MOTIVATION AND EMOTION- ಪ್ರೇರಣೆ  ಮತ್ತು ಸಂವೇಗ ಮನೋವಿಜ್ಞಾನ ನೋಟ್ಸ್

MOTIVATION AND EMOTION- ಪ್ರೇರಣೆ  ಮತ್ತು ಸಂವೇಗ ಮನೋವಿಜ್ಞಾನ ನೋಟ್ಸ್

MOTIVATION AND EMOTION: ‘ಮುಂಗಾರು ಮಳೆ’ ಸಿನಿಮಾ ನೋಡಲು ಜನ ಚಿತ್ರಮಂದಿರಗಳ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದರು. ‘ಓಂ” ಎಂಬ ಕನ್ನಡ ಸಿನಿಮಾ ಕೂಡ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಈ ಚಿತ್ರಗಳ ನಿರ್ಮಾಪಕರು ಕೆಲವೇ ದಿನಗಳಲ್ಲಿ ಕೋಟ್ಯಂತರ ಹಣ ಗಳಿಸಿದರು. ಈ ಚಿತ್ರಗಳನ್ನು ನೋಡಲು ಜನ ಮುಗಿ ಬೀಳಲು ಪ್ರೇರಣೆ ಏನು?

ಅನ್ನಕ್ಕಾಗಿ, ನದಿ ನೀರಿಗಾಗಿ, ಹೆಣ್ಣಿಗಾಗಿ ಯುದ್ಧಗಳೇ ನಡೆದು ಹೋಗಿವೆ. ಕ್ರಾಂತಿಗಳೂ ಆಗಿವೆ. ಜನ ತಮ್ಮ ಆರೋಗ್ಯ, ಮನರಂಜನೆ, ಎಲ್ಲವನ್ನು ಬದಿಗೊತ್ತಿ ಹಗಲಿರುಳು ದುಡಿಯುವರು. ಹೆಚ್ಚಿನ ಸಂಪಾದನೆ ಯಾಕೆ ಬೇಕು? ರಾಜಕೀಯದಲ್ಲಿ ಲಂಚಗುಳಿತನ, ಹಗರಣಗಳು, ಪರಸ್ಪರ ಆರೋಪ, ಪ್ರತ್ಯಾರೋಪಗಳು ಕೇಳಿ ಬರಲು ಕಾರಣ ಏನು? ಪ್ರಚೋದನೆ ಏನು?.

ಮುಂಗಾರು ಮಳೆ ಚಿತ್ರ ಪ್ರೀತಿ-ಪ್ರೇಮಗಳ ಪರಾಕಾಷ್ಠೆಯನ್ನು ಬಿಂಬಿಸುತ್ತಿತ್ತು. ನಿಜ ಜೀವನದಲ್ಲಿ ಹಗಲು ಗನಸಿನ ಮೂಲಕ ಇಂತಹ ಪ್ರೀತಿಯ ಪರಾಕಾಷ್ಠೆ ಅನುಭವಿಸುತ್ತಿದ್ದವರಿಗೆ ತೆರೆಯ ಮೇಲೆ ನೋಡಿ ಆನಂದಿಸುವ ತೀವ್ರ ಬಯಕೆ (ಪ್ರೇರಣೆ) ಉಂಟಾಯಿತು. ಓಂ ಚಿತ್ರದಲ್ಲಿ ಪ್ರೀತಿ-ಪ್ರೇಮ ಮತ್ತು ಅವುಗಳ ಜೊತೆಗೆ ಎಣೆದುಕೊಂಡ ಹಿಂಸೆ, ಇವೆಲ್ಲವೂ ಮನುಷ್ಯರ ಸುಪ್ತ ಮನಸ್ಸಿಗೆ ಹಿತವಾದುದರಿಂದ ಅದನ್ನು ತೆರೆಯ ಮೇಲೆ ನೋಡಿ ಮನ ತಣಿಸಿಕೊಳ್ಳುವ ಬಯಕೆ ಉಂಟಾಯಿತು. ಇನ್ನು ಅನ್ನ, ನೀರು, ಲೈಂಗಿಕ ಆಸೆ, ಇವು ತೀವ್ರಸ್ವರೂಪದ ಶಾರೀರಿಕ ಪ್ರೇರಣೆಗಳಾದ ಹಸಿವು, ಬಾಯಾರಿಕೆ. ಲೈಂಗಿಕ ಪ್ರೇರಣೆಗಳಿಂದ ಪ್ರಚೋದಿಸಲ್ಪಟ್ಟಿರುತ್ತವೆ.

ನಮ್ಮ ವರ್ತನೆ ಗುರಿಯಾಭಿಮುಖವಾದುದು. ಗುರಿ ಸಾಧನೆಯಾಗುವವರೆಗೆ ಈ ವರ್ತನೆ ಮುಂದುವರಿಯುತ್ತದೆ. ಗುರಿಸಾಧನೆಗಾಗಿ ಜನ ನಿರ್ದಿಷ್ಟ ಯೋಜನೆಯೊಂದಿಗೆ ಕಾರ್ಯ ಪ್ರವೃತ್ತರಾಗುವರು. ಗುರಿಸಾಧನೆಯಾದರೆ ಆನಂದ, ತೃಪ್ತಿ ಉಂಟಾಗುತ್ತದೆ. ಗುರಿಸಾಧನೆ ದಿಕ್ಕಿನಲ್ಲಿ ಅಡಚಣೆಯಾದರೆ ಅಥವಾ ವಿಫಲನಾದರೆ ಹತಾಶೆ, ಬೇಸರ, ಕೋಪ ಇತ್ಯಾದಿ ಸಂವೇಗಗಳು ಉಂಟಾಗುತ್ತವೆ. ಈ ಅಧ್ಯಾಯದಲ್ಲಿ ‘ಪ್ರೇರಣೆ ಮತ್ತು ಸಂವೇಗ’ ಎಂಬ ಮೂಲ ಪರಿಕಲ್ಪನೆಗಳ ಬಗ್ಗೆ ಹಾಗೂ ಅವುಗಳ ನಡುವಿನ ಪರಸ್ಪರ ಸಂಬಂಧಗಳ ಬಗ್ಗೆ ಅಧ್ಯಯನ ಮಾಡುವಿರಿ. ಜೊತೆಗೆ ಮೂಲ ಸಂವೇಗಗಳು ಅವುಗಳ ದೈಹಿಕ ಆಧಾರ, ಪ್ರೇರಣೆ ಮತ್ತು ಸಂವೇಗಗಳ ಅಭಿವ್ಯಕ್ತಿ ಮೇಲೆ ಸಮಾಜ-ಸಂಸ್ಕೃತಿಯ ಪ್ರಭಾವ, ಪ್ರೇರಣೆ ಹಾಗೂ ಸಂವೇಗಗಳ ನಿರ್ವಹಣೆ ಮತ್ತು ನಿಯಂತ್ರಣ ಮುಂತಾದ ವಿಷಯಗಳ ಬಗ್ಗೆ ಈ ಅಧ್ಯಾಯದಲ್ಲಿ ತಿಳಿದುಕೊಳ್ಳುವಿರಿ.

ಪ್ರೇರಣೆ – ಅರ್ಥ ಮತ್ತು ಸ್ವರೂಪ :

ಪ್ರೇರಣೆ ಎಂಬ ಪದದ ಸಮಾನಾಂತರ ಇಂಗ್ಲಿಷ್ ಪದ ‘Motivation’. ‘Motivation’ ລ ಇಂಗ್ಲೀಷ್ ಪದ ‘movere’ (ಮೊವೆರೆ) ಎಂಬ ಲ್ಯಾಟಿನ್ ಪದದಿಂದ ಬಂದಿದೆ. ‘ಮೊವೆರೆ’ ಎಂದರೆ ಚಲಿಸು, ಚಲನೆ (move) ಎಂದು ಅರ್ಥ ಬರುತ್ತದೆ. ಕೆಲವು ಸಹಜ ಪ್ರವೃತ್ತಿಗಳ ಹೊರತಾಗಿ ಮನುಷ್ಯನ ಬಹುತೇಕ ವರ್ತನೆಗಳು ಪ್ರೇರಣೆಗಳಿಂದ ಪ್ರಚೋದಿತವಾಗಿವೆ. ಸಹಜ ಪ್ರವೃತ್ತಿಗಳು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಹುಟ್ಟಿನಿಂದಲೇ ಬಂದವುಗಳು. ಉದಾಹರಣೆಗೆ : ಮಾನವ ಶಿಶು ಹಾಗೂ ಪ್ರಾಣಿಗಳ ಮರಿಗಳು ಹಾಲುಣುವುದು, ನಿದ್ರಿಸುವುದು. ವಿಸರ್ಜನೆ, ಶಬ್ದ ಮಾಡುವುದು, ಇತ್ಯಾದಿಗಳೆಲ್ಲಾ ಸಹಜ ಪ್ರವೃತ್ತಿಗಳು, ಜೀವಿಗಳು ಬೆಳೆದಂತೆ ಸಹಜ ಪ್ರವೃತ್ತಿಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳಿಂದ ಪ್ರಭಾವಿತವಾಗಿ ಬದಲಾವಣೆ ಹೊಂದುತ್ತವೆ.

ಪ್ರೇರಣೆ, ಅಭಿಪ್ರೇರಣೆ, ಮತ್ತು ಉತ್ತೇಜಕ (motive, drive & incentive)

ಪ್ರೇರಣೆಗಳನ್ನು (motives) ಅಭಿಪ್ರೇರಣೆ (drives) ಗಳೆಂತಲೂ ಕರೆಯುವರು. ಆದರೆ ಅವೆರಡರ ನಡುವೆ ವ್ಯತ್ಯಾಸವುಂಟು. ಪ್ರೇರಣೆ ಎಂದರೆ ಜೀವಿಯು ತನ್ನ ಗುರಿಸಾಧನೆಗಾಗಿ ಕಾರ್ಯಪ್ರವೃತ್ತವಾಗುವಂತೆ ಮಾಡುವ ಆಂತರಿಕವಾದ ಕಾಲ್ಪನಿಕ ಒತ್ತರ, ಅಭಿಪ್ರೇರಣೆ ಎಂದರೆ ‘ಬಯಕೆಯ ಪೂರೈಕೆಗಾಗಿ ಜೀವಿಯಲ್ಲಿ ಉಂಟಾದ ಉದ್ರೇಕತಾಸ್ಥಿತಿ’. ಉದಾಹರಣೆಗೆ : ಶರೀರದಲ್ಲಿ ಆಹಾರದ ಕೊರತೆ, ಹಸಿವು ಎಂಬ ಅಭಿಪ್ರೇರಣೆ (drive) ಉಂಟುಮಾಡುತ್ತದೆ. ಆಗ ಜೀವಿ ಹಸಿವು ನೀಗಿಸಿಕೊಳ್ಳಲು ಆಹಾರ ಪಡೆಯುವುದಕ್ಕಾಗಿ ಕಾರ್ಯಪ್ರವೃತ್ತವಾಗುತ್ತದೆ

ಉತ್ತೇಜಕ (Incentive)

ನಮ್ಮ ಅವಶ್ಯಕತೆಗಳನ್ನು ಪೂರೈಸುವ ವಸ್ತು, ವ್ಯಕ್ತಿ ಅಥವಾ ಸಂದರ್ಭವನ್ನು ಉತ್ತೇಜಕ ಎನ್ನುವರು. ಉದಾಹರಣೆಗೆ : ಆಹಾರ, ಹಣ, ಸಾಮಾಜಿಕ ಪ್ರಶಂಸೆಗಳು, ಹೊಗಳಿಕೆ, ಉಡುಗೊರೆ, ಪದಕ, ಮುಂತಾದವುಗಳನ್ನು ಉತ್ತೇಜಕಗಳೆನ್ನುತ್ತೇವೆ. ಈ ಉತ್ತೇಜಕಗಳು ವ್ಯಕ್ತಿಯನ್ನು ಪ್ರೇರೇಪಿಸುತ್ತವೆ. ಅಥವಾ ಹುರಿದುಂಬಿಸುತ್ತವೆ. ‘ಅವಶ್ಯಕತೆಗಳು’ (Needs) ಮತ್ತು ಉತ್ತೇಜಕಗಳು ಪರಸ್ಪರ ಪೂರಕ ಪ್ರಭಾವ ಬೀರಿ ವರ್ತನೆಯನ್ನು ಪ್ರಚೋದಿಸುತ್ತವೆ. ಒಂದು ಪ್ರಬಲ ಅಗತ್ಯ ಒಂದು ಆಕರ್ಷಣೀಯವಾದ ಉತ್ತೇಜಕದ ಜೊತೆಗೂಡಿ ತೀವ್ರವಾದ ಬಯಕೆ (ಅಭಿಪ್ರೇರಣೆ) ಯನ್ನುಂಟು ಮಾಡುತ್ತದೆ.

ಉದಾಹರಣೆಗೆ : ಆಗತಾನೇ ಊಟ ಮಾಡಿದ ವ್ಯಕ್ತಿಗೆ ಅವನಿಗೆ ತುಂಬಾ ಇಷ್ಟವಾದ ಪಾಯಸ ನೋಡಿದಾಗ ಹೊಟ್ಟೆ ತುಂಬಿದ್ದರೂ ಪಾಯಸ ಕುಡಿಯಬೇಕೆಂಬ ಬಯಕೆ ಉಂಟಾಗುತ್ತದೆ, ಐ.ಪಿ.ಎಲ್. (Indian Premier League) ಕ್ರಿಕೇಟ್ ಆಡಲು ಕ್ರಿಕೆಟಿಗರು ದುಂಬಾಲು ಬೀಳಲು ಕಾರಣ, ‘ಹೇರಳ ಹಣ’ ನೀಡುತ್ತಿರುವುದು. ಹೆಚ್ಚುವರಿ ವೇಳೆ ಕೆಲಸ ಮಾಡಿದರೆ ದುಪ್ಪಟ್ಟು ಸಂಪಾದನೆ ಎಂದು ಕಾರ್ಮಿಕರು O.T.(Overtime) ಕೆಲಸ ಮಾಡಲು ಉತ್ಸಾಹ ತೋರುವರು. ಇಲ್ಲಿ ‘ಹಣ’ ಉತ್ತೇಜಕವಾಗಿದೆ.

ಪ್ರೇರಣೆ – ವ್ಯಾಖ್ಯೆ ಅಥವಾ ನಿರೂಪಣೆ : (Motive – definition)

“ಜೀವಿಯು ಕಾರ್ಯೋನ್ಮುಖವಾಗುವಂತೆ ಮಾಡುವ ಆಂತರಿಕ ಒತ್ತರಗಳಿಗೆ ಪ್ರೇರಣೆ’ ಎನ್ನುವರು. ಅಂದರೆ ಪ್ರೇರಣೆ ಎಂಬುದು ಆಂತರಿಕವಾದುದು. ಅದು ನಮ್ಮ ವರ್ತನೆಯನ್ನು ನಿಯಂತ್ರಿಸುತ್ತದೆ, ಮತ್ತು ನಿರ್ದೇಶಿಸುತ್ತದೆ ಮತ್ತು ಉತ್ತೇಜಿಸುತ್ತದೆ.

ಪ್ರೇರಣೆ ಆಂತರಿಕವಾಗಿರಬಹುದು ಅಥವಾ ಬಾಹ್ಯವಾಗಿರಬಹುದು. ಆಂತರಿಕ ಪ್ರೇರಣೆ ಎಂದರೆ ತನ್ನ ಸ್ವಂತ ಖುಷಿಗಾಗಿ ಮಾಡುವ ಕ್ರಿಯೆ. ಬಾಹ್ಯ ಪ್ರೇರಣೆ ಎಂದರೆ ಹೊರಗಿನ ಆಕರ್ಷಣೆಗಾಗಿ ಮಾಡುವ ಕ್ರಿಯೆ. ಉದಾಹರಣೆಗೆ : ಸ್ವಸಂತೋಷಕ್ಕಾಗಿ ಹಾಡುವುದು (ಆಂತರಿಕ ಪ್ರೇರಣೆ), ಪ್ರಶಸ್ತಿ, ಸನ್ಮಾನಕ್ಕಾಗಿ ಸಮಾರಂಭಗಳಲ್ಲಿ ಹಾಡುವುದು (ಬಾಹ್ಯ ಪ್ರೇರಣೆ).

ಮೂಲ ಪ್ರೇರಣೆಗಳೆಂದರೆ ಶಾರೀರಿಕ ಅಗತ್ಯಗಳನ್ನು ಪೂರೈಸಲು ಉಂಟಾಗುವ ಪ್ರೆರಣೆಗಳು. ಇವು ಶರೀರದಲ್ಲಿ ಉತ್ಪತ್ತಿಯಾಗುವ ಕೆಲವು ರಾಸಾಯನಿಕಗಳಿಂದ ಪ್ರಭಾವಿತವಾಗುತ್ತವೆ. ಉದಾಹರಣೆಗೆ : ಬಾಯಾರಿಕೆ, ಹಸಿವು, ಲೈಂಗಿಕ ಬಯಕೆ, ಮಾತೃತ್ವ ಪ್ರೇರಣೆ, ಮುಂತಾದವು. ಬಾಯಾರಿಕೆ ಮತ್ತು ಹಸಿವು ಜೀವಿಯ ಉಳಿವಿಗಾಗಿ ಉಂಟಾಗುವ ಪ್ರೇರಣೆಗಳು; ಆದರೆ ಲೈಂಗಿಕ ಬಯಕೆ ಮತ್ತು ಮಾತೃತ್ವ ಪ್ರೇರಣೆಗಳು ಜೀವಿಗಳ ವಂಶಾಭಿವೃದ್ಧಿಗಾಗಿ ಉಂಟಾಗುವ ಪ್ರೇರಣೆಗಳು,

ಸಾಮಾಜಿಕ ಪ್ರೇರಣೆಗಳು ಜೀವಿ ಸಮಾಜದಲ್ಲಿ ಹುಟ್ಟಿ ಬೆಳೆಯುವಾಗ ಮೈಗೂಡಿಸಿಕೊಂಡ ಪ್ರೇರಣೆಗಳು ಅಂದರೆ ಕುಟುಂಬ ಹಾಗೂ ಸಮಾಜದ ಪ್ರಭಾವದಿಂದ ಬೆಳೆದುಬಂದ ಪ್ರೇರಣೆಗಳು. ಉದಾಹರಣೆಗೆ : ಸಾಂಘಿಕ ಪ್ರೇರಣೆ, ಸಾಧನಾ ಪ್ರೇರಣೆ, ಗೌರವ, ಅಧಿಕಾರ, ಸ್ಥಾನಮಾನ ಪ್ರೇರಣೆ, ಮತ್ತು ಆತ್ಮಸಿದ್ಧಿ ಪ್ರೇರಣೆ, ಮುಂತಾದವು.

ಮೂಲ ಪ್ರೇರಣೆಗಳು ಅಥವಾ ಶಾರೀರಿಕ ಪ್ರೇರಣೆಗಳು (Primary motives or Physiological motives):

ಬಾಯಾರಿಕೆ (Thirst):

ಜೀವಿಗಳ ಶರೀರದಲ್ಲಿ ನೀರಿನ ಕೊರತೆಯಾದಾಗ ಶರೀರದ ಸಮತೋಲನ ಏರುಪೇರಾಗುತ್ತದೆ. ಆಗ ನೀರಿನ ಕೊರತೆ ನೀಗಿಸುವಂತೆ ಬಾಯಾರಿಕೆ ಕಾಣಿಸಿಕೊಳ್ಳುತ್ತದೆ. ಆಗ ನೀರು. ಇಲ್ಲವೆ ಇತರ ದ್ರವ ಪಾನೀಯಗಳ ಸೇವನೆಗಾಗಿ ಜೀವಿ ಕಾರ್ಯಪ್ರವೃತ್ತವಾಗುತ್ತದೆ. ನೀರು ಅಥವಾ ಪಾನೀಯ ದೊರೆತು ಬಾಯಾರಿಕೆ ತೀರುವವರೆಗೂ ಈ ಚಟುವಟಿಕೆ ಮುಂದುವರಿಯುತ್ತದೆ.

ಕೆಲವು ವೇಳೆ ಬಾಯಾರಿಕೆ ಇಲ್ಲದಿದ್ದರೂ ನೀರನ್ನು ವಿವಿಧ ರೂಪಗಳಲ್ಲಿ ಅಂದರೆ ಕಾಫಿ, ಟೀ, ಎಳನೀರು, ತಂಪುಪಾನೀಯ, ಮಜ್ಜಿಗೆ, ಮುಂತಾದವುಗಳನ್ನು ಕೆಲವು ಸಾಮಾಜಿಕ (ಇತರರ ಒತ್ತಾಯ) ಕಾರಣಗಳಿಂದ ಇಲ್ಲವೇ ಮಾನಸಿಕ (ಕುಡಿಯಬೇಕೆಂಬ ತೀವ್ರ ಬಯಕೆ) ಕಾರಣಗಳಿಂದ ಸೇವಿಸುತ್ತೇವೆ.

ಆಹಾರವಿಲ್ಲದಿದ್ದರೂ ಕೆಲವು ವಾರಗಳ ಕಾಲ ಜೀವಿ ಬದುಕಬಲ್ಲದು. ಆದರೆ ನೀರಿಲ್ಲದೆ ಕೆಲವು ದಿನಗಳು ಬದುಕುವುದೂ ಕಷ್ಟ, ಬಾಯಾರಿಕೆ ಹಸಿವೆಗಿಂತಲೂ ಪ್ರಬಲವಾದ ಮೂಲ ಪ್ರೇರಣೆಯಾಗಿದೆ.

ಹಸಿವು (Hunger)

ಹಸಿವು ಪ್ರಮುಖವಾದ ಮೂಲ ಪ್ರೇರಣೆ ಹಸಿವೆಂಬುದು ಇರದಿದ್ದರೆ, ಮನುಷ್ಯ ಬಹುಶಃ ಏನನ್ನೂ ಸಾಧಿಸುತ್ತಿರಲಿಲ್ಲ. ಮಾನವನ ವಿವಿಧ ಸಾಧನೆಗಳಿಗೆ ಮೂಲ ಕಾರಣ ‘ಹಸಿವು’ “ಉದರ ನಿಮಿತ್ತಂ ಬಹುಮುಖ ವೇಷಂ” ಎಂಬ ಪುರಂದರದಾಸರ ನುಡಿ ಹಸಿವಿನ ಮಹತ್ವವನ್ನು ಬಿಂಬಿಸುತ್ತದೆ. ಹಾಗೆಯೇ “ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಎಂಬ ದಾಸರ ನುಡಿಮುತ್ತು ಸಹ ಹಸಿವು ಎಷ್ಟು ತೀವ್ರವಾದುದು ಎಂದು ತಿಳಿಸುತ್ತದೆ. ಫ್ರಾನ್ಸ್‌ನಲ್ಲಿ ಬ್ರೆಡ್ (ಆಹಾರ) ಗಾಗಿ ಆರಂಭವಾದ ಹೋರಾಟ ಫ್ರೆಂಚ್ ಕ್ರಾಂತಿಗೆ ನಾಂದಿಯಾಯಿತು. ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ದೊಡ್ಡ ಸವಾಲೆಂದರೆ ತನ್ನ ಜನರ ಹೊಟ್ಟೆ ತುಂಬಿಸುವುದು ಅಂದರೆ ಹಸಿವು ನೀಗಿಸುವುದು.

ಇಂದಿಗೂ ಅನೇಕ ರಾಷ್ಟ್ರಗಳಿಗೆ ಸವಾಲೆನಿಸಿರುವ ಹಸಿವು ಎಂಬ ಈ ಮೂಲ ಪ್ರೇರಣೆಗೆ ಕಾರಣ ಏನು? ಹಸಿವು ಹೇಗೆ ಉಂಟಾಗುತ್ತದೆ? ಎಂಬ ಬಗ್ಗೆ ಈಗ ತಿಳಿದುಕೊಳ್ಳೋಣ.

ಹಸಿವಿಗೆ ಪ್ರಮುಖ ಕಾರಣಗಳೆಂದರೆ :

1) ಖಾಲಿ ಹೊಟ್ಟೆಯಿಂದ ಉಂಟಾಗುವ ಜಠರ ಸಂಕುಚತೆಯಿಂದ ಹಸಿವು ಉಂಟಾಗುವುದು.

2) ರಕ್ತದಲ್ಲಿ ಸಕ್ಕರೆ ಪ್ರಮಾಣದಲ್ಲಿ ಇಳಿಮುಖವಾಗುವುದರಿಂದ ಹಸಿವು ಉಂಟಾಗುವುದು. ಹೊಟ್ಟೆ ಖಾಲಿ ಇದ್ದಾಗ ಹಸಿವು ಉಂಟಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಜಠರ ಸಂಕುಚನವೇ ಹಸಿವಾಗಿದೆ ಎಂಬುದರ ಸೂಚನೆ ಎಂದು ಪರಿಗಣಿಸಲಾಗುತ್ತಿತ್ತು. ವಾಲ್ಟರ್‌ ಕ್ಯಾನನ್, ಜಠರ ಸಂಕುಚನ ಮತ್ತು ಹಸಿವಿನ ಶೂಲೆ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಒಂದು ಪ್ರಯೋಗ ನಡೆಸಿದನು. ಅವನು ಖಾಲಿ ಹೊಟ್ಟೆ ಇರುವ ವ್ಯಕ್ತಿಗೆ ಒಂದು ಬಲೂನು ನುಂಗುವ ತರಬೇತಿ ನೀಡಿದನು. ನಂತರ ಬಲೂನಿಗೆ ಒಂದು ರಬ್ಬರ್ ಕೊಳವೆ ಅಳವಡಿಸಿ ನುಂಗಿಸಿದನು. ರಬ್ಬರ್ ಕೊಳವೆ ಮೂಲಕ ಬಲೂನಿಗೆ ಗಾಳಿ ತುಂಬಿಸಿದನು. ಮತ್ತು ರಬ್ಬರ್ ನಾಳದ ಇನ್ನೊಂದು ತುದಿಯನ್ನು ‘ಕೈಮೋಗ್ರಾಫ್’ ಯಂತ್ರಕ್ಕೆ ಅಳವಡಿಸಿದನು. ಕೈಮೋಗ್ರಾಫ್ ಯಂತ್ರವು ಜಠರ ಸಂಕುಚನದ ಪ್ರತಿ ಸಂಕುಚನವನ್ನು ದಾಖಲು ಮಾಡಿಕೊಳ್ಳುವ ಯಂತ್ರವಾಗಿತ್ತು. ಆಗ ಪ್ರಯೋಗಾರ್ಥಿಯು ಜಠರ ಸಂಕುಚನ ಹೆಚ್ಚಾಗಿದ್ದಾಗ ಹಸಿವಿನ ಶೂಲೆ ಅಧಿಕವಾಗಿತ್ತೆಂದೂ ಮತ್ತು ಜಠರ ಸಂಕುಚನ ಕಡಿಮೆ ಇದ್ದಾಗ ಹಸಿವಿನ ಶೂಲೆ ಕಡಿಮೆಯಾಗಿತ್ತೆಂದೂ ವರದಿ ಮಾಡಿದನು. ಆದರೆ ಈ ಪ್ರಯೋಗದಿಂದ ಹಸಿವಿನ ಶೂಲೆಗೂ ಜಠರ ಸಂಕುಚನಕ್ಕೂ ಸಂಬಂಧವಿದೆ ಎಂಬುದು ಖಚಿತವಾಗಲಿಲ್ಲ, ಎಂದು ಕ್ಯಾನನ್‌ನ ಪ್ರಯೋಗವನ್ನು(ವಾದವನ್ನು) ಇತರರು ಒಪ್ಪಲಿಲ್ಲ.

ರಕ್ತದ ರಾಸಾಯನಿಕಗಳ ಸಮೀಕರಣ: (Blood chemistry)

ರಕ್ತದ ರಾಸಾಯನಿಕಗಳ ಏರುಪೇರಿಗೂ, ಹಸಿವಿಗೂ ಸಂಬಂಧ ಇದೆ ಎಂದು ಅಧ್ಯಯನಗಳಿಂದ ದೃಢಪಟ್ಟಿದೆ. ನಾವು ಸೇವಿಸಿದ ಆಹಾರ ಕರುಳಿನಲ್ಲಿ ಜೀರ್ಣವಾದ ನಂತರ ಅತಿ ಸರಳ ರೂಪವಾದ ಸಕ್ಕರೆ (ಗ್ಲಕೋಸ್) ಆಗಿ ಪರಿವರ್ತನೆಗೊಳ್ಳುತ್ತದೆ. ಗ್ಲೋಕೋಸ್ ಕರುಳಿನ ವಿಲ್ಲೆಗಳಿಂದ ಹೀರಲ್ಪಟ್ಟು ರಕ್ತಕ್ಕೆ ರವಾನೆಯಾಗುತ್ತದೆ. ರಕ್ತದ ಮೂಲಕ ಶರೀರದ ವಿವಿಧ ಭಾಗಗಳಿಗೆ ಸರಬರಾಜಾಗುತ್ತದೆ. ಅಲ್ಲಿನ ಜೀವಕೋಶಗಳಲ್ಲಿ ಗ್ಲಕೋಸ್ ಉತ್ಕರ್ಷಣೆಗೊಂಡು ಶಕ್ತಿ ಬಿಡುಗಡೆಯಾಗುತ್ತದೆ. ಇದು ನಿರಂತರವಾಗಿ ಸಾಗುವ ಪ್ರಕ್ರಿಯೆ. ಇಂತಹ ಗ್ಲಕೋಸ್‌ನ ಪ್ರಮಾಣ ರಕ್ತದಲ್ಲಿ ತಗ್ಗಿದಾಗ ಶರೀರದಲ್ಲಿ ಸುಸ್ತು ಕಾಣಿಸಿಕೊಳ್ಳುತ್ತದೆ. ಆಗ ಮೆದುಳಿನ ಹೈಪೋಥಲಾಮಸ್‌ಗೆ ಸಂದೇಶ ರವಾನೆಯಾಗುತ್ತದೆ. ಹೈಪೋಥಲಾಮಸ್ ಜೀವಿಯನ್ನು ಜಾಗೃತಗೊಳಿಸಿ ಹಸಿವನ್ನು ನೀಗಿಸಿಕೊಳ್ಳುವಂತೆ ಪ್ರಚೋದಿಸುತ್ತದೆ. ಆಗ ಜೀವಿಗೆ ಆಹಾರ ತಿನ್ನಬೇಕು ಎನಿಸಿ ಹೊಟ್ಟೆ ತುಂಬಿಸಿಕೊಳ್ಳುವ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗುತ್ತದೆ. ಆಹಾರ ಸೇವಿಸಿದ ಕೆಲವೇ ನಿಮಿಷಗಳಲ್ಲಿ ರಕ್ತದ ಸಕ್ಕರೆ (ಗ್ಲಕೋಸ್) ಪ್ರಮಾಣ ಏರುತ್ತದೆ. ಮತ್ತು ಹೈಪೋಥಲಾಮಸ್ ಕಳಿಸುತ್ತಿದ್ದ ಹಸಿವಿನ ಶೂಲೆಯ ಸಂದೇಶ ನಿಲ್ಲುತ್ತದೆ. ಒಟ್ಟಿನಲ್ಲಿ ರಕ್ತದಲ್ಲಿ ಗ್ಲಕೋಸ್ ಪ್ರಮಾಣ ತಗ್ಗಿದಾಗ ಮೆದುಳಿನ ಹೈಪೋಥಲಾಮಸ್ ಜೀವಿಯನ್ನು ಜಾಗೃತಗೊಳಿಸಿ ಆಹಾರ ಸೇವಿಸುವಂತೆ ಮಾಡುತ್ತದೆ. ಹೈಪೋಥಲಾಮಸ್‌ನ ಮೇಲ್ಬಾಗವು ಹಸಿವನ್ನು ಪ್ರಚೋದಿಸಿದರೆ ಅದರ ತಳಭಾಗವು ಹಸಿವು ಸೂಚನೆಯನ್ನು ನಿಗ್ರಹಿಸುತ್ತದೆ. ಹೀಗೆ ಹೈಪೋಥಲಾಮಸ್ ಹಸಿವನ್ನು ನಿಯಂತ್ರಿಸುವ ಕೇಂದ್ರ ಎನಿಸಿದೆ.

ಸಮಾಜದಲ್ಲಿ ಜನರು ಅನೇಕ ಬಾರಿ ಹಸಿವಿಲ್ಲದಿದ್ದರೂ ಆಗಾಗ ಆಹಾರ ಸೇವಿಸುವುದನ್ನು ಕಾಣುತ್ತೇವೆ. ಇದಕ್ಕೆ ಎರಡು ರೀತಿಯ ಕಾರಣಗಳಿವೆ. ಅವುಗಳೆಂದರೆ ಸಾಮಾಜಿಕ ಹಾಗೂ ಮಾನಸಿಕ ಕಾರಣಗಳು, ಸಾಮಾಜಿಕ ಕಾರಣಗಳೆಂದರೆ, ಇತರ ಒತ್ತಾಯ, ಪ್ರೀತಿ ಪೂರ್ವಕ ಆಗ್ರಹ, ಇತ್ಯಾದಿ. ಹಾಗೆಯೇ ಮಾನಸಿಕ ಕಾರಣಗಳೆಂದರೆ, ನಮಗೆ ಪ್ರಿಯವಾದ ತಿಂಡಿ ಕಣ್ಮುಂದೆ ಬಂದಾಗ ಹಸಿವಿಲ್ಲದಿದ್ದರೂ ತಿನ್ನಬೇಕು ಎನಿಸುತ್ತದೆ. ಒಳ್ಳೆಯ ರುಚಿ, ವಾಸನೆ, ಆಹಾರ ಪ್ರದರ್ಶಿಸಿರುವ ರೀತಿ, ಇತ್ಯಾದಿಗಳು ಹಸಿವಿಲ್ಲದಿದ್ದರೂ ತಿನ್ನುವಂತೆ ಪ್ರೇರೇಪಿಸುತ್ತವೆ. ಹೀಗೆ ಹಸಿವಿಗೆ ಕೇವಲ ಶಾರೀರಿಕ ಕಾರಣಗಳೇ ಅಲ್ಲದೆ ಅನೇಕ ಸಾಮಾಜಿಕ ಹಾಗೂ ಮಾನಸಿಕ ಅಂಶಗಳೂ ಕಾರಣ ಎಂದು ಹೇಳಬಹುದು.

ಲೈಂಗಿಕ ಪ್ರೇರಣೆ (ಮೈಥುನ) (Sex drive) :

ಹಸಿವಿನಂತೆಯೇ ಲೈಂಗಿಕ ಬಯಕೆ ಕೂಡ ಒಂದು ಮೂಲ ಪ್ರೇರಣೆ. ಲೈಂಗಿಕ ಪ್ರೇರಣೆ ಅನೇಕ ಶಾರೀರಿಕ, ಸಾಮಾಜಿಕ ಹಾಗೂ ಮಾನಸಿಕ ಕಾರಣಗಳಿಂದ ಪ್ರಭಾವಿತವಾಗಿದೆ. ಹಸಿವು ಮತ್ತು ಬಾಯಾರಿಕೆ ಜೀವಿಯ ಉಳಿವಿಗೆ ಅಗತ್ಯವಾದ ಮೂಲ ಪ್ರೇರಣೆಗಳು. ಆದರೆ ಲೈಂಗಿಕ ಬಯಕೆ ಜೀವಿಯ ಉಳಿವಿಗೆ ಅಗತ್ಯವಿಲ್ಲ. ಜೀವಿಯ ಸಂತತಿ ಮುಂದುವರಿಯಲು ಲೈಂಗಿಕ ಪ್ರೇರಣೆ ಅತ್ಯಗತ್ಯ ಎಲ್ಲಾ ಮನುಷ್ಯರೂ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಕೆಲವರು ಲೈಂಗಿಕ ಚಟುವಟಿಕೆಗಳನ್ನು ನಿರ್ವಹಿಸಲು ಅಸಮರ್ಥರಾದರೆ ಮತ್ತೆ ಕೆಲವರು ಸಮರ್ಥರಾದರೂ ಅನೇಕ ಮಾನಸಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರಣಗಳಿಂದ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಲೈಂಗಿಕ ವರ್ತನೆಯ ಮೇಲೆ ವಂಶವಾಹಿಗಳು, ಅಂತಃಸ್ರಾವಗಳು ಹಾಗೂ ಅನುಭವಗಳು ಹೇಗೆ ಪ್ರಭಾವ ಬೀರುತ್ತವೆ ಎಂದು ತಿಳಿದುಕೊಳ್ಳುವುದು ಒಂದು ದೊಡ್ಡ ಸವಾಲೆನಿಸಿದೆ. ಜೀವಿಗಳು ಪ್ರಬುದ್ಧ ವಯಸ್ಸಿಗೆ ಬಂದಾಗ ಲೈಂಗಿಕ ವರ್ತನೆಗಳು, ಲೈಂಗಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಬೆಕ್ಕು, ನಾಯಿ, ಇಲಿ ಮುಂತಾದ ಪ್ರಾಣಿಗಳಲ್ಲಿ ಲೈಂಗಿಕ ರಸದೂತಗಳು ಲೈಂಗಿಕ ವರ್ತನೆಗೆ ಕಾರಣ ಎನಿಸಿವೆ. ಕೆಲವು ಅಧ್ಯಯನಗಳ ಪ್ರಕಾರ (ಹಾರೋ ಮತ್ತು ಹಾರೋ 1965, 1971) ಕೆಲವು ಪ್ರಾಣಿಗಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಲೈಂಗಿಕ ವರ್ತನೆಗಳು (ಉದಾಹರಣೆಗೆ ರೀಸಸ್ ಕೋತಿ ಮರಿಗಳು ಆಟವಾಡುತ್ತಾ ಒಂದರ ಮೇಲೊಂದು ಹತ್ತುವುದು) ಕಾಣಿಸಿಕೊಳ್ಳುತ್ತವೆ. ಆದರೆ ಅದು ಒಂದು ರೀತಿಯ ಪ್ರೀತಿಯ ಪ್ರತೀಕ ಹಾಗೂ ಮುಂದಿನ ಲೈಂಗಿಕ ವರ್ತನೆಯ ಸೂಚನೆ ಎಂದು ತಿಳಿದು ಬಂದಿದೆ.

ಮನುಷ್ಯರಲ್ಲಿ ಲೈಂಗಿಕ ರಸದೂತ(Hormones) ಗಳ ಬಿಡುಗಡೆ ಆರಂಭಗೊಂಡಂದಿನಿಂದ ಲೈಂಗಿಕ ಲಕ್ಷಣಗಳು ಮತ್ತು ಲೈಂಗಿಕ ವರ್ತನೆಗಳು ಕಾಣಿಸಿಕೊಳ್ಳುತ್ತವೆ (10-14 ನೇ ವಯಸ್ಸು). ಅಧಿ ವಯಸ್ಸಿನಲ್ಲಿ ಪುರುಷರ ವೃಷಣಗಳಲ್ಲಿ ‘ಆಂಡೋಜನ್ಸ್’ ಎಂಬ ಲೈಂಗಿಕ ರಸದೂತ (ಅಂತಃಸ್ರಾವ) ಗಳು ಬಿಡುಗಡೆಯಾಗಲು ಆರಂಭವಾಗುತ್ತದೆ. ಈ ರಸದೂತಗಳು ಪುರುಷರ ಅನುಷಂಗಿಕ ಲೈಂಗಿಕ ಲಕ್ಷಣಗಳಾದ ಗಡ್ಡ, ಮೀಸೆ ಬೆಳವಣಿಗೆ, ಗಡಸುಧ್ವನಿ, ದೃಢ ಮಾಂಸಖಂಡಗಳ ಬೆಳವಣಿಗೆ, ಹೆಣ್ಣಿನ ಬಗ್ಗೆ ಆಕರ್ಷಣೆ ಮುಂತಾದ ಪುರುಷ ಲಕ್ಷಣಗಳು ಬೆಳೆಯಲು ಕಾರಣವಾಗಿವೆ. ವಂಶಾಭಿವೃದ್ಧಿಗೆ ಅಗತ್ಯವಾದ ವೀರ್ಯಾಣು (ಶುಕ್ರಾಣು)ಗಳು ಉತ್ಪತ್ತಿ ಕೂಡ ಪ್ರಾರಂಭವಾಗುತ್ತದೆ. ಪುರುಷರಲ್ಲಿ ವಿರ್ಯಾಣು ಉತ್ಪತ್ತಿ ಸಂತಾನ ನಿವೃತ್ತಿ ಆಗುವವರೆಗೂ ಮುಂದುವರಿಯುತ್ತದೆ. ಹುಡುಗಿಯರು ಅಧಿವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ಅವರ ಲಿಂಗಗ್ರಂಥಿಗಳಾದ ಅಂಡಾಶಯಗಳು ಕ್ರಿಯಾಶೀಲವಾಗಿ ಲೈಂಗಿಕ ರಸದೂತಗಳನ್ನು ಬಿಡುಗಡೆ ಮಾಡುತ್ತವೆ. ಸ್ತ್ರೀಯರಲ್ಲಿ ಈಸ್ಟೋಜನ್ ಅಂತಃಸ್ರಾವ ಎಂಬ ರಸದೂತ ಉತ್ಪತ್ತಿ ಆರಂಭವಾಗುತ್ತದೆ. ಈಸ್ಪೋಜನ್ ಜೊತೆ ಆಂಡೋಜನ್ಸ್ ಉತ್ಪತ್ತಿಯಾಗುತ್ತದೆ. ಆದರೆ ಈಸ್ಟೋಜನ್ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಆಂಡೋಜನ್ಸ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಈಸ್ರೋಜನ್ ಸ್ತ್ರೀ ಲಕ್ಷಣಗಳಾದ ಸ್ತನಗಳ ಬೆಳವಣಿಗೆ, ಋತುಚಕ್ರ ಆರಂಭ, ಕೋಮಲ ಧ್ವನಿ, ಮುಖದಲ್ಲಿ ಆಕರ್ಷಣೆ, ಕಟಿಬದ್ದ(ಸೊಂಟ) ವಿಕಸನ, ಮುಂತಾದವುಗಳಿಗೆ ಕಾರಣವಾಗಿದೆ. ಒಬ್ಬ ಸ್ತ್ರೀ ತನ್ನ ಜೀವಿತ ಅವಧಿಯಲ್ಲಿ ಋತುಚಕ್ರ ಆರಂಭಗೊಂಡ ದಿನದಿಂದ ಮುಟ್ಟು ನಿಲ್ಲುವವರೆಗೆ (Menopause) ಸುಮಾರು 300 ರಿಂದ 400 ಅಂಡಾಣು (ಹೆಣ್ಣು ಲಿಂಗಾಣು) ಗಳನ್ನು ಉತ್ಪತ್ತಿ ಮಾಡುತ್ತಾಳೆ. ಸ್ತ್ರೀ ಗರ್ಭಧರಿಸಿರುವಾಗ ಅಂಡಾಣು ಉತ್ಪತ್ತಿ ಸ್ಥಗಿತಗೊಳ್ಳುತ್ತದೆ. ಹೆರಿಗೆ ನಂತರ ಮತ್ತೆ ಋತುಚಕ್ರ ಕಾಣಿಸಿಕೊಳ್ಳುತ್ತದೆ. ಮುಟ್ಟು ನಿಂತ ಮೇಲೆ ಈಸ್ಪೋಜನ್ ಪ್ರಮಾಣ ಕ್ರಮೇಣ ತಗ್ಗುತ್ತಾ ಬರುವುದರಿಂದ ಸ್ತ್ರೀಯರ ವರ್ತನೆಯಲ್ಲಿ ಏರುಪೇರಾಗಬಹುದು. ಮುಖದಲ್ಲಿ ಗಡ್ಡ-ಮೀಸೆ ಬೆಳೆಯಬಹುದು. ಒಟ್ಟಾರೆ ಆಂಡೋಜನ್ಸ್ ಮತ್ತು ಈಸ್ಟೋಜನ್‌ಗಳು ಲಿಂಗ ಸಂಬಂಧಿ ನಡವಳಿಕೆಗೆ (ಅಂದರೆ ಗಂಡು ಗಂಡಸಿನಂತೆ ಮತ್ತು ಹೆಣ್ಣು ಹೆಂಗಸಿನಂತೆ) ಕಾರಣವಾಗಿವೆ.

ಮಾತೃತ್ವ ಪ್ರೇರಣೆ :

ಮಕ್ಕಳನ್ನು ಹೊತ್ತು, ಹೆತ್ತು, ಸಾಕಿ-ಸಲಹುವುದಕ್ಕೆ ಮಾತೃತ್ವ ಎನ್ನುವರು. ‘ಒಂದು ಹೆಣ್ಣು ಹಡೆದರೆ ಮಾತ್ರ ಆಕೆಯ ಜೀವನ ಸಾರ್ಥಕ’ ಎಂಬುದು ಸಮಾಜದಲ್ಲಿ ರೂಢಿಯಲ್ಲಿರುವ ನಂಬಿಕೆ. ಮಗುವನ್ನು ಹೆರುವುದರಿಂದ ಆಕೆಯಲ್ಲಿರುವ ತಾಯಿಯ ಮಮಕಾರ ಜಾಗೃತವಾಗುತ್ತದೆ. ಮಗುವನ್ನು ಹಡೆದ ಮೇಲೆ ಸ್ತ್ರೀಯ ವರ್ತನೆಯಲ್ಲಿ (ಮಗುವಿನ ಬಗ್ಗೆ ತೀವ್ರತರವಾದ ಬದಲಾವಣೆ ಆಗುತ್ತದೆ.

ಮಗುವಿಗೆ ಹಾಲುಣಿಸುವುದು. ನಿದ್ರೆಗೆಟ್ಟು ಲಾಲಿ ಹಾಡಿ ಮಲಗಿಸುವುದು. ಮಗುವಿನ ಡಯಾಪೆರ್‌ನ್ನು ಪದೇ ಪದೇ ಬದಲಿಸಿ ಶುಚಿಗೊಳಿಸುವುದು. ತನ್ನ ಮಗುವಿಗೆ ಸಣ್ಣ ನೋವೂ ಆಗದಂತೆ ಎಚ್ಚರ ವಹಿಸುವುದು. ಮುಂತಾದವುಗಳನ್ನು ಯಾವುದೇ ಬೇಸರವಿಲ್ಲದೆ, ಸಂತೋಷದಿಂದ ನಿರ್ವಹಿಸುತ್ತಾಳೆ. ಇದಕ್ಕೆ ಕಾರಣ ಏನು? ಮಗುವಿನ ಮೇಲಿನ ಅತಿಯಾದ ಮಮತೆಗೆ ಏನು ಕಾರಣ? ರಸದೂತಗಳೆ? ಸಾಮಾಜಿಕ ಹಾಗೂ ಮಾನಸಿಕ ಕಾರಣಗಳೇ? ಮಗುವನ್ನು ಲಕ್ಷಣ ಕಾಲವೂ ಆಗಲಿರಲಾರೆ ಎಂಬ ಉತ್ಕಟ ಬಯಕೆ ಉಂಟಾಗಲು ಏನು ಕಾರಣ? ಮುಂತಾದ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನಡೆಸಿದ ಅಧ್ಯಯನಗಳಿಂದ ತಿಳಿದುಬಂದುದೇನೆಂದರೆ ಪ್ರಮುಖ ಅಂತಃಸ್ರಾವಗಳಾದ ಈಸ್ಟೋಜನ್, ಪ್ರೊಜೆಸ್ಟಿರಾನ್, ಮತ್ತು ಪ್ರೊಲಾಕ್ಟಿನ್‌ಗಳು ತಾಯ್ತನದ ತುಡಿತ ಉಂಟಾಗಲು ಕಾರಣ ಎಂದು ತಿಳಿದು ಬಂದಿದೆ. ವಿವಾಹಕ್ಕೆ ಮೊದಲು ‘ಮಕ್ಕಳನ್ನು ಹೆರುವುದು ಖಂಡಿತಾ ಇಷ್ಟವಿಲ್ಲ’ ಎನ್ನುತ್ತಿದ್ದವರೂ ಸಹ ಹಡೆದ ಮೇಲೆ ಅತಿ ಪ್ರೀತಿಯಿಂದ ತಮ್ಮ ಮಗುವನ್ನು ಜೋಪಾನ ಮಾಡುತ್ತಿದ್ದರು.

ಇಲಿಗಳ ಮೇಲೆ ನಡೆಸಿದ ಅಧ್ಯಯನಗಳಿಂದ ತಿಳಿದುಬಂದುದೇನೆಂದರೆ, ಮೂಲ ಪ್ರೇರಣೆಗಳಲ್ಲೆಲ್ಲಾ ಅತಿ ಪ್ರಬಲವಾದ ಪ್ರೇರಣೆ ಎಂದರೆ ಮಾತೃತ್ವ ಪ್ರೇರಣೆ, ಇದಕ್ಕೆ ಪ್ರಮುಖ ಕಾರಣ ಅಂತಃಸ್ರಾವಗಳಾದರೂ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ಕಾರಣಗಳ ಪಾತ್ರವೂ ಇದರಲ್ಲಿ ಪ್ರಮುಖವಾಗಿದೆ. ಪ್ರೊಲಾಕ್ಟಿನ್ ಅಂತಃಸ್ರಾವವು ಎದೆಹಾಲಿನ ಉತ್ಪತ್ತಿಗೆ ಕಾರಣವಾಗಿದೆ.

ಸಾಮಾಜಿಕ ಪ್ರೇರಣೆಗಳು ಅಥವಾ ಆರ್ಜಿತ ಪ್ರೇರಣೆಗಳು (Social Motives or Secondary motives):

ಹಣ ಸಂಪಾದನೆ, ಸಾಧನೆ, ಮನ್ನಣೆ, ಅಧಿಕಾರ, ಆಕ್ರಮಣ ಇವು ಕೆಲವು ಸಾಮಾಜಿಕ ಪ್ರೇರಣೆಗಳು: ಸಾಮಾಜಿಕ ಪ್ರೇರಣೆಗಳು ಕಲಿಕೆಯಿಂದ ಮೈಗೂಡಿಸಿಕೊಂಡ ಪ್ರೇರಣೆಗಳು. ಇವು ಕಲಿಕೆಯಿಂದ ಬಂದವುಗಳಾದರೂ ಮೂಲ ಪ್ರೇರಣೆಗಳಿಗಿಂತಲೂ ಪ್ರಬಲವಾಗಿರುತ್ತವೆ. ಸಾಮಾಜಿಕ ಪ್ರೇರಣೆಗಳು ಗುರಿಸಾಧನೆಯ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗುವಂತೆ ಮಾಡುತ್ತವೆ.

ಹಾರ್ವಡ್್ರ ವಿಶ್ವ ವಿದ್ಯಾನಿಲಯದ ಮನೋವಿಜ್ಞಾನಿ ಹೆನ್ರಿ ಮುದ್ರೆ (1938) ಯವರು ಸಾಮಾಜಿಕ ಪ್ರೇರಣೆಗಳ ಬಗ್ಗೆ ಮೊದಲು ಅಧ್ಯಯನ ನಡೆಸಿದವರಲ್ಲಿ ಒಬ್ಬರಾಗಿದ್ದಾರೆ. ಹೆನ್ರಿ ಮುರೆಯವರು ಸಾಮಾಜಿಕ ಪ್ರೇರಣೆಗಳನ್ನು ಮಾನಸಿಕ ಅಗತ್ಯಗಳು ಎಂದು ಕರೆದರು ಮತ್ತು ಸುಮಾರು 21 ಮಾನಸಿಕ ಅಗತ್ಯಗಳನ್ನು ಪಟ್ಟಿ ಮಾಡಿದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಸಾಧನಾ ಪ್ರೇರಣೆ, ಸಾಂಘಿಕ ಪ್ರೇರಣೆ, ಆಕ್ರಮಣ, ಸ್ವಾಯತ್ತತೆ, ಪ್ರಾಬಲ್ಯ ಮತ್ತು ಪೋಷಿಸುವುದು, ಇತ್ಯಾದಿ. ಈಗ ಕೆಲವು ಪ್ರಮುಖ ಸಾಮಾಜಿಕ ಪ್ರೇರಣೆಗಳ ಬಗ್ಗೆ ಚರ್ಚಿಸೋಣ.

ಡಿ.ಸಿ. ಮೆಕ್ಲಿಲ್ಯಾಂಡ್ ಪ್ರಕಾರ ಮಾನವ ಪ್ರೇರಣೆಗಳು ಮೂರು ಪ್ರಮುಖ ಆಯಾಮಗಳನ್ನು ಒಳಗೊಂಡಿರುತ್ತವೆ. ಅವುಗಳೆಂದರೆ, ಸಾಂಘಿಕ ಪ್ರೇರಣೆ, ಅಧಿಕಾರ ಮತ್ತು ಸಾಧನಾ ಪ್ರೇರಣೆ. ಈ ಪ್ರೇರಣೆಗಳ ಪ್ರಾಮುಖ್ಯತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಸಾಧನ ಪ್ರೇರಣೆ Achievement Motivation)

ಹೆನ್ರಿ ಮುದ್ರೆ (1938), “ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸುವಂತೆ ಮಾಡುವ ಪ್ರೇರಣೆಯೇ ಸಾಧನಾ ಪ್ರೇರಣೆ” ಎಂದು ನಿರೂಪಿಸಿದನು. ಸಾಧನಾ ಪ್ರೇರಣೆಯು ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸುವುದು. ಉನ್ನತ ಕೌಶಲಗಳನ್ನು ಮೈಗೂಡಿಸಿಕೊಳ್ಳುವುದು ಮತ್ತು ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸುವುದಾಗಿರುತ್ತದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top