Public Exams in Class 7:ಶಿಕ್ಷಣ ಇಲಾಖೆಯ ಹೊಸ ಯೋಜನೆ ಏನು?
Public Exams in Class 7: 2026-27ರಿಂದ 7ನೇ ತರಗತಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಇದರ ಉದ್ದೇಶ, ಮಹತ್ವ ಹಾಗೂ ಪರಿಣಾಮಗಳ ಕುರಿತು ತಿಳಿಯಿರಿ.
ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆಯೊಂದನ್ನು ಇಡುವ ಚಿಂತನೆ ನಡೆಸಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳ 7ನೇ ತರಗತಿ ವಿದ್ಯಾರ್ಥಿಗಳಿಗೆ “ಪಬ್ಲಿಕ್ ಪರೀಕ್ಷೆ” ನಡೆಸುವ ಪ್ರಸ್ತಾವನೆ ಕುರಿತು ಚರ್ಚೆಗಳು ನಡೆಯುತ್ತಿವೆ.
ಪಬ್ಲಿಕ್ ಪರೀಕ್ಷೆಯ ಅಗತ್ಯ ಏಕೆ?
2009ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯ್ದೆ (RTE) ಯನ್ನು ಕರ್ನಾಟಕದಲ್ಲಿ 2012ರಿಂದ ಅನುಷ್ಠಾನಗೊಳಿಸಲಾಯಿತು. ಈ ಕಾಯ್ದೆಯ ಪ್ರಕಾರ, 1ರಿಂದ 8ನೇ ತರಗತಿವರೆಗೆ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮ ಜಾರಿಯಲ್ಲಿದೆ.
ಈ ಕ್ರಮವು ಮಕ್ಕಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ದೈಹಿಕ ಶಿಕ್ಷೆಯಂತಹ ಪ್ರಕರಣಗಳನ್ನು ತಗ್ಗಿಸಲು ಸಹಕಾರಿಯಾಯಿತು. ಆದರೆ, “ಹೇಗಾದರೂ ಮುಂದಿನ ತರಗತಿಗೆ ಹೋಗುತ್ತೇವೆ” ಎಂಬ ಮನೋಭಾವದಿಂದ ಕೆಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಕಲಿಕೆಯ ಗಂಭೀರತೆ ಕುಂಠಿತಗೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಮೀಕ್ಷೆಗಳಲ್ಲಿ ಬಹಿರಂಗವಾದ ವಾಸ್ತವ
ಶಿಕ್ಷಣ ಇಲಾಖೆಯ ವಿವಿಧ ಅಧ್ಯಯನಗಳು ಮತ್ತು ಸಮೀಕ್ಷೆಗಳು ಆತಂಕಕಾರಿ ಸಂಗತಿಗಳನ್ನು ಬೆಳಕಿಗೆ ತಂದಿವೆ. ಕೆಲವು ಸಂದರ್ಭಗಳಲ್ಲಿ:
- 5ನೇ ತರಗತಿ ವಿದ್ಯಾರ್ಥಿಗಳು 2ನೇ ತರಗತಿಯ ಪಠ್ಯವನ್ನು ಸರಿಯಾಗಿ ಓದಲು ಸಾಧ್ಯವಾಗಿಲ್ಲ.
- 8ನೇ ತರಗತಿ ವಿದ್ಯಾರ್ಥಿಗಳು 5ನೇ ತರಗತಿಯ ಗಣಿತದ ಲೆಕ್ಕಗಳನ್ನು ಬಿಡಿಸಲು ಕಷ್ಟಪಡುತ್ತಿದ್ದಾರೆ.
ಇಂತಹ ಕಲಿಕಾ ಹಿನ್ನಡೆಯನ್ನು ತಡೆಗಟ್ಟಲು ಮತ್ತು ಮಕ್ಕಳ ನೈಜ ಕಲಿಕಾ ಮಟ್ಟವನ್ನು ಅಳೆಯಲು ಪಬ್ಲಿಕ್ ಪರೀಕ್ಷೆ ಸಹಕಾರಿಯಾಗಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
ಅನುತ್ತೀರ್ಣವಲ್ಲ, ಕಲಿಕಾ ಮೌಲ್ಯಮಾಪನ
ಈ ಪರೀಕ್ಷೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದಲ್ಲ. ಬದಲಾಗಿ, ಅವರ ಕಲಿಕಾ ಮಟ್ಟವನ್ನು ಅಳೆಯುವುದು ಮತ್ತು ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸುವುದಾಗಿದೆ.
ಪರೀಕ್ಷೆಯ ನಂತರ:
- ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ನಡೆಯಲಿದೆ.
- ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಲಾಗುವುದು.
- ಬೇಸಿಗೆ ರಜೆಯಲ್ಲಿ ವಿಶೇಷ ತರಬೇತಿ ನೀಡಲಾಗುವುದು.
- ಮರು ಪರೀಕ್ಷೆ ನಡೆಸಿ ಮುಂದಿನ ತರಗತಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.
ಶಿಕ್ಷಣದ ಗುಣಮಟ್ಟದತ್ತ ಹೊಸ ಹೆಜ್ಜೆ
7ನೇ ತರಗತಿಯ ಪಬ್ಲಿಕ್ ಪರೀಕ್ಷೆಯು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವ ಜೊತೆಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಕಲಿಕೆಯ ನೈಜ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ.
ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ಪ್ರಕಾರ, “ಮಕ್ಕಳ ಕಲಿಕೆಯನ್ನು ತಿಳಿಯುವ ಹಾಗೂ ಕಲಿಕಾ ವಿಷಯಗಳಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಚಿಂತನೆ ಮಾಡಲಾಗಿದೆ.”
7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಎಂಬ ಪ್ರಸ್ತಾವನೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡುವ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ನಿಖರವಾಗಿ ಅಳೆಯುವ ಮೂಲಕ ಉತ್ತಮ ಶಿಕ್ಷಣದತ್ತ ಸಾಗಲು ಇದು ಸಹಕಾರಿಯಾಗಬಹುದು. ಆದರೆ, ಈ ಕ್ರಮವನ್ನು ಮಕ್ಕಳ ಮೇಲೆ ಹೆಚ್ಚುವರಿ ಒತ್ತಡವಿಲ್ಲದೆ ಅನುಷ್ಠಾನಗೊಳಿಸುವುದು ಅತ್ಯಂತ ಮುಖ್ಯವಾಗಿದೆ.
ಪ್ರಿಕೆಜಿಗೂ ಪಠ್ಯಪುಸ್ತಕ:
ಬಾಲ್ಯಾವಸ್ಥೆಯಿಂದಲೇ ಗುಣಾತ್ಮಕ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆಯು ಸಿದ್ಧತೆ ಆರಂಭಿಸಿದೆ. ದೇಶಾದ್ಯಂತ ಪ್ರೌಢಶಾಲೆಗಳಲ್ಲಿಯೂ ಮಕ್ಕಳು ಗಣಿತ, ಕಾಗುಣಿತ ಓದುವಲ್ಲಿ ಹಿಂದುಳಿಯುತ್ತಿರುವುದು ಸಂಶೋಧನೆಗಳಿಂದ ತಿಳಿದುಬಂದಿರುವ ಪರಿಣಾಮ, ಶಾಲಾ ಶಿಕ್ಷಣ ಇಲಾಖೆಯು ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಸಂಖ್ಯಾಶಾಸ್ತ್ರಕ್ಕೆ ಒತ್ತು ನೀಡಿ ಚಟುವಟಿಕಾ ಪುಸ್ತಕಗಳನ್ನು ಸಿದ್ಧಪಡಿಸಿದೆ. ಆರಂಭಿಕ ಬಾಲ್ಯ ಅರೈಕೆ ಮತ್ತು ಶಿಕ್ಷಣ (ಇಸಿಸಿಇ) ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ, ಶಿಕ್ಷಕರ ಕೈಪಿಡಿ ಮತ್ತು ಶಿಕ್ಷಕರ ತರಬೇತಿ ಪುಸ್ತಕಗಳನ್ನು ಪ್ರಕಟಿಸಿದೆ. ಕಳೆದ ವರ್ಷವೇ ಸರ್ಕಾರಿ ಪೂರ್ವ ಪ್ರಾಥಮಿಕ ತರಗತಿ (ಎಲ್ಕೆಜಿ, ಯುಕೆಜಿ) ವಿದ್ಯಾರ್ಥಿಗಳಿಗೆ ಕಲಿಕಾ ಗುಣಮಟ್ಟವನ್ನು ಉತ್ತಮಪಡಿಸಲು ಭಾಷೆ-1- ಕನ್ನಡ ಭಾಷೆ-2-ಇಂಗ್ಲಿಷ್ ಮತ್ತು ದ್ವಿ ಭಾಷೆಯಲ್ಲಿ ಗಣಿತ ಹಾಗೂ ಪರಿಸರ ಅಧ್ಯಯನ ಅಭ್ಯಾಸ ಪುಸ್ತಕರು, ಶಿಕ್ಷಕರ ಕೈಪಿಡಿ ಮತ್ತು ತರಬೇತಿ ಸಾಹಿತ್ಯಗಳನ್ನು ರಾಜ್ಯದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಿಎಸ್ಇಆರ್ಟಿ) ಸಿದ್ಧಪಡಿಸಿತ್ತು. ಈ ವರ್ಷ ಅದನ್ನು ಜಾರಿಗೆ ತರುತ್ತಿದೆ.
ಚಟುವಟಿಕೆ ಪುಸ್ತಕಗಳಲ್ಲಿ ಕತೆ, ಹಾಡು, ಪ್ರಾಸಗೀತೆಗಳು, ಸುತ್ತಲಿನ ಸಸ್ಯ ಮತ್ತು ಪ್ರಾಣಿಗಳನ್ನು ಗುರುತಿಸುವುದು, ಕಲೆ ಮತ್ತು ಕರಕುಶಲ ಚಟುವಟಿಕೆಗಳು, ಚಿತ್ರ ಬರೆಯುವುದು, ಬಣ್ಣ ತುಂಬುವುದು, ಪದಗಳನ್ನು ಸ್ಪಷ್ಟವಾಗಿ ಉತ್ತರಿಸುವುದು ಹಾಗೂ ಬರೆಯುವುದು ಒಳಗೊಂಡಂತೆ ಸೃಜನಶೀಲ ಆಟ ಅಥವಾ ರಚನಾತ್ಮಕ ಕಲಿಕಾ ಚಟುವಟಿಕೆಗಳನ್ನು ಅಳವಡಿಸಲಾಗಿದೆ. ಇನ್ನು ಪರೀಕ್ಷಾ ದೃಷ್ಟಿಯಿಂದ ಮಾತ್ರ ಮಕ್ಕಳ ಕಲಿಕೆಯನ್ನು ಪರಿಶೀಲಿಸುವುದಲ್ಲ. ಕಲಿಕಾ ದೃಷ್ಟಿಯಿಂದ ಮಕ್ಕಳ ಶೈಕ್ಷಣಿಕ ರಿಪೋರ್ಟ್ ಏನಿದೆ ಎಂಬುದನ್ನು ತಿಳಿಯುವ ಹೊಸ ಪ್ರಯತ್ನ ಮಾಡುತ್ತಿದೆ. ಹೀಗಾಗಿ, ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೂ ಮಾಸಿಕ ರಿಪೋರ್ಟ್ ಕಾರ್ಡ್ ಅನ್ನು ಜಾರಿಗೊಳಿಸಲಾಗುತ್ತಿದೆ.
ಪ್ರತಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ತಿಳಿಯುವ ಉದ್ದೇಶದಿಂದ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇದೇ ಮೊದಲ ಬಾರಿಗೆ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’ (ಸಮಗ್ರ ವರದಿ ಚೀಟಿ) ನೀಡುವ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸುತ್ತಿದೆ.
ಸಾಮಾನ್ಯವಾಗಿ ಸರ್ಕಾರಿ ಮತ್ತು ಖಾಸಗಿ ಸೇರಿ ಎಲ್ಲ ಶಾಲೆಗಳಲ್ಲಿ ಮಕ್ಕಳ ಕಲಿಕೆಯನ್ನು ತಿಳಿಸಲು ಹಾಗೂ ಪಾಲಕ/ಪೋಷಕರಿಗೆ ಸೂಚನೆಗಳಿದ್ದಲ್ಲಿ
ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್ ನೀಡಿಕೆ:
ಪ್ರತಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ತಿಳಿಯುವ ಉದ್ದೇಶದಿಂದ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇದೇ ಮೊದಲ ಬಾರಿಗೆ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ‘ಹೋಲಿಸ್ಟಿಕ್ ರಿಪೋರ್ಟ್ ಕಾರ್ಡ್’ (ಸಮಗ್ರ ವರದಿ ಚೀಟಿ) ನೀಡುವ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸುತ್ತಿದೆ.
ಸಾಮಾನ್ಯವಾಗಿ ಸರ್ಕಾರಿ ಮತ್ತು ಖಾಸಗಿ ಸೇರಿ ಎಲ್ಲ ಶಾಲೆಗಳಲ್ಲಿ ಮಕ್ಕಳ ಕಲಿಕೆಯನ್ನು ತಿಳಿಸಲು ಹಾಗೂ ಪಾಲಕ/ಪೋಷಕರಿಗೆ ಸೂಚನೆಗಳಿದ್ದಲ್ಲಿ ಡೈರಿಯಲ್ಲಿಯೇ ಬರೆದು ಕಳುಹಿಸಲಾಗುತ್ತದೆ. ಹೊಸ ವ್ಯವಸ್ಥೆಯಲ್ಲಿ ಪಾಲಕರ ಮೊಬೈಲ್ ಸಂಖ್ಯೆಗೆ ಡಿಜಿಟಲ್ ರಿಪೋರ್ಟ್ ಕಾರ್ಡ್ ಕಳುಹಿಸಲಾಗುತ್ತದೆ. ಆಧುನಿಕ ವ್ಯವಸ್ಥೆ ಮೂಲಕ ಪಾಲಕರು ಮಕ್ಕಳ ಸಮಗ್ರ ಶೈಕ್ಷಣಿಕ ಪ್ರಗತಿಯನ್ನು ಮೊಬೈಲ್ ಅಥವಾ ಇ ಮೇಲ್ ಮೂಲಕವೇ ಸುಲಭವಾಗಿ ಪಡೆಯಬಹುದಾಗಿದೆ. ಪರೀಕ್ಷೆಯ ಅಂಕಗಳು, ಶಿಕ್ಷಕರ ಅಭಿಪ್ರಾಯಗಳು ಮತ್ತು ಮಗುವಿನ ಸರ್ವತೋಮುಖ ಬೆಳವಣಿಗೆಯ ವಿವರಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ.
ಹೊಸದಾಗಿ 20 ಶಿಶುವಿಹಾರ ಕೇಂದ್ರ:
ಕುಟುಂಬದ ಆರ್ಥಿಕ ಭದ್ರತೆಗಾಗಿ ಕೆಲಸಕ್ಕೆ ಹೋಗುವ ಉದ್ಯೋಗಸ್ಥ ಮಹಿಳೆಯರ ಮಕ್ಕಳ ಪಾಲನೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘ಕ್ರೀಚ್’ ಯೋಜನೆಯಡಿ ಹೊಸದಾಗಿ 20 ಶಿಶು ವಿಹಾರ ಕೇಂದ್ರಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಈಗಾಗಲೇ 120ಕ್ಕೂ ಅಧಿಕ ಶಿಶು ವಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಹೊಸದಾಗಿ 20 ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ಈ ಸಂಬಂಧ ರಾಜ್ಯಾದ್ಯಂತ ಕೇಂದ್ರಗಳನ್ನು ಆರಂಭಿಸಲು ಸ್ಥಳ ಗುರುತಿಸಲಾಗಿದ್ದು, ಶೀಘ್ರದಲ್ಲೇ ಆರಂಭವಾಗಲಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಎಂ.ಎಸ್ ಬಿಲ್ಡಿಂಗ್, ಸಿಇಒ ಕಚೇರಿ, ಕಮಿಷನರ್ ಆಫ್ ಪೊಲೀಸ್ ಕಚೇರಿ ಬಳಿ ಕ್ರಿಚ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಇದೀಗ ಆನಂದರಾವ್ ವೃತ್ತದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ ಕಚೇರಿ ಆವರಣ, ಅಂಬೇಡ್ಕರ್ ವೀದಿಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಗೋಪುರ, ಕೆಪಿಟಿಸಿಎಲ್ ಕಾರ್ಪೊರೇಟ್ ಕಚೇರಿಯಲ್ಲಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಉಳಿದಂತೆ ರಾಜ್ಯದ ಇತರ ಭಾಗಗಳಲ್ಲಿ ಕೋರ್ಟ್ ಆವರಣ, ತಹಸೀಲ್ದಾರ್/ಜಿಲ್ಲಾಧಿಕಾರಿಗಳ ಕಚೇರಿಗಳು, ಕಲಬುರಗಿ ವಿವಿ, ವಿಜಯನಗರ ಜಿಲ್ಲೆಯ ಹೊಸಪೇಟೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣ ಸೇರಿ ಇತರೆಡೆಗಳಲ್ಲಿ ಶಿಶು ವಿಹಾರ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ಹಾಜರಾತಿಗೆ ಎಐ ಬಳಕೆ!
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಖಾತ್ರಿಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೃತಕ ಬುದ್ಧಿಮತ್ತೆ (ಎಐ) ಚಾಲಿತ, ಮುಖ ಚಹರೆ ಗುರುತು ಆಧಾರಿತ ಇ-ಹಾಜರಾತಿ ಅನುಷ್ಠಾನಕ್ಕೆ ಮುಂದಾಗಿದೆ. ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಸೇರಿ 52,686 ಶಾಲೆಗಳಲ್ಲಿ ಓದುತ್ತಿರುವ 1ರಿಂದ 10ನೇ ತರಗತಿಯ 54 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಹಾಜರಾತಿಯನ್ನು ನಿಖರವಾಗಿ ದಾಖಲಿಸಲು ಶಾಲೆಗಳಲ್ಲಿ ಪ್ರಥಮ ಬಾರಿಗೆ ‘ನಿರಂತರ ಆ್ಯಪ್’ ಪರಿಚಯಿಸಿ 2026-27ನೇ ಸಾಲಿನಿಂದಲೇ ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ. ಇದಕ್ಕಾಗಿ ಎಲ್ಲ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ವಿಶೇಷ ಪರಿಣತರ ತಂಡ ಸಿದ್ದಗೊಂಡಿದೆ.
ಎಲ್ಲ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡಿರುವ ನಿರಂತರ ಆ್ಯಪ್ ಮೂಲಕ ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತ ಇ-ಹಾಜರಾತಿ ಹಾಕುತ್ತಾರೆ. ಇದರಲ್ಲಿ ಸೆರೆ ಹಿಡಿದ ವಿದ್ಯಾರ್ಥಿಗಳ ದತ್ತಾಂಶವನ್ನು ಮೊಬೈಲ್ ಆ್ಯಪ್ ಮೂಲಕ ಗುರುತಿಸುವ ಸಾಧನಕ್ಕೆ ರವಾನಿಸುತ್ತದೆ.
ಇದು ವಿದ್ಯಾರ್ಥಿಗಳ ಆಧಾರ್ ಸಂಖ್ಯೆಗೆ ಜೋಡಣೆಯಾಗಿದ್ದರಿಂದ ಹಾಜರಾತಿ ಖಾತ್ರಿ ಪಡಿಸಿಕೊಳ್ಳುತ್ತದೆ. ಅಲ್ಲದೆ, ಯಾವುದೇ ವಿದ್ಯಾರ್ಥಿ ಅನುಮತಿ ಇಲ್ಲದೆ ನಿರಂತರ 7 ದಿನ ಗೈರಾಗಿದ್ದರೆ, ಆ ಮಾಹಿತಿ ಸಂಬಂಧಿತ ಅಧಿಕಾರಿಗಳಿಗೆ ತಲುಪಲಿದೆ. ಬಳಿಕ ಅಧಿಕಾರಿಗಳು ಮತ್ತು ಶಿಕ್ಷಕರು ವಿದ್ಯಾರ್ಥಿಯನ್ನು ಮರಳಿ ಶಾಲೆಗೆ ತರಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಡಿಡಿಪಿಐಗಳು ಮಾಹಿತಿ ನೀಡಿದ್ದಾರೆ.

ಅಪ್ಡೇಟ್ ಮಾಹಿತಿಗಾಗಿ www.mastermitra.in ಗೆ ಭೇಟಿ ನೀಡಿ




