Speech is an art-2026:ಭಾಷಣ ಒಂದು ಕಲೆ
Speech is an art-2026: ಭಾಷಣ ಒಂದು ಕಲೆ ಎಂದರೆ ಅಭಿವ್ಯಕ್ತಿ, ಆತ್ಮವಿಶ್ವಾಸ ಮತ್ತು ಶ್ರೋತೃಗಳನ್ನು ಪ್ರೇರೇಪಿಸುವ ಸಾಮರ್ಥ್ಯದ ಸಂಯೋಜನೆ. ಉತ್ತಮ ಭಾಷಣದಿಂದ ವ್ಯಕ್ತಿತ್ವ ಬೆಳೆಯುತ್ತದೆ.
ಆಧುನಿಕ ಯುಗದಲ್ಲಿ ಭಾಷಣಗಳು ಮಾನವ ಬದುಕಿನ ಅವಿಭಾಜ್ಯ ಅಂಗಗಳೇ ಆಗಿಬಿಟ್ಟಿವೆ. ನಿರಂತರವಾಗಿ ಬದಲಾಗುತ್ತಿರುವ ಇಂದಿನ ದಿನಮಾನದಲ್ಲಿ ಭಾಷಣಗಳ ಪಾತ್ರ ತುಂಬ ದೊಡ್ಡದು. ಈಗ ಭಾಷಣ ಒಂದು ಚಟ ಅಲ್ಲ. ಅದೊಂದು ಅವಶ್ಯಕತೆ, ಅನಿವಾರ್ಯ ಎನ್ನುವಂತಾಗಿದೆ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬುದು ಹಳೇ ಗಾದೆ ಮಾತು. ಚೆನ್ನಾಗಿ ಮಾತನಾಡಬಲ್ಲವನು, ಜನ ನೋಡುನೋಡುತ್ತಿದ್ದಂತೆಯೇ ಆಶ್ಚರ್ಯಪಡುವಷ್ಟು ಎತ್ತರಕ್ಕೆ ಬೆಳೆದುಬಿಡುತ್ತಾನೆ. ಹಾಗೇನೇ ಈ ಸ್ಪರ್ಧಾತ್ಮಕ ಯುಗದಲ್ಲಿ ಮಾತು ಬಾರದವ ಪ್ರಗತಿಯ ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ. ಮಾತು ಬಾರದವನಿಗೆ ನವೀನ ಜಗತ್ತಿನಲ್ಲಿ ಜಾಗವಿಲ್ಲ.
ಭಾಷಣ ಯಾರಿಗೆ ಬೇಡ ಹೇಳಿ, ಎಲ್ಲರೂ ಭಾಷಣ ಮಾಡುವವರೇ. ರಾಜಕಾರಣಿಗಳು ತಮ್ಮ ಪಕ್ಷದ ತತ್ತ್ವ ಸಿದ್ದಾಂತಗಳನ್ನು, ನಿಲುವು ಒಲವುಗಳನ್ನು ಪ್ರಚಾರ ಮಾಡಲು ಭಾಷಣಗಳನ್ನು ಮಾಡುತ್ತಾರೆ. ಧರ್ಮಗುರುಗಳು, ಯತಿಗಳು, ಸ್ವಾಮಿಗಳು, ಸಿದ್ದರು, ಶರಣರು, ಸಂತರು, ಧರ್ಮಾಧಿಕಾರಿಗಳು, ಧರ್ಮಾಧ್ಯಕ್ಷರು, ಇಮಾಮರು ಇತ್ಯಾದಿ ಜನ ತಮ್ಮ ತಮ್ಮ ಧರ್ಮ, ಪಂಥ, ಮತಗಳ ಸಿದ್ಧಾಂತ, ತತ್ವಾದರ್ಶಗಳನ್ನು ಪ್ರತಿಪಾದಿಸಲು ಭಾಷಣಗಳನ್ನೇ ಅವಲಂಬಿಸಬೇಕು. ಹಾಗೇನೇ ಪ್ರಾಧ್ಯಾಪಕ, ಪ್ರಾಚಾರ್ಯ, ಉಪನ್ಯಾಸಕ, ಶಿಕ್ಷಕರೂ ತಮ್ಮ ವೃತ್ತಿಯ ಅಂಗವಾಗಿ ಭಾಷಣ ಮಾಡಲೇಬೇಕು-ಆಖ್ಯಾನಗಳನ್ನು ಬಳಸಲೇಬೇಕು. ಅದರಂತೆಯೇ ಸಾಹಿತಿಗಳು, ಬ್ಯಾಂಕಿನ ಮುಖ್ಯಸ್ಥರು, ನಿರ್ದೇಶಕರು, ಕೈಗಾರಿಕೋದ್ಯಮಿಗಳು, ವ್ಯವಸ್ಥಾಪಕರು, ಸರಕಾರಿ ಇಲಾಖೆಗಳ ಹಾಗೂ ಖಾಸಗಿ ಸಂಸ್ಥೆಯ ಅಧಿಕಾರಿಗಳು, ಸರಕು ಸಾಮಗ್ರಿಗಳನ್ನು ಮಾರುವವರು, ಪ್ರವಾಸದ ಮಾರ್ಗದರ್ಶಕರು, ಸಹಕಾರಿ ಸಂಘಗಳನ್ನು ನಡೆಸುವವರು, ರೈತ ಮುಖಂಡರು, ಹೋರಾಟಗಾರರು,ಆಂದೋಲನಗಳ ಮುಂದಾಳುಗಳು, ಹೀಗೆ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ, ಉದ್ಯೋಗಗಳಲ್ಲಿ, ರಂಗಗಳಲ್ಲಿ ಕೆಲಸ ಮಾಡುವವರು ಭಾಷಣ ಮಾಡುತ್ತಾರೆ. ಅವರ ಉದ್ದೇಶಗಳು ಬೇರೆ ಬೇರೆ. ಗುರಿ-ಗಮ್ಯಗಳು ಬೇರೆ ಬೇರೆ. ಆದರೆ ಅವರೆಲ್ಲರೂ ಭಾಷಣ ಮಾಡಿಯೇ ತಮ್ಮ ವೃತ್ತಿಗಳಲ್ಲಿ ಮುಂದೆ ಬರುತ್ತಾರೆ. ಸಾಮಾನ್ಯವಾಗಿ ಬದುಕಿನ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರೆಲ್ಲಾ ಉತ್ತಮ ಭಾಷಣಕಾರರೇ ಆಗಿರುತ್ತಾರೆ.
ಭಾಷಣಕಾರರಲ್ಲಿ ವೈವಿಧ್ಯತೆ ಇರುವಂತೆಯೇ ಸಭಿಕರಲ್ಲಿ, ಭಾಷಣ ಕೇಳುವವರಲ್ಲಿಯೂ ವೈವಿಧ್ಯತೆಯಿದೆ. ಹಿರಿಯರು, ಗಣ್ಯವ್ಯಕ್ತಿಗಳು, ಸಾಹಿತಿಗಳು ಸಂಗೀತಗಾರರು, ಕಲಾವಿದರು, ವೃತ್ತಿಪರರು, ರೈತರು, ವಿದ್ಯಾರ್ಥಿಗಳು, ಸ್ತ್ರೀಯರು, ವೃದ್ಧರು, ನಾಗರೀಕರು-ಜನಸಾಮಾನ್ಯರು ಹೀಗೆ ಯಾರು ಬೇಕಾದರೂ ಕೇಳುಗರಾಗಬಹುದು. ಮೇಲೆ ತಿಳಿಸಿದ ವಿವಿಧ ವೃತ್ತಿಯ, ಪ್ರವೃತ್ತಿಯ ಭಾಷಣಕಾರರೂ ಸಭಿಕರೂ ಆಗಿರುತ್ತಾರೆ. ಉತ್ತಮ ಭಾಷಣಕಾರ ಉತ್ತಮ ಕೇಳುಗನೂ ಆಗಿರುತ್ತಾನೆ.
ಸಭಾಸದರ ವೈವಿಧ್ಯತೆಯನ್ನು ಆಧರಿಸಿ ಅವರನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದಾಗಿದೆ.
1. ಜನಸಾಮಾನ್ಯರು-ನಾಗರೀಕರು :- ಇವರು ಕೇಳುಗರು ಮಾತ್ರ. ಭಾಷಣ ಮುಗಿದ ನಂತರ ಸುಮ್ಮನೆ ಎದ್ದು ಹೋಗುತ್ತಾರೆ. ತಾವಾಗಿಯೇ ಸ್ವಯಂಪ್ರೇರಣೆಯಿಂದ ಪ್ರತಿಕ್ರಿಯಿಸುವುದಿಲ್ಲ. ಯಾರಾದರೂ ಅಭಿಪ್ರಾಯ ಕೇಳಿದರೆ ಚೆನ್ನಾಗಿತ್ತು, ಚೆನ್ನಾಗಿದ್ದಿಲ್ಲ. ಅರ್ಥವಾಗಲಿಲ್ಲ ಎಂದು ಹೇಳಿಯಾರು. ಇಂತಹವರು ಹೆಚ್ಚಿಗೆ ಆಲೋಚನೆ ಮಾಡಲು ತಯಾರಿರುವುದಿಲ್ಲ.
2. ವಿಶಿಷ್ಟ ಗುಂಪು: ಈ ಬಗೆಯ ಶೋತೃಗಳು ವಿಶೇಷ ಬಗೆಯವರು ವಿಷಯ ಪರಿಣಿತರು, ವಿದ್ವಾಂಸರು, ತಜ್ಞರು, ಸಾಹಿತಿಗಳು, ವೈದ್ಯರು. ಅಭಿಯಂತರರು, ಪತ್ರಕರ್ತರು, ರಾಜಕಾರಣಿಗಳು, ಯೋಜಕರು, ಆಡಳಿತಗಾರರು, ಸಮಾಜಕಾರ್ಯಕರ್ತರು, ಸಂಗೀತಗಾರರು, ಕಲಾವಿದರು. ವಕೀಲರು, ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ಕೆಲಸ ಮಾಡುವವರು ಈ ಗುಂಪಿಗೆ ಸೇರುತ್ತಾರೆ. ಇವರು ಭಾಷಣ ಕೇಳುತ್ತಿರುವಂತೆ ಮತ್ತು ಕೇಳಿಯಾದ ಮೇಲೆ ಭಾಷಣಕಾರ ಹೇಳಿದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು, ತಮ್ಮ ನಿಲುವುಗಳನ್ನು ರೂಪಿಸಿಕೊಳ್ಳುತ್ತಿರುತ್ತಾರೆ. ಅವಕಾಶ ಕೊಟ್ಟರೆ ತಮ್ಮ ಅನಿಸಿಕೆಗಳನ್ನು, ಭಿನ್ನಾಭಿಪ್ರಾಯಗಳನ್ನು ತಿಳಿಸುತ್ತಾರೆ. ತಾವು ಆ ರೀತಿಯ ನಿಲುವನ್ನು ತಾಳಲು ಸಕಾರಣವನ್ನೂ ಕೊಡುತ್ತಾರೆ.
3. ಮಿಶ್ರಗಂಪು: ಕೆಲವು ಸಭೆಗಳಲ್ಲಿ ಎಲ್ಲಾ ತರಹದ ವೃತ್ತಿಯ, ಪ್ರವೃತ್ತಿಯ ಬೇರೆ ಬೇರೆ ವಯೋಮಾನದ, ಬೇರೆ ಬೇರೆ ಲಿಂಗದ (ಪುರುಷ, ಸ್ತ್ರೀ, ತೃತೀಯ) ಕೇಳುಗರಿರುತ್ತಾರೆ. ಇದು ಮಿಶ್ರ ಗುಂಪು. ಸಾಮಾನ್ಯವಾಗಿ ಇಂಥಹ ಶೋತೃಗಳಿರುವ ಸಭೆ ಸಮಾರಂಭಗಳೇ ಹೆಚ್ಚು. ಇವುಗಳ ಬಗ್ಗೆ ವಿವರಗಳನ್ನು ಮುಂದೆ ಕೊಡಲಾಗುತ್ತದೆ.
ಭಾಷಣ ಒಂದು ಸಂವಹನ ಕಲೆ:
‘ಕಲೆ’ ಎಂಬ ಶಬ್ದಕ್ಕೆ ನಿಘಂಟಿನಲ್ಲಿ ಮಾನವ ಕೌಶಲ, ನಿಸರ್ಗಕ್ಕಿಂತ ಭಿನ್ನವಾದ ಮಾನವನ ಚಾತುರ್ಯ, ಜಾಣೆ, ಚತುರತೆ ಎಂಬೆಲ್ಲಾ ಅರ್ಥಗಳಿವೆ. ಮಾಡುವ ಕೆಲಸವನ್ನು ಕುಶಲತೆಯಿಂದ ಮಾಡುವುದು, ಚತುರತೆಯಿಂದ ನಿರ್ವಹಿಸುವುದು ಕಲೆ ಎನಿಸಿಕೊಳ್ಳುತ್ತದೆ.
ಪ್ರಕೃತಿಗಿಂತ ಬೇರೆಯದೇ ಆದ ಮಾನವ ಚಾತುರ್ಯಕ್ಕೆ, ಮನುಜ ಜಾಣೆಗೆ ಕಲೆ ಎಂದು ಕರೆಯುವುದುಂಟು. ಕಲೆಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿದಂತೆ ಅಭಿವ್ಯಕ್ತಿ ರಂಗದಲ್ಲೂ ಕಾಣಬಹುದಾಗಿದೆ.
ಇನ್ನು “ಭಾಷಣ” ಎಂದರೆ ಸಭೆ, ಸಮಾರಂಭ, ಸಮ್ಮೇಳನ, ಅಧಿವೇಶನ, ಗೋಷ್ಠಿ, ವಿಚಾರ ಸಂಕಿರಣ ಮೊದಲಾದ ಕಡೆಗಳಲ್ಲಿ ಮಾತನಾಡುವುದು, ಉಪನ್ಯಾಸ ಮಾಡುವುದು. [ಭಾಷಣಕ್ಕೆ ಸಂಭಾಷಣೆ ಎನ್ನುವ ಅರ್ಥವೂ ಇದೆ.] ಈ ಎರಡನ್ನೂ ಕೂಡಿಸಿದರೆ ಭಾಷಣಕಲೆ, ಸಭೆ, ಸಮಾರಂಭ, ಸಮ್ಮೇಳನ ಮುಂತಾದ ಕಡೆಗಳಲ್ಲಿ ಮಾತನಾಡುವ ಜಾಣೆಗೆ, ಚಾತುರ್ಯಕ್ಕೆ ಭಾಷಣಕಲೆ ಎಂದು ಕರೆಯಬಹುದು.
ಮಾತು, ಉಕ್ತಿ, ಸಂಭಾಷಣೆ, ಸಂವಾದ ಮುಂತಾದವುಗಳು ಬೇರೆ, ಭಾಷಣ ಬೇರೆ. ಮಾತುಗಾರಿಕೆ ಭಾಷಣದ ಮೊದಲನೆ ಹಂತ. ಮಾತುಗಾರಿಕೆ ಒಂದು ವಿದ್ಯೆ, ಒಂದು ಕಲೆ, ಅದೊಂದು ವರದಾನ. ಜೀವನದ ದೊಡ್ಡ ಸಾಧನೆ. ಆಕರ್ಷಕವಾಗಿ ಉಪಯುಕ್ತವಾಗಿ ಮಾತನಾಡುವುದು ಬದುಕಿನ ಒಂದು ಹಿರಿಮೆ-ಗರಿಮೆ. ಇಬ್ಬರ ಮಧ್ಯೆ ಮಾತುಕತೆಯಾದರೆ ಅದು ಸಂಭಾಷಣೆ. ನಾಲ್ಕಾರು ಜನರ ನಡುವೆ ನಡೆಯುವ ಮಾತುಕತೆಗೆ ಚರ್ಚೆ ಎಂದು ಕರೆಯಲಾಗುತ್ತದೆ. ಇಂತಹ ಮಾತುಗಾರಿಕೆಯ ಮುಂದುವರೆದ ಭಾಗವೇ ಭಾಷಣ. ಭಾಷಣ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿ [ಭಾಷಣಕಾರ] ಸಭೆ ಸಮಾರಂಭಗಳಲ್ಲಿನ ಹತ್ತಾರು-ನೂರಾರು-ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡುತ್ತಾನೆ. ತನ್ನ ಚಿಂತನೆಗಳನ್ನು, ಅಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಳ್ಳುತ್ತಾನೆ. ಸಭಿಕರನ್ನು ಪ್ರೇರೇಪಿಸುತ್ತಾನೆ, ರಂಜಿಸುತ್ತಾನೆ. ವಿವರಿಸುತ್ತಾನೆ, ಬಿತ್ತರಿಸುತ್ತಾನೆ. ಬೋಧಿಸುತ್ತಾನೆ. ಇದು ಭಾಷಣ.
ಭಾಷಣದ ವ್ಯಾಖ್ಯೆ:
ಒಂದು ನಿರ್ದಿಷ್ಟ ವಿಷಯದ ಬಗ್ಗೆ, ಸೂಕ್ತ ವಿವರಗಳನ್ನು ಸಂಗ್ರಹಿಸಿ, ಅದನ್ನು ಒಂದು ಕ್ರಮಬದ್ಧವಾಗಿ ಜೋಡಿಸಿಕೊಂಡು, ಒಂದು ವೇದಿಕೆಯಲ್ಲಿ ಚಿಂತನೆಗಳನ್ನು ಭಾವನೆಗಳನ್ನು, ಅಭಿಪ್ರಾಯಗಳನ್ನು, ಅನುಭವಗಳನ್ನು, ಒಂದು ಭಾಷಾ ಮಾಧ್ಯಮದ ಮೂಲಕ ಮೃದುವಾಗಿ ಹಾಗೂ ದೃಶ್ಯಮಾಧ್ಯಮದ ಮೂಲಕ, ಸ್ಪಷ್ಟವಾಗಿ, ಸೂಕ್ಷ್ಮವಾಗಿ ಮತ್ತು ರಸವತ್ತಾಗಿ ಸಭಿಕರಿಗೆ ಗ್ರಾಹ್ಯವಾಗುವಂತೆ ಮಾತನಾಡುವುದನ್ನು ಭಾಷಣ ಎಂದು ಕರೆಯಬಹುದಾಗಿದೆ.
ಸದರಿ ವ್ಯಾಖ್ಯೆ ಈ ಕೆಳಕಂಡ ಅಂಶಗಳಿಂದ ಕೂಡಿದೆ.
ಭಾಷಣಕ್ಕೆ ಒಂದು ವಿಷಯ ಇರಬೇಕು. ಆ ವಿಷಯವನ್ನು ವ್ಯವಸ್ಥಾಪಕರು ನಿಮಗೆ ಕೊಟ್ಟಿರಬಹುದು. ಇಲ್ಲವೇ ನೀವೇ ಆ ವಿಷಯವನ್ನು ಆರಿಸಿಕೊಂಡಿರಬಹುದು. ಸಮಯ ಸಂದರ್ಭಕ್ಕೆ ತಕ್ಕಂತೆ ಆ ವಿಷಯದ ಬಗ್ಗೆ ನೀವು ಮಾತನಾಡಬೇಕಾಗಬಹುದು.
ವಿಷಯದ ಆಯ್ಕೆ ಆದ ಮೇಲೆ, ವಿಷಯಕ್ಕೆ ಸಂಬಂಧಪಟ್ಟಂತೆ ಸೂಕ್ತ ವಿವರಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಬೇಕು.
ಸಂಗ್ರಹಿಸಿದ ಮಾಹಿತಿಯನ್ನು ಒಂದು ಕ್ರಮಬದ್ಧವಾಗಿ ಜೋಡಿಸಿಕೊಳ್ಳಬೇಕು. ಅಂಶಗಳ ಅನುಕ್ರಮಣಿಕೆ ಸಮಂಜಸವಾಗಿರಬೇಕು.
ಭಾಷಣವನ್ನು ಒಂದು ವೇದಿಕೆಯಲ್ಲಿ, ಸಭೆ, ಸಮಾರಂಭ ಮುಂತಾದ ಕಡೆಗಳಲ್ಲಿ ಮಾಡಬೇಕು.
ಭಾಷಣದಲ್ಲಿ ಚಿಂತನೆಗಳನ್ನು, ಭಾವನೆಗಳನ್ನು, ಅಭಿಪ್ರಾಯಗಳನ್ನು, ಹಂಚಿಕೊಳ್ಳಬಹುದಾಗಿದೆ-ವಿವರಿಸಬಹುದಾಗಿದೆ-ಅನುಭವಗಳನ್ನು, ಹೇಳಬಹುದಾಗಿದೆ.
ಭಾಷಣಕ್ಕೆ ಒಂದು ಭಾಷಾ ಮಾಧ್ಯಮ ಬೇಕು. ಭಾಷೆಯಿಲ್ಲದೆ ಭಾಷಣ ಇಲ್ಲ, ಭಾಷಣಕ್ಕೆ ಯಾವುದಾದರೂ ಒಂದು ಭಾಷೆ ಬೇಕೇ ಬೇಕು.
ಭಾಷಣಕ್ಕೆ ದೃಶ್ಯ ಮಾಧ್ಯಮವನ್ನು ಪ್ರಭಾವಯುತವಾಗಿ ಬಳಸಿಕೊಳ್ಳಬಹುದಾಗಿದೆ. ಚಿಂತನೆ, ಭಾವನೆ, ಅಭಿಪ್ರಾಯ, ಅನುಭವಗಳನ್ನು ಸಾಂಕೇತಿಕವಾಗಿ-ಹಾವಭಾವದಿಂದ ಭಾಗಶಃ ತಿಳಿಸಬಹುದು. ಚಿಂತನೆ ಇತ್ಯಾದಿಗಳನ್ನು ಸಂಪೂರ್ಣವಾಗಿ ತೋರಿಸಲಾಗುವುದಿಲ್ಲ. ಆದರೆ ಯಾವುದೇ ಭಾಷೆ ಈ ಕೆಲಸವನ್ನು ಪ್ರಭಾವಯುತವಾಗಿ ಮಾಡುತ್ತದೆ.
ಭಾಷಣ ಸ್ಪಷ್ಟವಾಗಿದ್ದರೆ, ಮೃದುವಾಗಿದ್ದರೆ, ರಸವತ್ತಾಗಿದ್ದರೆ ಅದು ಸುಲಭಗ್ರಾಹ್ಯವಾಗುತ್ತದೆ. ಹಾಗಿಲ್ಲದಿದ್ದರೆ ಭಾಷಣ ಸಭಿಕರಲ್ಲಿ ಬೇಸರವನ್ನು ಮೂಡಿಸುತ್ತದೆ, ಕೇಳುಗರು ಒಬ್ಬೊಬ್ಬರಾಗಿ ಎದ್ದು ಹೋಗಲು ಪ್ರಾರಂಭಿಸುತ್ತಾರೆ.
“ಯಾವ ಭಾಷಣವು ಸಾಕಷ್ಟು ಸುದೀರ್ಘ ಕಾಲ, ಸಹಸ್ರಾರು ಜನ ಸಭಿಕರನ್ನು ಮಂತ್ರಮುಗ್ಧಗೊಳಿಸಿ ಭಾಷಣಕಾರನ ಬಗ್ಗೆ ಗೌರವ ಭಾವನೆಯನ್ನು ಮೂಡಿಸಬಲ್ಲದೋ ಅದು ಒಂದು ಆದರ್ಶ ಭಾಷಣ ಎನ್ನಬಹುದು.” ಅಂಥಹ ಒಂದೊಂದು ಭಾಷಣವೂ ಒಬ್ಬ ವ್ಯಕ್ತಿಯನ್ನು, ಒಂದು ಗುಂಪನ್ನು, ಒಂದು ಸಮುದಾಯವನ್ನು, ಒಂದು ಸಮಾಜವನ್ನು, ಅಷ್ಟೇ ಏಕೆ ಒಂದು ದೇಶದ ಭವಿಷ್ಯವನ್ನೇ ಬದಲಿಸಲು ಸಮರ್ಥವಾಗಿರುತ್ತದೆ.



