Top 8 Cyber Safety Measures Everyone Should Follow

Top 8 Cyber Safety Measures Everyone Should Follow

 

Top 8 Cyber Safety Measures Everyone Should Follow: ಸೈಬರ್ ಅಪರಾಧಗಳನ್ನು ಮೆಟ್ಟಿ ನಿಲ್ಲಲು ಪ್ರತಿಯೊಬ್ಬರೂ ಕೈಗೊಳ್ಳಬೇಕಾದ ಜಾಗರೂಕತೆಯ ಕ್ರಮಗಳು:

ಇದು ಬೆಂಗಳೂರಿನ ಮಧ್ಯಮ ವರ್ಗದ ಉದ್ಯೋಗಿಯಾದ ಶ್ರೀಮತಿ ಪೂಜಾ ಅವರ ಕಥೆ.

ಒಂದು ದಿನ ಪೂಜಾ ಅವರಿಗೆ ಬ್ಯಾಂಕ್‌ನಿಂದ ಬಂದಂತೆ ಕಾಣುವ ಒಂದು ಇಮೇಲ್ ಬಂತು. ಅದರಲ್ಲಿ, “ನಿಮ್ಮ ಖಾತೆಗೆ ಇತ್ತೀಚೆಗೆ ಶಂಕಿತ ಲಾಗಿನ್ ಪ್ರಯತ್ನ ನಡೆದಿದೆ, ಅದನ್ನು ಭದ್ರಪಡಿಸಲು ಈ ಕೆಳಗಿನ ಲಿಂಕ್ ಅನ್ನು ತಕ್ಷಣವೇ ಕ್ಲಿಕ್ ಮಾಡಿ” ಎಂದು ಬರೆಯಲಾಗಿತ್ತು. ಗಾಬರಿಗೊಂಡ ಪೂಜಾ, ಸರಿಯಾಗಿ ಪರಿಶೀಲಿಸದೆ ಆ ಲಿಂಕ್ ಅನ್ನು ಕ್ಲಿಕ್ ಮಾಡಿ, ತಮ್ಮ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿದರು. ಮರುದಿನ ಬೆಳಿಗ್ಗೆ, ಅವರ ಮೊಬೈಲ್‌ಗೆ ಸರಣಿ ಸಂದೇಶಗಳು ಬಂದವು.

ಅವರ ಉಳಿತಾಯ ಖಾತೆಯಿಂದ ರೂ. 1.5 ಲಕ್ಷ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಪೂಜಾ ಅವರು ತುರ್ತು ಪರಿಸ್ಥಿತಿಯ ಆತಂಕದಲ್ಲಿ ಕೈಗೊಂಡ ಆ ಒಂದು ಕ್ಷಣದ ಅಜಾಗರೂಕತೆಯ ನಿರ್ಧಾರ, ಅವರ ಜೀವನದ ಕಷ್ಟದ ಉಳಿತಾಯವನ್ನು ಸೈಬರ್ ಕಳ್ಳರ ಪಾಲಾಗುವಂತೆ ಮಾಡಿತು.ಈ ಕಥೆ ಕೇವಲ ಪೂಜಾ ಅವರದ್ದಲ್ಲ.

ಸೈಬರ್ ಅಪರಾಧಗಳು ಇಂದಿನ ಡಿಜಿಟಲ್ ಯುಗದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಗಂಭೀರ ಅಪಾಯ. ಬ್ಯಾಂಕ್ ವಂಚನೆಗಳಿಂದ ಹಿಡಿದು ವೈಯಕ್ತಿಕ ಮಾಹಿತಿ ಕಳ್ಳತನದವರೆಗೆ, ಈ ಅಪರಾಧಗಳು ಸಾಮಾನ್ಯ ಜನರ ಹಣಕಾಸು ಮತ್ತು ಮಾನಸಿಕ ನೆಮ್ಮದಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ಸೈಬರ್ ಭದ್ರತೆಯು ಕೇವಲ ಸರ್ಕಾರಗಳು ಅಥವಾ ತಂತ್ರಜ್ಞಾನ ಕಂಪನಿಗಳ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ಡಿಜಿಟಲ್ ಬಳಕೆದಾರನೂ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ತನ್ನನ್ನು ಮತ್ತು ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಬಹುದು.

1.ಬಲಿಷ್ಠ ಪಾಸ್ವರ್ಡ್ & ದೃಡೀಕರಣ:


ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ದಾಳಿ ಮಾಡಲು ಬಳಸುವ ಮೊದಲ ಮತ್ತು ಸುಲಭ ಮಾರ್ಗವೆಂದರೆ ದುರ್ಬಲ ಪಾಸ್ವರ್ಡ್‌ಗಳು “123456” ಅಥವಾ “password” ನಂತಹ ಸರಳ ಪಾನ್‌ರ್ಡ್‌ಗಳನ್ನು ಬಳಸುವುದನ್ನು ತಕ್ಷಣ ನಿಲ್ಲಿಸಬೇಕು. ಪ್ರತಿಯೊಬ್ಬರೂ ಕನಿಷ್ಠ 8-10 ಅಕ್ಷರಗಳನ್ನು ಒಳಗೊಂಡ, ದೊಡ್ಡ ಅಕ್ಷರಗಳು, ಸಣ್ಣ ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಚಿಹ್ನೆಗಳ ಮಿಶ್ರಣವಿರುವ ಬಲಿಷ್ಠ ಪಾಸ್ವರ್ಡ್ ಅನ್ನು ಬಳಸಬೇಕು. ಅಲ್ಲದೆ, ಒಂದೇ ಪಾಸ್‌ರ್ಡ್ ಅನ್ನು ಹಲವಾರು ಖಾತೆಗಳಿಗೆ ಬಳಸಬಾರದು. ಉದಾಹರಣೆ: ನಿಮ್ಮ ಬ್ಯಾಂಕ್ ಖಾತೆ ಮತ್ತು ಇಮೇಲ್ ಖಾತೆಗೆ ಪಾಸ್ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸುವುದು ಮತ್ತು ಅವುಗಳಿಗೆ ಕಡ್ಡಾಯವಾಗಿ ದ್ವಿ-ಹಂತದ ದೃಢೀಕರಣ (Two Factor/Multi-Factor Authentication MFA) ಸಕ್ರಿಯಗೊಳಿಸುವುದು ಅಗತ್ಯ. ಇದರಿಂದ, ಪಾಸ್ವರ್ಡ್ ಕಳ್ಳತನವಾದರೂ, OTP ಅಥವಾ ಬಯೋಮೆಟ್ರಿಕ್ ದೃಢೀಕರಣವಿಲ್ಲದೆ ಹ್ಯಾಕರ್ ಲಾಗಿನ್ ಮಾಡಲು ಸಾಧ್ಯವಿಲ್ಲ

ಫಿಶಿಂಗ್ (Phishing) ಮತ್ತು ವಂಚನೆಯ ಇಮೇಲ್‌ಗಳ ಬಗ್ಗೆ ಎಚ್ಚರಿಕೆ


ಫಿಶಿಂಗ್ ದಾಳಿಗಳು ಸೈಬರ್ ಅಪರಾಧಗಳ ಪ್ರಮುಖ ತಂತ್ರ, ಅಪರಾಧಿಗಳು ನಿಮ್ಮ ಬ್ಯಾಂಕ್, ಆದಾಯ ತೆರಿಗೆ ಇಲಾಖೆ, ಅಥವಾ ಪ್ರಸಿದ್ಧ ಆನ್‌ಲೈನ್ ಶಾಪಿಂಗ್ ಸೈಟ್‌ನಂತೆ ನಟಿಸಿ ನಿಮಗೆ ಇಮೇಲ್ ಅಥವಾ ಸಂದೇಶ ಕಳುಹಿಸುತ್ತಾರೆ. ಇದು ತುರ್ತು ಪರಿಸ್ಥಿತಿಯಂತೆ ಬಿಂಬಿಸಿ ನಿಮ್ಮ ಸೂಕ್ಷ್ಮ ಮಾಹಿತಿಯನ್ನು (ಪಾಸ್‌ವರ್ಡ್, ಕ್ರೆಡಿಟ್ ಕಾರ್ಡ್ ವಿವರ) ಕದಿಯಲು ಪ್ರಯತ್ನಿಸುತ್ತದೆ. ಉದಾಹರಣೆ: ನಿಮ್ಮ ಬ್ಯಾಂಕ್‌ನಿಂದ ಬಂದಂತೆ ಕಾಣುವ “ನಿಮ್ಮ ಖಾತೆ ಸ್ಥಗಿತಗೊಂಡಿದೆ, ತಕ್ಷಣ ಇಲ್ಲಿ ಕ್ಲಿಕ್ ಮಾಡಿ” ಎಂಬ ಇಮೇಲ್ ಬಂದಾಗ, ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು, ಇಮೇಲ್ ವಿಳಾಸವನ್ನು ಪರಿಶೀಲಿಸಿ. ಬ್ಯಾಂಕ್‌ನ ಅಧಿಕೃತ ಡೊಮೇನ್ ಇದೆಯೇ ಎಂದು ನೋಡಿ. ಅನುಮಾನ ಬಂದಲ್ಲಿ, ಆ ಲಿಂಕ್ ಮೂಲಕ ಹೋಗುವ ಬದಲು, ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ನೇರವಾಗಿ ಭೇಟಿ ನೀಡಿ ಲಾಗಿನ್ ಮಾಡಿ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಇಮೇಲ್ ಮೂಲಕ ಬಂದ ಅಪರಿಚಿತ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯಬಾರದು.

3. ಸಾಫ್ಟ್‌ವೇರ್‌ಗಳನ್ನು ನಿಯಮಿತವಾಗಿ ನವೀಕರಿಸುವುದು (Software Updates)


ನಿಮ್ಮ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಬಳಸುವ ಎಲ್ಲಾ ಅಪ್ಲಿಕೇಶನ್ಗಳ ಅಪರೇಟಿಂಗ್ ಸಿಸ್ಟಂಗಳನ್ನು (Windows, Android, iOS) ಮತ್ತು ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ನಿಯಮಿತವಾಗಿ ನವೀಕರಿಸಬೇಕು. ಈ ನವೀಕರಣಗಳು ಕೇವಲ ಹೊಸ ವೈಶಿಷ್ಟ್ಯಗಳನ್ನು ನೀಡುವುದಿಲ್ಲ, ಬದಲಿಗೆ ತಂತ್ರಜ್ಞಾನ ಕಂಪನಿಗಳು ಇತ್ತೀಚೆಗೆ ಕಂಡುಹಿಡಿದಿರುವ ಭದ್ರತಾ ಲೋಪಗಳನ್ನು (Security Vulnerabilities) ಸರಿಪಡಿಸುತ್ತವೆ. ನವೀಕರಣಗಳನ್ನು ನಿರ್ಲಕ್ಷಿಸುವುದು ಎಂದರೆ ಹ್ಯಾಕರ್‌ಳಿಗೆ ನಿಮ್ಮ ಸಿಸ್ಟಮ್ ಪ್ರವೇಶಿಸಲು ತೆರೆದ ದಾರಿ ನೀಡಿದಂತೆ.

4. ಸಾರ್ವಜನಿಕ ವೈ-ಫೈ (Public Wi-Fi) ಬಳಕೆಯಲ್ಲಿ ಜಾಗರೂಕತೆ:


ಕಾಫಿ ಶಾಪ್‌ಗಳು, ವಿಮಾನ ನಿಲ್ದಾಣಗಳು ಅಥವಾ ರೈಲು ನಿಲ್ದಾಣಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ನೆಟ್‌ವರ್ಕ್‌ಗಳು ಸಂಪೂರ್ಣವಾಗಿ ಸುರಕ್ಷಿತವಾಗಿರುವುದಿಲ್ಲ. ಅಪರಾಧಿಗಳು ಸುಲಭವಾಗಿ ಈ ನೆಟ್‌ವರ್ಕ್‌ಗಳನ್ನು ಹ್ಯಾಕ್ ಮಾಡಿ, ಬಳಕೆದಾರರ ಡೇಟಾವನ್ನು ಕದಿಯಬಹುದು. ಸಾರ್ವಜನಿಕ ವೈ-ಫೈ ಬಳಸುವಾಗ ಬ್ಯಾಂಕಿಂಗ್ ವ್ಯವಹಾರಗಳು, ಆನ್‌ಲೈನ್ ಪಾವತಿಗಳು ಅಥವಾ ಪಾಸ್ವರ್ಡ್ ನಮೂದಿಸುವ ಯಾವುದೇ ಸೂಕ್ಷ್ಮ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು. ಅನಿವಾರ್ಯವಾದರೆ, ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN) ಅನ್ನು ಬಳಸುವುದು ಸುರಕ್ಷಿತ, VPN ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಎನ್‌ಕ್ರಿಪ್ಟ್ ಮಾಡಿ ರಕ್ಷಿಸುತ್ತದೆ.

5. ಪರಿಶೀಲಿಸದ ಲಿಂಕ್‌ಗಳು ಮತ್ತು ಆ್ಯಪ್‌ಗಳಿಂದ ದೂರವಿರಿ:


ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಸಂದೇಶಗಳ ಮೂಲಕ ಬರುವ ‘ಇಲ್ಲಿ ಕ್ಲಿಕ್ ಮಾಡಿ ಭಾರಿ ಬಹುಮಾನ ಗೆಲ್ಲಿ’ ಅಥವಾ ‘ಉಚಿತವಾಗಿ ನೋಡಿ’ ಎನ್ನುವ ಆಕರ್ಷಕ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು. ಇವು ಸಾಮಾನ್ಯವಾಗಿ ನಿಮ್ಮ ಸಾಧನಕ್ಕೆ ಮಾಲ್‌ವೇರ್ (Malware) ಅಥವಾ ವೈರಸ್‌ಗಳನ್ನು ಡೌನ್‌ಲೋಡ್ ಮಾಡಲು ಕಾರಣವಾಗುತ್ತವೆ. ಅಪ್ಲಿಕೇಶನ್ಗಳನ್ನು ಡೌನ್‌ಲೋಡ್ ಮಾಡುವಾಗ ಯಾವಾಗಲೂ Google Play Store ಅಥವಾ Apple App Store ನಂತಹ ಅಧಿಕೃತ ಮೂಲಗಳಿಂದಲೇ ಡೌನ್‌ಲೋಡ್ ಮಾಡಬೇಕು. ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ಅದರ ರೇಟಿಂಗ್‌ಗಳು, ಬಳಕೆದಾರರ ವಿಮರ್ಶೆಗಳು ಮತ್ತು ಆ್ಯಪ್‌ಗೆ ಬೇಕಾದ ಅನುಮತಿಗಳನ್ನು (Permissions) ಗಮನಿಸಿ. ಉದಾಹರಣೆಗೆ, ಒಂದು ಟಾರ್ಚ್ ಅಪ್ಲಿಕೇಶನ್‌ಗೆ ನಿಮ್ಮ ಸಂಪರ್ಕಗಳ (Contacts) ಅಗತ್ಯವಿಲ್ಲ.

6. ಆನ್‌ಲೈನ್ ವಹಿವಾಟುಗಳಲ್ಲಿ ಭದ್ರತೆ:


ಆನ್‌ಲೈನ್ ಶಾಪಿಂಗ್ ಅಥವಾ ಬ್ಯಾಂಕಿಂಗ್ ಮಾಡುವಾಗ, ನೀವು ಭೇಟಿ ನೀಡುವ ವೆಬ್‌ಸೈಟ್‌ನ ವಿಳಾಸವನ್ನು ಪರಿಶೀಲಿಸುವುದು ಅತಿ ಮುಖ್ಯ. ವಿಳಾಸವು ‘https://’ ನಿಂದ ಪ್ರಾರಂಭವಾಗಿದೆಯೇ ಮತ್ತು ಬ್ರೌಸರ್ ವಿಳಾಸ ಪಟ್ಟಿಯ ಪಕ್ಕದಲ್ಲಿ ಬೀಗ ಚಿಹ್ನೆ (Padlock Icon) ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ನಿಮ್ಮ ಸಂಪರ್ಕ ಎನ್‌ಕ್ರಿಪ್ಟ್ ಆಗಿದೆ ಮತ್ತು ಸುರಕ್ಷಿತವಾಗಿದೆ ಎಂದು ಸೂಚಿಸುತ್ತದೆ. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಅಪರಿಚಿತ ಅಥವಾ ನಂಬಿಕೆಯಿಲ್ಲದ ಸೈಟ್ಗಳಲ್ಲಿ ಉಳಿಸಬೇಡಿ ಅವುಗಳನ್ನು ಬಳಸಿದ ನಂತರ ಡಿಲೀಟ್ ಮಾಡಿ.

7. ಸೈಬರ್ ಅಪರಾಧ ಸಂಭವಿಸಿದರೆ ಕೈಗೊಳ್ಳಬೇಕಾದ ಕ್ರಮ:


ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡ ನಂತರವೂ ನೀವು ಸೈಬರ್ ದಾಳಿಗೆ ಒಳಗಾದರೆ, ತಕ್ಷಣ ಕಾರ್ಯಪ್ರವೃತ್ತರಾಗುವುದು ಅನಿವಾರ್ಯ.ಬ್ಯಾಂಕ್‌ಗೆ ತಿಳಿಸಿ ತಕ್ಷಣ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಕಾರ್ಡ್‌ ಗಳನ್ನು ಬ್ಲಾಕ್ ಮಾಡಿ ಅಥವಾ ಖಾತೆಯ ವಹಿವಾಟುಗಳನ್ನು ಸ್ಥಗಿತಗೊಳಿಸಿ. ಪಾಸ್ವರ್ಡ್ ಬೇಗ ಬದಲಾಯಿಸಿ ದಾಳಿಗೊಳಗಾದ ಎಲ್ಲಾ ಖಾತೆಗಳ ಪಾಸ್‌ವರ್ಡ್‌ಗಳನ್ನು ಬೇರೆ ಸಾಧನದಿಂದ ತಕ್ಷಣ ಬದಲಾಯಿಸಿ.

8. ದೂರು ನೀಡಿ:


ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ (ಸೈಬರ್ ಕ್ರೈಂ ವಿಭಾಗ) ಅಥವಾ ಅಧಿಕೃತ ಸೈಬರ್ ಕ್ರೈಂ ಪೋರ್ಟಲ್ (National Cyber Crime Reporting Portal) ಮೂಲಕ ದೂರು ದಾಖಲಿಸಿ. ಅಥವಾ 1930 ಗೆ ಕರೆ ಮಾಡಿ ನಿಮ್ಮ ದೂರನ್ನು ಆದಷ್ಟು ಬೇಗ ದಾಖಲಿಸಿ. ಸೈಬರ್ ಅಪರಾಧಿಗಳು ಯಾವಾಗಲೂ ಹೊಸ ತಂತ್ರಗಳನ್ನು ಬಳಸುತ್ತಿರುತ್ತಾರೆ. ಆದರೆ, ಸಾಮಾನ್ಯ ಜನರು ಜಾಗೃತರಾಗಿದ್ದರೆ ಮತ್ತು ಮೇಲೆ ತಿಳಿಸಿದ ಈ ಸರಳ ಭದ್ರತಾ ಅಭ್ಯಾಸಗಳನ್ನು ಜೀವನದ ಭಾಗವಾಗಿಸಿಕೊಂಡರೆ, ಶೇಕಡಾ 90 ಕ್ಕಿಂತ ಹೆಚ್ಚು ದಾಳಿಗಳನ್ನು ತಡೆಯಬಹುದು. ಜಾಗೃತಿ, ಎಚ್ಚರಿಕೆ ಮತ್ತು ನಿರಂತರ ಕಲಿಕೆ ಇವು ಡಿಜಿಟಲ್ ಯುಗದಲ್ಲಿ ನಮ್ಮ ವೈಯಕ್ತಿಕ ಸುರಕ್ಷತೆಗೆ ಪ್ರಮುಖ ರಕ್ಷಾಕವಚಗಳು. ಪ್ರತಿಯೊಬ್ಬರೂ ಡಿಜಿಟಲ್ ಜಗತ್ತಿನ ನಿಯಮಗಳನ್ನು ಅರ್ಥಮಾಡಿಕೊಂಡು, ಜವಾಬ್ದಾರಿಯುತವಾಗಿ ನಡೆದುಕೊಂಡರೆ ಮಾತ್ರ ಸುರಕ್ಷಿತ ಸಮಾಜವನ್ನು ನಿರ್ಮಿಸಲು ಸಾಧ್ಯ.

Top 8 Cyber Safety Measures Everyone Should


ಕೃಪೆ: ಕೃಷ್ಣಮೂರ್ತಿ ಸಿ ಎಸ್ ಪೊಲೀಸ್ ಸಬ್ ಇನ್ಸೆಕ್ಟರ್, ಬೆಂಗಳೂರು ನಗರ

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top