Financial Relief for Grama sahayakas:65 ವರ್ಷ ಪೂರೈಸಿದ ಗ್ರಾಮ ಸಹಾಯಕರು ಹಾಗೂ ಮೃತರ ಕುಟುಂಬಕ್ಕೆ ರೂ.5 ಲಕ್ಷ ಸಹಾಯಧನ
Financial Relief for Grama sahayakas: ಕಂದಾಯ ಇಲಾಖೆಯಲ್ಲಿ ಮಾಸಿಕ ಮಿತ ವೇತನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರು 65 ವರ್ಷ ವಯೋಮಾನವನ್ನು ಪೂರೈಸಿ ಕರ್ತವ್ಯದಿಂದ ಬಿಡುಗಡೆ ಹೊಂದಿದವರಿಗೆ/ಸೇವೆಯಲ್ಲಿರುವಾಗಲೇ ಮೃತರಾದಲ್ಲಿ, ಗರಿಷ್ಠ ರೂ.5.00 ಲಕ್ಷಗಳವರೆಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ನೀಡುವ ಬಗ್ಗೆ ಇದೀಗ ಸರಕಾರದಿಂದ ಶುಭ ಸುದ್ದಿ.
ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961 ದಿನಾಂಕ:01.02.1963ರಿಂದ ಜಾರಿಗೆ ಬಂದಿದ್ದು, ಸದರಿ ಅಧಿನಿಯದನ್ವಯ ಕಂದಾಯ ಇಲಾಖೆಯಲ್ಲಿ ವಂಶಪಾರಂಪರ್ಯವಾಗಿ ಮುಂದುವರೆಯುತ್ತಿದ್ದ ಶ್ಯಾನುಭೋಗರು, ಪಟೇಲರು ಹಾಗೂ ಇನ್ನು ಮುಂತಾದ ಎಲ್ಲಾ ಕೆಳಹಂತದ ಗ್ರಾಮ ಅಧಿಕಾರಿ ಹುದ್ದೆಗಳನ್ನು ರದ್ದುಪಡಿಸಿ, ಆಡಳಿತಾತ್ಮಕ ಅನುಕೂಲಕ್ಕಾಗಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಹಾಯ ಮಾಡಲು ಗ್ರಾಮಸಹಾಯಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಜಿಸಲಾಗಿರುತ್ತದೆ.
ಕಂದಾಯ ಇಲಾಖೆಯಲ್ಲಿ 8,941 ಗ್ರಾಮ ಸಹಾಯಕರ ಹುದ್ದೆಗಳನ್ನು ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಸೈಪೆಂಡರಿ ಆಧಾರದ ಮೇಲೆ ತಾತ್ಕಾಲಿಕವಾಗಿ ಸೃಜಿಸಿ ಆದೇಶಸಲಾಗಿದೆ. ಮೇಲೆ (2)ರಲ್ಲಿ ಓದಲಾದ ಆದೇಶದಲ್ಲಿ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ಖಾಯಂ ಆಗಿ ಮುಂದುವರೆಸಿ ಆದೇಶಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಆದೇಶದಲ್ಲಿ ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 9,903 ಗ್ರಾಮ ಸಹಾಯಕರ ಮಾಸಿಕ ಮಿತವೇತನವನ್ನು ದಿನಾಂಕ: 01.04.2024 ರಿಂದ ಅನ್ವಯವಾಗುವಂತೆ ಮಾಸಿಕ ರೂ.13,000/-ಗಳಿಂದ ರೂ.15,000/- ಗಳಿಗೆ ಹೆಚ್ಚಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯ ಸರ್ಕಾರ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘವು ಗ್ರಾಮ ಸಹಾಯಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಾಗೂ ಸೇವಾ ಸೌಲಭ್ಯಗಳನ್ನು. ಒದಗಿಸುವಂತೆ ಒತ್ತಾಯಿಸುತ್ತಿದ್ದು ಅವರನ್ನು ರಾಜ್ಯ ಸರ್ಕಾರದ ಗ್ರೂಪ್-ಡಿ ನೌಕರರ ಹುದ್ದೆಯಲ್ಲಿ ಸಕ್ರಮಾತಿ ಮಾಡುವಂತೆ ಕೋರಿರುವುದು ಅವರ ಪ್ರಮುಖ ಬೇಡಿಕೆಯಾಗಿರುತ್ತದೆ.
ಮುಂದುವರೆದು, ಇವರಿಗೆ ಗ್ರೂಪ್-ಡಿ ಸಮಾನವಾದ ₹.27,000/- ಗಳ ವೇತನ ನಿಗದಿಪಡಿಸಲು ಹಾಗೂ ಮರಣ/ನಿವೃತ್ತಿ ಹೊಂದಿದ ಗ್ರಾಮ ಸಹಾಯಕರುಗಳಿಗೆ ₹10.00 ಲಕ್ಷಗಳ ಇಡಿಗಂಟು ನೀಡುವ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿರುತ್ತಾರೆ. ಗ್ರಾಮ ಸಹಾಯಕರು 65 ವರ್ಷ ವಯಸ್ಸಿನವರೆಗೆ ಸೇವೆಯಲ್ಲಿ ಮುಂದುವರೆಯಲು ಅವಕಾಶವಿದ್ದು ಪ್ರಸ್ತುತ ಸದರಿಯವರಿಗೆ ಮಾಸಿಕ ರೂ.15000/- ಗಳ ಮಿತವೇತನವನ್ನು ಪಾವತಿಸಲಾಗುತ್ತಿದ್ದು, ಇದನ್ನು ಹೊರತುಪಡಿಸಿ ಇನ್ನಾವುದೇ ಸೇವಾ ಸೌಲಭ್ಯಗಳು ಇರುವುದಿಲ್ಲ.
ಇವರು ಖಾಯಂ ಸರ್ಕಾರಿ ನೌಕರರಾಗದೇ ಇರುವುದರಿಂದ ಇವರಿಗೆ ಕಾಲಕಾಲಕ್ಕೆ ಸರ್ಕಾರದ ತುಟ್ಟಿಭತ್ಯೆ ವೇತನ ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಇವುಗಳಾವು ಇವರುಗಳಿಗೆ ಲಭ್ಯವಾಗುತ್ತಿಲ್ಲ.
ಗ್ರಾಮ ಸಹಾಯಕರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಗೌರವಯುತ ನಿವೃತ್ತಿ ಜೀವನವನ್ನು ನಡೆಸಲು ಮತ್ತು ದೈನಂದಿನ ಅಗತ್ಯಗಳ ವೆಚ್ಚ, ಅವರ ಮಕ್ಕಳ ಶಿಕ್ಷಣ, ವ್ಯದ ಪೋಷಕರ ನಿರ್ವಹಣೆಯನ್ನು ಭರಿಸಲು, ನಿವೃತ್ತಿ ನಂತರ/ ಮೃತರಾದ ಸಂದರ್ಭದಲ್ಲಿ ಒಂದು ಬಾರಿಗೆ ರೂ.5 ಲಕ್ಷಗಳ ಇಡಿಗಂಟನ್ನು ನೀಡಲು ದಿನಾಂಕ: 25.09.2025 ರಂದು ನಡೆದ ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಸಂಖ್ಯೆ: ಸಿ.827/2025ರಲ್ಲಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 136 ಬಿಎಸ್‌ಐ 2024,ದಿನಾಂಕ:06.02.2026
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರುಗಳಿಗೆ ಅವರುಗಳು ಸೇವೆಯಿಂದ ನಿವೃತ್ತಿ ಹೊಂದಿದ ನಂತರ/ಸೇವೆಯಲ್ಲಿರುವಾಗಲೇ ಮೃತರಾದಲ್ಲಿ ಗರಿಷ್ಠ ರೂ.5.00 ಲಕ್ಷಗಳವರೆಗೆ ಇಡಿಗಂಟನ್ನು ಮಂಜೂರು ಮಾಡಿ ಆದೇಶಿಸಿದೆ:
ಷರತ್ತುಗಳು:-
1. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಒಂದು ವೇಳೆ ಗ್ರಾಮ ಸಹಾಯಕರು ಮರಣಹೊಂದಿದ್ದರೆ, ಅಂತಹ ಗ್ರಾಮ ಸಹಾಯಕರ ಕಾನೂನುಬದ್ಧ ಅರ್ಹ ಅವಲಂಬಿತರಿಗೆ ಇಡಿಗಂಟು ಮೊತ್ತವನ್ನು ಪಾವತಿಸತಕ್ಕದ್ದು.
2. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಗ್ರಾಮ ಸಹಾಯಕರು ಅಥವಾ ಅರ್ಹ ಕಾನೂನುಬದ ಅವಲಂಬಿತರು ಇಡಿಗಂಟನ್ನು ಪಡೆಯಲು ಸಲ್ಲಿಸಬೇಕಾಗಿರುವ ಅರ್ಜಿಯ ನಮೂನೆ, ಸೇವಾ ದೃಢೀಕರಣ ಪತ್ರ ಮರಣ ಪ್ರಮಾಣ ಪತ್ರ ಹಾಗೂ ಇತರೆ ಸಂಬಂಧಿತ ದಾಖಲೆಗಳೊಂದಿಗೆ ಪ್ರಸ್ತಾವನೆ ಸ್ವೀಕೃತಿಗೆ ಅನುಸರಿಸಬೇಕಾಗಿರುವ ಕಾರ್ಯವಿಧಾನದ ಕುರಿತು ಒಂದು ಸಮಗ್ರವಾದ ಸುತ್ತೋಲೆಯನ್ನು ಹೊರಡಿಸಲಾಗುವುದು.
3. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಸ್ತಾವನೆಗಳನ್ನು ಸಂಬಂಧಿತ ತಹಶೀಲ್ದಾರ್ ರವರು ನಡೆದು ಪರಿಶೀಲಿಸಿ, ದೃಢೀಕರಿಸಿ, ಆಯಾ ಜಿಲ್ಲಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.
4. ಜಿಲ್ಲಾಧಿಕಾರಿಗಳ ಹಂತದಲ್ಲಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಪರಿಶೀಲನೆಯ ನಂತರ ಅರ್ಹ ಪ್ರಸ್ತಾವನೆಗಳಿಗೆ ಇಡಿಗಂಟು ನೀಡುವ ಸಂಬಂಧ ಮಂಜೂರಾತಿ ಆದೇಶವನ್ನು ಹೊರಡಿಸತಕ್ಕದ್ದು.
ಈ ಆದೇಶವನ್ನು ದಿನಾಂಕ:25.09.2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಕರಣ ಸಂಖ್ಯೆ:827/2025ರಲ್ಲಿ ಕೈಗೊಳ್ಳಲಾದ ನಿರ್ಣಯದನ್ವಯ ಹೊರಡಿಸಲಾಗಿದೆ.



