What are the endowed powers of the Disciplinary Authority?- ದತ್ತವಾದ – ಶಿಸ್ತು ಪ್ರಾಧಿಕಾರದ ಅಧಿಕಾರಗಳೇನು? ಮಾಹಿತಿ-03
What are the endowed powers of the Disciplinary Authority? ಶಿಸ್ತು ಪ್ರಕರಣಗಳು ಅರೆ-ನ್ಯಾಯಿಕ ವ್ಯವಧಾನಗಳು (H.C.Goel Vs. Union of India (AIR-1964-SC-364), ជ ವಿಚಾರಣೆಗಳನ್ನು ಕೈಗೊಳ್ಳುವ ಪ್ರಾಧಿಕಾರಗಳು ತನಗೆ ಆ ಬಗ್ಗೆ ಅಧಿಕಾರ ಇದೆಯೇ ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕು.ಯಾವ ಕಾಯಿದೆಯಲ್ಲಿ/ನಿಯಮದಲ್ಲಿ ನೌಕರನನ್ನು ನೇಮಕ ಮಾಡುವ ಪ್ರಾಧಿಕಾರಕ್ಕೆ ದಂಡನೆಯನ್ನು ವಿಧಿಸುವ ಅಧಿಕಾರ ದತ್ತವಾಗಿದೆ?
ನಮ್ಮ ರಾಷ್ಟ್ರದ ಸಂವಿಧಾನದಲ್ಲಿ ಅಧ್ಯಾಯ 14 ರಲ್ಲಿ ವಿಧಿ 310 ರಲ್ಲಿ ರಾಜ್ಯ ಸರ್ಕಾರಿ ನೌಕರರು ಸೇವೆಯಲ್ಲಿ ಉಳಿಯುವುದು ಅಥವಾ ಸೇವೆಯಿಂದ ಹೊರನೂಕಲ್ಪಡುವುದು ರಾಜ್ಯಪಾಲರ ಮರ್ಜಿಗೆ ಒಳಪಟ್ಟಿರುತ್ತದೆ ಎಂಬುದಾಗಿದ್ದು, ವಿಧಿ 311(2) ರಲ್ಲಿ ದುರ್ನಡತೆಗಳನ್ನು ನೌಕರನು ಎಸಗಿದಾಗ ವಿಚಾರಣೆಯನ್ನು ನಡೆಸಿ ಆರೋಪ ರುಜುವಾತಾದಲ್ಲಿ ರಾಜ್ಯಪಾಲರು ಅಂತಹ ನೌಕರನನ್ನು ಸೇವೆಯಿಂದ ತೆಗೆದುಹಾಕಬಹುದಾಗಿದೆ ಎಂಬುದನ್ನು ಕಾಣಬಹುದು. ಹೀಗೆ ಸಂವಿಧಾನದ ಮೂಲಕ ದತ್ತವಾದ ಅಧಿಕಾರವು ರಾಜ್ಯಪಾಲರಲ್ಲಿ ಇರುವಾಗ ಈ, ಅಧಿಕಾರವನ್ನು ಎಲ್ಲ ಸಂದರ್ಭಗಳಲ್ಲೂ ಅವರೇ ಚಲಾಯಿಸಲು ಆಡಳಿತಾತ್ಮಕ ಕಾರಣಗಳಿಂದ ಸಾಧ್ಯವಾಗದ ಕಾರಣ, ಈ ಅಧಿಕಾರವನ್ನು ಮಂತ್ರಿಮಂಡಲಕ್ಕೆ ಸಂವಿಧಾನದ ವಿಧಿ 166 ರ ಪ್ರಕಾರ ನೀಡಲ್ಪಟ್ಟಿದೆ. ಮಂತ್ರಿಮಂಡಲದ ಮುಖ್ಯಮಂತ್ರಿಗಳು ಹಾಗು ಇತರ ಮಂತ್ರಿಗಳು ನೌಕರನ ಮೇಲೆ ವಿಧಿಸಬಹುದಾದ ದಂಡನೆಗಳನ್ನು ವಿಧಿಸಲು ರಾಜ್ಯಪಾಲರಿಂದ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸಿ ಆದೇಶ ಹೊರಡಿಸುತ್ತಾರೆ. ಹಾಗಾಗಿ, ಮಂತ್ರಿಗಳು ಶಿಸ್ತು ಪ್ರಾಧಿಕಾರವಾಗಿ ಮತ್ತು ಇಲಾಖಾ ಮುಖ್ಯಸ್ಥರೂಕೂಡ ಶಿಸ್ತು ಪ್ರಾಧಿಕಾರವಾಗಿ ಅವರವರ ಅಧಿಕಾರ ವ್ಯಾಪ್ತಿಯಲ್ಲಿ ನೌಕರರ ಮೇಲೆ ಹೇಳಿದ ದಂಡನೆಯನ್ನು ವಿಧಿಸಬಹುದಾಗಿ.
ಸಂವಿಧಾನದ ವಿಧಿ 311(2) ರಲ್ಲಿ ಯಾವ ಪ್ರಾಧಿಕಾರವು ನೌಕರನನ್ನು ಸೇವೆಗೆ ನೇಮಕ ಮಾಡಿಕೊಂಡಿದೆಯೋ ಆ ಪ್ರಾಧಿಕಾರವು ಆ ನೌಕರನಿಗೆ ಸೇವೆಯಿಂದ ತೆಗೆದುಹಾಕುವಂತಹ ದಂಡನೆಯನ್ನು ವಿಧಿಸಬಹುದೆಂದು ಸ್ಪಷ್ಟಪಡಿಸುತ್ತದೆ. ಹಾಗಾಗಿ, ನೇಮಕಾತಿ ಪ್ರಾಧಿಕಾರಕ್ಕೆ ಸಂವಿಧಾನವೇ ಅಧಿಕಾರವನ್ನು ನೀಡಿರುತ್ತದೆ. ನೇಮಕಾತಿ ಪ್ರಾಧಿಕಾರದ ಸಹ ಪ್ರಾಧಿಕಾರಿಗಳು ಕೇವಲ ಸಣ್ಣ ಪ್ರಮಾಣದ ದಂಡನೆಗಳನ್ನು ನೌಕರನ ಮೇಲೆ ವಿಧಿಸಬಹುದಾಗಿದೆ. ಈ ಬಗ್ಗೆ ಕೆ.ಸಿ.ಎಸ್. (ಸಿಸಿಎ) ನಿಯಮ 1957 ರ ನಿಯಮ 9 ರಲ್ಲಿ ಸಂಪೂರ್ಣ ವಿವರಗಳು ಇರುತ್ತವೆ. ಈ ನಿಯಮದ ಅಡಿ ಇರುವ 2 ಮತ್ತು 3ನೇ ಷೆಡ್ಯೂಲುಗಳನ್ನು ನೋಡತಕ್ಕದ್ದಾಗಿದೆ. ಅಧಿಕಾರವು ದತ್ತವಾಗದೆ ಅಂತಹ ಅಧಿಕಾರವನ್ನು ಚಲಾಯಿಸಿದಲ್ಲಿ ಆ ಪ್ರಾಧಿಕಾರದ ಆದೇಶಗಳು ಅಸಿಂಧುವಾಗುತ್ತವೆ.(Marathawada University Vs. Shesha Rao Balawantha Rao Chauan (AIR 1989 SC 1582).
ಸಂವಿಧಾನದ ವಿಧಿ 311 (1) ರಲ್ಲಿ ಸಹ ಪ್ರಾಧಿಕಾರಗಳು ಕೆಲಸದಿಂದ ತೆಗೆದು ಹಾಕುವಂತಹ ದೊಡ್ಡ ದಂಡನೆಗಳನ್ನು ನೌಕರನ ಮೇಲೆ ವಿಧಿಸಲು ಬರುವುದಿಲ್ಲ ಎಂದು ಶೃತಪಡಿಸಿರುವುದು ಗಮನೀಯವಾದ ಅಂಶ. ಅಂದರೆ, ನೇಮಕಾತಿ ಪ್ರಾಧಿಕಾರದ ಸರಿ ಸಮಾನ ಪ್ರಾಧಿಕಾರಗಳು ಹಾಗು ಉನ್ನತ ಪ್ರಾಧಿಕಾರಗಳು ಆ ಅಧಿಕಾರವನ್ನು ಚಲಾಯಿಸಬಹುದೆಂದು ಅರ್ಥ ನೀಡುತ್ತವೆ (M/s Heckett Eng. Co., Vs. their Workmen 1977 AIR (SC) 2257). ಕೆ.ಸಿ.ಎಸ್ (ಸಿಸಿಎ) ನಿಯಮ 1957 ರ ನಿಯಮ 2 ರ ರೀತ್ಯ ಹಾಗು ನಿಯಮ 12 ರ ರೀತ್ಯ ನೇಮಕಾತಿ ಪ್ರಾಧಿಕಾರಗಳು ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ನೌಕರನಿಗೆ ಯಾವ ದಂಡನೆಯನ್ನೂ (ಸಿಸಿಎ ನಿಯಮದ ನಿ.8 ರಲ್ಲಿನ) ಬೇಕಾದರೂ ವಿಧಿಸಬಹುದಾಗಿದೆ. ಆ ದಂಡನೆಗಳು ಸಣ್ಣ ಪ್ರಮಾಣದ ದಂಡನೆಯಿಂದ ಹಿಡಿದು ದೊಡ್ಡ ಪ್ರಮಾಣದ ದಂಡನೆವರೆಗಿನ ಯಾವ ದಂಡನೆಯೇ ಆಗಬಹುದಾಗಿದೆ. ಆದರೆ, ಸಹ ಪ್ರಾಧಿಕಾರಗಳು ಶಿಸ್ತು ಪ್ರಕರಣಗಳನ್ನು ಜಾರಿಮಾಡಿದಲ್ಲಿ ಅವರೇ ವಿಧಿಸುವ ದಂಡನೆಗಳು ಕೇವಲ ಸಣ್ಣ ಪ್ರಮಾಣದ ದಂಡನೆಗಳು ಆಗಿರತಕ್ಕದ್ದಾಗಿದೆ. ಕೆ.ಸಿ.ಎಸ್. (ಸಿಸಿಎ) ನಿಯಮ 1957 ರಲ್ಲಿ ಒಟ್ಟು ದಂಡನೆಗಳು ಯಾವುವು ಹಾಗು ಅವುಗಳನ್ನು ಹೇಗೆ ದೊಡ್ಡ ಪ್ರಮಾಣದ ದಂಡನೆಗಳು ಹಾಗು ಸಣ್ಣ ಪ್ರಮಾಣದ ದಂಡನೆಗಳೆಂದು ವರ್ಗಿಕರಿಸಲಾಗುತ್ತದೆ ಎಂಬುದನ್ನು ಮುಂದಿನ ಪುಟಗಳಲ್ಲಿ ಕಾಣಬಹುದಾಗಿದೆ. ಒಂದು ಪ್ರಮುಖ ಅಂಶವೇನೆಂದರೆ ವಿಚಾರಣೆ ಮುಗಿದ ನೌಕರನಿಗೆ ವಿಧಿಸುವ ದಂಡನೆಯು ಸಿಸಿಎ ನಿಯಮದ ನಿ.8 ರಲ್ಲಿನ ದಂಡನೆಯೇ ಆಗಿರತಕ್ಕದ್ದು. ಅನ್ಯ ಯಾವ ದಂಡನೆಯೂ ಕ್ರಮಬದ್ದವಲ್ಲ.
ಸಂವಿಧಾನದ ವಿಧಿ 311(2) ರಲ್ಲಿ ಕೇವಲ ಕೆಲಸದಿಂದ ತೆಗೆದು ಹಾಕುವಂತಹ ದಂಡನೆಯು ಸೂಚಿಸಲ್ಪಟ್ಟಿದೆಯೇ:
ಹೌದು. ಇಂಗ್ಲೀಷ್ ಭಾಷೆಯಲ್ಲಿ ಬಳಸುವ ರಿಮೂವಲ್ ಎಂಬ ಪದವು ವಿಧಿ 311(2) ರಲ್ಲಿ ಸೂಚಿತವಾಗಿರುವುದರಿಂದ ನೌಕರನಿಗೆ ಈ ದಂಡನೆಯು ವಿಧಿಸಲ್ಪಟ್ಟಾಗ ಅವನು ಹುದ್ದೆಯನ್ನು ಕಳೆದುಕೊಳ್ಳುತ್ತಾನೆ ಎಂದು ಅರ್ಥ. ಸಿಸಿಎ ನಿಯಮದ ನಿಯಮ 8 ರಲ್ಲಿ ಕ್ರಮಸಂಖ್ಯೆ 5,6,7 ಮತ್ತು 8ನೆಯ ದಂಡನೆಗಳು ಈ ವರ್ಗಕ್ಕೆ ಸೇರುತ್ತದೆ. 5ನೇಯ ದಂಡನೆಯಲ್ಲಿ ಕೆಳ ಹುದ್ದೆಗೆ ತಳ್ಳಲ್ಪಡುತ್ತಾನೆ, 6ನೇ ದಂಡನೆಯಲ್ಲಿ ಒತ್ತಾಯ ಪೂರ್ವಕವಾಗಿ ಸೇವೆಯಿಂದ ಹೊರಗೆ ಕಳುಹಿಸಲಾಗುತ್ತದೆ, 7ನೇ ದಂಡನೆಯಲ್ಲಿ ಸೇವೆಯಿಂದ ಹೊರಗೆ ಹಾಕಲಾಗುತ್ತದೆ ಹಾಗೂ 8ನೇಯ ದಂಡನೆಯಲ್ಲಿ ನೌಕರನನ್ನು ಪೂರ್ಣವಾಗಿ ಸೇವೆಯಿಂದ ಉಚ್ಚಾಟಿಸಲಾಗುತ್ತದೆ. ಈ ಎಲ್ಲಾ ದಂಡನೆಗಳಿಗೂ ಸಂವಿಧಾನದಲ್ಲಿ ವಿಧಿ 311 ರಲ್ಲಿ ರಕ್ಷಣೆಗಳಿದ್ದು ಕ್ರಮವಾಗಿ ಸಕ್ರಮ ಪ್ರಾಧಿಕಾರವು ಈ ದಂಡನೆಗಳನ್ನು ವಿಧಿಸಬಹುದೆಂದು ಅರ್ಥವಿರುತ್ತದೆ. ಆದ್ದರಿಂದ, ಸಣ್ಣ ಪ್ರಮಾಣದ ದಂಡನೆಗಳ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ.
ಶಿಸ್ತು ಪ್ರಾಧಿಕಾರವು ತನಗೆ ಸಂಬಂಧಿಸಿದ ವಿಷಯದಲ್ಲೇ ತಾನೇ ಶಿಸ್ತು ಪ್ರಕರಣವನ್ನು ಕೈಗೊಳ್ಳತಕ್ಕದ್ದಲ್ಲ (Arjun Choubey Vs. Union of India (AIR 1964 SC 1356).
ಕೇವಲ ರಾಜ್ಯಪಾಲರು ರಾಜ್ಯದಲ್ಲಿ ಹಾಗೂ ರಾಷ್ಟ್ರಪತಿಗಳು ಕೇಂದ್ರದಲ್ಲಿ ಈ ಅಧಿಕಾರವನ್ನು ಕಾಯಿದೆಯ ಮೂಲಕ ವಿಕೇಂದ್ರೀಕರಿಸಿರುತ್ತಾರೆ (U.P. Vs. R.M. Lal (AIR 1970 SC 1263).
ಶಿಸ್ತು ಪ್ರಾಧಿಕಾರವು ವಿಚಾರಣೆಯನ್ನು ಅಧಿಕಾರ ಚಲಾಯಿಸಿ ಆದೇಶಿಸಲೇಬೇಕಾದವುಗಳು:-
1) ಯಾವ ಸರ್ಕಾರಿ ನೌಕರನನ್ನು ಆ ಶಿಸ್ತು ಪಾಧಿಕಾರವು ನೇಮಕ ಮಾಡಿರುತ್ತದೋ, ಆ ಪ್ರಾಧಿಕಾರವು ವಿಚಾರಣೆಯನ್ನು ನಡೆಸಿ ಆರೋಪ ರುಜುವಾತಾದ ಮೇಲೆ ಸೂಕ್ತ ದಂಡನೆಯನ್ನು ವಿಧಿಸಬಹುದಾಗಿದೆ. ನೌಕರನಿಗೆ
2) ಶಿಸ್ತು ಪ್ರಾಧಿಕಾರವು ನೇಮಕ ಮಾಡಿದಂತಹ ನೌಕರನು ಅವನ ಇಲಾಖೆಯನ್ನು ಬಿಟ್ಟು ಅನ್ಯ ಸರ್ಕಾರದ/ನಿಗಮದ/ಇಲಾಖೆಗಳಲ್ಲಿ ನಿಯೋಜನೆ ಮೇಲೆ ಇದ್ದಾಗಲೂ ಆ ಶಿಸ್ತು ಪ್ರಾಧಿಕಾರವು ತನ್ನ ಅಧಿಕಾರವನ್ನು ಚಲಾಯಿಸಿ ಸೂಕ್ತ ದಂಡನೆಯನ್ನು ಆ ನೌಕರನಿಗೆ ವಿಧಿಸಬಹುದಾಗಿದೆ.
ಶಿಸ್ತು ಪ್ರಾಧಿಕಾರವು ವಿಚಾರಣೆಯನ್ನು ಜಾರಿ ಮಾಡಬಾರದ ಸಂದರ್ಭಗಳು:
1) ಸ್ವತಂತ್ರ ಪ್ರಭಾರದ ಮೇಲೆ ಶಿಸ್ತು ಪ್ರಾಧಿಕಾರದ ಸ್ಥಾನದಲ್ಲಿ ಕೆಲಸ ನಿರ್ವಹಿಸುವಾಗ ಆ ಅಧಿಕಾರಿಯು ಆ ಹುದ್ದೆಯಲ್ಲಿನ ಶಾಸನಬದ್ಧ ವ್ಯವಹರಣೆಗಳನ್ನು ನಡೆಸತಕ್ಕದ್ದಲ್ಲ (Puttaswamy Gowda Vs. Director Town Planning (KSLJ 1992-613) and (Krishnappa Vs. Director Printing (1994 KSLJ 411). ಕೇವಲ ದಿನ ನಿತ್ಯದ (routine) ಕೆಲಸ ಕಾರ್ಯಗಳನ್ನು ನಿಭಾಯಿಸತಕ್ಕದ್ದಾಗಿದೆ. ಅಂದರೆ, ಸಕ್ರಮ ಶಿಸ್ತು ಪ್ರಾಧಿಕಾರವಾದ ಅಧಿಕಾರಿಯು ದಂಡಿಸುತ್ತಿದ್ದ ದಂಡನೆಗಳನ್ನು ಈ ಸ್ವತಂತ್ರ ಪ್ರಭಾರ ಅಧಿಕಾರಿಯು ವಿಧಿಸತಕ್ಕದ್ದಲ್ಲ.

2) ನೇಮಕ ಮಾಡುವ ಹಾಗು ಕೆಲಸದಿಂದ ತೆಗೆದುಹಾಕಬಹುದಾದಂತಹ ದಂಡನೆಗಳನ್ನು ವಿಧಿಸುವ ಅಧಿಕಾರವನ್ನು ನೇಮಕಾತಿ ಪ್ರಾಧಿಕಾರವು ತನ್ನ ಕೆಳ ಪ್ರಾಧಿಕಾರಗಳಿಗೆ ವಿಕೇಂದ್ರೀಕರಿಸಲು ಬರುವುದಿಲ್ಲ (Shardula Singh Vs. State of M.P (AIR 1966 M.P. 193 and Krishna Kumar Vs. Divisional AE (1979 SC 1912)


