SSLC Exam-1 2026: ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳ ಆನ್ಲೈನ್ ನಮೂದು ಪ್ರಕ್ರಿಯೆ ಆರಂಭ
SSLC Exam-1 2026: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯಸ್ಥರಿಗೆ ತಮ್ಮ ಶಾಲೆಯ 2026 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಣಿಯಾಗಿರುವ ಶಾಲಾ ವಿದ್ಯಾರ್ಥಿಗಳ (CCERF) ಆಂತರಿಕ ಅಂಕಗಳನ್ನು ಆನ್ಲೈನ್ನಲ್ಲಿ ನಮೂದು ಮಾಡಲು ದಿನಾಂಕ: 03-02-2026 ರಿಂದ ಅವಕಾಶ ಕಲ್ಪಿಸಲಾಗಿದೆ.
ಮಂಡಲಿಯ ಜಾಲತಾಣದಲ್ಲಿ ಲಭ್ಯವಿರುವ ತಂತ್ರಾಂಶವನ್ನು ಬಳಸಿ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯಲ್ಲಿ ನೋಂದಣಿಯಾಗಿರುವ ಶಾಲಾ ವಿದ್ಯಾರ್ಥಿಗಳ (CCERF) ಆಂತರಿಕ ಅಂಕಗಳನ್ನು ಕಡ್ಡಾಯವಾಗಿ ಆನ್ಲೈನ್ನಲ್ಲಿ ನಮೂದು ಮಾಡಲು ಸೂಚಿಸಿದೆ.
1. ಮಂಡಲಿಯ ಜಾಲತಾಣ https://kseeb.karnataka.gov.in/ನ ಶಾಲಾ ಲಾಗಿನ್ನಲ್ಲಿ ತಂತ್ರಾಂಶ ಲಭ್ಯವಿದೆ.
2. ಲಾಗಿನ್ ಆದ ನಂತರ ಮೊದಲು Internal Marks Entry – 2026 ಮೇಲೆ ಕ್ಲಿಕ್ ಮಾಡಬೇಕು. ತಂತ್ರಾಂಶದಲ್ಲಿ ಅಂಕಗಳನ್ನು ದಾಖಲಿಸಲು ಪ್ರಾರಂಭಿಸುವ ಮುನ್ನ ಕೊಡಲಾಗಿರುವ ದೃಢೀಕರಣಗಳನ್ನು ಓದಿ ಅರ್ಥಮಾಡಿಕೊಂಡು ಒಪ್ಪಿಗೆಯನ್ನು ದಾಖಲಿಸಬೇಕು ಹಾಗೂ ದೃಢೀಕರಣಗಳಿಗೆ ಬದ್ಧರಾಗಿರಬೇಕು.
ನಂತರ ತೆರೆಯಲಾಗುವ ಮೆನುವಿನಲ್ಲಿ ಎಸ್.ಎ.ಟಿ.ಎಸ್ (SATS NUMBER) ಸಂಖ್ಯೆಯನ್ನು ನಮೂದಿಸಿ Enter ಬಟನ್ನನ್ನು ಒತ್ತುವುದು. ಉಲ್ಲೇಖಿತ ಮಾರ್ಗಸೂಚಿಯಲ್ಲಿ ವಿವರಿಸಿರುವಂತೆ, ಪ್ರತಿ ವಿದ್ಯಾರ್ಥಿಯು ಕನಿಷ್ಠ ಶೇಕಡಾ 75 ರಷ್ಟು ಹಾಜರಾತಿಯನ್ನು ಹೊಂದಿರುವ ಬಗ್ಗೆ ‘Yes’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ.
‘No’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ನೀಡಿರುವುದಿಲ್ಲ. ಹಾಜರಾತಿಯನ್ನು, ಮಾರ್ಚ್ ಮಾಹೆಯಲ್ಲಿ ನಡೆಯುವ 2026ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಹಿಂದಿನ ದಿನಕ್ಕೆ ಅನ್ವಯವಾಗುವಂತೆ ಲೆಕ್ಕಾಚಾರ ಮಾಡುವುದು.
3. ನಿಗದಿತ ಹಾಜರಾತಿ ‘No’ ಎಂದು select ಮಾಡಲ್ಪಟ್ಟ ವಿದ್ಯಾರ್ಥಿಗಳ ಮಾಹಿತಿಯನ್ನು ಸಹ Save ಮಾಡಿ Freeze ಮಾಡುವುದು ಕಡ್ಡಾಯವಾಗಿರುತ್ತದೆ. ಈ ವಿದ್ಯಾರ್ಥಿಗಳ ನೋಂದಣಿಯನ್ನು ರದ್ದುಪಡಿಸಲಾಗುವುದು ಮತ್ತು ಅಂತಿಮ ಪ್ರವೇಶ ಪತ್ರವನ್ನು ನೀಡಲಾಗುವುದಿಲ್ಲ.
4. ನಿಗದಿತ ಹಾಜರಾತಿ ‘Yes’ ಎಂದು Select ಮಾಡಲ್ಪಟ್ಟ ವಿದ್ಯಾರ್ಥಿಯ ಎಲ್ಲಾ ಮಾಹಿತಿಗಳು Display ಆಗುತ್ತವೆ. ಸದರಿ ಎಲ್ಲಾ ಮಾಹಿತಿಗಳು ನಿರ್ದಿಷ್ಟ ವಿದ್ಯಾರ್ಥಿಯದೇ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಆಂತರಿಕ ಅಂಕಗಳನ್ನು ನಮೂದಿಸುವುದು.
5. ವಿದ್ಯಾರ್ಥಿಯು ತೆಗೆದುಕೊಂಡಿರುವ ಭಾಷೆ ಮತ್ತು ವಿಷಯಗಳು ಹಾಗೂ ತಂತ್ರಾಂಶದಲ್ಲಿ Display ಆಗಿರುವ ಭಾಷೆ ಮತ್ತು ವಿಷಯಗಳು ಸಹ ಹೊಂದಾಣಿಕೆಯಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಂಡು, ಆಯಾ ಭಾಷೆ ಮತ್ತು ವಿಷಯಗಳಿಗೆ ಅನುಗುಣವಾಗಿ ಆಂತರಿಕ ಅಂಕಗಳನ್ನು ನಮೂದಿಸುವುದು. ಆಂತರಿಕ ಅಂಕಗಳನ್ನು ನಮೂದಿಸುವಾಗ, ವಿದ್ಯಾರ್ಥಿಯ ನಾಲ್ಕೂ ರೂಪಣಾತ್ಮಕ ಮೌಲ್ಯಮಾಪನಗಳಲ್ಲಿ ಪಡೆದ ಅಂಕಗಳನ್ನು ಯಥಾವತ್ತಾಗಿ ನಮೂದಿಸುವುದು ಕಡ್ಡಾಯವಾಗಿದೆ.
ಉದಾಹರಣೆ: ವಿದ್ಯಾರ್ಥಿ ತೆಗೆದುಕೊಂಡ ಭಾಷೆ ಮತ್ತು ವಿಷಯಗಳು: ಪ್ರಥಮಭಾಷೆ-ಕನ್ನಡ, ದ್ವಿತೀಯಭಾಷೆ -ಇಂಗ್ಲೀಷ್, ತೃತೀಯಭಾಷೆ -ಹಿಂದಿ, ಗಣಿತ,ವಿಜ್ಞಾನ ಮತ್ತು ಸಮಾಜವಿಜ್ಞಾನ ಆಗಿದ್ದಲ್ಲಿ,

6. ನಾಲ್ಕೂ ರೂಪಣಾತ್ಮಕ ಮೌಲ್ಯಮಾಪನಗಳಲ್ಲಿ ವಿಷಯವಾರು ಗರಿಷ್ಠ 50 ಅಂಕಗಳಿಗೆ ವಿದ್ಯಾರ್ಥಿಯು ಪಡೆದ ಅಂಕಗಳನ್ನು ನಮೂದಿಸಬೇಕು. ಅಂಕಗಳನ್ನು 0 (ಸೊನ್ನೆ) ಯಿಂದ 50 ರವರೆಗೆ ನಮೂದಿಸಬಹುದಾಗಿದೆ. ದಶಮಾಂಶ ರೂಪದಲ್ಲಿ ನಮೂದಿಸಬೇಕಿದ್ದಲ್ಲಿ 5ನ್ನು ಮಾತ್ರ ಅಂಕಗಳೊಂದಿಗೆ ನಮೂದಿಸಬಹುದಾಗಿದೆ. (ಉದಾ: 35.5)
7. ನಂತರ ಪ್ರಥಮ ಭಾಷೆಗೆ ನಿಗದಿತ ಗರಿಷ್ಠ 25 ಅಂಕಗಳಿಗೆ (200/8), ಇತರೆ ವಿಷಯಗಳಿಗೆ ಗರಿಷ್ಠ 20 ಅಂಕಗಳಿಗೆ (200/10) ಮತ್ತು ಒಟ್ಟಾರೆ ಗರಿಷ್ಠ 125 ಅಂಕಗಳಿಗೆ ಅಂತಿಮ ಆಂತರಿಕ ಅಂಕಗಳು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಪರಿವರ್ತಿತವಾಗುತ್ತವೆ. ಆಂತರಿಕ ಅಂಕಗಳನ್ನು ನಮೂದಿಸುವಾಗ ಮೊದಲಿಗೆ ರೂಪಣಾತ್ಮಕ ಮೌಲ್ಯಮಾಪನ-1 (FA-1) ರಲ್ಲಿ ಪಡೆದ ಅಂಕಗಳನ್ನು ನಮೂದಿಸಿ, Save ಮಾಡಬೇಕು.
ಅದರ ನಂತರವೇ ರೂಪಣಾತ್ಮಕ ಮೌಲ್ಯಮಾಪನ-2 (FA-2) ರಲ್ಲಿ ಪಡೆದ ಅಂಕಗಳನ್ನು ನಮೂದಿಸಲು ಸಾಧ್ಯವಾಗುತ್ತದೆ. ತದನಂತರ, ರೂಪಣಾತ್ಮಕ ಮೌಲ್ಯಮಾಪನ-3 (FA-3), ಅಂತಿಮವಾಗಿ ರೂಪಣಾತ್ಮಕ ಮೌಲ್ಯಮಾಪನ-4 (FA-4) ರ ಅಂಕಗಳನ್ನು ನಮೂದಿಸಬಹುದಾಗಿದೆ. ಪ್ರತಿ ರೂಪಣಾತ್ಮಕ ಮೌಲ್ಯಮಾಪನದ ಅಂಕಗಳನ್ನು ನಮೂದಿಸಿದ ನಂತರ ಅಂಕಗಳನ್ನು Save ಮಾಡಬೇಕು.
8. ಭಾಗ-ಬಿ ವಿಷಯಗಳಿಗೆ ಒಮ್ಮೆ ಮಾತ್ರ ಗ್ರೇಡ್ ಗಳನ್ನು ಆಯ್ಕೆಮಾಡಿಕೊಳ್ಳಬೇಕು ನಂತರ ಕಡ್ಡಾಯವಾಗಿ SAVE ಮಾಡಬೇಕು.
9. ನಾಲ್ಕೂ ರೂಪಣಾತ್ಮಕ ಮೌಲ್ಯಮಾಪನದ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಯಾವುದೇ ಒಬ್ಬ ವಿದ್ಯಾರ್ಥಿಯು ಯಾವುದಾದರೂ ರೂಪಣಾತ್ಮಕ ಮೌಲ್ಯಮಾಪನಕ್ಕೆ ದೀರ್ಘ ಗೈರುಹಾಜರಾಗಿದ್ದರೆ, ಆಗ 0 (ಸೊನ್ನೆ) ಅಂಕಗಳನ್ನು ನಮೂದಿಸಿ SAVE ಮಾಡುವುದು ಕಡ್ಡಾಯವಾಗಿದೆ.
10. ನಾಲ್ಕೂ ರೂಪಣಾತ್ಮಕ ಮೌಲ್ಯಮಾಪನದ ಭಾಗ- ಎ ವಿಷಯಗಳ ಅಂಕಗಳನ್ನು ಮತ್ತು ಭಾಗ-ಬಿ ವಿಷಯಗಳಿಗೆ ಗ್ರೇಡ್ ಗಳನ್ನು ಆಯ್ಕೆಮಾಡಿ SAVE ಮಾಡಿದ ನಂತರವೇ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದಾಗಿದೆ.
11. ಪ್ರತಿ ವಿದ್ಯಾರ್ಥಿಯ ಆಂತರಿಕ ಅಂಕಗಳನ್ನು ನಮೂದಿಸಿ Save ಮಾಡಿದ ನಂತರ Print ಅವಕಾಶ ನೀಡಲಾಗಿದೆ. ವಿದ್ಯಾರ್ಥಿ ಅಂಕಗಳ ವರದಿಯ ಪ್ರಿಂಟ್ ಪಡೆಯುವುದು ಕಡ್ಡಾಯವಾಗಿದೆ. ಪ್ರಿಂಟ್ ಪಡೆಯದಿದ್ದಲ್ಲಿ Freeze ಆಯ್ಕೆ ತೆರೆದುಕೊಳ್ಳುವುದಿಲ್ಲ. Print Out ಪಡೆದುಕೊಂಡು, ನಮೂದಿಸಿರುವ ಮತ್ತು ಪರಿವರ್ತಿತವಾಗಿರುವ ಅಂಕಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸುವುದು.
ಪ್ರತಿ ವಿದ್ಯಾರ್ಥಿಯ ಆಂತರಿಕ ಅಂಕಗಳನ್ನು ನಮೂದಿಸಿ Freeze ಮಾಡುವ ಮುನ್ನ ವಿದ್ಯಾರ್ಥಿಯ ಆಂತರಿಕ ಅಂಕಗಳ Report ಗೆ ತರಗತಿ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ವಿದ್ಯಾರ್ಥಿಯ ಪೋಷಕರಿಂದ ಸಹಿ ಪಡೆಯುವುದು ಕಡ್ಡಾಯವಾಗಿರುತ್ತದೆ.ಈ ದಾಖಲೆಗಳನ್ನು ಮುಖ್ಯಶಿಕ್ಷಕರು ಶಾಲಾ ಹಂತದಲ್ಲಿ ಸಂರಕ್ಷಿಸಿಡುವುದು ಕಡ್ಡಾಯವಾಗಿರುತ್ತದೆ.
ಫಲಿತಾಂಶ ಪ್ರಕಟವಾದ ನಂತರದಲ್ಲಿ ಆಂತರಿಕ ಅಂಕಗಳ ಬಗ್ಗೆ, ತಕರಾರು ಉದ್ಭವಿಸಿದಲ್ಲಿ ಮಂಡಲಿಗೆ ವಿದ್ಯಾರ್ಥಿ ಹಾಗೂ ಪೋಷಕರ ಸಹಿಯುಳ್ಳ ದೃಢೀಕರಣವನ್ನು ಪರಿಶೀಲನೆಗೆ ಹಾಜರುಪಡಿಸಬೇಕಾಗುತ್ತದೆ.
12. ಆಂತರಿಕ ಅಂಕಗಳನ್ನು Freeze ಮಾಡುವ ಬಗ್ಗೆ:- ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು Print ತೆಗೆದು, ಪರಿಶೀಲಿಸಿದ ನಂತರ Clear ಮಾಡಿ ಮತ್ತೊಮ್ಮೆ SATS ಸಂಖ್ಯೆ ನಮೂದಿಸಿ Enter ಬಟನ್ ಒತ್ತಿದಲ್ಲಿ ಮಾತ್ರ ಈಗಾಗಲೇ ನಮೂದಿಸಿರುವ ಅಂಕಗಳು, ಗ್ರೇಡ್ಗಳು ಮತ್ತು Freeze ಬಟನ್ ಗೋಚರವಾಗುತ್ತದೆ. Freeze ಮಾಡಿದ ನಂತರ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.
13. ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ, ಭಾಷಾ ವಿನಾಯಿತಿಯನ್ನು ಪಡೆದಿರುವ ವಿಷಯಗಳಿಗೆ ಅಂತರಿಕ ಅಂಕಗಳನ್ನು ನಮೂದಿಸಲು ತಂತ್ರಾಂಶದಲ್ಲಿ ಅವಕಾಶ ನೀಡಿರುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಪರ್ಯಾಯ ಕೋರ್ ವಿಷಯಗಳನ್ನು ಬರೆಯಲು ಅನುಮತಿ ನೀಡಲಾಗಿದ್ದು ಈ ವಿಷಯಗಳಿಗೆ ಸಂಬಂಧಿಸಿದ ಆಂತರಿಕ ಅಂಕಗಳನ್ನು ನಮೂದಿಸಬೇಕಾಗಿರುತ್ತದೆ.
14. ಆಯಾ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸಿದ ನಂತರ ಶಾಲೆಯ ಕ್ರೋಢೀಕೃತ ವರದಿಯನ್ನು (Consolidated Report) ಮುದ್ರಿಸಿಕೊಳ್ಳಬಹುದಾಗಿದೆ.
15. ಜೆ.ಟಿ.ಎಸ್ ಶಾಲೆಗಳ ವಿದ್ಯಾರ್ಥಿಗಳಿಗೂ ಸಹ ಆಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದ್ದು ಮೇಲೆ ವಿವರಿಸಿರುವಂತೆ ಆಂತರಿಕ ಅಂಕಗಳನ್ನು ನಮೂದಿಸುವುದು.
16. ಜಿ.ಟಿ.ಎಸ್ ಶಾಲೆಗಳಲ್ಲಿ ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಯ (56, 57, 58, 59) ಅಂಕಗಳನ್ನು ನಮೂದಿಸಲು ದಿನಾಂಕ: 04-04-2026 ರಂದು ಅವಕಾಶ ಕಲ್ಪಿಸಲಾಗುವುದು.
17. ಎನ್.ಎಸ್.ಕ್ಯೂ.ಎಫ್ ಶಾಲೆಗಳಲ್ಲಿ ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಯ (86,87,88,90) ಅಂಕಗಳನ್ನು ನಮೂದಿಸಲು ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲಾಗುವುದು.
18. ಶಾಲಾ ಮುಖ್ಯಸ್ಥರು, ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸಿ Freeze ಮಾಡಲು 15-02-2026 ಅಂತಿಮ ದಿನಾಂಕವಾಗಿರುತ್ತದೆ. ಉಪನಿರ್ದೇಶಕರು (ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಗಳಲ್ಲಿ ಆಂತರಿಕ ಅಂಕಗಳನ್ನು ನಮೂದಿಸುವ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕ್ರಮವಹಿಸಲು ತಿಳಿಸಿದೆ.
ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಲಾಗಿನ್ ನಲ್ಲಿ ಆಂತರಿಕ ಅಂಕಗಳನ್ನು ನಮೂದಿಸಿರುವ ಬಗ್ಗೆ ಶಾಲೆಗಳ ಅನುಪಾಲನೆಗೆ ಡ್ಯಾಷ್ ಬೋರ್ಡ್ ನೀಡಲಾಗಿದ್ದು ಪ್ರತಿದಿನ ತಮ್ಮ ವ್ಯಾಪ್ತಿಯ ಶಾಲೆಗಳ ಪ್ರಗತಿಬಗ್ಗೆ ಪರಿಶೀಲಿಸಿ ನಿರಂತರವಾಗಿ ಅನುಪಾಲನೆ ಮಾಡಲು ಸೂಚಿಸಿದೆ. ಮುಖ್ಯ ಶಿಕ್ಷಕರು ಆಂತರಿಕ ಅಂಕಗಳನ್ನು ಆನ್ಲೈನ್ನಲ್ಲಿ ನಮೂದು ಮಾಡುವ ಸಂದರ್ಭದಲ್ಲಿ ಎದುರಾಗುವ ಪ್ರಶ್ನೆ/ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಂಡಲಿಯ ಸಹಾಯವಾಣಿ ಸಂಖ್ಯೆ-08023310075 ಹಾಗೂ ಮಂಡಲಿಯ ಆಯಾ ಜಿಲ್ಲೆಗೆ ಸಂಬಂಧಪಟ್ಟ ಪರಿಶೀಲನಾ ಶಾಖಾಧಿಕಾರಿಗಳನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ.
ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ನಮೂದಿಸುವ ಮುನ್ನ ಗಮನಿಸಬೇಕಾದ ಅಂಶಗಳು ಮತ್ತು ಸ್ವಯಂದೃಢೀಕರಣಗಳು.
1. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 2026ರ ಶಾಲಾವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನಮೂದು ಮಾಡುವ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಪೂರ್ಣಪ್ರಮಾಣದಲ್ಲಿ ಓದಿ ಅರ್ಥೈಸಿಕೊಂಡಿರುತ್ತೇನೆ.
2. ಆಂತರಿಕ ಅಂಕಗಳನ್ನು ನಮೂದಿಸುತ್ತಿರುವ ವಿದ್ಯಾರ್ಥಿಯು ನಿರಂತರವಾಗಿ ತರಗತಿಗಳಿಗೆ ಹಾಜರಾಗಿ ಮಂಡಲಿ ನಿಯಮಗಳಂತೆ ಹಾಜರಾತಿ ಷರತ್ತನ್ನು ಪೂರೈಸಿರುತ್ತಾನೆ/ಳೆ ಎಂದು ದೃಢೀಕರಿಸುತ್ತೇನೆ.
3. ಶಾಲಾ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ 50 ಅಂಕಗಳಿಗೆ ಪಡೆದಿರುವ ಆಂತರಿಕ ಅಂಕಗಳನ್ನು ದಾಖಲಿಸಿದ ನಂತರ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಪ್ರಥಮಭಾಷೆಗೆ 25 ಮತ್ತು ಉಳಿದ ವಿಷಯಗಳಿಗೆ 20 ಅಂಕಗಳಿಗೆ ಲೆಕ್ಕಾಚಾರ ಮಾಡಿಕೊಳ್ಳುವ ಬಗ್ಗೆ ನನಗೆ ಮಾಹಿತಿ ಇದೆ.
4. ಪ್ರತಿ ವಿದ್ಯಾರ್ಥಿ ಪಡೆದ ಆಂತರಿಕ ಅಂಕಗಳನ್ನು ದಾಖಲಿಸಿ (Part-A & Part-B) ವಿವರಗಳನ್ನು ತರಗತಿ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರು ಪರಿಶೀಲಿಸಿದ ನಂತರ ವಿದ್ಯಾರ್ಥಿ ಹಾಗೂ ಪೋಷಕರಿಗೆ ತೋರಿಸಿ ಅವರಿಂದ ಸಹಿ ಪಡೆದು ಶಾಲೆಯಲ್ಲಿ ಮಂಡಲಿ ಸುತ್ತೋಲೆಯಲ್ಲಿ ತಿಳಿಸಿದಂತೆ ಸಂರಕ್ಷಿಸಬೇಕು ಎಂಬ ಮಾಹಿತಿ ನನಗೆ ತಿಳಿದಿರುತ್ತದೆ.
5. ಒಮ್ಮೆ ದಾಖಲಿಸಿದ ಅಂಕಗಳನ್ನು Freeze ಮಾಡಿದ ನಂತರ ಬದಲಾಯಿಸಲು ಅವಕಾಶ ಇಲ್ಲ ಎಂಬ ಮಾಹಿತಿ ನನಗೆ ತಿಳಿದಿದೆ. ಯಾವುದೇ ವ್ಯತ್ಯಾಸಕ್ಕೆ ಸಂಬಂದಿಸಿದಂತೆ ಮುಖ್ಯಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ ಎಂಬ ಮಾಹಿತಿ ನನಗೆ ತಿಳಿದಿದೆ. ವಿದ್ಯಾರ್ಥಿಗಳ ಅಂಕ ಬದಲಾವಣೆಗೆ ಮಂಡಲಿ ಜವಾಬ್ದಾರಿಯಲ್ಲ.
6. ವಿದ್ಯಾರ್ಥಿಯ ಆಂತರಿಕ ಅಂಕಗಳನ್ನು ಒಮ್ಮೆ ದಾಖಲಿಸಿ Freeze ಮಾಡಿದ ನಂತರ ಅಂಕಗಳ ಬದಲಾವಣೆಗೆ ಅವಕಾಶವಿಲ್ಲ ಎಂಬ ಮಾಹಿತಿ ನನಗೆ ತಿಳಿದಿದೆ.
ಮೇಲಿನ ಎಲ್ಲಾ ವಿವರಗಳನ್ನು ಓದಿರುತ್ತೇನೆ, ಅರ್ಥ ಮಾಡಿಕೊಂಡಿರುತ್ತೇನೆ ಹಾಗೂ ಮಂಡಲಿ ನಿಯಮಗಳಿಗೆ ಬದ್ಧನಾಗಿರುತ್ತೇನೆ/ ಬದ್ದಳಾಗಿರುತ್ತೇನೆ ಎಂದು ಈ ಮೂಲಕ ದೃಢೀಕರಿಸುತ್ತೇನೆ ಹಾಗೂ ಆಂತರಿಕ ಅಂಕಗಳಲ್ಲಿ ಏನಾದರೂ ವ್ಯತ್ಯಯವಾದಲ್ಲಿ ಮುಖ್ಯಶಿಕ್ಷಕರೇ ಜವಾಬ್ದಾರಿ ಎಂದು ದೃಢೀಕರಿಸುತ್ತೇನೆ.
ಈ ಕುರಿತು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

CLICK HERE TO DOWNLOAD CIRCULAR
FLOW CHART – SSLC 2025-26 INTERNAL MARKS ENTRY IN SCHOOL LOGIN


