GIS Notes-01 DATA SOURCES OF GEOGRAPHICAL INFORMATION SYSTEM: ಭೌಗೋಳಿಕ ಮಾಹಿತಿ ವ್ಯವಸ್ಥೆಯ ದತ್ತಾಂಶಗಳ ಮೂಲಗಳು

GIS Notes-01 DATA SOURCES OF GEOGRAPHICAL INFORMATION SYSTEM: ಭೌಗೋಳಿಕ ಮಾಹಿತಿ ವ್ಯವಸ್ಥೆಯ ದತ್ತಾಂಶಗಳ ಮೂಲಗಳು

GIS Notes-01 DATA SOURCES OF GEOGRAPHICAL INFORMATION SYSTEM: ಭೌಗೋಳಿಕ ಮಾಹಿತಿ ವ್ಯವಸ್ಥೆಯಲ್ಲಿ ದತ್ತಾಂಶಗಳು ಮತ್ತು ಅಂಕಿ ಅಂಶಗಳು ಗಣನೀಯವಾದ ಪಾತ್ರವನ್ನು ಹೊಂದಿವೆ ಹಾಗೂ ಆಧಾರ ಸ್ತಂಭಗಳಾಗಿವೆ. ದತ್ತಾಂಶಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾಗೂ ಕಾಲದಿಂದ ಕಾಲಕ್ಕೆ ತಮ್ಮದೇ ಆದ ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿರುತ್ತವೆ. ಜೊತೆಗೆ ಇವು ತಮ್ಮ ಭೌಗೋಳಿಕತೆಗೆ ಅನುಗುಣವಾಗಿ ನೇರ ಸಂಬಂಧವನ್ನು ಸಹಾ ಹೊಂದಿರುತ್ತದೆ.

ಭೌಗೋಳಿಕ ಮಾಹಿತಿ ವ್ಯವಸ್ಥೆಗೆ ಹಲವಾರು ಮೂಲಗಳಿಂದ ಅಂಕಿ-ಅಂಶಗಳು ಮತ್ತು ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿದೆ. ಈ ಕೆಳಕಂಡ ಪ್ರಮುಖ ಮೂಲಗಳು ಅಂಕಿ-ಅಂಶಗಳನ್ನು ಒದಗಿಸುತ್ತವೆ.

1. ಉಪಕರಣ ಮೂಲಗಳು (Instruments sources)

2. ವೈಯಕ್ತಿಕ ಮೂಲಗಳು (Individual sources)

3. ದಾಖಲೆಯ ಮೂಲಗಳು (Records sources)

4. ಅಂಕೀಯ ದತ್ತಾಂಶಗಳ ಕಡತಗಳು (Digital data files)

5. ನಕ್ಷಾ ಮೂಲಗಳು (Maps Sources)

6. ಅಂಕೀಯ ತಂತ್ರಗಳು (Digital technique)

7. ವರದಿ ಮೂಲಗಳು (Report sources)

8. ಕ್ಷೇತ್ರ ಸರ್ವೆ/ಮೋಜಣಿ ಮೂಲಗಳು (Field survey sources)

9. ವೈಮಾನಿಕ ಛಾಯಚಿತ್ರಗಳು (Aerial photographs)

10. ದೂರಸಂವೇದಿ ಬಿಂಬಕಗಳು (Remote sensing imageries)

1. ಉಪಕರಣ ಮೂಲಗಳು: ಭೌಗೋಳಿಕ ಮಾಹಿತಿ ವ್ಯವಸ್ಥೆಗೆ ಅಪರಿಮಿತವಾದ ಅಂಕಿ-ಅಂಶಗಳನ್ನು ಹಲವಾರು ಉಪಕರಣಗಳ ಸಹಾಯದಿಂದ ಭೂಮಾಪನ ಉಪಕರಣಗಳು, ಉದಾ: ಸರಪಳಿ, ಸಮತಲ ಹಲಗೆ, ಮುಪಟ್ಟಿಗಾಯ ಒದಗಿಸಲಾಗುತ್ತದೆ. ಅಂತಹ ಉಪಕರಣಗಳಲ್ಲಿ ಮುಖ್ಯವಾದವುಗಳೆಂದರೆ ದಿಕ್ಕೂಚಿ, ಟೋಟಲ್ ಸ್ಟೇಷನ್, ಥಿಯೋಡಿಲೈಟ್, ಜಿ.ಪಿ.ಎಸ್ ಸರ್ವೆಗಳು. ಸ್ಕ್ಯಾನರ್, ಇತ್ಯಾದಿ.

1. ಥಿಯೋಢಲೈಟ್

2. ಸಮತಲ ಹಲಗೆ ಮೋಜಣಿ

3. ಡಿಜಿಟಲ್ ಕ್ಯಾಮರ (ಚಲನ)

4. ಸರಪಳಿ

5. ಡಿಜಿಟಲ್ (ಸ್ಥಿರ) ಕ್ಯಾಮರ

6. ಜಿ.ಪಿ.ಎಸ್. ಉಪಕರಣ

7. ಸ್ಕ್ಯಾನರ್

8. ಮುಪ್ಪಟೆಗಾಜು ದಿಕ್ಕೂಚಿ

9. ಟೋಟಲ್ ಸ್ಟೇಷನ್ ಸರ್ವೆ ಉಪಕರಣ

ಈ ಉಪಕರಣಗಳ ಸಹಾಯದಿಂದ ಒಂದು ಪ್ರದೇಶಕ್ಕೆ ಸಂಬಂಧಿಸಿದಂತೆ ಉದ್ದ, ಅಗಲ, ಎತ್ತರ, ವಿಸ್ತೀರ್ಣ, ಆಕಾರ (ಭೂ ಜ್ಯಾಮಿತಿಯ ದತ್ತಾಂಶ) ಹಾಗೂ ಗುಣವಿಶೇಷಣ ದತ್ತಾಂಶಗಳನ್ನು ಹೆಚ್ಚು ನಿಖರವಾಗಿ ಪಡೆದು ಕೊಳ್ಳಬಹುದು. ಇದರಿಂದ ಭೌಗೋಳಿಕ ಮಾಹಿತಿ ವ್ಯವಸ್ಥೆಗೆ ಅಗತ್ಯವಾದ ಆಯಾ ಪ್ರದೇಶಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಅಂಕಿ-ಅಂಶಗಳು ದೊರೆಯುತ್ತವೆ. ಉದಾ: ಸಾಂಪ್ರದಾಯಿಕ ಸರ್ವೆ (Traditional Survey), ತ್ರಿಕೋನೀಯ ಸರ್ವೆ (Trigonometrical Survey), ಭೂ-ಮಿತಿಯ ಸರ್ವೆ (Geodetic Survey),ಕಂದಾಯ ಸರ್ವೇ, (Cadastral Survey),ಇಂಜಿನಿಯರಿಂಗ್ ಸರ್ವೇ (Engineering Survey), ಗಣಿಗಾರಿಕೆ(Mining Survey),ಅರಣ್ಯ ಸರ್ವೇ (Forest Survey),ವನ್ಯಜಾಡು ಜೀವಿ ಸರ್ವೇ  (Animals tracking), ಇತ್ಯಾದಿ.

2. ವೈಯಕ್ತಿಕ ಮೂಲಗಳು: ಈ ವಿಧದ ಮೂಲಗಳಲ್ಲಿ ಪ್ರಾಥಮಿಕ ಅಂಕಿ-ಅಂಶಗಳ ಸಂಗ್ರಹಣಾ ವಿಧಾನಗಳಾದ ಗಣತಿ, ವೈಯಕ್ತಿಕ ಸಮೀಕ್ಷೆ, ಪ್ರಶ್ನಾವಳಿಗಳು, ಕ್ಷೇತ್ರ ಪರಿವೀಕ್ಷಣೆ. ಮೊದಲಾದವುಗಳು ಸೇರುತ್ತವೆ. ಒಂದು ಪ್ರದೇಶದ ಅಂಕಿ-ಅಂಶಗಳನ್ನು ಸಾಧ್ಯವಾದಷ್ಟು ನಿಖರವಾಗಿ ಮತ್ತು ಸ್ಪಷ್ಟವಾಗಿ ಸಂಗ್ರಹಿಸಿ ಜಿ.ಐ.ಎಸ್ ತಂತ್ರಜ್ಞಾನದಲ್ಲಿ ಬಳಸಿಕೊಳ್ಳಬಹುದಾಗಿದೆ. ಈ ಮೂಲಗಳ ಅಂಕಿ-ಅಂಶಗಳು ಒಬ್ಬ ಮೋಜಣಿಗಾರನಿಂದ ಸಂಗ್ರಹವಾಗುವುದರಿಂದ ಇದರಲ್ಲಿ ಲೋಪ-ದೋಷ ಮತ್ತು ಪುನರಾವರ್ತನೆಗಳು ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ.

3. ದಾಖಲೆ ಮೂಲಗಳು: ಇವು ಸಾಮಾನ್ಯವಾಗಿ ದ್ವಿತೀಯ ಹಂತದ

ಅಂಕಿ-ಅಂಶಗಳನ್ನು ನೀಡುವ ಮೂಲಗಳಾಗಿವೆ. ಇವುಗಳು ಭೂ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಮಗ್ರ ದತ್ತಾಂಶಗಳ ಸಂಗ್ರಹವನ್ನು ಒಳಗೊಂಡಿರುತ್ತವೆ. ಇವುಗಳನ್ನು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಅಥವಾ ಹಲವು ವ್ಯಕ್ತಿಗಳು ಅಥವಾ ಸಂಘಟನೆಗಳಿಂದ ಸಂಗ್ರಹಿಸಲಾಗಿರುತ್ತದೆ. ಇವು ಸಾಮಾನ್ಯವಾಗಿ ವಿವರಣಾತ್ಮಕ ಹಾಗೂ ಪಟ್ಟಿಗಳ ರೂಪಗಳಲ್ಲಿರುತ್ತವೆ. ಉದಾ: ಜಲಾನಯನ ಪ್ರದೇಶದ ವರದಿ, ಕಾಡ್ಲಿಚ್ಚು ಪ್ರದೇಶದ ವರದಿ, ಮಾನವ ಮತ್ತು ಪ್ರಾಣಿಗಳ ಸಂಘರ್ಷಣಾ ಪ್ರದೇಶದ ವರದಿ, ಜನಸಂಖ್ಯಾ ವರದಿ, ಇತ್ಯಾದಿ.

4. ಅಂಕೀಯ ದತ್ತಾಂಶಗಳ ಕಡತ ಮೂಲಗಳು: ಇವು ಸಾಮಾನ್ಯವಾಗಿ

ಅಂಕೀಯ ರೂಪದಲ್ಲಿರುವ ದತ್ತಾಂಶಗಳಾಗಿರುತ್ತವೆ. ಮುಖ್ಯವಾಗಿ ಅಡಕ ಮುದ್ರಿಕೆ (ಸಿ.ಡಿ), ಪೆನ್‌ಡ್ರೈವ್, ಚಿಪ್, ಬಾಹ್ಯ ಸಾಧನಗಳು ಇತ್ಯಾದಿ. ಇವು ಸೂಕ್ಷ್ಮ ದತ್ತಾಂಶದ ರೂಪದಲ್ಲಿರುತ್ತವೆ. ಇವುಗಳನ್ನು ಕಂಪ್ಯೂಟರ್ ಸಾಧನಗಳಲ್ಲಿ ಪರಿಷ್ಕರಿಸಿ ಶೇಖರಿಸಲಾಗಿರುತ್ತದೆ. ಅಂತೆಯೇ ಕ್ಯಾಮರಾಗಳಿಂದಲೂ ಸಹಾ ಅಂಕೀಯ ದತ್ತಾಂಶಗಳನ್ನು ಪಡೆದುಕೊಳ್ಳಬಹುದು. ಈ ದತ್ತಾಂಶಗಳು ಚಿತ್ರ, ನಕ್ಷೆ, ಪ್ಲಾನ್‌ಗಳ ರೂಪದಲ್ಲಿ, ಇಲ್ಲವೇ ಪಟ್ಟಿಗಳ ರೂಪಗಳಲ್ಲಿಯೂ ಕಂಡುಬರುತ್ತವೆ. ಈ ದತ್ತಾಂಶಗಳ ಮೂಲಗಳು ಸ್ವಲ್ಪ ವೆಚ್ಚದಾಯಕವಾಗಿರುತ್ತವೆ.

5. ನಕ್ಷಾ ಮೂಲಗಳು: ಭೂಮಿಯ ಮೇಲೆ ನಿರ್ದಿಷ್ಟ ಭಾಗವನ್ನು ಆಕ್ರಮಿಸಿಕೊಂಡು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿರುವಂತಹುವುಗಳಿಗೆ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಸ್ವರೂಪಗಳೆಂದು ಕರೆಯಲಾಗುತ್ತದೆ. ಈ ಬಗೆಯ ಸಾದೃಶ್ಯಗಳನ್ನು ನಿರ್ದಿಷ್ಟ ವಿಧಾನದ ಮೂಲಕ ಸರಳೀಕೃತಗೊಳಿಸಿ, ಸಂಕ್ಷಿಪ್ತಗೊಳಿಸಿ ಸಮತಲ ಕಾಗದದ ಮೇಲೆ ಶಾಸ್ತ್ರೀಯವಾಗಿ ಚಿತ್ರಿಸುವುದನ್ನು ‘ನಕ್ಷೆ’ ಎಂದೇ ಕರೆಯಲಾಗುತ್ತದೆ. ಭೂ ಸಾದೃಶ್ಯಗಳು ನಿರಂತರವಾದ ಭೂರಚನಾ ಶಕ್ತಿ ಮತ್ತು ನನ್ನೀಕರಣ ಕರ್ತೃಗಳ ಹಾಗೂ ಮಾನವನ ಅವಿರತ ಪರಿಶ್ರಮ ಮತ್ತು ಯೋಚನೆಗಳ ಪ್ರಭಾವದಿಂದಾಗಿ ಸ್ಥಳ ಮತ್ತು ಕಾಲಗಳಿಗೆ ತಕ್ಕಂತೆ ಹೊಸ ರೂಪವನ್ನು ತಾಳುತ್ತವೆ ಅಥವಾ ರಚನಾತ್ಮಕ ಬದಲಾವಣೆಯನ್ನು ಹೊಂದುತ್ತಿರುತ್ತವೆ. ಅದಕ್ಕನುಗುಣವಾಗಿ ನಕ್ಷೆಗಳ ರಚನೆಯೂ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ.

ನಕ್ಷೆಗಳು ತಮ್ಮದೇ ಆದ ವೈವಿಧ್ಯತೆ, ಸ್ವರೂಪ ಮತ್ತು ಗುಣಧರ್ಮಗಳನ್ನು ಹೊಂದಿರುತ್ತವೆ. ಅವುಗಳನ್ನು ಅನೇಕ ವಿಧಗಳನ್ನಾಗಿ ಹಾಗೂ ಹೆಸರುಗಳಿಂದ ಕರೆಯಲಾಗುತ್ತದೆ. ಭೂ ಸ್ವರೂಪಗಳ ವಾಸ್ತವ ಸ್ವಭಾವ ಮತ್ತು ಸ್ವರೂಪಗಳನ್ನು ಸರಳವಾದ ವಿಧಾನದ ಮೂಲಕ ವಿವಿಧ ರೂಪಗಳಾಗಿ ಬದಲಾಯಿಸಿ ಗುಣ ಧರ್ಮಗಳು ವ್ಯತ್ಯಾಸವಾಗದಂತೆ ತೋರಿಸಲಾಗುತ್ತದೆ. ಇವು ಆಯಾ ಪ್ರದೇಶಗಳಿಗೆ ಸಂಬಂಧಿಸಿದ ಮೂಲ ದತ್ತಾಂಶಗಳಾಗಿದ್ದು, ಇತರೆ ಕಾರ್ಯಯೋಜನೆಗಳನ್ನು ರೂಪಿಸಲು ಇವುಗಳನ್ನು ಆಧಾರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗೆ ಭೂ ಸಾದೃಶ್ಯಗಳನ್ನು ಸಮತಲ ಕಾಗದದ ಮೇಲೆ ಮೂಡಿಸಲು ವಿವಿಧ ವಿಧಾನಗಳನ್ನು ಅನುಸರಿಸಲಾಗುತ್ತದೆ. ನಕ್ಷಾ ರಚನೆಯಲ್ಲಿ ಉದ್ದೇಶ, ಮಾಪಕ, ಪ್ರಾದೇಶಿಕ ಆಸ್ತಿತ್ವತೆ, ಸಾಮಾನೀಕರಣ, ನಕ್ಷಾ ಪ್ರಕ್ಷೇಪ, ನಕ್ಷಾಶಾಸ್ತ್ರದ ತಂತ್ರಗಳು, ದತ್ತಾಂಶಗಳು, ಭೂ-ನಿರ್ದೇಶಾಂಕಗಳು, ಮೊದಲಾದವುಗಳನ್ನು ಪರಿಗಣಿಸಲಾಗುತ್ತದೆ.

ಸಾಮಾನ್ಯವಾಗಿ ನಕ್ಷೆಗಳನ್ನು ನಾಮವಾಚಕ ಮಾಪಕ (Nominal scale), ಕ್ರಮ ಸೂಚಕ ಅಥವಾ ಸ್ಥಾನ ಸೂಚಕ ಮಾಪಕ (Ordinal scale), ಮಧ್ಯಂತರ ಮಾಪಕ (Interval scale), ಪರಿಮಾಣ ಮಾಪಕ (Ratio scale), ಭೌಗೋಳಿಕ ಮಾಪಕ(Geographical scale),ರೇಖಿಯ ಮಾಪಕ (Linear scale), ರೇಖಾ ಮಾಪಕ (Graphical scale), ಕರ್ಣ ಮಾಪಕ (Diagonal scale),ಇವೆ ಮೊದಲಾದ ಮಾಪಕಗಳ ಆಧಾರದ ಮೇಲೆ ರಚಿಸಲಾಗುತ್ತದೆ.

6. ಅಂಕೀಯ ತಂತ್ರದ ಮೂಲಗಳು: ಇತ್ತೀಚೆಗೆ ದತ್ತಾಂಶಗಳನ್ನು ಅಂಕೀಯತಂತ್ರವನ್ನು ಬಳಸಿ ಪಡೆದುಕೊಳ್ಳಲಾಗುತ್ತಿದೆ. ಇವು ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಭೂ-ಪ್ರದೇಶಗಳನ್ನು ಒಳಗೊಂಡಂತೆ ನಿಖರ ಹಾಗೂ ವೈವಿಧ್ಯಮಯ ದತ್ತಾಂಶವನ್ನು ನೀಡುತ್ತವೆ. ಅವುಗಳಲ್ಲಿ ಮುಖ್ಯವಾದ ಮೂಲಗಳು ಈ ಕೆಳಕಂಡಂತಿದೆ.

▪️ವೈಮಾನಿಕ ಛಾಯಾಗ್ರಹಣ (Aerial Photography)
▪️ದೂರ ಸಂವೇದಿ (Remote sensing)
▪️ಅಂಕೀಯ ಕೌಶಲದ ಕಡತಗಳು (Digital technique files)

7. ವರದಿ ಮೂಲಗಳು: ಜಿ.ಐ.ಎಸ್.ಗೆ ವರದಿಗಳು ಅತಿ ಮುಖ್ಯವಾಗಿದ್ದು

ಇವುಗಳನ್ನು ದ್ವೀತಿಯ ಮೂಲಗಳಿಂದ ಪಡೆದುಕೊಳ್ಳಲಾಗುತ್ತದೆ. ವರದಿಗಳು ಸಾಮಾನ್ಯವಾಗಿ ಪ್ರಾಥಮಿಕ ಅಂಕಿ ಅಂಶಗಳನ್ನು ಆಧರಿಸಿ ಸಿದ್ಧಗೊಂಡಿರುತ್ತವೆ. ಇವು ವಿವಿಧ ಕಡತಗಳ ರೂಪದಲ್ಲಿದ್ದು ಅವುಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಲು ಸಾಧ್ಯವಿದೆ.

8. ಕ್ಷೇತ್ರ ಸರ್ವೆ/ಮೋಜಣಿ ಮೂಲಗಳು: ಭೂಮೇಲೆಯ ಅಗತ್ಯವಾದ

ಭಾಗಗಳನ್ನು ವೀಕ್ಷಿಸಿ. ಆಳತೆ ಮಾಡಿ ದೂರ, ಸ್ಥಾನ, ವಿಸ್ತೀರ್ಣ ಮತ್ತು ಆಕಾರಗಳನ್ನು ನಿರ್ಧರಿಸುವ ಕಾರ್ಯವಿಧಾನವನ್ನು ಮೋಜಣಿ ಅಥವಾ ಭೂಮಾಪನ ಎನ್ನುವರು. ಇದು ರೇಖೀಯ ಮತ್ತು ಕೌನಿಕ (linear and angular) ಅಳತೆಯನ್ನೊಳಗೊಂಡಿದ್ದು, ಯೋಜಿತ ಭೂಭಾಗ/ವಸ್ತುಗಳ ಎತ್ತರ, ಉದ್ದ, ಅಗಲ, ದಿಕ್ಕು ಕ್ಷೇತ್ರ ಮತ್ತು ಆಕಾರಗಳ ನಿರ್ಧಾರವನ್ನು ಒಳಗೊಂಡಿದೆ.

ಕ್ಷೇತ್ರ ಭೂಮಾಪನವು ಈ ಕೆಳಕಂಡ ವಿಧಾನಗಳನ್ನೊಳಗೊಂಡಿದೆ.

▪️ಕ್ಷೇತ್ರಕಾರ್ಯ
▪️ಪ್ರಾಯೋಗಿಕ ಶಾಲಾಕಾರ್ಯ/ಕಛೇರಿ ಕೆಲಸ
▪️ಉಪಕರಣಗಳ ಕಲ್ಪನೆ ಮತ್ತು ಚಿತ್ರ ರಚನೆ
▪️ದತ್ತಾಂಶ ಮತ್ತು ದತ್ತಾಂಶ ಘಟಕಗಳ ಸಂಯೋಜನೆ

9. ವೈಮಾನಿಕ ಛಾಯಾ ಚಿತ್ರೀಕರಣ (Aerial Photography): ಭೂಮಿಯ ಮೇಲೆ ಸಾದೃಶ್ಯಗಳನ್ನು ಒಂದು ಗೊತ್ತಾದ ಎತ್ತರದಿಂದ ತೆಗೆದಂತಹ ಚಿತ್ರಣವನ್ನು ‘ವೈಮಾನಿಕ ಛಾಯಾಚಿತ್ರಣ’ ಎಂದು ಕರೆಯಲಾಗುತ್ತದೆ. ಇದನ್ನು ಸಂಸ್ಕರಿಸಿ ಪಡೆಯುವಂತಹ ದತ್ತಾಂಶಗಳ ಕಾರ್ಯವಿಧಾನಕ್ಕೆ ‘ವೈಮಾನಿಕ ಛಾಯಾ ಚಿತ್ರೀಕರಣದ ದತ್ತಾಂಶ’ (Aerial Photographic data)ಎನ್ನುವರು.

ವೈಮಾನಿಕ ಛಾಯಾಚಿತ್ರಗಳನ್ನು ಹಲವು ವಿಧಾನಗಳಿಂದ

ಪಡೆದುಕೊಳ್ಳಲಾಗುತ್ತದೆ. ಅವುಗಳಲ್ಲಿ ಪ್ರಮುಖ ವಿಧಾನಗಳೆಂದರೆ-

ಸ್ವತಃ ಜನರೇ ಬೆಟ್ಟಗುಡ್ಡಗಳ ಅಥವಾ ಮರ, ಕಟ್ಟಡ, ಗೋಪುರಗಳ ಮೇಲೆ ನಿಂತು ಸ್ಥಳೀಯ ಪ್ರದೇಶಗಳನ್ನು ವೀಕ್ಷಿಸಿ ಅವುಗಳ ಚಿತ್ರಪಟಗಳನ್ನು ಪಡೆಯುವುದು.

ಭೂ ಮೇಲ್ವೆ ಪ್ರದೇಶಗಳಿಗೆ ಸಂಬಂಧಿಸಿದಂತೆ ವೀಕ್ಷಿಸಿ ಅವುಗಳನ್ನು ಚಿತ್ರಿಸುವುದು.

ಪ್ಯಾರಾಚೂಟ್, ಬಲೂನ್, ದ್ರೋಣ್, ಹೆಲಿಕಾಪ್ಟರ್, ಏರೋಪ್ಲೇನ್‌ಗಳಿಂದ ಡಿಜಿಟಲ್ ಕ್ಯಾಮರಾಗಳನ್ನು ಬಳಸಿ ಪಡೆಯುವಂತಹದ್ದು.

ಗುಣಲಕ್ಷಣಗಳು: ಸಾಮಾನ್ಯವಾಗಿ ವೈಮಾನಿಕ ಛಾಯಚಿತ್ರಗಳು ಕಡಿಮೆ

ಅವಧಿಯಲ್ಲಿ ಹೆಚ್ಚಿನ ವಿಷಯಗಳನ್ನು ನೀಡುತ್ತವೆ. ಅನೇಕ ಉದ್ದೇಶಗಳಿಗಾಗಿ ಇವುಗಳನ್ನು ಬಳಸಿಕೊಳ್ಳಬಹುದು. ಶೀಘ್ರ ಮತ್ತು ತುರ್ತು ಸಂದರ್ಭಗಳಲ್ಲಿ ಇವು ಹೆಚ್ಚು ಅನುಕೂಲ. ಇದರಿಂದ ಪಡೆದಂತಹ ದತ್ತಾಂಶವನ್ನು ಜಿ.ಐ.ಎಸ್ ತಂತ್ರಜ್ಞಾನದಲ್ಲಿ ಅಂಕೀಯ ದತ್ತಾಂಶವನ್ನಾಗಿ ಬಳಸಲು ಸಾಧ್ಯವಾಗುತ್ತದೆ. ಏಕಕಾಲದಲ್ಲಿ 3 ಆಯಾಮಗಳಿಗೆ ಸಂಬಂಧಪಟ್ಟಂತಹ ದತ್ತಾಂಶಗಳನ್ನೂ ಸಹ ಪಡೆಯಬಹುದು. ಸರಣಿ ಛಾಯಾಚಿತ್ರಗಳೂ ಸಹ ದೊರೆಯುತ್ತವೆ. ಆ ಸ್ಥಳ ಮತ್ತು ಆ ಸಮಯದಲ್ಲೇ ಸಂಬಂಧಿಸಿದ ಛಾಯಾಚಿತ್ರ ದೊರೆಯುತ್ತದೆ.

ವೈಮಾನಿಕ ಛಾಯಾಗ್ರಹಣಗಳಲ್ಲಿ ಅನೇಕ ವಿಧಗಳಿವೆ.

ವೈಮಾನಿಕ ಛಾಯಾಗ್ರಹಣಗಳಲ್ಲಿ ಅನೇಕ ವಿಧಗಳಿವೆ.

1.ಲಂಭ ಛಾಯಾಗ್ರಹಣ (Vertical Photography)
2.ಓರೆ ಛಾಯಾಗ್ರಹಣ (Orthophotos or Oblique photography)
3. ಸಂಯೋಜಿತ ಛಾಯಾಗ್ರಹಣ(Combination photography)
4. ಬಹು ಭೂತಗನ್ನಡಿಗಳಿಂದ ತೆಗೆದ ಛಾಯಾಗ್ರಹಣ (Multiple lens photography)
5.ಸೋನಾ ಛಾಯಾಗ್ರಹಣ
6. ಅಭಿಸರಣ ಛಾಯಗ್ರಹಣ (Convergent photography)

7. ವಿಹಂಗಮ ದೃಶ್ಯಾವಳಿ ಛಾಯಾಗ್ರಹಣ (Panoramic photography)

8. ತ್ರಿಭುಜಾಕೃತಿ ಛಾಯಗ್ರಹಣ (Trimetrogon photography)

ಇನ್ನೂ ಮುಂತಾದ ವೈಮಾನಿಕ ಛಾಯಾಚಿತ್ರಗಳನ್ನು ಅಥವಾ ದೃಶ್ಯಗಳನ್ನು ದತ್ತಾಂಶಗಳಾಗಿ, ದತ್ತಾಂಶಗಳನ್ನು ಮಾಹಿತಿಗಳನ್ನಾಗಿ ಅಗತ್ಯಕ್ಕೆ ಅನುಗುಣವಾಗಿ ಬಳಸಬಹುದು.

10. ದೂರಸಂವೇದಿ ಮತ್ತು ಉಪಗ್ರಹ ಬಿಂಬಕಗಳು (Remote sensing and satellite images): ದೂರಸಂವೇದಿ ತಂತ್ರಜ್ಞಾನವು ಮಾನವನು ಕೈಗೊಂಡ ಆವಿಷ್ಕಾರಗಳಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ ಈ ತಂತ್ರಜ್ಞಾನದಿಂದ ಒದಗುತ್ತಿರುವ ಅನುಕೂಲತೆಗಳು ಅಪಾರ. ಇದನ್ನು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ.

ಯಾವುದೇ ಒಂದು ವಸ್ತುವಿನ ಜೊತೆಗೆ ಭೌತಿಕ ಸ್ಪರ್ಶ ಅಥವಾ ಸಂಪರ್ಕ ವಿಲ್ಲದೆಯೇ ಆ ವಸ್ತುವಿನ ಬಗ್ಗೆ ಮಾಹಿತಿಯನ್ನು ಪಡೆಯುವ ವಿಧಾನವನ್ನು ‘ದೂರಸಂವೇದಿ’ (Remote sensing) ಎಂದು ಕರೆಯಲಾಗುತ್ತದೆ. ಈ ಉದ್ದೇಶಕ್ಕಾಗಿ ಮಾಹಿತಿಯನ್ನು ಸಂಗ್ರಹಿಸುವ ಉಪಕರಣಗಳನ್ನು ‘ದೂರ ಸಂವೇದಕ’ (Remote sensors) ಎಂದು ಕರೆಯಲಾಗುತ್ತದೆ. ಇಂತಹ ಉಪಕರಣಗಳನ್ನು ಕೃತಕ ಉಪಗ್ರಹಗಳಲ್ಲಿ ಅಳವಡಿಸಿಕೊಂಡು ಅದರಿಂದ ಪಡೆಯುವಂತಹ (ಭೂಮಿಯ) ಉತ್ತಮ ದರ್ಜೆಯ ಚಿತ್ರಗಳನ್ನು ‘ಉಪಗ್ರಹ ಛಾಯಾಚಿತ್ರಗಳು’ (Satellite photographs) ಅಥವಾ ಉಪಗ್ರಹ ಬಿಂಬಕಗಳು (Satellite imageries) ಎಂದು ಕರೆಯಲಾಗುತ್ತದೆ.

ಉಪಗ್ರಹ ಬಿಂಬಕಗಳು ದತ್ತಾಂಶಗಳ ಖಜಾನೆಯಾಗಿದ್ದು, ಜಿ.ಐ.ಎಸ್. ತಂತ್ರಜ್ಞಾನಕ್ಕೆ ಅಗತ್ಯವಾದ ಹಲವು ಬಗೆಯ ಮಾಹಿತಿಗಳನ್ನು ಪೂರೈಸುತ್ತವೆ. ಜೊತೆಗೆ ಇವುಗಳಿಂದ ನವೀನ ಮಾದರಿಯ ದತ್ತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆದುದರಿಂದ ಜಿ.ಐ.ಎಸ್. ನಲ್ಲಿ ಉಪಗ್ರಹ ಬಿಂಬಕಗಳ ಪ್ರಾಮುಖ್ಯತೆ ಅಪಾರವಾಗಿದೆ.

ಉಪಗ್ರಹ ಬಿಂಬಕಗಳಲ್ಲಿ ಸಾಮಾನ್ಯವಾಗಿ ಲ್ಯಾಂಡ್‌ಸ್ಯಾಟ್ (Land sat), ಪಾನ್ (PAN), ಭಾರತೀಯ ದೂರ ಸಂವೇದಿ ಉಪಗ್ರಹ (Indian Remote Sensing Satellite (IRSS), ಐಕೊನ್ಸ್ (IKONS), ಲಿಸ್-1, ಲಿಸ್-2, ಲಿಸ್-3 (LISS-I, LISS-II, LISS-III).ಕ್ವಿಕ್ ಬರ್ಡ್,ಇವೆ ಮೊದಲಾದ ವಿಧಗಳು ಕಂಡುಬರುತ್ತವೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top