲಿಮರ ರಾಜಕೀಯ ಮತ್ತಿತರ ಆಶೋತ್ತರಗಳನ್ನು ಒಳಗೊಂಡ ಒಂದು ಮನವಿಯನ್ನು ಸಿದ್ಧಪಡಿಸಿ ಅದಕ್ಕೆ 4,000 ಮಂದಿಯ ಸಹಿಗಳನ್ನು ಪಡೆಯಲಾಯಿತು. ಈ ನಿಯೋಗದ ನೇತೃತ್ವವನ್ನು ಬ್ರಿಟಿಷ್ ಪರವಾದ ಭಾವನೆಹೊಂದಿದ್ದ ಆಗಾಖಾನ್ ವಹಿಸಿ 1906ರ ಅಕ್ಟೋಬರ್ 1 ರಂದು ಸಿಮ್ಲಾದಲ್ಲಿ ಲಾರ್ಡ್ ಮಿಂಟೋನನ್ನು ಭೇಟಿ ಮಾಡಿತು.

ಈ ನಿಯೋಗವು ಬ್ರಿಟಿಷ್ ಸರ್ಕಾರಕ್ಕೆ ವಿಧೇಯತೆಯನ್ನು ವ್ಯಕ್ತಪಡಿಸಿತು ಹಾಗೂ ಮನವಿ ಪತ್ರದಲ್ಲಿ ಪ್ರತ್ಯೇಕ ಜಾತೀಯ ಮತದಾರ ಕ್ಷೇತ್ರಗಳ ಮೂಲಕ ಮುಸ್ಲಿಂ ಪ್ರತಿನಿಧಿಗಳನ್ನು ಚುನಾಯಿಸುವ ಹಾಗೂ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂದು ಮತ್ತು ಸರ್ಕಾರಿ ಸೇವೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಬೇಡಿಕೆ ಸಲ್ಲಿಸಿತು. ಜಿಲ್ಲಾ ಸಂಸ್ಥೆಗಳಲ್ಲಿ, ನಗರಪಾಲಿಕೆ, ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಸೆನೆಟ್‌ಗಳಿಗೆ ಮೀಸಲಾತಿ, ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಸರ್ಕಾರದ ಸಹಾಯ ಮುಂತಾದವುಗಳನ್ನು ಮನವಿಯು ಒಳಗೊಂಡಿತ್ತು.

ಮುಸ್ಲಿಂ ನಿಯೋಗದ ಮನವಿ ಪತ್ರಕ್ಕೆ ವೈಸ್‌ರಾಯ್ ಲಾರ್ಡ್ ಮಿಂಟೊ ಈ ರೀತಿ ತನ್ನ ಉತ್ತರ ನೀಡಿದ “ಭಾರತದಲ್ಲಿ ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಮುಸ್ಲಿಂ ಪ್ರತಿನಿಧಿಗಳು ಆಯ್ಕೆಯಾಗಿ ಬರಲು ಸಾಧ್ಯವಿಲ್ಲವೆಂದೂ ಅಕಸ್ಮಾತ್ ಆರಿಸಿಬಂದರೂ ಆ ಮುಸ್ಲಿಂ ಪ್ರತಿನಿಧಿಯ ಅಭಿಪ್ರಾಯಗಳು ಅವನ ಕೋಮಿನ ಅಭಿಪ್ರಾಯಕ್ಕೆ ವಿರುದ್ಧವಾಗಿ ಬಹುಸಂಖ್ಯಾತ ಕೋಮಿನ ಅಧೀನಕ್ಕಿರುವ ಸಂಭವವೇ ಹೆಚ್ಚೆಂದೂ ಆದ್ದರಿಂದ ವೈಯಕ್ತಿಕ ಮತದ ಹಕ್ಕಿನ ಮೂಲಕ ಚುನಾಯಿತ ಪ್ರಾತಿನಿಧ್ಯವನ್ನು ನೀಡುವ ಪದ್ಧತಿಯು ಭಾರತದಲ್ಲಿ ಹಾಸ್ಯಾಸ್ಪದ ಸೋಲಿಗೆ ಗುರಿಯಾಗುವುದೆಂದು ಅಭಿಪ್ರಾಯಪಟ್ಟು ಬ್ರಿಟಿಷರು ಭಾರತದಲ್ಲಿ ಅಧಿಕಾರದಲ್ಲಿರುವವರೆಗೆ ಮುಸ್ಲಿಮರ ಹಿತಾಸಕ್ತಿಗಳಿಗೆ ಧಕ್ಕೆಯಾಗುವುದಿಲ್ಲವೆಂಬ ಭರವಸೆ ನೀಡಿದನು. ಆಗಾಖಾನರ ಮನವಿಗೆ ನೀಡಿದ ಮಿಂಟೋನ ಉತ್ತರವನ್ನು “ಇಸ್ಲಾಂ ಹಕ್ಕುಗಳ ಸನ್ನದು” ಎಂದು ಕರೆಯುತ್ತಾರೆ.

ಬ್ರಿಟಿಷ್ ಅಧಿಕಾರಿ ವರ್ಗದ ಪ್ರೋತ್ಸಾಹವು ಮುಸ್ಲಿಂ ನಾಯಕರಲ್ಲಿ ಹೊಸ ರಾಜಕೀಯ ಸಂಘಟನೆಯ ಸ್ಥಾಪನೆಗೆ ಅಡಿಮಾಡಿಕೊಟ್ಟಿತು. ಮುಸ್ಲಿಂ ನಾಯಕರು ಢಾಕಾದಲ್ಲಿ 1906ರ ಡಿಸೆಂಬರ್ 30 ರಂದು ಸಭೆ ಸೇರಿ ಮುಸ್ಲಿಂಲೀಗ್ ಅನ್ನು ಸ್ಥಾಪಿಸಿದರು. ಮುಸ್ಲಿಂ ಲೀಗ್‌ನ ಧೈಯೋದ್ದೇಶಗಳೇನೆಂದರೆ :

1. ಭಾರತೀಯ ಮುಸ್ಲಿಮರಲ್ಲಿ ಬ್ರಿಟಿಷ್ ಸರ್ಕಾರದ ಬಗ್ಗೆ ನಿಷ್ಟೆಯ ಮನೋಭಾವನೆಯನ್ನು ಬೆಳೆಸುವುದು ಹಾಗೂ ಬ್ರಿಟಿಷ್ ಸರ್ಕಾರದ ನೀತಿಯ ಬಗ್ಗೆ ಇದ್ದ ವಿರೋಧಿ ಭಾವನೆಯನ್ನು ತೊಡೆದುಹಾಕುವುದು.

2. ಭಾರತೀಯ ಮುಸ್ಲಿಮರ ರಾಜಕೀಯ ಮತ್ತಿತರ ಹಕ್ಕು ಮತ್ತು ಆಶೋತ್ತರಗಳನ್ನು ಸರ್ಕಾರದ ಮುಂದೆ ಸೌಮ್ಯವಾಗಿ ಮಂಡಿಸುವುದು.

3. ಮೇಲಿನ ಎರಡು ಉದ್ದೇಶಗಳಿಗೆ ಧಕ್ಕೆ ಬಾರದಂತೆ ಸಾಧ್ಯವಾದ ಮಟ್ಟಿಗೆ ಭಾರತದ ಇನ್ನಿತರ ಕೋಮುಗಳೊಡನೆ ಸ್ನೇಹಭಾವ ಬೆಳೆಸುವುದು.

ಭಾರತೀಯ ಮುಸ್ಲಿಮರಲ್ಲಿ ಕೋಮು ಭಾವನೆ ಬೆಳೆಯಲು, ಮುಸ್ಲಿಂ ಲೀಗ್ ಸ್ಥಾಪನೆಯಾಗಲು ಹಾಗೂ ಮುಂದೆ ಪಾಕಿಸ್ತಾನ ರಚನೆಗೆ ಮುಸ್ಲಿಂ ನಾಯಕರು ಮುಸ್ಲಿಂ ಜನತೆಯಲ್ಲಿ ತುಂಬಿದ ಹಿಂದೂ ವಿರೋಧಿ ಮತ್ತು ಅರಕ್ಷಣಾ ಮನೋಭಾವಗಳೇ ಕಾರಣವಾದವು. ಈ ಅಂಶಗಳು ಇಬ್ಬರು ಮುಸ್ಲಿಂ ಲೀಗ್ ನಾಯಕರ ಭಾಷಣಗಳಿಂದ ವ್ಯಕ್ತವಾಗಿದೆ. ಅಲಿಘರ್‌ದಲ್ಲಿನ ಭಾಷಣದಲ್ಲಿ ನವಾಬ್ ಮಖರ್-ಉಲ್-ಮುಲ್ಕ್ ಈ ರೀತಿ ಹೇಳಿದ ಭಾರತದಲ್ಲಿನ ಬ್ರಿಟಿಷ್ ಆಡಳಿತವು ಕಣ್ಮರೆಯಾದರೆ ಹಿಂದೂಗಳು ಪ್ರಭುಗಳಾಗುತ್ತಾರೆ. ನಮ್ಮ ಜೀವ, ಆಸ್ತಿ ಹಾಗೂ ಮರ್ಯಾದೆಗಳು ನಿರಂತರ ಅಪಾಯಕ್ಕೀಡಾಗುತ್ತವೆ. ದೇವರೇ ಕಾಪಾಡಬೇಕು. ಈ ಅಪಾಯದಿಂದ ಪಾರಾಗಲು ಇರುವ ಒಂದೇ ದಾರಿಯೆಂದರೆ ಬ್ರಿಟಿಷ್ ಆಳ್ವಿಕೆಯ ಮುಂದುವರಿಕೆಗೆ ಸಹಾಯ ನೀಡುವುದು. ಬ್ರಿಟಿಷ್ ಮುಕುಟವನ್ನುಳಿಸಲು ಮುಸ್ಲಿಮರು ತಮ್ಮ ರಕ್ತ ಮತ್ತು ಬಲಿದಾನದ ತ್ಯಾಗವನ್ನು ಮಾಡಬೇಕು”. ಇದೇ ಅಭಿಪ್ರಾಯವನ್ನು ಮತ್ತೊಬ್ಬ ಮುಸ್ಲಿಂ ಲೀಗ್ ನಾಯಕ ಜಕಾಉಲ್ಲಾ ತಿಳಿಸುತ್ತಾ “ನಮಗೂ ಕಾಂಗ್ರೆಸ್ಸಿಗೂ ಸಮಾನ ರಾಜಕೀಯ ಗುರಿಗಳಿಲ್ಲದ ಕಾರಣ ರಾಜಕೀಯ ಐಕಮತ್ಯ ಸಾಧ್ಯವಾಗದು. ಕಾಂಗ್ರೆಸ್ಸಿಗರು ಬ್ರಿಟಿಷ್ ಸರ್ಕಾರವನ್ನು ನಿಶ್ಯಕ್ಷಗೊಳಿಸುವಂತಹ ಕಾರ್ಯಗಳಲ್ಲಿ ತೊಡಗುತ್ತಾರೆ. ಅವರು ಪ್ರಾತಿನಿಧಿಕ ಸರ್ಕಾರ ಬೇಕು ಎನ್ನುತ್ತಾರೆ; ಅದರ ಅರ್ಥ ಮುಸಲ್ಮಾನರ ನಾಶ, ಅವರು ಸರ್ಕಾರಿ ನೌಕರಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಬೇಕೆನ್ನುತ್ತಾರೆ. ಹಾಗೆಂದರೆ ಮುಸ್ಲಿಮರಿಗೆ ಸರ್ಕಾರಿ ನೌಕರಿಗಳು ಇಲ್ಲವಾದಂತೆ, ಆದ್ದರಿಂದ ರಾಜಕೀಯ ಒಗ್ಗಟ್ಟಿನ ಹತ್ತಿರವೂ ನಾವು ಸುಳಿಯಬೇಕಾಗಿಲ್ಲ” ಎಂದು ಅಭಿಪ್ರಾಯ ಪಟ್ಟನು.

ಮುಸ್ಲಿಂ ಲೀಗ್ ತನ್ನ 1908ರ ವಾರ್ಷಿಕ ಅಧಿವೇಶನದಲ್ಲಿ ಸರ್ಕಾರಿ ಸೇವೆಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕೋಮುವಾರು ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆ ಸಲ್ಲಿಸಿತು. ಆ ಬೇಡಿಕೆಗೆ ಇಂಗ್ಲೆಂಡಿನ ಪತ್ರಿಕೆಗಳಲ್ಲಿ, ಸಭೆಗಳಲ್ಲಿ ಪ್ರಚಾರ ಕೈಗೊಳ್ಳಲು ಮುಸ್ಲಿಂಲೀಗ್ ಇಂಗ್ಲೆಂಡಿನಲ್ಲಿ ಶಾಖೆಯೊಂದನ್ನು ತೆರೆಯಿತು. ಈ ಶಾಖೆಯು ಕೋಮುವಾರು ಪ್ರಾತಿನಿಧ್ಯ ಮತ್ತು ಮುಂದಿನ ಭಾರತದ ವಿಭಜನೆಯ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿತು. ಮುಸ್ಲಿಂಲೀಗ್‌ ಬೇಡಿಕೆಗಳನ್ನಿಡೇರಿಸುವ ಸಲುವಾಗಿ 1909ರ ಇಂಡಿಯನ್ ಕೌನ್ಸಿಲ್ ಆಕ್ಟ್ “ವಿಶಿಷ್ಟ ಮತಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರೇ ಮುಸ್ಲಿಂ ಅಭ್ಯರ್ಥಿಗಳಿಗೆ ಮತ ನೀಡುವ” ಪ್ರತ್ಯೇಕ ಮತದಾರ ಕ್ಷೇತ್ರದ ಕೊಡುಗೆ ನೀಡಿತು. ವಿವಿಧ ಕೋಮುಗಳ ಮತದಾರರಿಗೆ ವಿಭಿನ್ನ ಮತದಾರ ಅರ್ಹತೆಗಳನ್ನು ನಿಗಧಿಗೊಳಿಸಿತು. ಮುಸ್ಲಿಮರಿಗೆ ತಮ್ಮ ಪ್ರತಿನಿಧಿಗಳನ್ನು ತಾವೇ ಚುನಾಯಿಸುವ ಅವಕಾಶ ನೀಡಿ ಇನ್ನಿತರರಿಗೆ ಆ ಅವಕಾಶ ನೀಡಲಿಲ್ಲ. ಅಲ್ಪಸಂಖ್ಯಾತರೆಂಬ ಪರಿಗಣನೆಯ ಮೇಲೆ ಮುಸ್ಲಿಮರಿಗೆ ಪ್ರತ್ಯೇಕ ಮತ ಕ್ಷೇತ್ರಗಳನ್ನು ನೀಡಿದಂತೆ ಕೆಲವು ಪ್ರದೇಶಗಳಲ್ಲಿ ಅಲ್ಪಸಂಖ್ಯಾತರಾಗಿದ್ದ ಹಿಂದೂ ಮತ್ತು ಸಿಖ್‌ರಿಗೆ ಆ ಸೌಲಭ್ಯವನ್ನು ನಿರಾಕರಿಸಿತು. ಹೀಗೆ ಬ್ರಿಟಿಷ್ ಸರ್ಕಾರವು ತನ್ನ ತಾರತಮ್ಮ ನೀತಿಗಳಿಂದ ಕೋಮು ಭಾವನೆಯನ್ನು ಉಲ್ಬಣಗೊಳಿಸಿತು.

1913 ರಿಂದ ಮುಸ್ಲಿಂ ಲೀಗ್ ಉದಾರವಾದಿ ನಾಯಕರಾದ ಮಹಮದ್ ಅಲಿ, ಮಜಹರ್ ಉಲ್‌ಹಕ್ಸ್, ಸೈಯದ್ ವಜಿರ್ ಹುಸೇನ, ಹಸನ್, ಇಮಾಂ ಮುಂತಾದವರ ನೇತೃತ್ವದಲ್ಲಿ ಮುಂದುವರಿಯಿತು. 1920 ರಿಂದ 1923ರ ವರೆಗೆ ಮುಸ್ಲಿಂಲೀಗ್ ತನ್ನ ರಾಜಕೀಯ ಚಟುವಟಿಕೆಗಳನ್ನೇ ಸ್ಥಗಿತಗೊಳಿಸಿತು. ಸೈಮನ್ ಆಯೋಗದ ನೇಮಕ ಮತ್ತು ದುಂಡು ಮೇಜಿನ ಪರಿಷತ್‌ಗಳಲ್ಲಿ ಸಿಕ್ಕ ಪ್ರಾಮುಖ್ಯತೆಯ ಆಧಾರದ ಮೇಲೆ ಲೀಗ್ ಮತ್ತೆ ಕಾರ್ಯವನ್ನು ಚುರುಕುಗೊಳಿಸಿತು. ಮೊದಲು ಕಾಂಗ್ರೆಸ್‌ನಲ್ಲಿದ್ದು ರಾಷ್ಟ್ರೀಯ ಮುಸ್ಲಿಮನಾಗಿದ್ದ ಜಿನ್ನಾ 1934ರ ನಂತರ ಕೋಮುವಾದಿಯಾಗಿ ಮುಸ್ಲಿಂ ಲೀಗ್‌ನ ಪ್ರಶ್ನಾತೀತ ನಾಯಕನಾಗಿ ಬೆಳವಣಿಗೆಗೊಂಡನು. ಕಾಂಗ್ರೆಸ್‌ನಲ್ಲಿದ್ದು ರಾಷ್ಟ್ರೀಯ ಮುಸ್ಲಿಮನಾಗಿದ್ದು ಜಿನ್ನಾ ನಂತರ ಕಾಂಗ್ರೆಸ್ಸನ್ನು ವಿರೋಧಿಸಿ ಮುಸ್ಲಿಂ ಕೋಮುವಾದಕ್ಕೆ ಬೆಂಬಲ ಕೊಡಲು ಪ್ರಮುಖ ಕಾರಣವೆಂದರೆ ಗಾಂಧೀಜಿಯ ನಾಯಕತ್ವದ ಕಾಂಗ್ರೆಸ್ ಜಿನ್ನಾನಂತಹ ರಾಷ್ಟ್ರೀಯ ಮುಸ್ಲಿಮರನ್ನು ಮುಸ್ಲಿಮರ ನಾಯಕನಾಗಿ ಗುರುತಿಸದೆ ಪಕ್ಕಾ ಸಂಪ್ರದಾಯವಾದಿಗಳಾದ ಆಲಿ ಸಹೋದರರನ್ನು ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ನಾಯಕರನ್ನಾಗಿಸಿದುದು ಜಿನ್ನಾರಿಗೆ ಕಾಂಗ್ರೆಸ್ ಮತ್ತು ಗಾಂಧೀಜಿಯ ನಾಯಕತ್ವದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿತು. ಮತ್ತು ಪ್ರಸಕ್ತ ಭಾರತೀಯ ರಾಜಕೀಯದಲ್ಲಿ ರಾಷ್ಟ್ರೀಯ ಭಾವನೆಯನ್ನು ತ್ಯಜಿಸಿ ಕೋಮು ರಾಷ್ಟ್ರೀಯವಾದದ ಮೂಲಕ ನಾಯಕರಾಗಬಹುದೆಂಬ ಕಾಂಗ್ರೆಸ್ ನಾಯಕರ ನೀತಿಯನ್ನೇ ಅನುಸರಿಸಿದರು.

1935ರ ಭಾರತ ಕಾಯ್ದೆಯ ಪ್ರಕಾರ 1937ರಲ್ಲಿ ನಡೆದ ಪ್ರಾಂತೀಯ ಶಾಸನ ಸಭೆಗಳ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಹೆಚ್ಚಿನ ಯಶಸ್ಸು ಗಳಿಸಲಿಲ್ಲ. ಒಟ್ಟು 485 ಮುಸ್ಲಿಂ ಸ್ಥಾನಗಳಲ್ಲಿ ಮುಸ್ಲಿಂ ಲೀಗ್ ಗಳಿಸಿದುದು ಕೇವಲ 110 ಸ್ಥಾನಗಳನ್ನು ಮಾತ್ರ. ಮುಸ್ಲಿಂ ಬಹುಸಂಖ್ಯಾತ ಪ್ರಾಂತ್ಯಗಳಾದ ಪಂಜಾಬ್, ವಾಯುವ್ಯ ಗಡಿ ಪ್ರಾಂತ್ಯ, ಬಂಗಾಳ ಮತ್ತು ಸಿಂಗ್‌ಗಳಲ್ಲೂ ಇತರ ವಿರೋಧಿ ಮುಸ್ಲಿಂ ಪಕ್ಷಗಳಿಗಿಂತ ಕಡಿಮೆ ಸ್ಥಾನವನ್ನು ಗಳಿಸಿತು. ಆದರೆ ಬೊಂಬಾಯಿ, ಮದ್ರಾಸ್, ಉತ್ತರ ಪ್ರದೇಶ, ಬಿಹಾರ್, ಒರಿಸ್ಸಾ ಮತ್ತು ಕೇಂದ್ರೀಯ ಪ್ರಾಂತ್ಯಗಳಲ್ಲಿ ಹೆಚ್ಚಿನ ಸ್ಥಾನ ಪಡೆಯಿತು. ಕಾಂಗ್ರೆಸ್ 1937ರ ಜುಲೈನಲ್ಲಿ ಅಧಿಕಾರ ವಹಿಸಿಕೊಳ್ಳುವ ತೀರ್ಮಾನ ಕೈಗೊಂಡಾಗ ಮುಸ್ಲಿಂ ಲೀಗ್ ಬಂಗಾಳ, ಅಸ್ಸಾಂ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕಾಂಗ್ರೆಸ್‌ನೊಂದಿಗೆ ಒಗ್ಗೂಡಿ ಸರ್ಕಾರ ರಚಿಸುವ ಮತ್ತು ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಲೀಗ್ ಪ್ರತಿನಿಧಿಗಳನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವುದೆಂದು ಆಶಾಭಾವನೆ ಹೊಂದಿತ್ತು. ಆದರೆ ಕಾಂಗ್ರೆಸ್ ತನ್ನ ನೀತಿ ನಿಯಮಗಳಿಗೆ, ಕೋಮು ಸೌಹಾರ್ದ ನೀತಿಗೆ ಒಪ್ಪಿಕೊಂಡು ಕಾಂಗ್ರೆಸ್ ಸದಸ್ಯರಾಗುವುದಾದರೆ ಮುಸ್ಲಿಂಲೀಗ್ ಸದಸ್ಯರನ್ನು ಜವಾಬ್ದಾರಿಯುತ ಸ್ಥಾನಗಳಿಗೆ ನೇಮಿಸುವ ಸಲಹೆ ನೀಡಿತು. ಈ ಸಲಹೆಯನ್ನು ಜಿನ್ನಾ ಮುಸ್ಲಿಂಲೀಗ್ ಪಕ್ಷದ ಅದಃಪಥನಕ್ಕೆ ಕಾಂಗ್ರೆಸ್ ಪ್ರಯತ್ನವೆಂದು ವ್ಯಾಖ್ಯಾನಿಸುತ್ತಾ ಕಾಂಗ್ರೆಸ್ ಹಿಂದೂ ಸಂಸ್ಥೆಯೆಂದೂ ಅದು ಅಲ್ಲ ಸಂಖ್ಯಾತರನ್ನು ಧಮನ ಮಾಡುತ್ತದೆಂದು ತಿಳಿಸಿ ಮುಸ್ಲಿಮರಿಗೆ ನ್ಯಾಯಬೇಕೆ ಅಥವಾ ಕಾಂಗ್ರೆಸ್ ಮಂತ್ರಿ ಮಂಡಲದಲ್ಲಿ ಅಧಿಕಾರ ಬೇಕೆ ಎಂಬುದನ್ನು ನಿರ್ಧರಿಸಲು 1938ರಲ್ಲಿ ಮುಸ್ಲಿಂ ಲೀಗ್ ಒಂದು ಆಯೋಗವನ್ನು ಪಿರಪುರ್‌ ರಾಜನ ನೇತೃತ್ವದಲ್ಲಿ ನೇಮಿಸಿತು. ಈ ಪಿರ್‌ಪುರ್ ಆಯೋಗವು ತನ್ನ ವರದಿಯಲ್ಲಿ ‘ಹಿಂದೂ ಕಾಂಗ್ರೆಸ್ ಅಧಿಕಾರವಿರುವ ಪ್ರಾಂತ್ಯಗಳಲ್ಲಿ ಮುಸ್ಲಿಮರ ಮೇಲೆ ಹಿಂದೂಗಳ ದೌರ್ಜನ್ಯ ಹೆಚ್ಚಿವೆ ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾಗಳ ತತ್ವ ಮತ್ತು ಉದ್ದೇಶಗಳು ಬಹು ಸಾಮ್ಯತೆ ಹೊಂದಿವೆ. ಕಾಂಗ್ರೆಸ್‌ನ ಬಹುಸಂಖ್ಯಾತ ಸದಸ್ಯರು ಹಿಂದೂಗಳೇ ಆಗಿದ್ದು ಅವರು ಶತಮಾನಗಳ ಮುಸ್ಲಿಂ ಮತ್ತು ಬ್ರಿಟಿಷ್ ಆಳ್ವಿಕೆಯ ನಂತರ ಪುನಹ ಹಿಂದೂ ರಾಜ್ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ” ಎಂದು ತಿಳಿಸಿತು. ಈ ವರದಿಯು ಬಹುಸಂಖ್ಯಾತ ಮುಸ್ಲಿಂ ವರ್ಗದಲ್ಲಿ ಬಹುಮತ ಹೊಂದಿದ ಕಾಂಗ್ರೆಸ್ ಸರ್ಕಾರವೇ ನಮ್ಮ ದುರಂತದ ಹಾದಿಯೆಂದು ಭಾವಿಸುವಂತೆ ಮತ್ತು ಕಾಂಗ್ರೆಸ್‌ನಿಂದ ದೂರ ಉಳಿದು ದ್ವಿರಾಷ್ಟ್ರ ಸಿದ್ಧಾಂತಕ್ಕೆ ಅಂಟಿಕೊಳ್ಳುವಂತೆ ಮಾಡಿತು.

1930ರ ಮುಸ್ಲಿಂ ಲೀಗ್‌ ಅಲಹಾಬಾದ್ ಅಧಿವೇಶನದಲ್ಲಿ ಕವಿ ಮತ್ತು ರಾಜಕೀಯ ಚಿಂತಕರಾದ ಮಹಮದ್ ಇಟ್ಬಾಲ್ ತಮ್ಮ ಸ್ಫೂರ್ತಿಯುತ ಭಾಷಣದಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಅವಶ್ಯಕತೆಯನ್ನು ಕುರಿತು ಹೀಗೆ ಹೇಳಿದ್ದಾರೆ. “ಭಾರತೀಯ ಮುಸ್ಲಿಮರು ಸಂಪೂರ್ಣವಾಗಿ ಮತ್ತು ಸ್ವತಂತ್ರವಾಗಿ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬೆಳೆಸಿಕೊಂಡು ಹೋಗಲು ಭಾರತದಲ್ಲೇ ಖಾಯಂ ಆದ ಕೋಮು ಆಧಾರಿತ ನೆಲೆಯು ಅವಶ್ಯಕ ಪಂಜಾಬ್, ಸಾಯುವ್ಯ ಗಡಿ ಪ್ರಾಂತ್ಯ, ಸಿಂದ್ ಮತ್ತು ಬಲೂಚಿಸ್ತಾನಗಳನ್ನು ಒಂದೇ ರಾಷ್ಟ್ರವಾಗಿ ಒಗ್ಗೂಡಿಸುವುದನ್ನು ನೋಡಲು ನಾನು ಬಯುಸುತ್ತೇನೆ. ಆ ರಾಷ್ಟ್ರವು ಬ್ರಿಟಿಷ್ ಸಾಮ್ರಾಜ್ಯದ ಹೊರಗೋ ಅಥವಾ ಒಳಗೋ ಸ್ವಯಮಾಡಳಿತವಿರುವ ಒಗ್ಗೂಡಿದ ವಾಯುವ್ಯ ಭಾರತದ ಮುಸ್ಲಿಂ ರಾಜ್ಯವು ಮುಸ್ಲಿಮರ ಅಂತಿಮ ಅದೃಷ್ಟವಾಗಿದೆ”, ಇಕ್ಷಾಲರ ಈ ಹೇಳಿಕೆಯೇ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಉಗಮದ ಪ್ರಥಮ ಸ್ಪಷ್ಟ ರೂಪವೆಂದು ಗುರುತಿಸಿ ಇಕ್ಷಾಲರನ್ನು ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಜನಕನೆಂದು ಕರೆಯಲಾಗಿದೆ. ಇಕ್ಷಾಲರ ಹೇಳಿಕೆಯನ್ನು ಮುಸ್ಲಿಂಲೀಗ್ ತನ್ನ ಗುರಿಯನ್ನಾಗಿ ಹೊಂದಲು ಹತ್ತು ವರ್ಷಗಳೇ ಬೇಕಾದವು ಮತ್ತು ಕಾರ್ಯಗತವಾಗಲು ಹದಿನೇಳು ವರ್ಷಗಳೇ ಹಿಡಿದವು. ಆದರೆ ಭಾರತೀಯ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಗುರಿಯನ್ನು ಅವರ ಮುಂದಿಟ್ಟಿತು ಎಂಬುದೇ ಇಕ್ಷಾಲರ ಹೇಳಿಕೆಯ ಮಹತ್ವವಾಗಿದೆ.

ಪ್ರತ್ಯೇಕ ಮುಸ್ಲಿಂ ರಾಷ್ಟ್ರವೆಂಬ ವಿಚಾರವು ಪಾಕಿಸ್ತಾನವೆಂಬ ನಿರ್ದಿಷ್ಟವಾದ ಆಕಾರವನ್ನು ಪಡೆದುದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರಹಮತ್ ಅಲಿಯಿಂದ. ಇವನು ಪಂಜಾಬ್, ವಾಯುವ್ಯ ಗಡಿ ಪ್ರಾಂತ್ಯ (ಆಫ್‌ಘನ್ ಪ್ರಾಂತ್ಯ), ಕಾಶ್ಮೀರ, ಸಿಂದ್ ಮತ್ತು ಬಲೂಚಿಸ್ತಾನಗಳನ್ನು ಭಾರತೀಯ ಮುಸ್ಲಿಮರ ಮಾತೃಭೂಮಿಯೆಂದು ಚಿತ್ರಿಸಿ ಮೊದಲ ನಾಲ್ಕು ಪ್ರಾಂತ್ಯಗಳ ಮೊದಲ ಅಕ್ಷರಗಳನ್ನು ಮತ್ತು ಐದನೇ ಪ್ರಾಂತ್ಯದ ಕೊನೆಯ ಅಕ್ಷರಗಳನ್ನು ಸೇರಿಸಿ ಪಾಕಿಸ್ತಾನ ಎಂಬುದಾಗಿ 1933 ರಲ್ಲಿ ಕರೆದನು. ರಹಮತ್ ಅಲಿಯು “ನಮ್ಮ ಧರ್ಮ, ಸಂಸ್ಕೃತಿ, ಇತಿಹಾಸ, ಸಂಪ್ರದಾಯ, ಸಾಹಿತ್ಯ, ಆರ್ಥಿಕ ವಿಧಾನ, ವಿವಾಹ, ಉತ್ತರಾಧಿಕಾರದ ಕಾನೂನುಗಳು ಹಿಂದೂಗಳಿಗಿಂತ ಭಿನ್ನವಾಗಿವೆ. ನಾವು ಮುಸ್ಲಿಮರು ಮತ್ತು ಹಿಂದೂಗಳು ಸಹಭೋಜನ ಮಾಡುವುದಿಲ್ಲ, ಅಂತರ್ವಿವಾಹವಿಲ್ಲ, ನಮ್ಮ ರಾಷ್ಟ್ರೀಯ ಆಚರಣೆಗಳು ಮತ್ತು ಕ್ಯಾಲೆಂಡ‌ರ್ಗಳು ಕೊನೆಗೆ ಆಹಾರ ಪದ್ಧತಿ ಮತ್ತು ಉಡುಗೆಯಲ್ಲೂ ಭಿನ್ನವಾಗಿದ್ದೇವೆ ಎಂದು ವಿಶ್ಲೇಷಿಸಿ ಹಿಂದೂ ಮುಸ್ಲಿಮರು ಮೂಲಭೂತವಾಗಿ ಎರಡು ರಾಷ್ಟ್ರಗಳೆಂದು ಅಭಿಪ್ರಾಯಪಟ್ಟನು.

ಪ್ರತ್ಯೇಕ ಪಾಕಿಸ್ತಾನದ ರಚನೆಗೆ ನಿಜವಾದ ಅರ್ಥ ಮತ್ತು ಕಾರ್ಯರೂಪಕ್ಕೆ ಬಂದದ್ದು ಮಹಮದಾಲಿ ಜಿನ್ನಾರಿಂದ, ಜಿನ್ನಾ 1940ರ ಮುಸ್ಲಿಂ ಲೀಗ್‌ನ ಲಾಹೋರ್ ಅಧಿವೇಶನದಲ್ಲಿ “ಹಿಂದೂ ಮುಸ್ಲಿಂ ಎಂಬುದು ಎರಡು ಧರ್ಮಗಳಾಗಿರದೆ ಸಾಮಾಜಿಕ ವಿಧಾನದಲ್ಲಿ, ತತ್ವಚಿಂತನೆಯಲ್ಲಿ, ಸಾಹಿತ್ಯದಲ್ಲಿ ವಿಭಿನ್ನತೆ ಹೊಂದಿರುವುದರಿಂದ ಹಿಂದೂ ಮುಸ್ಲಿಮರು ಒಂದೇ ರಾಷ್ಟ್ರೀಯರೆಂಬ ಅಭಿಪ್ರಾಯವು ಕನಸೆಂದು, ಮತ್ತು ಇಂತಹ ಎರಡು ರಾಷ್ಟ್ರಗಳು ಒಂದೇ ರಾಜ್ಯದಲ್ಲಿ ಇರುವುದು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟನು. ಒಂದು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ವರ್ಗ, ಮತ್ತೊಂದು ಬಹುಸಂಖ್ಯಾತ ವರ್ಗ ಇವುಗಳು ಒಂದೇ ರಾಜ್ಯದಲ್ಲಿ ಇದ್ದರೆ ಅಸಮದಾನಗಳು ಬೆಳೆದು ಯಾವುದೇ ಸಂಬಂಧದ ಕೊಂಡಿಯನ್ನು ನಾಶಮಾಡುತ್ತವೆ” ಎಂದು ಹೇಳುವುದರ ಮೂಲಕ ಮುಸ್ಲಿಂ ವರ್ಗವು ಪ್ರತ್ಯೇಕ ರಾಷ್ಟ್ರವನ್ನು ಒತ್ತಾಯಿಸುವುದನ್ನು ಒತ್ತಿ ಹೇಳಿದರು.

ಜಿನ್ನಾರವರ ದ್ವಿರಾಷ್ಟ್ರ ಸಿದ್ಧಾಂತವನ್ನು 1940ರ ಮಾರ್ಚ್ 23 ರಂದು ಲಾಹೋರಿನಲ್ಲಿ ಜರುಗಿದ ಮುಸ್ಲಿಂಲೀಗ್ ಅಧಿವೇಶನವು ಅನುಮೋದಿಸಿ “ಭಾರತದ ವಾಯುವ್ಯ ಮತ್ತು ಪೂರ್ವ ಭಾಗಗಳ ಪ್ರದೇಶಗಳನ್ನು ಮುಸ್ಲಿಮರು ಬಹುಸಂಖ್ಯಾತರಾಗಿರುವ ಸ್ವತಂತ್ರ ರಾಜ್ಯಗಳನ್ನಾಗಿ ಪುನರ್ವಿಂಗಡಿಸಬೇಕು” ಎಂಬ ನಿರ್ಣಯವನ್ನು ಕೈಗೊಂಡಿತು. ಆದರೆ ಈ ನಿರ್ಣಯದಲ್ಲಿ ಯೋಜಿತ ಪಾಕಿಸ್ತಾನಕ್ಕೆ ಯಾವ ಯಾವ ಪ್ರದೇಶಗಳು ಸೇರಬೇಕೆಂಬುದನ್ನು – ನಿರ್ದಿಷ್ಟವಾಗಿ ತಿಳಿಸಿರಲಿಲ್ಲ. 1942ರಲ್ಲಿ ಜಿನ್ನಾರವರು ಪ್ರೊಫೆಸರ್ ಕೂಪ್‌ಲ್ಯಾಂಡ್‌ ರವರಿಗೆ ಪಾಕಿಸ್ತಾನದ ಬಗ್ಗೆ ತಿಳಿಸುತ್ತಾ “ಮುಸ್ಲಿಂ ರಾಜ್ಯ ಅಥವಾ ವಾಯುವ್ಯ ಗಡಿ ಪ್ರಾಂತ್ಯ, ಪಂಜಾಬ್ ಮತ್ತು ಸಿಂದ್ ಭಾರತದ ಒಂದು ಭಾಗದಲ್ಲಿ ಮತ್ತು ಬಂಗಾಳ ಮತ್ತೊಂದು ಭಾಗದಲ್ಲಿ ಒಳಗೊಂಡಿರುವ ಪ್ರದೇಶ”ವೆಂದು ಅಭಿಪ್ರಾಯಪಟ್ಟಿದ್ದರು. ಜಿನ್ನಾ ತನ್ನ ಹೇಳಿಕೆಯಲ್ಲಿ ಬಲೂಚಿಸ್ತಾನ, ಅಸ್ಸಾಂ, ಕಾಶ್ಮೀರ, ಹೈದ್ರಾಬಾದ್ ಇವುಗಳಲ್ಲಿ ಯಾವುದನ್ನೂ ಕೇಳಿರಲಿಲ್ಲ. ಆದರೆ ಕ್ಯಾಬಿನೆಟ್ ಆಯೋಗಕ್ಕೆ 1946ರ ಮೇ 12 ರಂದು ಸಲ್ಲಿಸಿದ ಬೇಡಿಕೆಯಲ್ಲಿ ಆರು ಮುಸ್ಲಿಂ ಪ್ರಾಂತ್ಯಗಳನ್ನು ಕೇಳಿತು. ಅವುಗಳಾವುವೆಂದರೆ ಪಂಜಾಬ್, ವಾಯುವ್ಯ ಗಡಿಪ್ರಾಂತ್ಯ, ಬಲೂಚಿಸ್ತಾನ್, ಸಿಂದ್, ಬಂಗಾಳ, ಅಸ್ಸಾಂ” ಹೀಗೆ ಜಿನ್ನಾ ಮತ್ತು ಮುಸ್ಲಿಂ ಲೀಗ್ ನಾಲ್ಕೆ ಪ್ರಾಂತ್ಯಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದದ್ದು ಬ್ರಿಟಿಷರ ಪ್ರೋತ್ಸಾಹ, ಕಾಂಗ್ರೆಸ್‌ನ ವೈಫಲ್ಯದ ಅಂಶಗಳನ್ನು ರಾಜಕೀಯ ಒತ್ತಡದ ತಂತ್ರವಾಗಿ ಬಳಸಿಕೊಂಡು ಒಂದು ಘಟ್ಟದಲ್ಲಿ ಆರು ಪ್ರಾಂತ್ಯಗಳನ್ನು ಕೇಳುವ ಹಂತ ತಲುಪಿದ್ದಲ್ಲ ದೇ ಪೂರ್ವ ಪಾಕಿಸ್ತಾನದ ಪ್ರಾಂತ್ಯಗಳಿಗೂ ಮತ್ತು ಪಶ್ಚಿಮ ಪಾಕಿಸ್ತಾನದ ಪ್ರಾಂತ್ಯಗಳಿಗೂ ಸಂಪರ್ಕಕ್ಕೆ ಸಹಾಯಕವಾಗಲು ಭಾರತದ ಮಧ್ಯಭಾಗದಲ್ಲಿ 10 ಕಿ.ಮೀ. ಅಗಲದ ಮತ್ತು 800 ಮೈಲಿ ಉದ್ದದ “ಕಾರಿಡಾರ್” ನೀಡಬೇಕೆಂದು ಕೇಳಲಾಯಿತು. ಆದರೆ ಈ ಬೇಡಿಕೆಯನ್ನು ಬ್ರಿಟಿಷರು ಒಪ್ಪಲಿಲ್ಲ.

ಬ್ರಿಟಿಷರು ಕಾಂಗ್ರೆಸ್‌ನ ರಾಷ್ಟ್ರೀಯ ಚಳುವಳಿಯನ್ನು ಎದುರಿಸಲು ತಮ್ಮ ಒಡೆದು ಆಳುವ ನೀತಿಯ ಅನ್ವಯ ಜಾರಿಗೆ ತಂದ ಪ್ರತ್ಯೇಕ ಮತದಾರ ಕ್ಷೇತ್ರ ನೀಡಿಕೆಯ ಅಂಶವು ಮುಂದೆ ಪಾಕಿಸ್ತಾನದ ಉಗಮಕ್ಕೆ ಕಾರಣವಾಯಿತು. ಹಾಗೆಯೇ ವೈಸರಾಯಿ ಲಾರ್ಡ್ ಮಿಂಟೋ ಆಗಾಖಾನನ ನೇತೃತ್ವದ ಮುಸ್ಲಿಂ ನಿಯೋಗಕ್ಕೆ ನೀಡಿದ ಭೇಟಿ ಮತ್ತು ಬೆಂಬಲವು ಮುಸ್ಲಿಂ ಲೀಗ್ ಸ್ಥಾಪನೆಗೆ ಕಾರಣವಾಯಿತು. ಮುಸ್ಲಿಂ ನಿಯೋಗದ ನೇತೃತ್ವ ವಹಿಸಿದ್ದ ಆಗಾಖಾನರು ತಮ್ಮ ಆತ್ಮಕಥನದಲ್ಲಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ “ನಮ್ಮ ಬೇಡಿಕೆಗಳಿಗೆ ವೈಸರಾಯಿ ಲಾರ್ಡ್ ಮಿಂಟೋ ನೀಡಿದ ಒಪ್ಪಿಗೆಯೇ ಮುಂದಿನ ಬ್ರಿಟಿಷ್ ಸರ್ಕಾರಗಳು ಭಾರತದ ಸಂಬಂಧವಾಗಿ ರೂಪಿಸಿದ ಭಾವೀ ಸಂವಿಧಾನಾತ್ಮಕ ಯೋಜನೆಗಳಿಗೆ ಅಡಿಪಾಯವಾಯಿತು. ಅದರ ಅಂತಿಮ ಪರಿಣಾಮವೆಂದರೆ ಭಾರತದ ವಿಭಜನೆ ಹಾಗೂ ಪಾಕಿಸ್ತಾನದ ನಿರ್ಮಿತ” ಎಂಬ ಅಭಿಪ್ರಾಯವು ಅರ್ಥಗರ್ಭಿತವೂ ಮತ್ತು ಬ್ರಿಟಿಷ್ ಸರ್ಕಾರ ಮತ್ತು ಮುಸ್ಲಿಂ ಲೀಗ್ ನಡುವಣ ಸಂಬಂಧದ ಗಂಭೀರತೆಯನ್ನು ವ್ಯಕ್ತಪಡಿಸುತ್ತದೆ.

ಈ ಮೇಲಿನ ಎಲ್ಲ ಅಂಶಗಳ ಪರಿಣಾಮವಾಗಿ 1947ರ ಜೂನ್ 2 ರಂದು ಮೌಂಟ್ ಬ್ಯಾಟಿನ್ ಯೋಜನೆ ರೂಪುಗೊಂಡಿತು. ಅದರ ಪ್ರಕಾರ 1947ರ ಆಗಸ್ಟ್ 15 ರಂದು ಭಾರತ ಉಪಖಂಡವು ಸ್ವತಂತ್ರ ಭಾರತ ಹಾಗೂ ಸ್ವತಂತ್ರ ಪಾಕಿಸ್ತಾನಗಳೆಂಬ ಎರಡು ಪ್ರತ್ಯೇಕ ದೇಶಗಳು ರೂಪುಗೊಂಡವು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top