Nali-Kali:ನಲಿಕಲಿಯಿಂದ ಸಾಮಾನ್ಯ ತರಗತಿಯೆಡೆಗೆ-2026
Nali-Kali: ನಲಿ-ಕಲಿ ಎಂಬುದು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 3ನೇ ತರಗತಿಯ ಮಕ್ಕಳಿಗೆ ಜಾರಿಯಲ್ಲಿರುವ ಒಂದು ಅತ್ಯಂತ ಯಶಸ್ವಿ ಮತ್ತು ಸಂತಸದಾಯಕ ಕಲಿಕಾ ಪದ್ಧತಿಯಾಗಿದೆ. ನಲಿಕಲಿಯ ಶಬ್ದಶಃ ಅರ್ಥ ‘ನಲಿಯುತ್ತಾ ಕಲಿ’ ಎಂಬುದಾಗಿದ್ದು, ಮಕ್ಕಳಿಗೆ ಯಾವುದೇ ಒತ್ತಡವಿಲ್ಲದೆ ಆಟದ ಮೂಲಕ ಶಿಕ್ಷಣ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವ, ಶಾಲಾ ಪರಿಸರ ಭಯಮುಕ್ತ ಮಾಡುವ ಗುರಿ ಹೊಂದಿದೆ. 1995ರಲ್ಲಿ ಶುರುವಾಗಿ 2009ರಿಂದ ರಾಜ್ಯದಾದ್ಯಂತ ಜಾರಿಗೆ ಬಂದ ಈ ಪದ್ಧತಿ ಅತ್ಯಂತ ಯಶಸ್ವಿ ಪದ್ಧತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಇಂದು ತನ್ನ ಮಹತ್ವ ಕಳೆದುಕೊಂಡಿದೆ. ನಿರೀಕ್ಷಿತ ಮಟ್ಟದ ಕಲಿಕೆ ಫಲಿಸದ ಕಾರಣ ನಲಿಕಲಿ ಪದ್ದತಿಯ ಬದಲಿ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ.
ನಲಿಕಲಿಯ ಲಕ್ಷಣಗಳು:
ಚಟುವಟಿಕೆ ಆಧಾರಿತ ಕಲಿಕೆ : ಮಕ್ಕಳು ಕೇವಲ ಪುಸ್ತಕ ಓದುವ ಬದಲು ಹಾಡು, ಆಟ, ಕಥೆ ಮತ್ತು ಚಿತ್ರಕಲೆಗಳ ಮೂಲಕ ವಿಷಯಗಳನ್ನು ಕಲಿಯುವ ವ್ಯವಸ್ಥೆ ಹೊಂದಿದೆ. ಚಟುವಟಿಕೆಭರಿತ ಸಂತಸ ಕಲಿಕೆ ಒಳಗೊಂಡಿದೆ.
ಸ್ವ-ವೇಗದ ಕಲಿಕೆ :
ತರಗತಿಯಲ್ಲಿ ಪ್ರತಿಯೊಬ್ಬ ಮಗು ತನ್ನದೇ ಆದ ಸಾಮರ್ಥ್ಯ, ಕಲಿಕೆಯ ವೇಗ ಹೊಂದಿರುವುದರಿಂದ, ತನ್ನ ಸಾಮರ್ಥ್ಯಕ್ಕನುಗುಣವಾಗಿ ಪ್ರತಿ ಮಗು ತನ್ನ ಸ್ವಂತ ವೇಗದಲ್ಲಿ ಕಲಿಯಲು ಇಲ್ಲಿ ಅವಕಾಶವಿದೆ. ಒಂದು ಮಗು ಒಂದು ಹಂತವನ್ನು ಪೂರ್ಣಗೊಳಿಸಿದ ನಂತರವೇ ಮುಂದಿನ ಹಂತಕ್ಕೆ ಹೋಗುತ್ತದೆ.
ಕಲಿಕಾ ಏಣಿ :
ಕಲಿಕೆಯನ್ನು ಸಣ್ಣ ಸಣ್ಣ ಮೆಟ್ಟಿಲುಗಳಾಗಿ ಅಥವಾ ‘ಮೈಲಿಗಲ್ಲು’ ಗಳಾಗಿ ವಿಂಗಡಿಸಲಾಗಿದ್ದು, ಮಗು ಈ ಏಣಿಯ ಮೂಲಕ ಪ್ರಗತಿ ಸಾಧಿಸುತ್ತಾ ಸಾಗುತ್ತದೆ. ಒಂದೊಂದು ಸಾಮರ್ಥ್ಯ ಮೆಟ್ಟಿಲಿನ ರೂಪದಲ್ಲಿ ಹತ್ತುವುದು.ಮಗುವಿಗೆ ಕಲಿಕೆಯ ಒತ್ತಡ ಕಡಿಮೆ ಮಾಡುವ ಮೂಲಕ ಸಂತಸ ಕಲಿಕೆಗೆ ದಾರಿ ಮಾಡುತ್ತದೆ.
ಬಹುಹಂತದ ಬೋಧನೆ :
ಒಂದೇ ತರಗತಿಯಲ್ಲಿ ವಿವಿಧ ಕಲಿಕಾ ಮಟ್ಟದ ಅಥವಾ ವಿವಿಧ ತರಗತಿಯ ಅಂದರೆ 1, 2 ಮತ್ತು 3ನೇ ತರಗತಿಯ ಮಕ್ಕಳು ಒಟ್ಟಾಗಿ ಕುಳಿತು ಕಲಿಯುತ್ತಾರೆ. ಇಲ್ಲಿ ತರಗತಿಗಿಂತ ಮಗುವಿನ ಕಲಿಕೆಯ ಹಂತ ಯಾವುದು ಎಂಬುದು ಮುಖ್ಯವಾಗಿದ್ದು, ಅದಕ್ಕೆ ಅನುಗುಣವಾಗಿ ತರಗತಿ ಚಟುವಟಿಕೆಗಳು ರೂಪುಗೊಳ್ಳುವವು.
ನಿರಂತರ ಮೌಲ್ಯಮಾಪನ :
ಇಲ್ಲಿ ಸಾಂಪ್ರದಾಯಿಕ ಪರೀಕ್ಷೆಗಳಿಲ್ಲ. ಮಗು
ಕಲಿಯುತ್ತಿರುವಾಗಲೇ ಹಂತಹಂತವಾಗಿ ಶಿಕ್ಷಕರು ಅದರ ಪ್ರಗತಿಯನ್ನು ಗಮನಿಸಿ ದಾಖಲಿಸುತ್ತಾರೆ. ಪರೀಕ್ಷೆಯ ಭಯದಿಂದ ಮುಕ್ತವಾಗಿ ಕಲಿಕೆ ಖುಷಿ ಅನುಭವಿಸಲು ಅವಕಾಶವಿದೆ.
ನಲಿಕಲಿಯ ಇತಿಹಾಸ:
ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಆಟ – ಪಾಠದ ಮೂಲಕ ಕಲಿಕೆ ಆಧಾರಿತ ‘ನಲಿಕಲಿ’ ಪದ್ಧತಿಯ ಉಗಮವು 1990ರ ದಶಕದ ಮಧ್ಯಭಾಗದಲ್ಲಿ ಆಯಿತು. 1995
ರಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಒಂದು ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭವಾಯಿತು.
ಹೆಚ್.ಡಿ. ಕೋಟೆಯ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಎಂ. ಎನ್. ಬೇಗ್ ಮತ್ತು 15 ಆಸಕ್ತ ಶಿಕ್ಷಕರ ತಂಡವು ಆಂಧ್ರಪ್ರದೇಶದ ಮದನಪಲ್ಲಿಯ ರಿಷಿವ್ಯಾಲಿ ಶಾಲೆಯ ಬೋಧನಾ ವಿಧಾನದಿಂದ ಪ್ರೇರಿತರಾಗಿ ಈ ಕಲಿಕಾ ಪ್ರಕ್ರಿಯೆಯನ್ನು ರೂಪಿಸಿದರು. ಇಲ್ಲಿ ಯಶಸ್ವಿಯಾದ ನಂತರ, 2009-10ನೇ ಸಾಲಿನಿಂದ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ 1 ರಿಂದ 3ನೇ ತರಗತಿಯ ಮಕ್ಕಳಿಗೆ ಕಡ್ಡಾಯವಾಗಿ ಜಾರಿಗೆ ತರಲಾಯಿತು.
1992-93 ರಲ್ಲಿ ಯೂನಿಸೆಫ್ (UNICEF) ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ, ಶಾಲೆಗಳು ಆಕರ್ಷಕವಾಗಿಲ್ಲದಿರುವುದು ಮತ್ತು ಪಠ್ಯಪುಸ್ತಕಗಳ ಮೇಲಿನ ಅತಿಯಾದ ಅವಲಂಬನೆಯಿಂದ ಮಕ್ಕಳು ಅದರಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿರುವುದು ಕಂಡುಬಂದಿತ್ತು. ಇದನ್ನು ಹೋಗಲಾಡಿಸಲು ಈ ಯೋಜನೆಯನ್ನು ರೂಪಿಸಲಾಯಿತು.
ನಲಿಕಲಿಯ ಅನುಕೂಲಗಳು:
ಮಕ್ಕಳಲ್ಲಿ ಶಾಲೆಯ ಬಗ್ಗೆ ಇರುವ ಭಯ ಮತ್ತು ಒತ್ತಡ ಕಡಿಮೆಯಾಗಿ ಮಕ್ಕಳ ಹಾಜರಾತಿ ಹೆಚ್ಚಾಗುತ್ತದೆ ಮತ್ತು ಶಾಲೆಯಿಂದ ಹೊರಗುಳಿಯುವವರ ಸಂಖ್ಯೆ ಕಡಿಮೆಯಾಗುತ್ತದೆ. ಇಲ್ಲಿ ಗುಂಪುಗಳಲ್ಲಿ ಕಲಿಯುವುದರಿಂದ ಮಕ್ಕಳಲ್ಲಿ ಸಾಮಾಜಿಕ ಕೌಶಲಗಳು ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಆತ್ಮೀಯ ಸಂಬಂಧ ಏರ್ಪಡುತ್ತದೆ. ಇದರಿಂದ ಮಗುವಿನ ಆಸಕ್ತಿ, ಅಭಿರುಚಿ, ಹಿನ್ನೆಲೆ, ಮನಸ್ಸು ಅರಿತು ಶಿಕ್ಷಣ ನೀಡಲು, ಸುಧಾರಿಸಲು ಅವಕಾಶ ಲಭಿಸುವುದು.
ಕರ್ನಾಟಕ ಸರ್ಕಾರದ ಈಗಿನ ನಿರ್ಧಾರ:
ನಲಿಕಲಿ ಪದ್ಧತಿಯ ಬಗ್ಗೆ ಕರ್ನಾಟಕ ಸರ್ಕಾರವು ಇತ್ತೀಚೆಗೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಈ ವ್ಯವಸ್ಥೆಯಲ್ಲಿನ ಕಲಿಕಾ ಮಟ್ಟ ಮತ್ತು ಶೈಕ್ಷಣಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಪ್ರಮುಖ ಬದಲಾವಣೆಗಳಿಗೆ ಚಾಲನೆ ನೀಡಲಾಗಿದೆ.
1 ರಿಂದ 3ನೇ ತರಗತಿಯ ಮಕ್ಕಳಲ್ಲಿ ಕಲಿಕಾ ಗುಣಮಟ್ಟ ಕುಸಿಯುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ, ಸರ್ಕಾರವು ನಲಿಕಲಿ ಪದ್ಧತಿಯನ್ನು ಹಂತ-ಹಂತವಾಗಿ ಕೈಬಿಡಲು ಚಿಂತನೆ ನಡೆಸಿದೆ. ಮುಂಬರುವ 2026-27ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ 29 ಸಾವಿರ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಪ್ರಸ್ತುತ ನಲಿಕಲಿಯಲ್ಲಿ 1 ರಿಂದ 3ನೇ ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕುಳ್ಳಿರಿಸಿ ಬೋಧಿಸಲಾಗುತ್ತಿದೆ. ಇದನ್ನು ಬದಲಿಸಿ, ಪ್ರತಿ ತರಗತಿಗೂ ಪ್ರತ್ಯೇಕ ಶಿಕ್ಷಕರು ಮತ್ತು ಪ್ರತ್ಯೇಕ ಕೊಠಡಿಗಳನ್ನು ನಿಗದಿಪಡಿಸುವ ‘ಏಕವರ್ಗ’ ವ್ಯವಸ್ಥೆಗೆ ಮರಳಲು ಸರ್ಕಾರ ಸಜ್ಜಾಗಿದೆ.
ಇದರೊಂದಿಗೆ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯ ಹೆಚ್ಚಿಸಲು ಪ್ರಸ್ತುತ ಇರುವ ಚಿತ್ರಾಧಾರಿತ ಕಾರ್ಡ್ಗಳ ಬದಲಿಗೆ, ಅಕ್ಷರ ಮತ್ತು ಅಂಕಿಗಳನ್ನು ಒಳಗೊಂಡ ಪರಿಷ್ಕೃತ ಪಠ್ಯಕ್ರಮವನ್ನು ಜಾರಿಗೆ ತರಲು ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಅಥವಾ ದ್ವಿಭಾಷಾ (Bilingual) ಬೋಧನೆಯನ್ನು ಉತ್ತೇಜಿಸುತ್ತಿರುವುದರಿಂದ, ಹಳೆಯ ನಲಿಕಲಿ ಪದ್ಧತಿ ಅದರೊಂದಿಗೆ ಹೊಂದಿಕೆಯಾಗದಿರುವುದು ಕೂಡ ಈ ಬದಲಾವಣೆಗೆ ಒಂದು ಪ್ರಮುಖ ಕಾರಣ ಆಗಿದೆ. ಸದ್ಯಕ್ಕೆ ಈ ಪದ್ಧತಿಯನ್ನು ಕೇಂದ್ರ ಸರ್ಕಾರದ ‘ನಿಪುಣ್ ಭಾರತ್’ ಮತ್ತು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ತತ್ವಗಳ ಅಡಿಯಲ್ಲಿ ಮಾರ್ಪಡಿಸಿ ಬಲಪಡಿಸಲಾಗುತ್ತಿದೆ. ದಶಕಗಳಿಂದ ಯಶಸ್ವಿ ಪದ್ಧತಿಯೆನಿಸಿಕೊಂಡಿದ್ದ ನಲಿ-ಕಲಿಯು, ನೂತನ ಬದಲಾವಣೆಗಳಿಗೆ ಒಗ್ಗದೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳು ಮತ್ತೆ ಸಾಮಾನ್ಯ ತರಗತಿಯೆಡೆಗೆ ಮುಖಮಾಡುತ್ತಿವೆ.

ಕೃಪೆ: ಸಿದ್ದಣ್ಣ ಸಿ ವಾಡೇದ.ಕಲಬುರಗಿ


