SDGs at 10: ಒಂದು ದಶಕದ ಸಾಧನೆ–ಸವಾಲುಗಳ ವಿಶ್ಲೇಷಣೆ- ಪ್ರಬಂಧ

SDGs at 10: ಒಂದು ದಶಕದ ಸಾಧನೆ–ಸವಾಲುಗಳ ವಿಶ್ಲೇಷಣೆ- ಪ್ರಬಂಧ

 

SDGs at 10: ಒಂದು ದಶಕದ ಸಾಧನೆ–ಸವಾಲುಗಳ ವಿಶ್ಲೇಷಣೆ- ಪ್ರಬಂಧ: ಸಂಯುಕ್ತ ರಾಷ್ಟ್ರಗಳ ಸಂಘಟನೆಯು 2015ರಲ್ಲಿ ಜಾಗತಿಕ ಮಟ್ಟದಲ್ಲಿ ಘೋಷಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳು (Sustainable Development Goals – SDGs) ಮಾನವ ಕಲ್ಯಾಣ, ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಸಮತೋಲನವನ್ನು ಸಾಧಿಸುವ ಮಹತ್ವಾಕಾಂಕ್ಷೆಯ ರೂಪರೇಖೆಯಾಗಿದೆ. 2016 ರಿಂದ 2030ರ ವರೆಗೆ ಜಾರಿಗೆ ಇರುವ ಈ 17 ಗುರಿಗಳಲ್ಲಿ ಈಗ ಒಂದು ದಶಕದ ಪ್ರಯಾಣವನ್ನು ನಾವು ಅನುಭವಿಸುತ್ತಿದ್ದೇವೆ. ಈ ದಶಕದಲ್ಲಿ ಸಾಕಷ್ಟು ಸಾಧನೆಗಳ ಜೊತೆಗೆ ಹಲವು ಗಂಭೀರ ಸವಾಲುಗಳೂ ಎದುರಾಗಿವೆ.

ದಶಕದ ಹಿಂದೆ (2015) ವಿಶ್ವಸಂಸ್ಥೆ ಘೋಷಿಸಿದ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ ಗಳು) ಈ ಜಗತ್ತು 2030ರ ಹೊತ್ತಿಗೆ ಸಾಧಿಸುವುದು ಒಂದು ಅದ್ಭುತ ಅವಕಾಶ ಮತ್ತು ಸವಾಲಾಗಿದೆ. ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಇದು ಹೆಚ್ಚು ಮಹತ್ವದ ವಿಷಯ. ಗುರಿಗಳ ಘೋಷಣೆಯ ನಂತರ ನಾವೂ ಈಗಾಗಲೇ ಒಂದು ದಶಕವನ್ನು ಕಳೆದಿದ್ದೇವೆ ಮತ್ತು ಗುರಿ ಸಾಧನೆಗೆ * ಕೇವಲ ಐದು ವರ್ಷಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಎಸ್‌ ಡಿಜಿಗಳ ಈಡೇರಿಕೆಯಲ್ಲಿ ಭಾರತ ಕೈಗೊಂಡ ಕ್ರಮಗಳು, ಸಾಧನೆ ಮತ್ತು ಸವಾಲುಗಳ ಸಂಕ್ಷಿಪ್ತ ಚರ್ಚೆ ಇಲ್ಲಿದೆ.

ವಿವರಣೆ: ಎಸ್‌ಡಿಜಿಗಳನ್ನು ಸಾಧಿಸಲು ಭಾರತವು ತನ್ನದೇ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (ಎನ್‌ಡಿಸಿಗಳು) ಘೋಷಿಸಿದೆ. ಇದು ಸುಸ್ಥಿರತೆ, ಸಮಾನತೆ ಮತ್ತು ಸಮೃದ್ಧಿಗಾಗಿ ಜಾಗತಿಕ ಚೌಕಟ್ಟಿನೊಂದಿಗೆ ತನ್ನ ರಾಷ್ಟ್ರೀಯ ಅಭಿವೃದ್ಧಿ ಗುರಿಗಳನ್ನು ಜೋಡಿಸುತ್ತದೆ.

ಭಾರತವು ಈ ಪರಿವರ್ತನಾ ಪ್ರಯಾಣದ (2015-2025) ಒಂದು ದಶಕವನ್ನು ಪೂರ್ಣಗೊಳಿಸಿರುವ ಈ ಸಂದರ್ಭದಲ್ಲಿ ರಾಷ್ಟ್ರವು ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸಿದೆ.

ಅಭಿವೃದ್ಧಿ-ಕೇಂದ್ರಿತ ವಿಧಾನದಿಂದ ಸುಸ್ಥಿರ- ಬೆಳವಣಿಗೆ-ಕೇಂದ್ರಿತ, ಡೇಟಾ-ಚಾಲಿತ ಮತ್ತು ಇಡೀ ಸಮಾಜ ವಿಧಾನಕ್ಕೆ ಪರಿಣಾಮಕಾರಿಯಾಗಿ ಪರಿವರ್ತನೆಗೊಂಡಿದೆ. 2018ರಲ್ಲಿ 57ರಷ್ಟಿದ್ದ ಭಾರತದ ಎಡಿಜಿ ಸೂಚ್ಯಂಕ ಸ್ಕೋರ್ 2025ರ ಹೊತ್ತಿಗೆ 71ಕ್ಕೆ ಏರಿಕೆಯಾಗಿದೆ. ಇದು ಸಾಮಾಜಿಕ ಮತ್ತು ಮೂಲಸೌಕರ್ಯ ಸೂಚಕಗಳಲ್ಲಿ ಗಣನೀಯ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.

ಪ್ರಮುಖ ಸಾಧನೆಗಳು (2015-2025)



1. ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ರಕ್ಷಣೆ (ಎಸ್‌ಡಿಜಿ 1 ಮತ್ತು 10):

ಕಳೆದ ಒಂದು ದಶಕದಲ್ಲಿ 25 ಕೋಟಿಗಿಂತಲೂ ಹೆಚ್ಚು ಜನರು ಬಹುಆಯಾಮದ ಬಡತನದಿಂದ ಹೊರಬಂದಿರುವುದು ಭಾರತವು ಬಡತನ ನಿರ್ಮೂಲನೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವುದಕ್ಕೆ ಸಾಕ್ಷಿ. 2016ರಲ್ಲಿ ಶೇ.22ರಷ್ಟಿದ್ದ ಸಾಮಾಜಿಕ ರಕ್ಷಣಾ ವ್ಯಾಪ್ತಿಯ ವಿಸ್ತರಣೆಯು 2025ರ ವೇಳೆಗೆ ಶೇ.64ಕ್ಕೆ ಹೆಚ್ಚಾಗಿದೆ. ಮಹತ್ವಾಕಾಂಕ್ಷೆಯ – ಜಿಲ್ಲೆಗಳ ಕಾರ್ಯಕ್ರಮ (ಎಡಿಪಿ) ಮತ್ತು ನಂತರದ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮವು ಹಿಂದುಳಿದಿದ್ದ ಪ್ರದೇಶಗಳನ್ನು ಪರಿವರ್ತಿಸಲು ಡೇಟಾ-ಚಾಲಿತ ಆಡಳಿತವನ್ನು ಪರಿಣಾಮಕಾರಿಯಾಗಿ ಬಳಸಿದೆ.

2. ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಪರಿವರ್ತನೆ (ಎಸ್‌ಡಿಜಿ 3 ಮತ್ತು 6):

ಸ್ವಚ್ಛ ಭಾರತ ಮಿಷನ್ ಒಂದು ಮೂಲಾಧಾರ ಸಾಧನೆಯಾಗಿದ್ದು, 100 ಮಿಲಿಯನ್‌ಗಿಂತಲೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ಭಾರತವನ್ನು ಬಯಲು ಮಲವಿಸರ್ಜನೆ ಮುಕ್ತ (ಓಡಿಎಫ್) ಮಾಡುವಲ್ಲಿ ದೊಡ್ಡ ಹೆಜ್ಜೆಯಾಗಿದೆ. ಇದು ನೈರ್ಮಲ್ಯವನ್ನು ಗಣನೀಯವಾಗಿ ಸುಧಾರಿಸಿದೆ ಮತ್ತು ಅನಾರೋಗ್ಯದ ಅಪಾಯಗಳನ್ನು ಕಡಿಮೆ ಮಾಡಿದೆ.

ಇದಲ್ಲದೆ, ಆಯುಷ್ಮಾನ್ ಭಾರತ್ -ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು 500 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಆರೋಗ್ಯ ವಿಮೆಯನ್ನು ಒದಗಿಸಿದೆ. ಇದು ಅವರ ಜೇಬಿನಿಂದ ಭರಿಸಬೇಕಾಗಿದ್ದ ಖರ್ಚಿನ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ತಾಯಂದಿರ ಮರಣ ಪ್ರಮಾಣವೂ ಕುಸಿತವನ್ನು ಕಂಡಿದೆ.

3. ಇಂಧನ ಪರಿವರ್ತನೆ ಮತ್ತು ಶುದ್ಧ ಇಂಧನ (ಎಸ್‌ಡಿಜಿ 7 ಮತ್ತು 13):

ಭಾರತವು ಮನೆಗಳಿಗೆ ಸಾರ್ವತ್ರಿಕ ವಿದ್ಯುದ್ದೀಕರಣವನ್ನು ಸಾಧಿಸಿದೆ. ದೇಶವು ನವೀಕರಿಸಬಹುದಾದ ಇಂಧನದಲ್ಲಿ ಭಾರಿ ಪ್ರಗತಿ ಸಾಧಿಸುತ್ತಿದೆ.

ಸೌರಶಕ್ತಿ ಸಾಮರ್ಥ್ಯವು 2.82 ಗಿಗಾವ್ಯಾಟ್ – ನಿಂದ 135 ಗಿಗಾವ್ಯಾಟ್‌ಗೆ ಹೆಚ್ಚಾಗಿದೆ. 2025ರ ಅಂತ್ಯದ ವೇಳೆಗೆ ಒಟ್ಟು ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಸುಮಾರು 254 ಗಿಗಾವ್ಯಾಟ್‌ಗೆ ಹೆಚ್ಚಿದೆ.

ಅಂತಾರಾಷ್ಟ್ರೀಯ ಸೋಲಾರ್ ಅಲಯನ್ಸ್‌ನ ನೇತೃತ್ವವಹಿಸಿರುವ ಭಾರತ 2070ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸುವ ತನ್ನ ಗುರಿಯತ್ತ ದಾಪುಗಾಲು ಇಡುತ್ತಿದೆ.

4. ಡಿಜಿಟಲ್ ಮೂಲಸೌಕರ್ಯ ಮತ್ತು ನಾವೀನ್ಯತೆ (ಎಸ್‌ಡಿಜಿ 9):

ಡಿಜಿಟಲ್ ಇಂಡಿಯಾ, ಉಪಕ್ರಮವು ಜನಸಾಮಾನ್ಯರಿಗೆ ಐಟಿ ಬೆಂಬಲಿತ ಸೇವೆಗಳ ಲಭ್ಯತೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ)ನಿಂದ ಈಗ ಪ್ರತಿದಿನ 700 ಮಿಲಿಯನ್‌ಗಿಂತಲೂ ಹೆಚ್ಚುವಹಿವಾಟುಗಳು ನಡೆಯುತ್ತಿವೆ.

ಇದು ವಿಶ್ವದ ಅತಿದೊಡ್ಡ ನೈಜ-ಸಮಯದ ಪಾವತಿ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಇದು ದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ ಮತ್ತು ಆ ಮೂಲಕ ಎಸ್‌ಡಿಜಿ 9 (ಉದ್ಯಮ, ನಾವೀನ್ಯತೆ ಮತ್ತು ಮೂಲಸೌಕರ್ಯ)ರ ಈಡೇರಿಕೆಗೆ ಕೊಡುಗೆ ನೀಡಿದೆ.

5. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ (ಎಸ್‌ಡಿಜಿ 5):

ಮುದ್ರಾ ಯೋಜನೆಯಂತಹ ಉಪಕ್ರಮಗಳ ಜೊತೆಗೆ ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನವು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಿದೆ.

ಪ್ರಮುಖ ಸವಾಲುಗಳು:

ಇಷ್ಟೆಲ್ಲ ಯಶಸ್ಸಿನ ಹೊರತಾಗಿಯೂ, ಕೆಲವು ಎಸ್‌ಡಿಜಿಗಳ ಈಡೇರಿಕೆಯಲ್ಲಿ ಭಾರತವು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳೆಂದರೆ;

1. ಪರಿಸರ ಅವನತಿ ಮತ್ತು ಹವಾಮಾನ ಕ್ರಮ (ಎಸ್‌ಡಿಜಿ 13 15):

ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಬೆಳೆದಿದ್ದರೂ, ಕಲ್ಲಿದ್ದಲು ಅವಲಂಬನೆ ಹೆಚ್ಚಾಗಿದೆ ಮತ್ತು ಜೀವವೈವಿಧ್ಯತೆ ಮತ್ತು ಮಾಲಿನ್ಯ ತಗ್ಗಿಸುವಿಕೆಗೆ ಸಂಬಂಧಿಸಿದ ಪರಿಸರ ಗುರಿಗಳು ನಿಶ್ಚಲವಾಗಿವೆ.

2. ಉದ್ಯೋಗ ಮತ್ತು ಅಸಮಾನತೆ (ಎಸ್‌ಡಿಜಿ 8 10):

ಕಾರ್ಮಿಕ ಬಲದ ಭಾಗವಹಿಸುವಿಕೆ ಸಾಕಷ್ಟು ಸುಧಾರಿಸಿಲ್ಲ ಮತ್ತು ಕಾರ್ಯಪಡೆಯ ಬಹುಪಾಲು ಭಾಗವು ಸಾಮಾಜಿಕ ಭದ್ರತೆಯನ್ನು ಹೊಂದಿಲ್ಲ

3. ಆರೋಗ್ಯ ಮತ್ತು ಪೋಷಣೆ (ಎಸ್‌ಡಿಜಿ 2):

ಮಕ್ಕಳು ಅವರ ವಯಸ್ಸಿಗೆ ಹೋಲಿಸಲಾಗಿ ಕುಳ್ಳಗಿರುವಿಕೆ (ಸ್ವಂಟಿಂಗ್) ಶೇ.35.5 ಮತ್ತು ತೆಳ್ಳಗಿರುವಿಕೆ (ವೇಸ್ಟಿಂಗ್) ಶೇ.19.3ರಷ್ಟಿದೆ. ಇದು ಹಸಿವನ್ನು ಹೋಗಲಾಡಿಸುವಲ್ಲಿ ಮಂದಗತಿಯ ಪ್ರಗತಿಯನ್ನು ಸೂಚಿಸುತ್ತದೆ. ಮತ್ತೊಂದೆಡೆ ಬೊಜ್ಜು ಹೆಚ್ಚುತ್ತಿದೆ.

4. ಪ್ರಾದೇಶಿಕ ಅಸಮಾನತೆಗಳು:

ಕೇರಳ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಎಸ್ ಡಿಜಿ ಕಾರ್ಯಕ್ಷಮತೆಯಲ್ಲಿ ಮುಂಚೂಣಿಯಲ್ಲಿದ್ದರೂ, ಹಲವಾರು ರಾಜ್ಯಗಳು ಇನ್ನೂ ಹಿಂದುಳಿದಿವೆ. ಇದು ‘ಪ್ರಾದೇಶಿಕ ವಿಭಜನೆಯನ್ನು ನೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ಕರ್ನಾಟಕದಲ್ಲೂ ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ, ಉತ್ತರದ ಜಿಲ್ಲೆಗಳು ಎಸ್ ಡಿಜಿಗಳ ಈಡೇರಿಕೆಯಲ್ಲಿ ತುಂಬಾ ಹಿಂದಿವೆ.

ಉಪಸಂಹಾರ:

ಒಂದು ದಶಕದ ನಂತರ, ಎಸ್‌ಡಿಜಿಗಳ ಈಡೇರಿಕೆಯಲ್ಲಿ ಭಾರತದ ಪ್ರಯಾಣವು ಚೇತೋಹಾರಿಯಾಗಿದೆ ಮತ್ತು ಕೋಟಿ ಕೋಟಿ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ.

2030ರ ಹೊತ್ತಿಗೆ ಎಲ್ಲ ಎಸ್‌ಡಿಜಿಗಳನ್ನು ಸಾಧಿಸುವುದು ಸವಾಲಿನ ಕೆಲಸವೇ ಆಗಿದ್ದರೂ ಅದನ್ನು ಒಂದು ರಾಷ್ಟ್ರೀಯ ಧೈಯವಾಗಿಸಿಕೊಂಡು ಪ್ರತಿಯೊಬ್ಬ ಭಾರತೀಯ ತನ್ನ ಕೊಡುಗೆ ನೀಡಿದರೆ ಗುರಿಯ ಹತ್ತಿರವಾದರೂ ಹೋಗಬಹುದಾಗಿದೆ.

ಈ ಪ್ರಯತ್ನವು 2047ರ ವೇಳೆಗೆ ವಿಕಸಿತ ಭಾರತದ (ಅಭಿವೃದ್ಧಿ ಹೊಂದಿದ ಭಾರತ) ದೃಷ್ಟಿಕೋನಕ್ಕೆ ಅತ್ಯಂತ ಮಹತ್ವದ್ದಾಗಿದೆ.

ಮುಂದಿನ ದಾರಿ:

ಭಾರತವು 2030ರ ಗಡುವಿನತ್ತ ಸಾಗುತ್ತಿರುವಾಗ, ಮುಂದಿನ ಐದು ವರ್ಷಗಳಲ್ಲಿ ಈ ಕೆಳಗಿನವುಗಳಿಗೆ ಹೆಚ್ಚಿನ ಮಹತ್ವ ಕೊಡುವುದು ಅಗತ್ಯವಾಗಿದೆ.

1. ಉತ್ತಮ ಮೇಲ್ವಿಚಾರಣೆಗಾಗಿ ದತ್ತಾಂಶ ವ್ಯವಸ್ಥೆಗಳನ್ನು ಬಲಪಡಿಸುವುದು.

2. ಗ್ರಾಮೀಣ ಪ್ರದೇಶಗಳಲ್ಲಿನ ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡುವುದು.

3. ಹವಾಮಾನ ಬದಲಾವಣೆಯನ್ನು ತಗ್ಗಿಸಲು ಸುಸ್ಥಿರ, ಹಸಿರು ಕೈಗಾರಿಕಾ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು.

4. ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು.

5. ನೀತಿ ನಿರೂಪಣೆ ಮತ್ತು ಅನುಷ್ಠಾನವನ್ನು ಸರಳೀಕರಿಸುವುದು ಮತ್ತು ಹೆಚ್ಚು ಸ್ಥಳೀಕರಿಸುವುದು.

ಕೃಪೆ:ಐ.ಜಿ. ಚೌಗಲಾ. ಉಪನ್ಯಾಸಕರು

SDGs at 10
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top