Essay-45 ಭಾರತದ ನೆರೆಹೊರೆಯಲ್ಲಿ ಪ್ರಕ್ಷುಬತೆ
Essay-45 ಭಾರತದ ನೆರೆಹೊರೆಯಲ್ಲಿ ಪ್ರಕ್ಷುಬತೆ: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ‘ನೆರೆಹೊರೆಯಲ್ಲಿ ಪ್ರಕ್ಷುಬ್ಧತೆ ಮತ್ತು ಭಾರತದ ಮೇಲೆ ಅದರ ಪರಿಣಾಮಗಳು’ ಎಂಬ ವಿಷಯದ ಮೇಲೆ ಪ್ರಬಂಧ ನೀಡಲಾಗಿದೆ.
ಭಾರತದ ನೆರೆಹೊರೆ ಪ್ರದೇಶವು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ.ಮ್ಯಾನ್ಮಾರ್‌ನಲ್ಲಿ ಅಂತರ್ಯುದ್ಧ ಬಾಂಗ್ಲಾದೇಶದಲ್ಲಿ ರಾಜಕೀಯ ಕ್ರಾಂತಿ, ನೇಪಾಳದಲ್ಲಿ ಪ್ರಜಾಪ್ರಭುತ್ವಕ್ಕೆ ಸವಾಲುಗಳು ಹಾಗೂ ಶ್ರೀಲಂಕಾದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಂತರ ದುರ್ಬಲ ಚೇತರಿಕೆ ಕಂಡುಬರುತ್ತಿದೆ. ಆ ದೇಶಗಳಲ್ಲಿನ ಆಂತರಿಕ ಸನ್ನಿವೇಶವು ಭಾರತದ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತಿದೆ. ಈ ಒಟ್ಟಾರೆ ವಿದ್ಯಮಾನದ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಭಾರತದ ನೆರೆಹೊರೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು:
ಇತ್ತೀಚಿನ ವರ್ಷಗಳಲ್ಲಿ ಭಾರತದ ನೆರೆಹೊರೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಇದರಲ್ಲಿ ನೇಪಾಳ, ಬಾಂಗ್ಲಾದೇಶ, ಮಾಲ್ಡಿವ್ಸ್ ಹಾಗೂ ಶ್ರೀಲಂಕಾದಂತಹ ದೇಶಗಳಲ್ಲಿನ ರಾಜಕೀಯ ಕ್ರಾಂತಿಗಳು ಸೇರಿವೆ. 2024ರಲ್ಲಿ ಬಾಂಗ್ಲಾದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯು ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಓಡಿ ಬರುವಂತೆ ಮಾಡಿತು. ಈ ಘಟನೆಯು ಹಲವು ದಶಕಗಳ ಭಾರತ-ಬಾಂಗ್ಲಾದೇಶ ಸಂಬಂಧಕ್ಕೆ ದೊಡ್ಡ ಪೆಟ್ಟು ನೀಡಿತು. ಈಗ ಅಲ್ಲಿನ ಮಧ್ಯಂತರ ಸರಕಾರವು ಶೇಖ್ ಹಸೀನಾರನ್ನು ಅಪರಾಧಿಯನ್ನಾಗಿ ಘೋಷಿಸಿ ಅವರನ್ನು ತನಗೆ ಹಸ್ತಾಂತರಿಸುವಂತೆ ಒತ್ತಾಯಿಸುತ್ತಿದೆ. ಭಾರತ ಶೇಖ್ ಹಸೀನಾರ ರಕ್ಷಣೆಗೆ ಬದ್ಧವಾಗಿದೆ. ಇದು, ಭಾರತದ ಕುರಿತು ಜಾಗತಿಕ ದೃಷ್ಟಿಕೋನದಲ್ಲಿನ ಬದಲಾವಣೆಗೆ ಕಾರಣವಾಗಬಹುದು.
ಮಾಲ್ಡಿವ್ಸ್ ನಲ್ಲಿ ನಡೆದ ‘ಇಂಡಿಯಾ ಔಟ್’ ಅಭಿಯಾನವು ಭಾರತ ವಿರೋಧಿ ಭಾವನೆಯ ಸಂಕೇತವಾಗಿದೆ. ಅರೇಬಿಯನ್ ಸಮುದ್ರದಲ್ಲಿ ಆಯಕಟ್ಟಿನ ಸ್ಥಳದಲ್ಲಿ ನೆಲೆಗೊಂಡಿರುವ ಮಾಲ್ಡಿವ್ಸ್ ಭಾರತದ ರಕ್ಷಣಾ ತಂತ್ರದ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ಚೀನಾ ಬೆಂಬಲಿತ ಮಹ್ಮದ್ ಮುಯಿಝಿ ಅಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ಭಾರತ ವಿರೋಧಿ ಮನಸ್ಥಿತಿ ಹೊಂದಿದ್ದಾರೆ. ಇತ್ತೀಚೆಗೆ, ಅವರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದ್ದರೂ, ಅದು ಮೇಲ್ನೋಟದ ವರ್ತನೆಯಂತಿದೆ.
ಶ್ರೀಲಂಕಾದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಅಧಿಕಾರಕ್ಕೆ ಬಂದ ಅನುರ ಕುಮಾರ ದಿಸ್ಸನಾಯಕೆ ಭಾರತದೊಂದಿಗೆ ಬಾಂಧವ್ಯ ವೃದ್ಧಿಯನ್ನು ವ್ಯಕ್ತಪಡಿಸಿದ್ದಾರಾದರೂ, ಅವರ ಸಮಾಜವಾದಿ ಹಿನ್ನೆಲೆ ಅವರನ್ನು ಚೀನಾದತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡಿದರೆ ಆಶ್ಚರ್ಯವಿಲ್ಲ. ಭಾರತವು ಮೊದಲಿನಿಂದಲೂ ಶ್ರೀಲಂಕಾಕ್ಕೆ ನೆರವಿನ ಹಸ್ತ ಚಾಚುತ್ತಾ ಬಂದಿದೆ. ಇದೀಗ ದಿತ್ವಾಹ್ ಚಂಡಮಾರುತಕ್ಕೆ ಸಿಕ್ಕು ನಲುಗಿರುವ ಆ ದ್ವೀಪ ರಾಷ್ಟ್ರಕ್ಕೆ ಭಾರತವು ಪರಿಹಾರ ಸಾಮಗ್ರಿ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಿಕೊಟ್ಟಿದೆ.
ಮತ್ತೊಂದು ನೆರೆಯ ರಾಷ್ಟ್ರ ನೇಪಾಳ ಸಂಸ್ಕೃತಿಕವಾಗಿ ಭಾರತಕ್ಕೆ ಹೆಚ್ಚು ಹತ್ತಿರವಾಗಿದೆ. ಆದರೆ, ಈ ಶತಮಾನದ ಆರಂಭದಲ್ಲಿ ಅಲ್ಲಿದ್ದ ರಾಜಪ್ರಭುತ್ವವನ್ನು ಕಿತ್ತೊಗೆದ ಬಳಿಕ ಚೀನಾ ಬೆಂಬಲಿತ ಕಮ್ಯುನಿಸ್ಟರ ಪ್ರಭಾವ ಹೆಚ್ಚಾಗಿದೆ. ಇದು ಅಲ್ಲಿನ ರಾಜಕೀಯ ಅಸ್ಥಿರತೆಗೆ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಅಲ್ಲಿ ನಡೆದ ಜೆನ್-ಝೀಗಳ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದು ಅಲ್ಲಿನ ಸರಕಾರವನ್ನು ಕಿತ್ತೊಗೆದು ಮಧ್ಯಂತರ ಸರಕಾರ ಸ್ಥಾಪನೆಯಾಗಿದೆ.
ಮ್ಯಾನ್ಮಾರ್‌ನಲ್ಲಿನ ಆಂತರಿಕ ಕಲಹವು ಭಾರತವು ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸುವ ಅಗತ್ಯವನ್ನುಂಟು ಮಾಡಿದೆ. ಭಾರತವು ತನ್ನ ನೆರೆಹೊರೆಯಲ್ಲಿ ಚೀನಾದ ಬೆಳೆಯುತ್ತಿರುವ ಆರ್ಥಿಕ ಮತ್ತು ಮಿಲಿಟರಿ ಪ್ರಭಾವವನ್ನು ಎದುರಿಸಬೇಕಾಗಿದೆ. ವಿಶೇಷವಾಗಿ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್‌ಐ)ನಿಂದಾಗಿ ಭಾರತದ – ನೆರೆಹೊರೆ ಸಂಬಂಧದಲ್ಲಿನ ಅಸ್ಥಿರತೆಗೆ ಕಾರಣವಾಗಿದೆ.
ಆಸ್ಥಿರತೆಯ ಪರಿಣಾಮಗಳು:
ಭದ್ರತಾ ಆತಂಕ ಭಾರತದ ನೆರೆಹೊರೆಯಲ್ಲಿನ ಅಸ್ಥಿರತೆಯು ಭದ್ರತಾ ಕಳವಳಗಳನ್ನು ಉಲ್ಬಣಗೊಳಿಸುತ್ತದೆ. ವಿಶೇಷವಾಗಿ, ಪ್ರಾದೇಶಿಕ ವಿವಾದಗಳು ಬಗೆಹರಿಯುತ್ತಿಲ್ಲ. ಇದು ಪರೋಕ್ಷ ಯುದ್ಧದ ಬೆಳವಣಿಗೆಗೆ ಕಾರಣವಾಗಿದೆ. ಉದಾಹರಣೆಗೆ, ಪಾಕಿಸ್ತಾನದಿಂದ ಬೆಂಬಲಿತ ಭಯೋತ್ಪಾದನೆಯು ಜಮ್ಮು ಮತ್ತು ಕಾಶ್ಮೀರದಲ್ಲಿನ ದೀರ್ಘಕಾಲದ ಸಂಘರ್ಷಕ್ಕೆ ನೀರೆರೆದಿದೆ. ಜೊತೆಗೆ, ಹಿಂದೂ – ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಉಪಸ್ಥಿತಿ ಮತ್ತು ಪಾಕಿಸ್ತಾನಕ್ಕೆ ಅದು ನೀಡುತ್ತಿರುವ ಬೆಂಬಲವು ಭಾರತದ ಭದ್ರತಾ ಸನ್ನಿವೇಶವನ್ನು ಸಂಕೀರ್ಣಗೊಳಿಸುತ್ತದೆ.
ವ್ಯಾಪಾರ, ಆರ್ಥಿಕ ಪ್ರಗತಿಗೆ ತೊಡಕು:
ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿನ ಅಸ್ಥಿರತೆಯು ‘ಆಕ್ಟ್ ಈಸ್ಟ್ ಪಾಲಿಸಿ’ಗೆ ನಿರ್ಣಾಯಕವಾದ ಭಾರತದ ಪ್ರಾದೇಶಿಕ ಸಂಪರ್ಕ ಯೋಜನೆಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಉದಾಹರಣೆಗೆ, ಮ್ಯಾನ್ಮಾರ್ ಮೂಲಕ ಭಾರತದ ಈಶಾನ್ಯ ರಾಜ್ಯಗಳನ್ನು ಬಂಗಾಳಕೊಲ್ಲಿಯೊಂದಿಗೆ ಬೆಸೆಯಲು ಕೈಗೊಂಡ ಕಲಾದನ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್ ಮ್ಯಾನ್ಮಾರ್ ನಲ್ಲಿನ ಭದ್ರತಾ ಸಮಸ್ಯೆಗಳಿಂದಾಗಿ ವಿಳಂಬವನ್ನು ಎದುರಿಸುತ್ತಿದೆ.
ಅಲ್ಲದೆ, ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ಹೆದ್ದಾರಿಯಂತಹ ನಿರ್ಣಾಯಕ ಯೋಜನೆಯೂ ನೆನೆಗುದಿಗೆ ಬಿದ್ದಿದ್ದು ಇದು ಪ್ರಾದೇಶಿಕ ಸಂಪರ್ಕ ಮತ್ತು ವ್ಯಾಪಾರ ಏಕೀಕರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ರಾಜತಾಂತ್ರಿಕ ಹಿನ್ನಡೆಗಳು:
ನೆರೆಹೊರೆಯಲ್ಲಿನ ಅಸ್ಥಿರತೆ, ವಿಶೇಷವಾಗಿ ಆಡಳಿತ ಬದಲಾವಣೆಗಳು ಮತ್ತು ಆಂತರಿಕ ರಾಜಕೀಯ ಪ್ರಕ್ಷುಬ್ಧತೆ, ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ಸಂಕೀರ್ಣಗೊಳಿಸುತ್ತಿದೆ. ಉದಾಹರಣೆಗೆ: ಮಾಲ್ಮೀವ್‌ನಲ್ಲಿ ಇಂಡಿಯಾ ಔಟ್ ಅಭಿಯಾನವು ಭಾರತದ ಪ್ರಭಾವವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ಸರಕಾರವನ್ನು ಯಶಸ್ವಿಯಾಗಿ ಅಧಿಕಾರಕ್ಕೆ ತಂದಿತು ಮತ್ತು ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಹೆಚ್ಚಿಸಿತು.
ಮಾನವೀಯ ಬಿಕ್ಕಟ್ಟು ಮತ್ತು ನಿರಾಶ್ರಿತರ ನಿರ್ವಹಣೆ:
ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಂತಹ ನೆರೆಯ ರಾಷ್ಟ್ರಗಳಲ್ಲಿನ ಅಸ್ಥಿರತೆಯು ಭಾರತಕ್ಕೆ ದೊಡ್ಡ ಮಾನವೀಯ ಸವಾಲುಗಳನ್ನು ಉಂಟುಮಾಡುತ್ತದೆ. ಭಾರತದ ಈಶಾನ್ಯ ರಾಜ್ಯಗಳು, ವಿಶೇಷವಾಗಿ ಮಿಜೋರಾಂ ಮತ್ತು ಮಣಿಪುರ, ನಿರಾಶ್ರಿತರ ಒಳಹರಿವು ಮತ್ತು ಗಡಿಯುದ್ದಕ್ಕೂ ದಂಗೆಕೋರ ಚಟುವಟಿಕೆಗಳಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಂಡಿವೆ.
ಸಂಪನ್ಮೂಲ ಹಂಚಿಕೆ ಒಪ್ಪಂದಗಳಿಗೆ ಧಕ್ಕೆ:
ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಐತಿಹಾಸಿಕ ಸಿಂಧೂ ಜಲ ಒಪ್ಪಂದವು ಸ್ಥಗಿತಗೊಂಡಿದೆ. ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಿಸುವ ಚೀನಾದ ಯೋಜನೆಯು ಭಾರತ ಮತ್ತು ಬಾಂಗ್ಲಾದೇಶದಲ್ಲಿ ನೀರಿನ ಹರಿವು, ಕೃಷಿ ಮತ್ತು ಪ್ರಾದೇಶಿಕ ಸ್ಥಿರತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ.
ಚೀನಾದೊಂದಿಗೆ ಹೆಚ್ಚಿದ ಕಾರ್ಯತಂತ್ರದ ಸ್ಪರ್ಧೆ:
ನೆರೆಹೊರೆಯಲ್ಲಿನ ಅಸ್ಥಿರತೆಯು, ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಹೆಚ್ಚಿಸುತ್ತಿದೆ. ಇದು, ಭಾರತವು ಕಾರ್ಯತಂತ್ರದ ಸ್ಪರ್ಧೆಯನ್ನು ಎದುರಿಸುವಂತೆ ಮಾಡಿದೆ. ಉದಾಹರಣೆಗೆ: ಪಾಕಿಸ್ತಾನ (ಗ್ವಾದರ್ ಬಂದರು), ಶ್ರೀಲಂಕಾ (ಹಂಬಾಂಟೋಟಾ ಬಂದರು), ಮತ್ತು ಬಾಂಗ್ಲಾದೇಶಗಳಲ್ಲಿ (ಮೊಂಗ್ಲಾ ಮತ್ತು ಚಿತ್ತಗಾಂಗ್) ಚೀನಾದ ಹೂಡಿಕೆಗಳು ಹಾಗೂ ಹಿಂದೂ ಮಹಾಸಾಗರದಲ್ಲಿ ಅದರ ಬೆಳೆಯುತ್ತಿರುವ ಮಿಲಿಟರಿ ಉಪಸ್ಥಿತಿಯು ಭಾರತದ ಪ್ರಾದೇಶಿಕ ಭದ್ರತಾ ಲೆಕ್ಕಾಚಾರವನ್ನು ಸಂಕೀರ್ಣಗೊಳಿಸುತ್ತಿದೆ.
ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರಕ್ಕೆ ಬೆದರಿಕೆ:
ಭಾರತದ ನೆರೆಹೊರೆಯಲ್ಲಿನ ಅಸ್ಥಿರತೆ ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳು ಸಾರ್ಕ್ ಮತ್ತು ಬಿಮ್‌ಸ್ಟಿಕ್‌ನಂತಹ ಪ್ರಾದೇಶಿಕ ಸಹಕಾರ ಚೌಕಟ್ಟುಗಳಿಗೆ ಬೆದರಿಕೆಯನ್ನುಂಟುಮಾಡುತ್ತಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಸಾರ್ಕ್ ನಿಷ್ಕ್ರಿಯಗೊಂಡಿದೆ. ಹಾಗೆಯೇ, ಮ್ಯಾನ್ಮಾರ್‌ನ ಆಂತರಿಕ ಕಲಹ ಮತ್ತು ಬಾಂಗ್ಲಾದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಿಂದ ಬಿಮ್‌ಸ್ಪೆಕ್ ಸಾಮರ್ಥ್ಯವು ಸೀಮಿತಗೊಂಡಿದೆ.
ಈ ಎಲ್ಲ ಸಂಗತಿಗಳು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಏಕೀಕರಣ ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುವ ಭಾರತದ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿವೆ.
ಉಪಸಂಹಾರ:
ವಿಜ್ಞಾನ ಮತ್ತು ತಂತ್ರಜ್ಞಾನದಿಂದ ರೂಪುಗೊಂಡ ಆಧುನಿಕ ಜಗತ್ತು ಒಂದು ಸಣ್ಣ ಹಳ್ಳಿಯಂತಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಒಂದು ಘಟನೆಯು ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಿರುವಾಗ, ನಮ್ಮೊಂದಿಗೆ – ಗಡಿಯನ್ನು ಹಂಚಿಕೊಂಡಿರುವ ದೇಶಗಳಲ್ಲಿ ಯಾವುದೇ ನಕಾರಾತ್ಮಕ ಬೆಳವಣಿಗೆ ಉಂಟಾದರೆ, ಅದರ ನೇರ ಪರಿಣಾಮ ನಮ್ಮ ಮೇಲಾಗುತ್ತದೆ. ಅದನ್ನು ಚಾಕಚಕ್ಯತೆಯಿಂದ ನಿರ್ವಹಿಸುವ ಜಾಣ್ಮೆಯನ್ನು ಭಾರತ ಪ್ರದರ್ಶಿಸಬೇಕಾಗಿದೆ.



