Ganitha – Ganaka program-2025-26: ಫೋನ್ ಕರೆ ಮೂಲಕ ಶಾಲಾ ಅವಧಿ ನಂತರದ ಬೋಧನೆ
Ganitha – Ganaka program-2025-26: ಗಣಿತ ಗಣಕ ಕಾರ್ಯಕ್ರಮವು 2025-2026 ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ. ಅಲೋ ಕಿಟ್ ಹಾಗೂ ಯೂತ್ ಇಂಪ್ಯಾಕ್ಟ್ ಸಂಸ್ಥೆಯವರು ತಾಂತ್ರಿಕ ಬೆಂಬಲದ ಪಾಲುದಾರರಾಗಿರುತ್ತಾರೆ.
2025-26ನೇ ಸಾಲಿನ ಆಯವ್ಯಯದಲ್ಲಿ ಗಣಿತ ಗಣಕ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 3 ರಿಂದ 5 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ ಆಸಕ್ತಿ ಅಭಿವೃದ್ಧಿಸಿ ಮೂಲ ಗಣಿತ ವಿಷಯ ಪರಿಕಲ್ಪನೆಗಳನ್ನು ಶಿಕ್ಷಕರಿಂದ ಮಕ್ಕಳಿಗೆ ಶಾಲಾ ಅವಧಿಯ ನಂತರ ಫೋನ್ ಕರೆಗಳ ಮೂಲಕ (ರಿಮೋಟ್ ಟ್ಯೂಟರಿಂಗ್) ಅರ್ಥೈಸುವುದು ಮತ್ತು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಹಾಗೂ ಕಾರ್ಯಕ್ರಮದ ಆಯೋಜನೆಗೆ ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಿ, ಶಿಕ್ಷಕರಲ್ಲಿ ಅಗತ್ಯ ಕೌಶಲ್ಯಗಳನ್ನು ವೃದ್ಧಿಸಿ ಕಾರ್ಯಕ್ರಮವನ್ನು ನಿರ್ವಹಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.
2025-26ನೇ ಶೈಕ್ಷಣಿಕ ಸಾಲಿನ ಗಣಿತ-ಗಣಕ ಕಾರ್ಯಕ್ರಮದ ಫೋನ್ ಬೋಧನೆಯನ್ನು ಪ್ರಾರಂಭಿಸುವ ಕುರಿತು ತರಬೇತಿ ಪೂರ್ವಭಾವಿಯಾಗಿ 2024-25 ನೇ ಸಾಲಿನಲ್ಲಿ ಗಣಿತ ಗಣಕ ತರಬೇತಿ ಪಡೆದ 17 ಜಿಲ್ಲೆಗಳ 69 ತಾಲ್ಲೂಕುಗಳಲ್ಲಿ ಈಗಾಗಲೇ ಗಣಿತ ಗಣಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
ಮುಂದುವರೆದು 2025-26ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಎ.ಬಿ ಅನುಮೋದಿತ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿಯಡಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 3-5ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರಿಗೆ ಗಣಿತ-ಗಣಕ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತಿಯನ್ನು ನೀಡಲಾಗಿದೆ.
ರಾಜ್ಯದ 35 ಜಿಲ್ಲೆಗಳ ಉಳಿದ 135 ತಾಲ್ಲೂಕುಗಳಲ್ಲಿ ಗಣಿತ ಗಣಕ ಕಾರ್ಯಕ್ರಮವನ್ನು ದಿನಾಂಕ: 01.01.2026 ರಿಂದ ಪ್ರಾರಂಭಿಸಲು ಸೂಚಿಸಿದೆ.
ಗಣಿತ-ಗಣಕ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉಲ್ಲೇಖ-1 ಮತ್ತು 2 ಆದೇಶದಂತೆ ಪ್ರತಿಯೊಂದು ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯಲ್ಲಿ ಗಣಿತ ಗಣಕ ತರಬೇತಿ ಪಡೆದ ಶಿಕ್ಷಕರನ್ನು ಗುರುತಿಸಿ ಕಾರ್ಯಕ್ರಮದ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಗಣಿತ ಗಣಕ ಕಾರ್ಯಕ್ರಮಕ್ಕೆ ಗುರುತಿಸಿದ ಎಲ್ಲಾ ಶಿಕ್ಷಕರು ಶಾಲಾ ಅವಧಿಯ ನಂತರ ಆಯ್ಕೆ ವಿದ್ಯಾರ್ಥಿಗಳಿಗೆ ಫೋನ್ ಮೂಲಕ, ಪೋಷಕರ ಸಹಭಾಗಿತ್ವದೊಂದಿಗೆ ಗಣಿತದ ಮೂಲ ಕ್ರಿಯೆಯನ್ನು ಅರ್ಥೈಸಬೇಕು.
ಸದರಿ ಕಾರ್ಯಕ್ರಮವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಬೇಕಾಗಿದ್ದು, ಪ್ರತಿ ಹಂತವು 5 ವಾರಗಳ ಕಾಲ ನಡೆಯುತ್ತದೆ.
ಗಣಿತ ಗಣಕ ಫೋನ್ ಬೋಧನೆ ಅವಶ್ಯಕತೆಯಿರುವ ನಾಲ್ಕು ವಿದ್ಯಾರ್ಥಿಗಳ ಪಟ್ಟಿ ತಯಾರಿಸಿಕೊಳ್ಳಬೇಕು. ಪ್ರತಿ 5 ವಾರ ಚಕ್ರಕ್ಕೆ ಶಿಕ್ಷಕರು 4 ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ.
ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಲು ತರಬೇತಿಯಲ್ಲಿ ನೀಡಿದ ಮಾಹಿತಿಯಂತೆ ಬೇಸ್‌ಲೈನ್ ಕರೆ ಮೌಲ್ಯಾಂಕನ ನಡೆಸಿ, ಅದರ ಆಧಾರದ ಮೇಲೆ ಗಣಿತದ ಮೂಲ ಕ್ರಿಯೆಗಳನ್ನು ಕಲಿಸುವ ಕ್ರಮ ಕೈಗೊಳ್ಳಬೇಕು.
ಪ್ರತಿ ವಿದ್ಯಾರ್ಥಿಗೆ ವಾರಕ್ಕೆ 1 ಬಾರಿ ಫೋನ್ ಕರೆ ಮೂಲಕ ಗಣಿತದ ಮೂಲ ಕ್ರಿಯೆಗಳನ್ನು (ವಿದ್ಯಾರ್ಥಿಯ ಕಲಿಕಾ ಮಟ್ಟದ ಅನ್ವಯ) ವಿದ್ಯಾರ್ಥಿ-ಪೋಷಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ 30 ರಿಂದ 40 ನಿಮಿಷಗಳ ಫೋನ್ ಬೋಧನೆಯನ್ನು ನಿರ್ವಹಿಸಬೇಕು.
ಪ್ರತಿ ಫೋನ್ ಕರೆ ಅವಧಿಯ ನಂತರ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ವಿದ್ಯಾರ್ಥಿಯ ಹೆಸರು ಹಾಗೂ ವಿದ್ಯಾರ್ಥಿ ಕಲಿತ ಕಲಿಕಾಂಶವನ್ನು ಶಿಕ್ಷಕರು ಶಾಲೆಯಲ್ಲಿ ಕಡ್ಡಾಯವಾಗಿ ದಾಖಲಿಸುವುದು ಹಾಗೂ ಸದರಿ ದತ್ತಾಂಶವನ್ನು SATS ನಲ್ಲಿ ದಾಖಲಿಸಲು ತಿಳಿಸಿದೆ.
ಮಕ್ಕಳೊಂದಿಗೆ ಬೋಧನೆಯ ಸಂವಾದದ ಕೆಲವು ಆಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಅವುಗಳನ್ನು ಹಿಮ್ಮಾಹಿತಿಗಾಗಿ ಸಂಬಂಧಪಟ್ಟ ಸಿಆರ್‌ಪಿಗಳು ಶಾಲೆಗೆ ಭೇಟಿ ನೀಡಿದಾಗ ಅವರಿಗೆ ಸಲ್ಲಿಸುವುದು.
ರಿಮೋಟ್ ಟ್ಯೂಟರಿಂಗ್ ಕಾರ್ಯಕ್ರಮದ ಒಟ್ಟಾರೆ ಅನುಷ್ಠಾನವನ್ನು ನಿಯಮಿತವಾಗಿ ತಿಂಗಳಿಗೆ ಕನಿಷ್ಠ ಎರಡು ಬಾರಿ ಮೇಲ್ವಿಚಾರಣೆ ಮಾಡುವುದು, ಮಕ್ಕಳ ಕಲಿಕೆ ಆಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಫೋನ್ ಮೂಲಕ ಗಣಿತ ಬೋಧನೆಗೆ ಒಳಪಟ್ಟಿರುವ ವಿದ್ಯಾರ್ಥಿಗಳೊಂದಿಗೆ ಶಾಲಾ ಅವಧಿಯಲ್ಲಿ ಮುಖಾಮುಖಿಯಾಗಿ ಸಂವಹನ ನಡೆಸುವುದು. ಶಿಕ್ಷಕರು ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡುತ್ತಿರುವ ಬಗ್ಗೆ ಹಾಗೂ ಸದರಿ ದತ್ತಾಂಶವನ್ನು SATS ನಲ್ಲಿ ಇಂದೀಕರಿಸಿರುವ ಕುರಿತು ಖಚಿತಪಡಿಸಿಕೊಳ್ಳುವುದು ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ.
ಗಣಿತ ಗಣಕ ಕಾರ್ಯಕ್ರಮವು ಎಲ್ಲಾ ಶಾಲೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದರ ಬಗ್ಗೆ, ಮತ್ತು ಎಲ್ಲಾ ಶಾಲೆಯಿಂದ SATS ನಲ್ಲಿ ಅಗತ್ಯ ಮಾಹಿತಿಯನ್ನು ಇಂದೀಕರಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. ಪೋನ್ ಟ್ಯೂಟರಿಂಗ್ ನಡೆಸುತ್ತಿರುವ ಎಲ್ಲಾ ಶಿಕ್ಷಕರ ಕೆ2 ರೆಸಿಪಿಯೆಂಟ್ ಐಡಿ, ಉಳಿತಾಯ ಖಾತೆಯ ಪಾಸ್ ಪುಸ್ತಕದ ಮುಖಪುಟದ ಪ್ರತಿಗಳನ್ನು ಸಂಗ್ರಹಿಸುವುದು ಹಾಗೂ ಗಣಿತ ಗಣಕಕ್ಕೆ ಸಂಬಂಧಿಸಿದ SATS ಭಾಗ ಸಕ್ರಿಯವಾಗುವವರೆಗೆ ಎಲ್ಲಾ ಶಾಲೆಯಿಂದ ಭೌತಿಕ ಫೋನ್ ಬೋಧನಾ ಮಾಹಿತಿಯನ್ನು ಸಂಗ್ರಹಿಸಿ ಕೈಪಿಡಿ Review Format ಉಪಯೋಗಿಸಿ ಮಾಹಿತಿಯನ್ನು ನಮೂದಿಸಿ ಬ್ಲಾಕ್ ಹಂತಕ್ಕೆ, ಸಲ್ಲಿಸುವ ಜವಾಬ್ದಾರಿ ಸಂಬಂಧಿಸಿದ ಸಿ.ಆರ್.ಪಿ.ಗಳದ್ದಾಗಿರುತ್ತದೆ.
ಗಣಿತ ಗಣಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯಲ್ಲಿ ಹಾಗೂ ತಾಲ್ಲೂಕಿನಲ್ಲಿ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು.
ಗಣಿತ ಗಣಕ ಕೈಪಿಡಿಯಲ್ಲಿ ತಿಳಿಸಿರುವಂತೆ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿರುವ ಕುರಿತು ಹಾಗೂ ಕಾರ್ಯಕ್ರಮ ನಿರ್ವಹಿಸುವ ಎಲ್ಲಾ ಶಿಕ್ಷಕರಿಗೆ ತರಬೇತಿಯಾಗಿರುವ ಬಗ್ಗೆ, ಶಾಲಾ ಭೇಟಿ ಸಮಯದಲ್ಲಿ ಖಾತ್ರಿಪಡಿಸಿಕೊಳ್ಳುವುದು. ಸಿಆರ್‌ಪಿಗಳ ಮೂಲಕ ಶಾಲೆಗಳಲ್ಲಿ ಕಾರ್ಯಕ್ರಮದ ನಿರ್ವಹಣೆ ಬಗ್ಗೆ, ಮಾಹಿತಿಯನ್ನು ಪಡೆದು ತಾಲ್ಲೂಕು/ಜಿಲ್ಲಾ ಹಂತದಲ್ಲಿ ಕ್ರೋಢೀಕರಿಸಿ ರಾಜ್ಯ ಕಚೇರಿಗೆ ಸಲ್ಲಿಸುವುದು.
2025-26 ನೇ ಸಾಲಿನಲ್ಲಿ ಗಣಿತ ಗಣಕ ತರಬೇತಿ ಪಡೆದ ಶಿಕ್ಷಕರು ಮೊದಲನೇ ಬೋಧನಾ ಚಕ್ರಕ್ಕೆ ವಿದ್ಯಾರ್ಥಿಗಳನ್ನು ಗುರುತಿಸಿ, ದಿನಾಂಕ:05/01/2026 ರಿಂದ ಮಕ್ಕಳಿಗೆ ಶಾಲಾ ಅವಧಿಯ ನಂತರ ಫೋನ್ ಕರೆಗಳ ಮೂಲಕ ರಿಮೋಟ್ ಟ್ಯೂಟರಿಂಗ್ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಂಬಂಧಿಸಿದ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಸೂಚನೆ ನೀಡಲು ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದೆ.




