ಜಲಿಯನ್ ವಾಲಾಬಾಗ್ ದುರಂತ
1919ರಲ್ಲಿ ನಡೆದ ಜಲಿಯನ್ ವಾಲಾಭಾಗ್ ಘಟನೆ ಆಧುನಿಕ ಭಾರತದ ಇತಿಹಾಸದಲ್ಲಿ ಅದರಲ್ಲೂ ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ ಪ್ರಮುಖವಾದುದು. ಬ್ರಿಟಿಷರ ದಬ್ಬಾಳಿಕೆ, ಕ್ರೂರನೀತಿ ಮುಂತಾದವನ್ನು ಅರಿತುಕೊಳ್ಳಲು ಈ ಘಟನೆ ಒಂದು ಉದಾಹರಣೆ ಎಂದರೆ ತಪ್ಪಿಲ್ಲ. ರೌಲತ್ ಮಸೂದೆಯ ವಿರುದ್ಧ ನಡೆಯುತ್ತಿದ್ದ ಚಳುವಳಿಯಲ್ಲಿ ಪಂಜಾಬ್ ಸಹ ವೇಗವಾಗಿಯೇ ಸಾಗುತ್ತಿತ್ತು. ಪಂಜಾಬಿನ ಲೆಫ್ಟಿನೆಂಟ್ ಗೌರರ್ ಸರ್ ಮೈಕೆಲ್ – ಡ್ರೈಯರ್ ರಾಜಕೀಯ ಚಟುವಟಿಕೆಯನ್ನು ಹತ್ತಿಕ್ಕಲು ಆಗಾಗಲೆ ಧಮನೀಯ ಸಾಧನಗಳನ್ನು ಅನುಸರಿಸುತ್ತಿದ್ದನು. ಹರತಾಳವಾದ ಒಂದುವಾರದ ನಂತರ ಪಂಜಾಬ್‌ನ ಅಮೃತಸರ ಜಿಲ್ಲೆಯ ಜಲಿಯನ್ ವಾಲಾಬಾಗ್ ಎಂಬಲ್ಲಿ ಜನರಿಗೆ ಸಭೆಯನ್ನು ಸೇರಲು ಕರೆ ನೀಡಲಾಗಿತ್ತು. ಇದರ ನಾಯಕತ್ವವನ್ನು ಡಾ. ಸತ್ಯಪಾಲ್ ಮತ್ತು ಡಾ. ಕಿಚ್ಚು ಎಂಬ ಇಬ್ಬರು ಜನಪ್ರಿಯ ನಾಯಕರು ವಹಿಸಿದ್ದರು.
ಪಂಜಾಬಿನ ಅಮೃತಸರದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದರೂ ಮಾರ್ಚ್ 30 ಮತ್ತು ಏಪ್ರಿಲ್ 9 ರಂದು ಶಾಂತವಾಗಿಯೇ ಹರತಾಳ ಆಚರಿಸಲಾಯಿತು. ಏಪ್ರಿಲ್ 10ರಂದು ಜನನಾಯಕರಾದ ಡಾ|| ಸೈಫುದ್ದೀನ್ ಕಿಚ್ಚು ಮತ್ತು ಡಾ|| ಸತ್ಯಪಾಲ್‌ರನ್ನು ಬಂಧಿಸಿ ಪಂಜಾಬ್ ಪ್ರಾಂತ್ಯದಿಂದಾಚೆಗೆ ಸರ್ಕಾರವು ಗಡಿಪಾರುಮಾಡಿತು. ಪಂಜಾಬಿನ ಜನತೆ ಕಾಂಗ್ರೆಸ್ ಮನೋಭಾವದವರಾಗುವುದನ್ನು ತಡೆಯಲು ಲೆಫ್ಟಿನೆಂಟ್ ಗವರ್ನರ್ ಸರ್ ಮೈಕೆಲ್ ಓ ಡ್ರೈಯರ್ ಪ್ರತಿಜ್ಞೆ ಮಾಡಿದ್ದ. ನಾಯಕರ ಬಂಧನದ ವಿರುದ್ಧ ಏಪ್ರಿಲ್ 10ರ ಮಧ್ಯಾಹ್ನವೇ ಹರತಾಳವನ್ನು ಘೋಷಿಸಿ ಸತ್ಯಪಾಲ್ ಮತ್ತು ಕಿಚ್ಚುರವರನ್ನು ಬಿಡುಗಡೆ ಮಾಡುವಂತೆ ಕೇಳಲು ಡೆಪ್ಯುಟಿ ಕಮಿಷನರ್ ಅವರ ನಿವಾಸದ ಮೆರವಣಿಗೆ ಹೊರಟಿತು. ಪೊಲೀಸರು ಮೆರವಣಿಗೆಯನ್ನು ಬಲಾತ್ಕಾರದಿಂದ ಹಿಂದಕ್ಕಟ್ಟಿದರು ಮತ್ತು ಶಸ್ತ್ರರಹಿತರಾದ ಜನರತ್ತ ಎರಡು ಬಾರಿ ಗುಂಡು ಹಾರಿಸಲಾಯಿತು. ಅನೇಕರು ಸತ್ತರು. ಇದರಿಂದ ಕೋಪಗೊಂಡ ಜನರು ‘ಹಿಂಸಾಚಾರದಲ್ಲಿ ತೊಡಗಿದರು ಅಮೃತಸರದಲ್ಲಿ ದಂಗೆಕಾರರು’ ಮೂರುಮಂದಿ ಇಂಗ್ಲಿಷ್ ಬ್ಯಾಂಕ್ ಮ್ಯಾನೇಜರುಗಳನ್ನು ಕೊಂದು ಆಂಗ್ಲ ಶಾಲೆಯ ಮುಖ್ಯೋಪಾಧ್ಯಾಯಿನಿ ಮಿಸ್ ಷೇರ್‌ಹುಡ್‌ರನ್ನು ಹೊಡೆದು ಗಾಯಗೊಳಿಸಿದರು. ಕೆಲವು ಸಾರ್ವಜನಿಕ ಕಟ್ಟಡಗಳನ್ನು ಸುಟ್ಟು ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು. ಸರ್ಕಾರವು ಸೇನಾ ತುಕಡಿಗಳನ್ನು ನೇಮಿಸಿ ನಗರದಲ್ಲಿ ಶಾಂತಿಯನ್ನು ಕಾಪಾಡಿತು.
ಜಲಂಧರ್‌ನಲ್ಲಿದ್ದ ಡೈಯರ್‌ನನ್ನು ಸರ್ಕಾರವು ಅಮೃತಸರಕ್ಕೆ ಕರೆಸಿತು. ಡೈಯರ್‌ನು ಅಮೃತಸರಕ್ಕೆ ಹೊರಡುವ ಮೊದಲು ತನ್ನ ಮಗನಿಗೆ “ಹಿಂದೂ ಮುಸ್ಲಿಮರು ಒಂದಾಗಿದ್ದಾರೆ ಮುಂದೆ ಒಂದು ದೊಡ್ಡ ಘಟನೆ ನಡೆಯಲಿದೆ. ಆದ್ದರಿಂದ ನಿನ್ನ ತಾಯಿ ಮತ್ತು ದಾಯಾದಿ ಅಲೈಸ್‌ರನ್ನು ಕಾಯುತ್ತಾ ನೀನು ವರಾಂಡದಲ್ಲಿ ಮಲಗು” ಎಂದು ಎಚ್ಚರಿಕೆ ಕೊಟ್ಟು ಏಪ್ರಿಲ್ 11ರಂದು ಅಮೃತಸರಕ್ಕೆ ಬಂದು ಅಧಿಕಾರ ವಹಿಸಿಕೊಂಡನು. ಪಂಜಾಬ್ ಸರ್ಕಾರವು ಜನರ ಮೇಲೆ ಸೇಡು ತೀರಿಸಿಕೊಳ್ಳಲು ಉಗ್ರಕಾರ್ಯಾಚರಣೆಯನ್ನು ಕೈಗೊಳ್ಳಲು ಬ್ರಿಗೇಡಿಯರ್ ಜನರಲ್ ಡೈಯರ್‌ಗೆ ಸಂಪೂರ್ಣ ಅಧಿಕಾರ ನೀಡಿತು. ಅನೇಕರನ್ನು ದಸ್ತಗಿರಿ ಮಾಡಿದ ಡೈಯರ್ ಅಮೃತಸರದಲ್ಲಿ ಎಲ್ಲ ಸಭೆ ಸಮಾವೇಶಗಳನ್ನೂ ಬಹಿಷ್ಕರಿಸಿರುವುದಾಗಿ ಘೋಷಿಸಿದ. ಆದರೆ ಘೋಷಣೆಯು ಇಂಗ್ಲಿಷ್‌ನಲ್ಲಿದ್ದುದು ಅನೇಕರಿಗೆ ಅರ್ಥವಾಗಲಿಲ್ಲ ಮತ್ತು ನಗರದ ಅನೇಕ ಭಾಗಗಳಲ್ಲಿ ಆ ಘೋಷಣೆಯನ್ನು ಓದಲೂ ಇಲ್ಲ. ಡೈಯರ್‌ನು ಸೈನಿಕರಿಂದ ಪಥಸಂಚಲನ ಕೈಗೊಂಡಾಗ ನಗರದ ಜನರು ‘ಹಿಂದೂ ಮುಸಲ್ಮಾನ್ ಕಿ ಜೈ” ಎಂಬುದಾಗಿ ಕೂಗಿದುದು ಅವನನ್ನು ಇನ್ನೂ ಉದ್ರೇಕಗೊಳಿಸಿತು.
ಏಪ್ರಿಲ್ 13ರಂದು ವೈಶಾಖದ ದಿನ 10ರಿಂದ 20 ಸಾವಿರ ಜನರು ಜಲಿಯನ್ ವಾಲಾಬಾಗ್‌ನಲ್ಲಿ ಸಭೆ ಸೇರಿರುವರೆಂದು ತಿಳಿದ ಡೈಯರ್ 25 ಜನ ಗೂರ್ಖಾ, 25 ಜನಸಿಖ್, ರೈಫಲ್ ಹೊಂದಿದ ಸೈನಿಕರು ಮತ್ತು 40 ಜನ ಕೂಕ್ರಿ, ಆಯುಧ ಹೊಂದಿದ ಗೂರ್ಖಾ ಸೈನಿಕರನ್ನು ಆಯ್ದುಕೊಂಡು ಎರಡು ವಾಹನಗಳಲ್ಲಿ ತುಂಬಿಕೊಂಡು ಸಭೆ ಸೇರಿದ ಸ್ಥಳಕ್ಕೆ ಬಂದನು. ತನ್ನ ಅಪ್ಪಣೆಗೆ ವಿರುದ್ಧವಾಗಿ ಜನ ಸೇರಿದ್ದುದರಿಂದ ಚದುರಲು ಎಚ್ಚರಿಕೆ ನೀಡದೆ ಸೈನಿಕರಿಗೆ ಗುಂಡು ಹಾರಿಸಲು ಆಜ್ಞೆ ನೀಡಿದ *10 ಸಾವಿರಕ್ಕೂ ಹೆಚ್ಚು ಶಸ್ತ್ರರಹಿತ ಗುಂಪಿನ ಮೇಲೆ 100 ಅಡಿ ಅಂತರದಿಂದ 10 ನಿಮಿಷಗಳ ಕಾಲ ಸತತವಾಗಿ ಅಮಾನುಷವಾಗಿ ಗುಂಡು ಹಾರಿಸಲಾಯಿತು. ಗುಂಡು ಹಾರಲು ಪ್ರಾರಂಭವಾದ ತಕ್ಷಣ ಜನರು ಚದುರಲು ಪ್ರಾರಂಭಿಸಿದರು. ಒಟ್ಟು 1650 ಗುಂಡುಗಳನ್ನು ಹಾರಿಸಲಾಯಿತು. ಗುಂಡನ್ನು ತಪ್ಪಿಸಿಕೊಳ್ಳಲು ಬೇರೆ ಯಾವುದೇ ಮಾರ್ಗವಿರಲಿಲ್ಲ 5 ಅಡಿ ತಗ್ಗಾಗಿದ್ದ ಕಡೆಗೆ ಓಡಿ ತಪ್ಪಿಸಿಕೊಳ್ಳಲು ಗುಂಪು ಪ್ರಯತ್ನಿಸಿತು. ಆದರೆ ಜನ ಗುಂಪಾಗಿ ಸೇರಿದ ಕಡೆಗೆ ಗುರಿಯಿಡಬೇಕೆಂದು ಡೈಯರ್ ಸೈನಿಕರಿಗೆ ಸೂಚನೆ ನೀಡುತ್ತಿದ್ದನು. ಸರ್ಕಾರವು ನಾಲ್ಕು ತಿಂಗಳನಂತರ ನೇಮಿಸಿದ ವಿಚಾರಣಾ ಸಮಿತಿಯ ಅಂದಾಜಿನಂತೆ 373 ಜನರು ಸತ್ತರು, 1137 ಜನರಿಗೆ ಗಾಯಗಳಾದವು ಅಂದರೆ 1650 ಗುಂಡುಗಳಿಗೆ 1516 ಸಾವು ನೋವುಗಳು ಡೈಯರ್ ಮಾತಿನಲ್ಲೇ ಹೇಳಬೇಕೆಂದರೆ ‘ಗುರಿ’ ಪಸಂದಾಗಿತ್ತು.
ಕೆಲವಾರು ತಿಂಗಳ ನಂತರದ ವರದಿಯು ದುರಂತದಲ್ಲಿ 379 ಮಂದಿ ಮರಣವನ್ನು ಅಪ್ಪಿ 1200 ಜನರು ಗಾಯಗೊಂಡರೆಂದು ತಿಳಿಸಿತು. ಇದು ಇತಿಹಾಸದಲ್ಲಿ ಜಲಿಯನ್ ವಾಲಾಭಾಗ್ ದುರಂತವೆಂದು ಪ್ರಸಿದ್ಧಿಯಾಗಿದೆ. ಈ ವಿಷಯ ತಿಳಿದ ಭಾರತೀಯರು ಸ್ವಾಭಾವಿಕವಾಗಿಯೇ ದಿಗೂಢರಾದರು ಮತ್ತು ದೇಶದಾದ್ಯಂತ ಅಶಾಂತಿಯ ಹೊಗೆಯಾಡಲಾರಂಭಿಸಿತು. ಪಂಜಾಬಿನ ದುರಂತವು ಮುಂದಿನ ಪೀಳಿಗೆಗೂ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಈ ಘಟನೆಯನ್ನು ಪ್ರತಿಭಟಿಸಲು ರವೀಂದ್ರನಾಥ ಠಾಗೂರ್‌ರವರು ತಮಗೆ ಬಂದಿದ್ದ “ನೈಟ್ ಹುಡ್” ಪದವಿಯನ್ನು ತಿರಸ್ಕರಿಸಿದರು. ಗಾಂಧೀಜಿಯವರು ಕೈಸರ್-ಇ-ಹಿಂದ್ ಪದವಿಯನ್ನು ಠಾಗೂರ್‌ರಂತೆ ತಿರಸ್ಕರಿಸಿದರು. ಠಾಗೂರ್ ಮತ್ತು ಸ್ನೇಹಿತರಾದ ಸಿ. ಎಫ್. ಆಂಡ್ರಸ್, ಗಾಂಧೀಜಿ, ನೆಹರೂರವರು ನಂತರ ಅಮೃತಸರಕ್ಕೆ ಭೇಟಿಕೊಟ್ಟರು. ಮಹದೇವ ದೇಸಾಯಿಯವರು ಅಲ್ಲಿಗೆ ಭೇಟಿಕೊಟ್ಟ ನಂತರ “ಅದೊಂದು ಕಗೊಲೆ, ಒಂದು ಕೊಲೆಗಡುಕತನ” ಎಂದು ಉದ್ಗರಿಸಿದರು.
ಡೈಯರ್‌ನು ತನ್ನ ಮೇಲಧಿಕಾರಿಗಳಿಗೆ ಬರೆಯುತ್ತಾ “ಜನರನ್ನು ಚದುರಿಸುವ ಪ್ರಶ್ನೆಯೇ ಇರಲಿಲ್ಲ. ಅಲ್ಲಿ ಸೇರಿದ್ದ ಜನರಲ್ಲಿ ಮತ್ತು ಪಂಜಾಬಿನಾದ್ಯಂತ ಭಯದ ವಾತಾವರಣವನ್ನು ನಿರ್ಮಾಣ ಮಾಡುವುದೇ ನನ್ನ ಉದ್ದೇಶವಾಗಿತ್ತು. ಅದರಲ್ಲಿ ಕಾಠಿಣ್ಯದ ಮಾತೇ ಇಲ್ಲ ಮತ್ತು ನಾನು ಒಳ್ಳೆಯ ಕೆಲಸವನ್ನೇ ಮಾಡಿದೆನೆಂದುಕೊಂಡೆ” ಎಂದು ತಿಳಿಸಿದ್ದಾನೆ.
ಪಂಜಾಬ್‌ನ ಇನ್ನಿತರ ದೌರ್ಜನ್ಯಗಳು
ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ನಾಗರಿಕ ಸರ್ಕಾರದಲ್ಲಿ ನಡೆಯಿತು. ಅಮೃತಸರದಲ್ಲಿ 1919ರ ಏಪ್ರಿಲ್ 15ರಂದು ಸೈನಿಕ ಶಾಸನವನ್ನು ಜಾರಿಗೆ ತರಲಾಯಿತು. ಪಂಜಾಬ್‌ನ ಇತರ ಐದು ಜಿಲ್ಲೆಗಳಲ್ಲೂ ಏಪ್ರಿಲ್ 15ರಿಂದ 24ರೊಳಗೆ ಸೈನಿಕ ಆಡಳಿತವನ್ನು ಜಾರಿಗೆ ತಂದು ಜೂನ್ 11 ರವೆರೆವಿಗೂ ಜಾರಿಯಲ್ಲಿತ್ತು. ಹಂಟರ್ ಸಮಿತಿಯ ವರದಿಯಲ್ಲಿ* ಮಾರ್ಷಲ್ ಕಾನೂನನ್ನು ಜಾರಿಗೆ ತರುವಂತಹ ಯಾವುದೇ ಪರಿಸ್ಥಿತಿಯಲ್ಲಿರಲಿಲ್ಲವೆಂದು ತಿಳಿಸುತ್ತದೆ. ಈ ಸೈನಿಕ ಶಾಸನ ಜಾರಿಯಲ್ಲಿದ್ದ ಸಂದರ್ಭದಲ್ಲಿ ಯಾವುದೇ ನಾಗರಿಕ ರಾಷ್ಟ್ರದಲ್ಲಿ ನಡೆಯದಂತಹ ಭಯಾನಕ ಆಳ್ವಿಕೆ ನಿರ್ಮಾಣಗೊಂಡಿತು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವ ಬಗ್ಗೆ ಡಯರ್ ಹೇಳಿದ ಮಾತು “ಅದು ನನ್ನ ಕರ್ತವ್ಯವಲ್ಲ, ಗಾಯಗೊಂಡವರು ಬೇಕಾದರೆ ಆಸ್ಪತ್ರೆಗೆ ಹೋಗಲಿ” ಎಂಬುದಾಗಿತ್ತು. ಆದರೆ ಅದೇ ದಿನ (ಏಪ್ರಿಲ್ 13) ಡಯರ್ ಕರ್ಪ್ಯೂವನ್ನು ಜಾರಿ ಮಾಡಿ “ಎಲ್ಲ ಜನರು ರಾತ್ರಿ 8 ಗಂಟೆಯ ನಂತರ ಮನೆಯೊಳಗಿರಬೇಕು, ಮನೆಯಿಂದ ಹೊರಗಡೆ ಬಂದು ಬೀದಿಯಲ್ಲಿದ್ದರೆ ‘ ಕಂಡಲ್ಲಿ ಗುಂಡು ಹಾರಿಸಲಾಗುವುದು ಎಂದು ಘೋಷಿಸಿದನು. ಇದರಿಂದ ಗಾಯಗೊಂಡವರು ನರಳುತ್ತಲೂ ಸತ್ತ ದೇಹಗಳನ್ನು ನರಿಗಳು ಕಿತ್ತು ತಿನ್ನುವಂತಾಯಿತು. ಹತ್ಯಾಕಾಂಡದಲ್ಲಿ ನೊಂದವರ ಸಂಬಂಧಿಗಳು ಗಾಯಗೊಂಡ ಸಂಬಂಧಿಕರನ್ನು ಶುಶೂಷೆಗೆ ಕರೆತರುವ ಬದಲು ದೀನರಾಗಿ, ಭಯಗ್ರಸ್ಥರಾಗಿ ಮನೆಯಲ್ಲಿ ಕುಳ್ಳಿರುವಂತಾಯಿತು. ಡಯರ್‌ನು ನಗರದ ಜನತೆಯನ್ನು ಸಂಕಷ್ಟಕ್ಕೀಡುಮಾಡಲು ವಿದ್ಯುತ್ ಶಕ್ತಿ ಮತ್ತು ನೀರಿನ ಪೂರೈಕೆಯನ್ನು ಸ್ಥಬ್ದಗೊಳಿಸಿದನು.
ಮುಖ್ಯೋಪಾಧ್ಯಾಯನಿ ಮಿಸ್ ಶರ್ವಂಗ್‌ರನ್ನು ಗಲಭೆಕೋರರು ಗಾಯಗೊಳಿಸಿದ್ದರು. ಡೈಯರ್ ನು ಏಪ್ರಿಲ್ 19ರಂದು ಮಿಸ್‌ಶೆರ್‌ವುಡ್ ಬ್ಯಾಂಡೇಜ್ ಸುತ್ತಿಕೊಂಡಿರುವುದನ್ನು ಗಮನಿಸಿ ಇಂಗ್ಲಿಷ್ ಸ್ತ್ರೀಯನ್ನು ಅವಮಾನವಡಿಸಿದ ಕುಚಾತವಾರೀನ್ ಮಾರ್ಗದಲ್ಲಿ ಭಾರತೀಯರು ಹೋಗಬೇಕಾದರೆ ಅವರು ಅಲ್ಲಿ ತೆವಳಿಕೊಂಡು ಅಥವಾ ಅಂಬೆಗಾಲಿಟ್ಟುಕೊಂಡು ಹೋಗಬೇಕೆಂದು “ಕ್ರಾಲಿಂಗ್ ಆರ್ಡರ್”ನ್ನು ಹೊರಡಿಸಿದನು. ಅದರಂತೆ ಏಪ್ರಿಲ್ 26ರ ವರೆವಿಗೂ ಅಂದರೆ ಸರ್ಕಾರ ಆ ಕಾನೂನನ್ನು ಹಿಂದೆಗೆದುಕೊಳ್ಳುವವರೆವಿಗೂ ಎಲ್ಲರೂ ತೆವಳುತ್ತಾ ಹೋಗಬೇಕಾಯಿತು. ಯಾರು ಅಂಬೆಗಾಲಿನಲ್ಲಿ ಬರುವುದಿಲ್ಲವೋ ಅಂತಹವರನ್ನು ಕಂಬಕ್ಕೆ ಕಟ್ಟಿ ಛಡಿ ಏಟುಗಳನ್ನು ಹೊಡೆಸಲು ಛಡಿ ಏಟಿನ ಕಂಬದ ವಿರ್ವಾಡನ್ನು ಶಾಲೆಯ ಮುಂಭಾಗದಲ್ಲಿ ಮಾಡಿಸಿದ್ದನು. ಮಿಸ್ ಶೇರ್ ವುಡ್ ನ್ನು ಗಾಯಗೊಳಿಸುವಲ್ಲಿ ಭಾಗಿಯಾಗಿದ್ದವರನ್ನು ಗುರುತಿಸಿ ಬಹಿರಂಗವಾಗಿ ಬೀದಿಯಲ್ಲಿ ಛಡಿ ಏಟನ್ನು ನೀಡಲಾಯಿತು. ಗಲಭೆಯಲ್ಲಿ ಭಾಗಿಯಾದವರೆಂದು 298 ಜನರನ್ನು ಗುರುತಿಸಿ ಅವರಲ್ಲಿ 218 ಜನಕ್ಕೆ ಶಿಕ್ಷೆ ವಿಧಿಸಲಾಯಿತು.
ಕ್ಯಾಪ್ಟನ್ ಡೊನ್‌ಟನ್ ಎಂಬುವವನು ಕಸೂರಿನಲ್ಲಿ ಬ್ರಾಹ್ಮಣ ಸಾಧುಗಳು ಎದುರಾಗಿ ಬಂದರೆ ಅವರು ಅವನ ಮುಂದೆ ತಮ್ಮ ಹಣೆಯನ್ನು ಭೂಮಿಗೆ ಮುಟ್ಟಿಸಿ ಗೌರವ ಸೂಚಿಸಬೇಕೆಂದು ಆಜ್ಞೆ ಹೊರಡಿಸಿದ್ದನು. 107 ಜನರನ್ನು ಸುಡುವ ಬಿಸಿಲಿನಲ್ಲಿ ಅದಕ್ಕಾಗೇ ಸಿದ್ಧಪಡಿಸಿದ್ದ ಪಂಜರದಲ್ಲಿ ಇಡಿಸಿದ್ದನು. ವಿದ್ಯಾರ್ಥಿಗಳನ್ನು ಭಯಬೀತರನ್ನಾಗಿಸಲು ಪ್ರತಿದಿನವೂ ಹತ್ತಾರು ಮೈಲಿ ಗೊತ್ತಾದ ಜಾಗಕ್ಕೆ ಓಡಿ ಹೋಗಿ ವಾಪಸ್ಸು ಬರುವ ಶಿಕ್ಷೆ ವಿಧಿಸಲಾಯಿತು. ಪಂಜಾಬನ್ನು ವೈರಿಗಳ ಪ್ರದೇಶದಂತೆ ಕಂಡ ಮಿಲಿಟರಿ ಮತ್ತು ಲೆಫ್ಟಿನೆಂಟ್ ಗವರ್ನರ್ ವಿಮಾನಗಳ ಮೂಲಕ ಬಾಂಬ್ ಹಾಕಲು ಯೋಜಿಸಿದನು. ಗುರ್ಜನ್‌ವಾಲಾದಲ್ಲಿ ವಿಮಾನಗಳಿಂದ ಬಾಂಬ್ ಹಾಕಲಾಯಿತು ಮತ್ತು ಮೆಷಿನ್‌ಗನ್ ಮೂಲಕ 255 ಸುತ್ತು ಗುಂಡನ್ನು ಹಾರಿಸಲಾಯಿತು. ಡಾಡ್‌ಕಿನ್ಸ್ ಎಂಬುವವನು ವಿಮಾನದ ಮೂಲಕ ವ್ಯವಸಾಯದಲ್ಲಿ ತೊಡಗಿದ್ದ 20 ಕೃಷಿಕರ ಮೇಲೆ ಮೆಷಿನ್ ಗನ್ ಉಪಯೋಗಿಸಿದ ಮತ್ತು ಜನರನ್ನುದ್ದೇಶಿಸಿ ಒಬ್ಬ ವ್ಯಕ್ತಿ ಮಾತನಾಡುತ್ತಿದ್ದ ಗುಂಪಿನ ಮೇಲೆ ಬಾಂಬ್ ಹಾಕಿ ಚದುರಿಸಿದ ನಂತರ ಹಳ್ಳಿಯ ಮೇಲೆ ಮೆಷಿನ್‌ನ್‌ನಿಂದ ಗುಂಡಾರಿಸಿದ ಇದರಿಂದ 9 ಜನ ಸತ್ತು 16 ಜನ ಗಾಯಗೊಂಡರು. ಮೇಜರ್ ಕ್ಯಾರ್‌ಬೆರ್ರಿ ನೀಡುವ ವರದಿಯಂತೆ “ಒಂದು ಗುಂಪಿನ ಮೇಲೆ ಬಾಂಬ್ ದಾಳಿ ಮಾಡಿದೆ ಏಕೆಂದರೆ ಅವರು ದಂಗೆಕೋರರೆಂದು ಭಾವಿಸಿದೆ” ಗುಂಪು ಚದುರಿದ ಮೇಲೆ ಹಳ್ಳಿಯ ಮೇಲೆ ಮೆಷಿನ್‌ನ್‌ನಿಂದ ದಾಳಿಮಾಡಿದ. ಇವನು ಕೇವಲ 200 ಅಡಿ ಎತ್ತರದಲ್ಲಿದ್ದು ಕೆಳಗೆ ಏನು ನಡೆಯುತ್ತಿದೆಯೆಂಬುದು ಅವನಿಗೆ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಆದರೂ ಬಾಂಬ್ ದಾಳಿ ಮಾಡಲು ಅವನೇ ಕೊಡುವ ಕಾರಣವೆಂದರೆ ‘ಗುಂಡಿನ ದಾಳಿಯ ಉದ್ದೇಶ ನಷ್ಟಮಾಡುವುದಷ್ಟೇ ಅಲ್ಲ ಕೆಲವರನ್ನಾದರೂ ಕೊಲ್ಲುವುದರಿಂದ ಅವರಲ್ಲಿ ಮಾನಸಿಕ ಭಯ ಉಂಟಾಗಿ ಮತ್ತೆ ಅವರು ಗುಂಪು ಸೇರದಿರದಂತೆ ಮಾಡುವುದಾಗಿತ್ತು. ಅಫಿಜಾಬಾದ್‌ನ ಲಾಲಬೇಲಿ ರಾಂ ಕಪೂರ್‌ನನ್ನು ಬಂದಿಸಿ 23 ಜನರಿದ್ದ 12 x 25 ಅಡಿಯ ಚಿಕ್ಕ ಕೋಣೆಯಲ್ಲಿ ಜೂನ್ 6ರ ವರೆವಿಗೂ ಕೂಡಿಡಲಾಗಿತ್ತು. ಅವರ ದೈನಂದಿನ ನೈಸರ್ಗಿಕ ಬೇಡಿಕೆಯನ್ನು ಅಲ್ಲಿಯೇ ಪೂರೈಸುವಂತಹ ಶಿಕ್ಷೆಯನ್ನು ವಿಧಿಸಲಾಗಿತ್ತು.
ಬೊಸವರ್ತ ಸ್ಮಿತ್ ಎಂಬುವವನು ಸ್ತ್ರೀಯರನ್ನು ಬಹಳ ಕೀಲ್ಮಟ್ಟದಲ್ಲಿ ನಡೆಸಿಕೊಂಡ ಅಂಶವನ್ನು ಲಾಲಾಲಜಪತರಾಯರೇ ಕಲ್ಕತ್ತ ಕಾಂಗ್ರೆಸ್ ಅಧಿವೇಶನದಲ್ಲಿ ತಿಳಿಸಿದರು. ಇಂತಹ ಸಾವಿರಾರು ಘಟನೆಗಳು ಪಂಜಾಬನ್ನು ಮಾರ್ಷಲ್ ಕಾನೂನಿನ ಅಡಿಯಲ್ಲಿ ಭಯಾನಕ ಅಳ್ವಿಕೆಯನ್ನೇ ನಿರ್ಮಿಸಿದ್ದವು.


