Grant Order:2026-27ನೇ ಸಾಲಿನ ಮೂರನೇ ತ್ರೈಮಾಸಿಕ ಕಂತಿನ ಹಣ ಬಿಡುಗಡೆ
Grant Order: ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಮೂರನೇ ತ್ರೈಮಾಸಿಕ ಕಂತಿನ ಹಣ ಬಿಡುಗಡೆ ಕುರಿತು ಸಂಪೂರ್ಣ ಮಾಹಿತಿ. ಅಕ್ಟೋಬರ್–ಡಿಸೆಂಬರ್ 2026ರ ಅನುದಾನ, 1/4 ಕಂತು, SCSP-TSP, CSS, SNA-SPARSH ಹಾಗೂ ಪ್ರಮುಖ ನಿಯಮಗಳು.
2026-27ನೇ ಸಾಲಿನಲ್ಲಿ ಅಕ್ಟೋಬರ್-2026 ರಿಂದ ಡಿಸೆಂಬರ್-2026 ವರೆಗಿನ ಮೂರನೇ ತ್ರೈಮಾಸಿಕ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯ ಬಗ್ಗೆ.
ಪ್ರಸ್ತಾವನೆ:-
ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶಗಳ ಮೂಲಕ ಆಡಳಿತ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸಲಾಗುತ್ತಿದೆ.
2026-27ನೇ ಸಾಲಿಗೆ ಪ್ರತ್ಯಾಯೋಜಿಸಿರುವ ಈ ಆರ್ಥಿಕ ಅಧಿಕಾರಗಳ ಆದೇಶವು. 2026-27ನೇ ಸಾಲಿನ ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚಗಳನ್ನು ಬಿಡುಗಡೆ ಮಾಡುವುದಕ್ಕೆ ಅನ್ವಯವಾಗುತ್ತದೆ. ಈ ಆದೇಶದಲ್ಲಿರುವ ಅಧಿಕಾರ ಪ್ರತ್ಯಾಯೋಜನೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಚಲಾಯಿಸತಕ್ಕದ್ದೇ ಹೊರತು ಪುನರ್ ಪ್ರತ್ಯಾಯೋಜನೆ ಮಾಡತಕ್ಕದ್ದಲ್ಲ.
ಸರ್ಕಾರದ ಆದೇಶ ಸಂ: ಎಫ್‌ಡಿ 5 ಟಿಎಫ್‌ಪಿ: 2026, ಬೆಂಗಳೂರು, ದಿನಾಂಕ: 28.09.2026
ಭಾಗ-I ಆಡಳಿತಾತ್ಮಕ ಅನುಮೋದನೆ:
- ಒಂದು ಆರ್ಥಿಕ ವರ್ಷದಲ್ಲಿ ಮುಂದುವರಿದ ಅಥವಾ ಹೊಸ ಯೋಜನೆಗಳೆಂದು ಅನುಮೋದನೆಗೊಂಡಿರುವ ಯೋಜನೆಗಳಿಗೆ ಮಾತ್ರ ಹಣವನ್ನು ಆಡಳಿತ ಇಲಾಖೆಗಳು ಬಿಡುಗಡೆಗೊಳಿಸಬಹುದಾಗಿದೆ. ಮೇಲೆ (2) ಮತ್ತು (3) ರಲ್ಲಿ ಉಲ್ಲೇಖಿಸಲಾದ ಆದೇಶ ಮತ್ತು ಅರೆಸರ್ಕಾರಿ ಪತ್ರಗಳಲ್ಲಿ ಮುಂದುವರೆದ ಯೋಜನೆಗಳ ಮತ್ತು ಹೊಸ ಯೋಜನೆಗಳ ಅನುಮೋದನೆಗೆ ಮತ್ತು ಉಸ್ತುವಾರಿಗೆ ಯೋಜನಾ ಇಲಾಖೆಯು ನೀಡಿರುವ ಮಾರ್ಗಸೂಚಿಗಳನ್ನು ಹಾಗೂ 2026-27ನೇ ಸಾಲಿನಲ್ಲಿ ಯೋಜನಾ ಇಲಾಖೆಯು ಈ ಬಗ್ಗೆ ಮಾರ್ಗದರ್ಶನ/ಸೂಚನೆಗಳನ್ನು ನೀಡಿದಲ್ಲಿ ಅದನ್ನೂ ಸಹ ಓದಿಕೊಳ್ಳಲು ತಿಳಿಸಿದೆ.
- ಆಡಳಿತಾತ್ಮಕ ಅನುಮೋದನೆಯ ಆದೇಶವನ್ನು ಹಣ ಬಿಡುಗಡೆಯ ಆದೇಶವೆಂದು ಪರಿಭಾವಿಸತಕ್ಕದ್ದಲ್ಲ. ಅನುಮೋದನೆಯಾಗಿರುವ ವಿವಿಧ ಯೋಜನೆಗಳಿಗೆ ಅಧಿಕಾರ ಪ್ರತ್ಯಾಯೋಜನೆಯನ್ವಯ ಹಣ ಬಿಡುಗಡೆ ಮಾಡುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಬೇಕಾಗುತ್ತದೆ. ಯಾವುದೇ ಯೋಜನೆಗೆ ಹಣ ಬಿಡುಗಡೆ ಮಾಡುವ ಮೊದಲು ಯೋಜನೆಯ ಮಾರ್ಗಸೂಚಿ, ಆಡಳಿತಾತ್ಮಕ ಅನುಮೋದನೆ, ಕ್ರಿಯಾ ಯೋಜನೆ ಪ್ರಕ್ರಿಯೆ ಮುಂತಾದ ಆಡಳಿತಾತ್ಮಕ ಪರಿಶೀಲನೆಗಳನ್ನು ಆಡಳಿತ ಇಲಾಖೆಯು ಪರಿಶೀಲಿಸತಕ್ಕದ್ದು.
- ರೂ.10 ಕೋಟಿಗಳವರೆಗೆ ಕಾಮಗಾರಿ ಅಂದಾಜುಗಳ ಅನುಮೋದನೆಗೆ ಮತ್ತು ಸರಕು ಹಾಗೂ ಸೇವೆಗಳ ಸಂಗ್ರಹಣೆಗೆ ರೂ.10 ಕೋಟಿಗಳವರೆಗೆ ಆರ್ಥಿಕ ಇಲಾಖೆಯ ಅನುಮೋದನೆ ಇದೆಯೆಂದು ಭಾವಿಸಿ ಆಡಳಿತಾತ್ಮಕ ಅನುಮೋದನೆಯನ್ನು (ಕೆ.ಟಿ.ಪಿ.ಪಿ ನಿಯಮಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಹಾಗೂ ಆಯವ್ಯಯ ಅನುದಾನದ ಲಭ್ಯತೆಗೊಳಪಟ್ಟು) ನೀಡಬಹುದಾಗಿದೆ.
ಭಾಗ- II ಹಣ ಬಿಡುಗಡೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯಿಂದ ನಿರ್ದಿಷ್ಟವಾಗಿ ಅನುಮೋದನೆ ಪಡೆಯಬೇಕಾಗಿರುವ ಪ್ರಕರಣಗಳು:
- ಈ ಆದೇಶದ ಅನುಬಂಧ-1 ರಲ್ಲಿ ವರ್ಗೀಕರಿಸಲಾಗಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಇನ್ನುಳಿದ ಯೋಜನೆಗಳಿಗೆ, ಕೆಳಗೆ ವಿವರಿಸಿದಂತೆ ಅಧಿಕಾರ ಪ್ರತ್ಯಾಯೋಜನೆ ಅನ್ವಯವಾಗುತ್ತದೆ.
- ಎಲ್ಲಾ ಹೊಸ ಯೋಜನೆಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಕಡ್ಡಾಯವಾಗಿ ಪಡೆಯತಕ್ಕದ್ದು.
- ಎಲ್ಲಾ ಬೇಡಿಕೆಗಳಡಿ ಖಾಲಿ ಹುದ್ದೆಗಳಿಗಾಗಿ ಅನುದಾನದಡಿಯಲ್ಲಿ (VPP) ಒದಗಿಸಿರುವ ಅನುದಾನವನ್ನು ಬಿಡುಗಡೆ ಮಾಡಲು ಅಧಿಕಾರ ಪ್ರತ್ಯಾಯೋಜಿಸಿರುವುದಿಲ್ಲ.
ಷೇರು ಬಂಡವಾಳ ಮತ್ತು ಸಾಲಗಳು:
- ಕರ್ನಾಟಕ ಸರ್ಕಾರದ (ವ್ಯವಹಾರಗಳ ನಿರ್ವಹಣೆ) ನಿಯಮಗಳು, 1977ರಲ್ಲಿ ವಿಧಿಸಿರುವ ನಿಯಮಗಳನ್ನು ಮತ್ತು ಆರ್ಥಿಕ ಇಲಾಖೆಯು ಹೊರಡಿಸಿರುವ ಸರ್ಕಾರದ ಆದೇಶ ಸಂ: ಎಫ್‌ಡಿ: 1 ಬಿಎಲ್‌ಎ 2013, ದಿ:26.11.2013ರಲ್ಲಿನ ಸೂಚನೆಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಹಾಗೂ ಆಡಳಿತ ಇಲಾಖೆಗಳು ಇದುವರೆಗೆ ಬಿಡುಗಡೆಯಾಗಿರುವ ಷೇರು ಬಂಡವಾಳವು ಅಧಿಕೃತ ಷೇರು ಬಂಡವಾಳದ ಮಿತಿಯನ್ನು ಮೀರದಿರುವುದನ್ನು ಹಾಗೂ ಷೇರು ಬಂಡವಾಳದ ರಾಜ್ಯದ ಪಾಲು ಷೇರುದಾರರ ಒಪ್ಪಂದದ ಪ್ರಕಾರ ಇರುವುದನ್ನು ಆಡಳಿತ ಇಲಾಖೆಗಳು ಖಚಿತಪಡಿಸಿಕೊಂಡು, ಆಯವ್ಯಯ ಅನುದಾನ ಲಭ್ಯವಿದ್ದಲ್ಲಿ, ರೂ.10 ಕೋಟಿಯೊಳಗಿನ ಷೇರು ಬಂಡವಾಳವನ್ನು ಆರ್ಥಿಕ ಇಲಾಖೆಯ ಅನುಮೋದನೆ ಇದೆಯೆಂದು ಭಾವಿಸಿ ಆಡಳಿತ ಇಲಾಖೆಗಳು ಬಿಡುಗಡೆ ಮಾಡಬಹುದಾಗಿದೆ. ಒಂದು ವರ್ಷದಲ್ಲಿ ರೂ.10 ಕೋಟಿಗಿಂತ ಹೆಚ್ಚಿನ ಷೇರು ಬಂಡವಾಳವನ್ನು ಹಾಗೂ ಎಷ್ಟೇ ಮೊತ್ತದ ಸಾಲವನ್ನಾಗಲೀ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಪೂರ್ವಾನುಮೋದನೆ ಪಡೆಯಬೇಕಾಗುತ್ತದೆ.
ಭಾಗ-III ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಆಡಳಿತ ಇಲಾಖೆಗಳು ಹಣ ಬಿಡುಗಡೆ ಮಾಡಬಹುದಾದ ಪ್ರಕರಣಗಳು:
- ಅನುಬಂಧ-2ರಲ್ಲಿ ಪಟ್ಟಿ ಮಾಡಲಾದ ಬಾಬುಗಳಿಗೆ ಸಂಬಂಧಿಸಿದಂತೆ. ಆಯವ್ಯಯದಲ್ಲಿ ಒದಗಿಸಿರುವ ಮೊತ್ತದವರೆಗೆ ಆರ್ಥಿಕ ಇಲಾಖೆಯ ಅನುಮತಿ ಇದೆಯೆಂದು ಭಾವಿಸಿ ಹಣವನ್ನು ಬಿಡುಗಡೆ ಮಾಡಬಹುದಾಗಿದೆ. ಅನುಬಂಧ-2 ರಲ್ಲಿ ಪಟ್ಟಿ ಮಾಡಿರದ ಲೆಕ್ಕ ಶೀರ್ಷಿಕೆ/ಯೋಜನೆಗಳಿಗೆ ಈ ಆದೇಶದ ಕಂಡಿಕೆ 10 ರಿಂದ ಮುಂದಿನ ಕಂಡಿಕೆಗಳನ್ನು ಸಂದರ್ಭಾನುಸಾರ ಅನ್ವಯಿಸಿ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಉದ್ದೇಶಿತ ಲೆ.ಶೀ. 021-ವೈದ್ಯಕೀಯ ವೆಚ್ಚ ರಡಿ ಎಲ್ಲಾ Group DDO ಗಳಿಗೆ ಸಮಾನವಾಗಿ ಬಿಡುಗಡೆ ಮಾಡದೇ, ಅಧೀನ ಕಛೇರಿ (DDO) ಗಳ ಅವಶ್ಯಕತೆಯನುಸಾರ ಬಿಡುಗಡೆ ಮಾಡಲು ತಿಳಿಸಿದೆ.
- ಬಾಕಿ ಕಾಮಗಾರಿಗಳ ಮೊತ್ತ: ಸಿವಿಲ್ ಮತ್ತು ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಂಡವಾಳ ಲೆ.ಶೀ. ಗಳಡಿ 2026-27ನೇ ಸಾಲಿಗೆ ಒದಗಿಸಿರುವ ಆಯವ್ಯಯವನ್ನು, ಈ ಆದೇಶದಲ್ಲಿ ತಿಳಿಸಿದ ವಿಧಾನಗಳನ್ನು ಮತ್ತು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಆಇ 127 ವೆಚ್ಚ-12/2023. ದಿ:16.05.2023 ರಲ್ಲಿನ ಸೂಚನೆಗಳನ್ನು ಅನುಸರಿಸಿ ಬಿಡುಗಡೆ ಮಾಡುವಂತೆ ತಿಳಿಸಿದೆ.
ರೂ.10 ಕೋಟಿಗಳಿಗಿಂತ ಕಡಿಮೆ ಆಯವ್ಯಯ ಅವಕಾಶವಿರುವ ರಾಜ್ಯ ಯೋಜನೆಗಳು:
- ರೂ.10ಕೋಟಿಗಿಂತ ಕಡಿಮೆ ಆಯವ್ಯಯ ಅವಕಾಶವಿರುವ, ಮುಂದುವರಿದ ರಾಜ್ಯ ಯೋಜನೆಗಳಿಗೆ/ಕಾರ್ಯಕ್ರಮಗಳಿಗೆ/ವೇತನೇತರ ವೆಚ್ಚಗಳಿಗೆ ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಆಯವ್ಯಯದಲ್ಲಿ ಒದಗಿಸಿರುವ ಮೊತ್ತವನ್ನು ಎರಡು ಕಂತಿನಲ್ಲಿ ಆಡಳಿತ ಇಲಾಖೆಯು ಬಿಡುಗಡೆ ಮಾಡಬಹುದು.
- ಪಿ.ಡಿ ಖಾತೆ ಅಥವಾ ಬ್ಯಾಂಕ್ ಖಾತೆಯಲ್ಲಿಡಲು ಆರ್ಥಿಕ ಇಲಾಖೆಯು ಸಹಮತಿಸಿರುವ ಯೋಜನೆಗಳಿಗೆ ಬ್ಯಾಂಕ್ ಖಾತೆ ಅಥವಾ ಪಿ.ಡಿ. ಖಾತೆಯಲ್ಲಿರುವ ಶೇ. 75ರಷ್ಟು ಮೊತ್ತವನ್ನು ವೆಚ್ಚ ಮಾಡಿರುವುದನ್ನು ಖಚಿತಪಡಿಸಿಕೊಂಡ ನಂತರ ಮೇಲೆ ತಿಳಿಸಿದಂತೆ ಬಿಡುಗಡೆ ಮಾಡಬೇಕಾಗುತ್ತದೆ.
ಭಾಗ-IV ರೂ.10 ಕೋಟಿ ಮತ್ತು ಮೇಲ್ಪಟ್ಟು ಆಯವ್ಯಯ ಅವಕಾಶವಿರುವ ರಾಜ್ಯ ಯೋಜನೆಗಳು:
ಮೂರನೇ ತ್ರೈಮಾಸಿಕ ಕಂತಿನಲ್ಲಿ ಮಾಸಿಕ ಹಣ ಬಿಡುಗಡೆಗಳು:
- ಈ ಕೆಳಗೆ ತಿಳಿಸಿರುವ ಯೋಜನೆಗಳಿಗೆ ಇದುವರೆವಿಗೂ ಒದಗಿಸಿರುವ ಆಯವ್ಯಯ ಅವಕಾಶದ ಹನ್ನೆರಡನೇ ಒಂದು ಭಾಗದಷ್ಟು (1/12) ಮೊತ್ತವನ್ನು ಆರಂಭಿಕ ಶಿಲ್ಕು ಸೇರಿದಂತೆ ಇದುವರೆಗೂ ಬಿಡುಗಡೆ ಮಾಡಿದ ಹಣದಲ್ಲಿ 75% ರಷ್ಟು ಉಪಯೋಗಿಸಿಕೊಂಡಿದ್ದಲ್ಲಿ ಮಾತ್ರ ಪ್ರತಿ ತಿಂಗಳು ಆರ್ಥಿಕ ಇಲಾಖೆಯ ಅನುಮತಿ ಇದೆಯೆಂದು ಭಾವಿಸಿ ಆರ್ಥಿಕ ವರ್ಷ 2026-27ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಆಡಳಿತ ಇಲಾಖೆಗಳು ಬಿಡುಗಡೆ ಮಾಡಬಹುದಾಗಿದೆ.
(1) ಅನುಬಂಧ-1ರಲ್ಲಿನ ಯೋಜನೆಗಳನ್ನು ಹೊರತುಪಡಿಸಿ ಲೋಕೋಪಯೋಗಿ ಇಲಾಖೆಯ ಎಲ್ಲಾ ಯೋಜನೆಗಳು
(2) ಅನುಬಂಧ-1ರಲ್ಲಿನ ಯೋಜನೆಗಳನ್ನು ಹೊರತುಪಡಿಸಿ ಭಾರಿ, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳು
ಹಾಗೆಯೇ, ಮೇಲೆ (ಎ) ಮತ್ತು (ಬಿ) ರಲ್ಲಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಡಲಾದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಆಯವ್ಯಯ ಅವಕಾಶದ 1/12 ಭಾಗವನ್ನು ಸಹ ಬಿಡುಗಡೆ ಮಾಡಬಹುದಾಗಿದೆ.
ಗ್ಯಾರಂಟಿ ಯೋಜನೆಗಳಡಿಯಲ್ಲಿ ಹಣ ಬಿಡುಗಡೆ:
- ಸರ್ಕಾರವು ಗ್ಯಾರಂಟಿ ಯೋಜನೆಗಳಾದ ‘ಗೃಹಜ್ಯೋತಿ’, ‘ಯುವನಿಧಿ’, ‘ಶಕ್ತಿ’ ‘ಅನ್ನಭಾಗ್ಯ’ ಮತ್ತು ‘ಗೃಹ ಲಕ್ಷ್ಮೀ’ ಯೋಜನೆಗಳ ಅಡಿಯಲ್ಲಿ ಬಿಡುಗಡೆಗಳನ್ನು ಮಾಡಲು ಆರ್ಥಿಕ ಇಲಾಖೆಯಿಂದ ಪೂರ್ವಾನುಮೋದನೆ ಪಡೆಯತಕ್ಕದ್ದು.
ಮೂರನೇ ಕಂತಿನ ಹಣ ಬಿಡುಗಡೆ: (ಅಕ್ಟೋಬರ್-2026 ರಿಂದ ಡಿಸೆಂಬರ್ – 2026 ರವರೆಗೆ)
- ಈ ಆದೇಶದ ಅನುಬಂಧ-1 ಹಾಗೂ ಕಂಡಿಕೆ-12 ರಲ್ಲಿ ಸೇರಿರದ ಎಲ್ಲಾ ಯೋಜನೆಗಳಿಗೆ, ಆಯವ್ಯಯದ ನಾಲ್ಕನೇ ಒಂದು (1/4) ಭಾಗದಷ್ಟು ಮೊತ್ತವನ್ನು ಮೂರನೇ ಕಂತಿನಲ್ಲಿ ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಹಣ ಬಿಡುಗಡೆಯನ್ನು ಮಾಡಬಹುದು.
- ಬ್ಯಾಂಕ್/ಪಿ.ಡಿ.ಖಾತೆ: ಅನುದಾನವನ್ನು ಬ್ಯಾಂಕ್ ಅಥವಾ ಪಿ.ಡಿ. ಖಾತೆಗಳಲ್ಲಿ ಇರಿಸಲು ಆರ್ಥಿಕ
ಇಲಾಖೆಯು ಸಹಮತಿ ನೀಡಿದ್ದಲ್ಲಿ, ಅಂತಹ ಎಲ್ಲಾ ಮೊತ್ತವನ್ನು ಡಿಸೆಂಬರ್ 30 ರೊಳಗೆ ಉಪಯೋಗಿಸತಕ್ಕದ್ದು ಮತ್ತು ಅದಕ್ಕೆ ಸಂಬಂಧಿಸಿದ ಬಳಕೆ ಪ್ರಮಾಣಪತ್ರವನ್ನು (Utilisation Certificate) ಆರ್ಥಿಕ ಇಲಾಖೆಗೆ ಸಲ್ಲಿಸತಕ್ಕದ್ದು. ಆಡಳಿತ ಇಲಾಖೆಯ ಅಂತರಿಕ ಆರ್ಥಿಕ ಸಲಹೆಗಾರರು ಇಲಾಖೆಗಳ ಬ್ಯಾಂಕ್/ಪಿ.ಡಿ ಖಾತೆಯಲ್ಲಿ ಬಳಕೆಯಾಗದೆ ಉಳಿದಿರುವ ಮೊತ್ತದ ಸಂಪೂರ್ಣ ವಿವರಗಳನ್ನು ಈ ಆದೇಶ ಹೊರಡಿಸಿದ 10 ದಿನದೊಳಗೆ ಕಡ್ಡಾಯವಾಗಿ ಆರ್ಥಿಕ ಇಲಾಖೆಗೆ ನೀಡುವುದು.
- ಆಡಳಿತ ಇಲಾಖೆಗಳು, ಅನುದಾನಗಳನ್ನು ಬಿಡುಗಡೆ ಮಾಡುವ ಮೊದಲು, ಖಜಾನೆಯ NTT ಮಾಡ್ಯೂಲ್ ಅನ್ನು ಬಳಸಿಕೊಂಡು ಅನುಷ್ಠಾನ ಸಂಸ್ಥೆಗಳ (ಮಂಡಳಿಗಳು/ನಿಗಮಗಳು/ಇಲಾಖಾ ಅಧಿಕಾರಿಗಳು ಇತ್ಯಾದಿ) PD ಖಾತೆ/ಬ್ಯಾಂಕ್ ಖಾತೆಗಳಲ್ಲಿ ಉಳಿದಿರುವ ಬಾಕಿ ಮೊತ್ತವನ್ನು ಪರಿಶೀಲಿಸಿ ಬಿಡುಗಡೆ ಮಾಡತಕ್ಕದ್ದು.
ಸಾಲ ಸೇವೆಗಳು:
- ಆಯವ್ಯಯದ ಹಣದ ಲಭ್ಯತೆಗೆ ಒಳಪಟ್ಟು ಸಾಲಗಳ ನಿಬಂಧನೆಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಸಾಲ ಪಾವತಿಗಾಗಿ ಆರ್ಥಿಕ ಇಲಾಖೆಯ ಅನುಮತಿ ಇದೆಯೆಂದು ಭಾವಿಸಿ ಆಯವ್ಯಯ ಅವಕಾಶದವರೆಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಗೆ ನೇರವಾಗಿ ಪಾವತಿಗಳನ್ನು ಮಾಡಬಹುದಾಗಿದೆ. ಯಾವುದೇ ಸಂದರ್ಭದಲ್ಲಿಯೂ ಈ ಮೊತ್ತವನ್ನು ಸೆಳೆದು ಬ್ಯಾಂಕ್ ಖಾತೆಯಲ್ಲಿ ಇಡತಕ್ಕದ್ದಲ್ಲ.
ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣ ಬಿಡುಗಡೆ:
ರಾಜ್ಯ ಯೋಜನೆಗಳು:
- ರಾಜ್ಯ ಯೋಜನೆಗಳಿಗೆ ಸಂಬಂಧಿಸಿದಂತೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲು ಪ್ರಸ್ತುತ ಆರ್ಥಿಕ ಇಲಾಖೆಯು ಅನುಸರಿಸುತ್ತಿರುವ ಪದ್ದತಿಯೇ ಮುಂದುವರಿಯುತ್ತದೆ.
- ಜಿಲ್ಲಾ ಪಂಚಾಯತ್ ಲಿಂಕ್ ಪುಸ್ತಕದಲ್ಲಿ ಕೆಲವು ಯೋಜನೆಗಳಿಗೆ ಒಟ್ಟಾರೆಯಾಗಿ ಉದ್ದೇಶಿತ ಲೆಕ್ಕ ಶೀರ್ಷಿಕೆ 300 ರಡಿಯಲ್ಲಿ ಆಯವ್ಯಯ ಅವಕಾಶ ಮಾಡಲಾಗಿದೆ. ಅನುಬಂಧ-1-ಬಿ ರಡಿ ಸೂಚಿಸಲಾದ 300-lumpsum ಯೋಜನೆಗಳಿಗೆ ಅರ್ಥಿಕ ಇಲಾಖೆಯ ಅನುಮೋದನೆ ಅಗತ್ಯವಿರುತ್ತದೆ. ಉದ್ದೇಶಿತ ಲೆ.ಶೀ.300 ರಡಿ ಒದಗಿಸಿದ ಇತರ ಜಿಲ್ಲಾವಲಯ ಯೋಜನೆಗಳಿಗೆ ಆಡಳಿತ ಇಲಾಖೆಯೇ ಹಣ ಬಿಡುಗಡೆ ಮಾಡಬಹುದಾಗಿದೆ. ಜಿಲ್ಲಾ ವಲಯ ಯೋಜನೆಗಳಿಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ಆಡಳಿತ ಇಲಾಖೆಗಳು ಆಯಾ ಯೋಜನೆಗಳಡಿ ಮಾಡುವ ಬಿಡುಗಡೆಗೆ ಅನುಗುಣವಾಗಿ SCSP ಹಾಗೂ TSP ಗೆ ಸಂಬಂಧಪಟ್ಟಂತೆ ಸಹಾ ಬಿಡುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು.
- ಅನುಬಂದ-3 ರಲ್ಲಿ ಪಟ್ಟಿ ಮಾಡಲಾದ ಜಿಲ್ಲಾ ವಲಯದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ, ಕಂಡಿಕೆ-25 ರಿಂದ ತಿಳಿಸಿರುವ ವಿಧಾನಗಳನ್ನನುಸರಿಸಿ ಆಡಳಿತ ಇಲಾಖೆಗಳೇ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವುದು
ನಗರ ಸ್ಥಳೀಯ ಸಂಸ್ಥೆಗಳಿಗೆ ಹಣ ಬಿಡುಗಡೆ:
21.ಅನುಬಂಧ-1 ರಲ್ಲಿನ ಯೋಜನೆಗಳನ್ನು ಹೊರತುಪಡಿಸಿ ಯೋಜನೆಗಳನ್ನು ಜಾರಿಗೊಳಿಸುವ ಏಜೆನ್ಸಿಗಳ ಖಾತೆಯಲ್ಲಿ ಅಥವಾ ಪಿ.ಡಿ. ಖಾತೆಯಲ್ಲಿರುವ ಆರಂಭಿಕ ಶಿಲ್ಕೂ ಸೇರಿದಂತೆ ಈವರೆಗೆ ಬಿಡುಗಡೆ ಮಾಡಿರುವ ಹಣದಲ್ಲಿ ಶೇ.75ರಷ್ಟು ಹಣವನ್ನು ಉಪಯೋಗಿಸಿಕೊಂಡಿದ್ದಲ್ಲಿ ಮಾತ್ರ ಆಯವ್ಯಯ ಅವಕಾಶದ ನಾಲ್ಕನೇ ಒಂದು (1/4) ಭಾಗವನ್ನು ಮೂರನೇ ತ್ರೈಮಾಸಿಕ ಕಂತಿನಲ್ಲಿ ಬಿಡುಗಡೆ ಮಾಡಬಹುದು.
- SCSP ಮತ್ತು TSP ಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡುವಾಗ, ನಗರಾಭಿವೃದ್ಧಿ ಇಲಾಖೆಯು ಲಿಂಕ್ ಡಾಕ್ಯುಮೆಂಟ್‌ನಲ್ಲಿ ಮಾಡಿರುವ ಹಂಚಿಕೆಗಳನ್ನು ಹಣ ಬಿಡುಗಡೆ ಆದೇಶದಲ್ಲಿ ನಮೂದಿಸಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಬೇಕಾಗುತ್ತದೆ.
ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ.ಹಣದ ಬಿಡುಗಡೆ:
23.ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ. ಅಡಿಯಲ್ಲಿ ಒದಗಿಸಿರುವ ಆಯವ್ಯಯ ಅಂದಾಜಿನ ನಾಲ್ಕನೇ ಒಂದು ಭಾಗವನ್ನು (1/4) ಮೂರನೇ ಕಂತಿನಲ್ಲಿ ಬಿಡುಗಡೆ ಮಾಡಲು ಈ ಕೆಳಕಂಡಂತೆ ಆಡಳಿತ ಇಲಾಖೆಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ.
(ಅ) ಕಂಡಿಕೆ 12 (ಎ) & (ಬಿ) ರಲ್ಲಿ ತಿಳಿಸಿದ ಯೋಜನೆಗಳಿಗೆ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ. ರಡಿ ಅನುದಾನವನ್ನು, ಅಕ್ಟೋಬರ್-2026 ರಿಂದ ಡಿಸೆಂಬರ್-2026ರವರೆಗೆ ಆಯವ್ಯಯ ಅಂದಾಜಿನ ಹನ್ನೆರಡನೇ ಒಂದು ಭಾಗವನ್ನು (1/12) ಪ್ರತಿ ತಿಂಗಳು ಬಿಡುಗಡೆ ಮಾಡುವುದು.
(ಆ) ಕಂಡಿಕೆ 12 (ಎ) & (ಬಿ) ಹೊರತುಪಡಿಸಿ ಇತರೆ ಯೋಜನೆಗಳಿಗೆ ಆಯವ್ಯಯ ಅಂದಾಜಿನ ನಾಲ್ಕನೇ ಒಂದು ಭಾಗವನ್ನು (1/4) ಮೂರನೇ ತ್ರೈಮಾಸಿಕ ಕಂತಾಗಿ ಬಿಡುಗಡೆ ಮಾಡುವುದು.
(ಇ) ಫಲಾನುಭವಿ ಆಧಾರಿತ ಯೋಜನೆಗಳು: ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳಿಗೆ ಸಂಬಂಧಿಸಿದಂತೆ ಪ.ಜಾ.ಉ.ಯೋ/ಗಿ.ಉ.ಯೋ ಬಿಡುಗಡೆಗಳನ್ನು, ಆಯವ್ಯಯದಲ್ಲಿ ಹಂಚಿಕೆ ಮಾಡಿರುವ ಅನುಪಾತದ ಆಧಾರದ ಮೇಲೆ ಬಿಡುಗಡೆ ಮಾಡುವುದು.
ವೆಚ್ಚ ಹಿಂಬರಿಸಬಹುದಾದ ಯೋಜನೆಗಳು:
ನಬಾರ್ಡ್ – ಆರ್.ಐ.ಡಿ.ಎಫ್ ಯೋಜನೆಗಳು / ಬಾಹ್ಯ ನೆರವಿನ ಯೋಜನೆಗಳು
- ಅನುಬಂಧ-1 ರಲ್ಲಿ ಪಟ್ಟಿ ಮಾಡಲಾದ ಯೋಜನೆಗಳನ್ನು ಹೊರತುಪಡಿಸಿ. ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಆಯವ್ಯಯದಲ್ಲಿ ಒದಗಿಸಿರುವ ಮೊತ್ತದ 1/4 ಭಾಗದಷ್ಟು ಮೊತ್ತವನ್ನು ಮೂರನೇ ತ್ರೈಮಾಸಿಕ ಕಂತಿನಲ್ಲಿ ಬಿಡುಗಡೆ ಮಾಡಬಹುದಾಗಿದೆ. ಈ ರೀತಿ ಬಿಡುಗಡೆ ಮಾಡುವಾಗ ಪ್ರಾರಂಭಿಕ ಶಿಲ್ಕೂ ಸೇರಿದಂತೆ ಹಿಂದಿನ ಬಿಡುಗಡೆಗಳ ಕನಿಷ್ಠ ಶೇ.75 ರಷ್ಟು ವೆಚ್ಚವಾಗಿರುವುದನ್ನು ಹಾಗೂ ಅದಕ್ಕೆ ಸಂಬಂಧಿಸಿದಂತೆ ವೆಚ್ಚ ಮರುಪಾವತಿ ಕೋರಿ ಸಂಬಂಧಿಸಿದ ಸಂಸ್ಥೆಗೆ/ಭಾರತ ಸರ್ಕಾರಕ್ಕೆ ಸಲ್ಲಿಸುವ ಕ್ಷೇಮಿನ ಅಂತರ ಒಂದು ತಿಂಗಳಿಗಿಂತ ಹೆಚ್ಚಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಈ ಕುರಿತು ಹೊರಡಿಸಲಾಗುವ ಸರ್ಕಾರದ ಆದೇಶಗಳಲ್ಲಿ ಮೇಲಿನ ಅಂಶಗಳು ಸೇರಿರತಕ್ಕದ್ದು.
ಕೇಂದ್ರದ ನೆರವಿನ ರಾಜ್ಯ ಕಾರ್ಯಕ್ರಮಗಳು ಮತ್ತು ಇತರೆ ಕೇಂದ್ರ ಪುರಸ್ಕೃತ ಯೋಜನೆಗಳು:.
- ಎಲ್ಲಾ ಕೇಂದ್ರ ಪುರಸ್ಕೃತ (Centrally Sponsored) ಮತ್ತು ಕೇಂದ್ರ ವಲಯದ (Central Sector) ಯೋಜನೆಗಳಲ್ಲಿ, ‘ಕ್ರೆಡಿಟ್ ಕನ್ನರ್ಮೇಷನ್ ಸ್ಲಿಪ್’ (Credit Confirmation Slip) ಆದೇಶ ಸ್ವೀಕರಿಸಿದ ನಂತರ, ಅನುದಾನ ಲಭ್ಯವಿದ್ದಲ್ಲಿ, ಕೇಂದ್ರದ ಪಾಲು ಮತ್ತು ರಾಜ್ಯದ ಪಾಲನ್ನು ಆಡಳಿತ ಇಲಾಖೆಗಳು ಸಂಬಂಧಪಟ್ಟ ಕೇಂದ್ರ ಸಚಿವಾಲಯವು ನಿಗದಿಪಡಿಸಿದ ಕಾಲಮಿತಿಯೊಳಗೆ SNA ಖಾತೆಗೆ ವರ್ಗಾಯಿಸಬೇಕು /ಇಲಾಖೆಗೆ ಬಿಡುಗಡೆಗೊಳಿಸಬೇಕು. ಇಂತಹ ಸಂದರ್ಭಗಳಲ್ಲಿ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸುವ ಅಗತ್ಯವಿರುವುದಿಲ್ಲ.
- ಈ ರೀತಿ ಬಿಡುಗಡೆ ಮಾಡಲು ಅನುದಾನದ ಕೊರತೆಯಾದಲ್ಲಿ ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದು. ಆಡಳಿತ ಇಲಾಖೆಗಳು Credit Confirmation Slip ಸ್ವೀಕೃತವಾಗದೇ ಯಾವುದೇ ಕೇಂದ್ರ ಮತ್ತು ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತಿಲ್ಲ. 30 ದಿನ /ನಿಗದಿತ ದಿನಾಂಕದೊಳಗೆ SNA ಖಾತೆಗೆ ವರ್ಗಾಯಿಸದಿದ್ದಲ್ಲಿ, ಕೇಂದ್ರ ಸರ್ಕಾರವು ದಂಡವನ್ನು ವಿಧಿಸುವುದರಿಂದ ಸಂಬಂಧಿಸಿದ ಆಡಳಿತ ಇಲಾಖೆಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಹಾಗೂ ದಂಡ ಪಾವತಿಯ ಮೊತ್ತವನ್ನು ಇಲಾಖೆಯ ಆಯವ್ಯಯ ಹಂಚಿಕೆಯಿಂದ ಕಡಿತಗೊಳಿಸಲಾಗುತ್ತದೆ.
- ಭಾರತ ಸರ್ಕಾರದ ಹಣಕಾಸು ಸಚಿವಾಲಯದ OM ಸಂಖ್ಯೆ 1(27)/PFMS/2020, ದಿನಾಂಕ: 24.10.2025 ರ ಪ್ರಕಾರ, ಎಲ್ಲಾ ಕೇಂದ್ರ ಪುರಸ್ಕೃತ ಯೋಜನೆಗಳನ್ನು ದಿನಾಂಕ:01.11.2025 ರಿಂದ ಜಾರಿಗೆ ಬರುವಂತೆ SNA-SPARSH ಮೂಲಕವೇ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ. ಆದ್ದರಿಂದ, ಎಲ್ಲಾ ಆಡಳಿತ ಇಲಾಖೆಗಳು ತಮ್ಮ ಯೋಜನೆಗಳನ್ನು SNA-SPARSH ವೇದಿಕೆಯಲ್ಲಿ ಸೇರ್ಪಡೆಗೊಳಿಸಲು (on-boarding) ಮತ್ತು SNA ಸಂಪರ್ಕಿತ ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿದಿರುವ ಮೊತ್ತವನ್ನು ಕೇಂದ್ರ ಮತ್ತು ರಾಜ್ಯದ ಪಾಲಿನ ಅನುಗುಣವಾಗಿ ಜಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಪಟ್ಟ ಆಡಳಿತ ಇಲಾಖೆಗಳು ಹೊಸ ಯೋಜನೆಗಳ ಮೂಲ ಮಂಜೂರಾತಿ (Mother Sanction) ಪ್ರತಿಯೊಂದಿಗೆ, ಯೋಜನೆಗಳ ಸೇರ್ಪಡೆ ಮತ್ತು SNA-SPARSH ವ್ಯವಸ್ಥೆಯಡಿ ನಿಧಿ ಬಿಡುಗಡೆಗೆ ಅನುಕೂಲವಾಗುವಂತೆ ಲೆಕ್ಕ ಶೀರ್ಷಿಕೆಗಳ (HoA) ಮ್ಯಾಪಿಂಗ್ ಮಾಡಲು ಸಹಾಯಕ್ಕಾಗಿ ಆರ್ಥಿಕ ಇಲಾಖೆಯ ಗಣಕ ಕೋಶವನ್ನು (Computer Cell) ಸಂಪರ್ಕಿಸಬಹುದಾಗಿದೆ.
28.SNA SPARSH ಪ್ರಕರಣಗಳಲ್ಲಿ, Mother Sanction ಸ್ವೀಕೃತವಾಗಿದ್ದಲ್ಲಿ ಮತ್ತು ವಾರ್ಷಿಕ ಆಯವ್ಯಯದಲ್ಲಿ ಅನುದಾನ ಲಭ್ಯವಿದ್ದಲ್ಲಿ ಆಡಳಿತ ಇಲಾಖೆಯು ಆರ್ಥಿಕ ಇಲಾಖೆಯ ಸಹಮತಿಯಿಲ್ಲದೆಯೇ ಅನುದಾನವನ್ನು ಬಿಡುಗಡೆ ಮಾಡಬಹುದು. ಅನುದಾನ ಕೊರತೆಯಾದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.
ಕೇಂದ್ರ ಹಣಕಾಸು ಆಯೋಗ ಅನುದಾನಗಳು:
29.ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡುವ 15ನೇ ಹಣಕಾಸು ಆಯೋಗದ ಅನುದಾನಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಮೂಲಭೂತ ಅನುದಾನ ಮತ್ತು ಸಾಮಾನ್ಯ ಕಾರ್ಯಕ್ಷಮತೆ ಅನುದಾನಗಳಿಗೆ ಯಾವುದೇ ಕ್ರಿಯಾ ಯೋಜನೆಯ ಅನುಮೋದನೆ ಅಗತ್ಯವಿರುವುದಿಲ್ಲ ಮತ್ತು ಅನುದಾನ ಸ್ವೀಕೃತಿಯಾದ 10 ದಿನಗಳೊಳಗೆ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಡಳಿತ ಇಲಾಖೆಯದಾಗಿದೆ.
ಭಾಗ-V ಸಾಮಾನ್ಯ ಸೂಚನೆಗಳು
ವೈಯಕ್ತಿಕ ಠೇವಣಿ ಖಾತೆ/ಬ್ಯಾಂಕ್ ಖಾತೆ:
- ಅನುಷ್ಠಾನ ಸಂಸ್ಥೆಯ/ ಅಧಿಕಾರಿಯ ಬ್ಯಾಂಕ್ ಖಾತೆ ಅಥವಾ ವೈಯಕ್ತಿಕ ಠೇವಣಿ ಖಾತೆಗೆ ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಣವನ್ನು ಜಮೆ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆದಿದ್ದರೂ ಸಹ, ಅದನ್ನು ಈ ಹಣಕಾಸು ಪ್ರತ್ಯಾಯೋಜನೆಯ ಅಧಿಕಾರವನ್ನು ಚಲಾಯಿಸುವುದರಿಂದ ವಿನಾಯಿತಿ ಎಂದು ಪರಿಭಾವಿಸುವಂತಿಲ್ಲ.
31.ಪಿ.ಡಿ ಖಾತೆಯಿಂದ ಆರ್ಥಿಕ ಇಲಾಖೆಯ ಅನುಮತಿಯಿಲ್ಲದೆ ಸಂಸ್ಥೆಯ ಯಾವುದೇ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತಿಲ್ಲ. ಖಜಾನೆಗೆ ಬಿಲ್ಲು ಸಲ್ಲಿಸುವ ಮೂಲಕ ಪಿ.ಡಿ. ಖಾತೆಯಿಂದಲೇ ವೆಚ್ಚ ಭರಿಸಬೇಕಾಗುತ್ತದೆ.
ಬ್ಯಾಂಕ್ ಖಾತೆಗಳು:
- (ಎ) ಬ್ಯಾಂಕ್/ಪಿಡಿ ಖಾತೆಗಳಿಗೆ ಹಣ ಬಿಡುಗಡೆ ಮಾಡುವ ಮೊದಲು ಆಡಳಿತ ಇಲಾಖೆಯು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆಯೇ ಹಾಗೂ ಆಡಳಿತ ಇಲಾಖೆಯಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
(ಬಿ) ಆರ್ಥಿಕ ಇಲಾಖೆಯ ಅನುಮತಿಯಿಲ್ಲದೆ ಮತ್ತು ಆಡಳಿತ ಇಲಾಖೆಯಿಂದ ಸರ್ಕಾರದ ಆದೇಶವಿಲ್ಲದೇ ತೆರೆಯಲಾಗಿರುವ ಖಾತೆಗಳ ಬಗ್ಗೆ ಆಡಳಿತ ಇಲಾಖೆಯು ಸುತ್ತೋಲೆ ಸಂಖ್ಯೆ: ಆಇ 51 ಟಿಎಆರ್ ದಿ:19.09.2024 ರನ್ವಯ ಕ್ರಮ ತೆಗೆದುಕೊಂಡು ವರದಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸತಕ್ಕದ್ದು.
(ಸಿ) ಎಲ್ಲಾ ಆಡಳಿತ ಇಲಾಖೆಗಳು ತಮ್ಮ ಅಧೀನದಲ್ಲಿ ಬರುವ ಇಲಾಖೆಗಳು/ ಮಂಡಳಿಗಳು/ನಿಗಮಗಳು/ ಪ್ರಾಧಿಕಾರಗಳು/ ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳು ಮತ್ತು ಕೇಂದ್ರಗಳ ಬ್ಯಾಂಕ್ ಖಾತೆಗಳನ್ನು ಖಜಾನೆ-2 ರ Account Verification Module ನಲ್ಲಿ ಕಡ್ಡಾಯವಾಗಿ ಖಾತೆಗಳ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು. ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಅಧಿವೇಶನಗಳಲ್ಲಿ ಬ್ಯಾಂಕ್ ಖಾತೆಗಳ ಬಗ್ಗೆ ಪದೇ ಪದೇ ಪ್ರಶ್ನಿಸಲ್ಪಡುತ್ತಿರುವುದರಿಂದ ಇದುವರೆಗೆ ಪೂರ್ಣಗೊಳಿಸದವರು ತಕ್ಷಣವೇ ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು. ಇಂತಹ ಬ್ಯಾಂಕ್ ಖಾತೆಗಳನ್ನು ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಪ್ರತಿ ತ್ರೈಮಾಸಿಕವಾಗಿ ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕು. ಈ ಖಾತೆಗಳಲ್ಲಿ ಜಮೆಯಾಗುವ ಬಡ್ಡಿಯ ಮೊತ್ತವನ್ನು ರಾಜ್ಯದ ಸಂಚಿತ ನಿಧಿಗೆ ಪಾವತಿಸತಕ್ಕದ್ದು.
(ಸಿ) ಎಲ್ಲಾ ಆಡಳಿತ ಇಲಾಖೆಗಳು ತಮ್ಮ ಅಧೀನದಲ್ಲಿ ಬರುವ ಇಲಾಖೆಗಳು/ ಮಂಡಳಿಗಳು/ನಿಗಮಗಳು/ ಪ್ರಾಧಿಕಾರಗಳು/ ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳು ಮತ್ತು ಕೇಂದ್ರಗಳ ಬ್ಯಾಂಕ್ ಖಾತೆಗಳನ್ನು ಖಜಾನೆ-2 ರ Account Verification Module ನಲ್ಲಿ ಕಡ್ಡಾಯವಾಗಿ ಖಾತೆಗಳ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು. ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಅಧಿವೇಶನಗಳಲ್ಲಿ ಬ್ಯಾಂಕ್ ಖಾತೆಗಳ ಬಗ್ಗೆ ಪದೇ ಪದೇ ಪ್ರಶ್ನಿಸಲ್ಪಡುತ್ತಿರುವುದರಿಂದ ಇದುವರೆಗೆ ಪೂರ್ಣಗೊಳಿಸದವರು ತಕ್ಷಣವೇ ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು. ಇಂತಹ ಬ್ಯಾಂಕ್ ಖಾತೆಗಳನ್ನು ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಪ್ರತಿ ತ್ರೈಮಾಸಿಕವಾಗಿ ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕು. ಈ ಖಾತೆಗಳಲ್ಲಿ ಜಮೆಯಾಗುವ ಬಡ್ಡಿಯ ಮೊತ್ತವನ್ನು ರಾಜ್ಯದ ಸಂಚಿತ ನಿಧಿಗೆ ಪಾವತಿಸತಕ್ಕದ್ದು.
- ಆರ್ಥಿಕ ಇಲಾಖೆಯು ಇಲಾಖಾಧಿಕಾರಿಗಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯಲ್ಲಿನ ವ್ಯವಹಾರಗಳನ್ನು ಖಜಾನೆಯ NTT Module ಮೂಲಕ ಪರಿಶೀಲಿಸುವುದರಿಂದ, ಆಡಳಿತ ಇಲಾಖೆಯು ಹಣ ಬಿಡುಗಡೆ ಮಾಡುವಾಗ ಇಂತಹ ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ಶಿಲ್ಕು ಹಾಗೂ ನೈಜ ವೆಚ್ಚ ಇವುಗಳನ್ನು ಪರಿಗಣಿಸಿಯೇ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ತೆರೆದಿರುವ ಬ್ಯಾಂಕ್ ಖಾತೆ ವಿವರಗಳನ್ನು ಕಡ್ಡಾಯವಾಗಿ ಖಜಾನೆಯ NTT ಮಾಡ್ಯೂಲ್ ನಲ್ಲಿ ದಾಖಲಿಸಿರುವ ಬಗ್ಗೆ ಆಡಳಿತ ಇಲಾಖೆಯು ಖಚಿತಪಡಿಸಿಕೊಳ್ಳುವುದು.
ಆರ್ಥಿಕ ಇಲಾಖೆಗೆ ಮಾಹಿತಿ:
- ಆಡಳಿತ ಇಲಾಖೆಗಳು ಈ ಆರ್ಥಿಕ ಪ್ರತ್ಯಾಯೋಜನೆಗಳನ್ವಯ ಹೊರಡಿಸುವ ಹಣ ಬಿಡುಗಡೆ ಆದೇಶದ ಪ್ರತಿಗಳನ್ನು ತಪ್ಪದೇ ಆರ್ಥಿಕ ಇಲಾಖೆಯ ಸಂಬಂಧಿತ ವೆಚ್ಚ ಶಾಖೆಗಳಿಗೆ ಕಳುಹಿಸುವುದು.
ಖಜಾನೆ ಇಲಾಖೆಯ ಪಾತ್ರ
- (ಎ) ಈ ಸಂಬಂಧ ಮೇಲ್ಕಾಣಿಸಿದ ವಿವರಗಳನ್ವಯ ಸರ್ಕಾರಿ ಆದೇಶವನ್ನು ಹೊರಡಿಸಲಾಗಿರುವುದನ್ನು ಗಮನಿಸದೇ ಖಜಾನೆ ಇಲಾಖೆಯು ಆಡಳಿತ ಇಲಾಖೆಗಳು ಸಲ್ಲಿಸುವ ಬಿಲ್ಲುಗಳನ್ನು ಅಂಗೀಕರಿಸತಕ್ಕದ್ದಲ್ಲ ಮತ್ತು ಹಣ ಬಿಡುಗಡೆ ಮಾಡತಕ್ಕದ್ದಲ್ಲ.
(ಬಿ) SNA Model ರಡಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ವಲಯ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ, ಆರ್ಥಿಕ ಇಲಾಖೆಯು ಹೊರಡಿಸುವ Credit Confirmation Slip ಅನ್ನು ಪರಿಶೀಲಿಸದೆ ಯಾವುದೇ ಬಿಲ್ಲುಗಳನ್ನು ಮಾನ್ಯ ಮಾಡತಕ್ಕದ್ದಲ್ಲ. ಈ ಅನುದಾನ ಬಿಡುಗಡೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕಾಗಿರುವುದರಿಂದ, ಖಜಾನೆ ಇಲಾಖೆಯು, ಇಲಾಖೆಗಳು ಸಲ್ಲಿಸಿದ ಬಿಲ್ಲುಗಳನ್ನು ಯಾವುದೇ ವಿಳಂಬವಿಲ್ಲದೆ ತೀರ್ಣಗೊಳಿಸಬೇಕು.
(ಸಿ) ಕೇಂದ್ರ ಪುರಸ್ಕೃತ/ವಲಯ ಯೋಜನೆಗಳನ್ನು (CSS) SNA ಖಾತೆಗೆ ಮಾತ್ರ ವರ್ಗಾಯಿಸುವಂತೆ (Non SNA Sparsh scheme) Non SNA ಖಾತೆಗೆ ವರ್ಗಾಯಿಸದಿರುವುದನ್ನು ಖಜಾನೆ ಇಲಾಖೆಯು ಖಚಿತಪಡಿಸಿಕೊಳ್ಳುವುದು.
(ಡಿ) ಹಾಗೆಯೇ, ಆರ್ಥಿಕ ಇಲಾಖೆಯ ನಿರ್ಧಿಷ್ಟ ಅನುಮತಿಯೊಂದಿಗೆ ಆಡಳಿತ ಇಲಾಖೆಯಿಂದ ಹೊರಡಿಸಿರುವ ಆದೇಶವಿಲ್ಲದೆ ಯಾವುದೇ ಪಿ.ಡಿ. ಖಾತೆಗೆ / ಬ್ಯಾಂಕ್ ಖಾತೆಗೆ ಖಜಾನೆಯಿಂದ ಹಣವನ್ನು ವರ್ಗಾವಣೆ ಮಾಡುವಂತಿಲ್ಲ ಮತ್ತು ಆರ್ಥಿಕ ಇಲಾಖೆಯ ತ್ರೈಮಾಸಿಕ ಕಂತುಗಳ ಹಣ ಬಿಡುಗಡೆ ಆದೇಶದ ಅನುಬಂಧ-1 ರಲ್ಲಿರುವ ಪ್ರತ್ಯಾಯೋಜನೆ ಮಾಡಿರದ ಯೋಜನೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯಿಂದ ನಿರ್ದಿಷ್ಟ ಅನುಮೋದನೆ ನೀಡಿದ ಹಿಂಬರಹವನ್ನು ಪರಿಶೀಲಿಸಿದ ನಂತರವೇ ಬಿಲ್ಲುಗಳನ್ನು ಅಂಗೀಕರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
